ಸೋಮವಾರ, ಆಗಸ್ಟ್ 26, 2019
21 °C
ಚಿತ್ರ: ಕೇಸ್ ನಂ. 18/9

ಕಾಡುವ ಕಥನ, ತಲ್ಲಣಿಸುವ ಮನ

Published:
Updated:

ನಿರ್ಮಾಪಕರು: ವಿ.ಕೆ. ಮೋಹನ್, ಪ್ರವೀಣ್ ಶೆಟ್ಟಿ, ಶಿವಾನಂದ್ ಶೆಟ್ಟಿ ಮತ್ತು ಕಾಂತಿ ಶೆಟ್ಟಿ

ನಿರ್ದೇಶಕ: ಮಹೇಶ್‌ರಾವ್

ತಾರಾಗಣ: ನಿರಂಜನ್, ಸಿಂಧು ಲೋಕನಾಥ್, ಶ್ವೇತಾ ಪಂಡಿತ್, ಅಭಿಷೇಕ್, ರಂಗಾಯಣ ರಘು, ಕಾರ್ತಿಕ್ ಶರ್ಮಾ, ಕರಿಸುಬ್ಬು, ರೇಖಾ ವಿ. ಕುಮಾರ್ ಇತರರು.ಪ್ರೀತಿಸಿದವಳಿಗಾಗಿ ಮಾಡದ ಅಪರಾಧವನ್ನು ಒಪ್ಪಿಕೊಂಡಿದ್ದ ತರುಣ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆದರೆ ಆತನಿದ್ದ ಸ್ಥಾನದಲ್ಲೆಗ ಆಕೆಯಿದ್ದಾಳೆ. ಹೇಳಲಾಗದ ಪ್ರೀತಿಯನ್ನು ಅರುಹಲು ಆತನಿಗೆ ಅವಕಾಶ ಸಿಕ್ಕಿರುವುದು ಜೈಲಿನಲ್ಲಿ. ಇಬ್ಬರಲ್ಲೂ ಮಾತುಗಳು ಹೊರಡುತ್ತಿಲ್ಲ. ಸಣ್ಣನೆ ಬೀಸುವ ಗಾಳಿ ಆಕೆಯ ಅರ್ಧ ಮುಖವನ್ನು ಮುಚ್ಚಿದ್ದ ಸೆರಗನ್ನು ಮೆಲ್ಲನೆ ಹಾರಿಸುತ್ತದೆ.ಅದುವರೆಗೆ ಆಕೆಯ ಅರ್ಧ ತೆರೆದ ಮುಖದ ಸೌಂದರ್ಯವನ್ನು ನೋಡುತ್ತಿದ್ದ ಯುವಕ ತಲ್ಲಣಿಸುತ್ತಾನೆ. ಆ ಮುಖದ ಮೇಲಿನ ದೃಷ್ಟಿಯನ್ನು ಹೊರಳಿಸದೆಯೇ ಗದ್ಗದಿತ ದನಿಯಲ್ಲಿ- `ನೀನು ಬರುವವರೆಗೂ ಕಾಯುತ್ತೇನೆ' ಎನ್ನುತ್ತಾ ಹಿಂದಕ್ಕೆ ಸಾಗುತ್ತಾನೆ. `ಕೇಸ್ ನಂ 18/9' ಎಂಬ ಮನಕಲಕುವ ಕಥನವನ್ನು ಮತ್ತಷ್ಟು ಪರಿಣಾಮಕಾರಿ ಆಗಿಸುವ ಕೊನೆಯ ಸನ್ನಿವೇಶವಿದು.ಅಂತ್ಯ ಮಾತ್ರವಲ್ಲ, ಆರಂಭದಿಂದಲೂ ಒಂದೇ ಹದದ ಭಾವ. ಕಮರ್ಷಿಯಲ್ ಸಿನಿಮಾವೊಂದನ್ನು ಮನರಂಜನೆಯ ಹೊರತಾಗಿ ಭಾವನೆಗಳ ತಳಹದಿಯ ಮೇಲೆ ಸತ್ವಯುತವಾಗಿ ಕಟ್ಟಿಕೊಡುವ ಅಪರೂಪದ ಪ್ರಯತ್ನ `ಕೇಸ್ ನಂ 18/9. ಇದರ ಮೂಲ ಕಥನ ಕನ್ನಡದ್ದಲ್ಲವಲ್ಲ ಎನ್ನುವುದೊಂದೇ ಕೊನೆಯಲ್ಲಿ ಉಳಿಯುವ ಬೇಸರ. `ವಳಕ್ಕು ಎನ್ 18/9' ಚಿತ್ರವನ್ನು ಮೂಲಕ್ಕೆ ಬದ್ಧರಾಗಿ ಅಚ್ಚುಕಟ್ಟಾಗಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ ನಿರ್ದೇಶಕ ಮಹೇಶ್‌ರಾವ್. ತಮಿಳು ನೆಲದ ಕಥೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವುದು ಮತ್ತು ಅದಕ್ಕೆ ಪೂರಕವಾದ ಕಲಾವಿದರ ಆಯ್ಕೆ ಅವರಿಗಿದ್ದ ಸವಾಲು. ಈ ಎರಡರಲ್ಲಿಯೂ ಮಹೇಶ್‌ರಾವ್ ಗೆದ್ದಿದ್ದಾರೆ.ಮೂಲ ಚಿತ್ರದಲ್ಲಿ ಅಲ್ಲಲ್ಲಿ ತುಸು ಸಪ್ಪೆ ಎನಿಸುವ ಸನ್ನಿವೇಶಗಳಿಗೆ ಜೀವ ತುಂಬಿ ಲವಲವಿಕೆ ಹೆಚ್ಚಿಸಿದ್ದಾರೆ. ಇಲ್ಲಿ ಬದುಕಿನ ಎರಡು ಆಯಾಮದ ಚಿತ್ರಣವಿದೆ. ಎರಡು ಮುಖದ ಒಂದೇ ನಾಣ್ಯದಂತೆ. ಪ್ರೀತಿಯ ನೆಪದಲ್ಲಿ ಅನಾವರಣಗೊಳ್ಳುವ ಬದುಕಿನ ಸಂಕಟಗಳೇ ಇದರ ವಸ್ತು. ಒಂದು ಮಗ್ಗುಲಲ್ಲಿ ನಗರ ಬದುಕಿನ ಕರಾಳ ಮುಖವಿದ್ದರೆ, ಮತ್ತೊಂದೆಡೆ ಹಳ್ಳಿಯಿಂದ ನಗರಕ್ಕೆ ಬಂದ ಮುಗ್ಧ ಮನಸ್ಸುಗಳ ಚಿತ್ರಣ. ಹೆಚ್ಚು ವಿಸ್ತಾರ ಮತ್ತು ಆಪ್ತವಾಗುವುದು ಈ ಮಗ್ಗುಲಿನ ಕಥೆ. ಎರಡರ ಬೆಸುಗೆಯಿಂದ ಕಥೆ ಬೇರೆ ದಿಕ್ಕಿಗೆ ಹೊರಳುತ್ತದೆ.ಅಪರಾಧ ಜಗತ್ತಿನ ನೆರಳಿದ್ದರೂ ನೆತ್ತರು ಹರಿಯುವುದಿಲ್ಲ. ಅಲ್ಲಿಯೂ ಭಾವನೆಗಳದ್ದೇ ಆಟ. ರಂಜನೀಯ ರೀಮೇಕ್ ಕಥನಗಳ ನಡುವೆ ಗಟ್ಟಿಕಥನದ, ಕಾಡುವ ಪ್ರಯೋಗಾತ್ಮಕ ಚಿತ್ರವಾಗಿ `ಕೇಸ್ ನಂ 18/9' ಗಮನ ಸೆಳೆಯುತ್ತದೆ. ನಿರಂಜನ್ ಮುಗ್ಧ ಯುವಕನ ಪಾತ್ರದ ಪರಕಾಯ ಪ್ರವೇಶಿಸಿದ್ದಾರೆ. ಸಿಂಧು ಲೋಕನಾಥ್, ಶ್ವೇತಾ ಪಂಡಿತ್ ಮತ್ತು ಅಭಿಷೇಕ್ ಅಭಿನಯ ಗಮನಾರ್ಹ. ರಂಗಾಯಣ ರಘು ಖಾಕಿ ದಿರಿಸಿನ ಪಾತ್ರ ಅವರ ನಟನಾ ಸಾಮರ್ಥ್ಯಕ್ಕೆ ತಕ್ಕಷ್ಟು ಗಡುಸಾಗಿಲ್ಲ. ಕಾರ್ತಿಕ್ ಶರ್ಮಾ ಎಂಬ ಪ್ರತಿಭೆಯನ್ನು ಚಿತ್ರರಂಗ ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕೊರಗನ್ನು ಹುಟ್ಟುಹಾಕುವಂತಿದೆ ಅವರ ಅಭಿನಯ. ಸಭಾ ಕುಮಾರ್ ಕ್ಯಾಮೆರಾ ಕಣ್ಣು ಮೂಲ ಚಿತ್ರವನ್ನೇ ಅನುಕರಿಸಿದೆ. ಅರ್ಜುನ್ ಜನ್ಯ ಸಂಗೀತ, ದೀಪು ಎಸ್. ಕುಮಾರ್ ಸಂಕಲನದ ಕೊಡುಗೆಯೂ ಪ್ರಶಂಸನೀಯ.

Post Comments (+)