ಸೋಮವಾರ, ನವೆಂಬರ್ 18, 2019
25 °C
ವಾರದ ವೈದ್ಯ

ಕಾಡುವ ರೋಮ

Published:
Updated:

ಸಾಮಾನ್ಯವಾಗಿ ಕೆಲ ಮಹಿಳೆಯರ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಅನೇಕ ಕಾರಣಗಳಿಂದ ರೋಮಗಳು ಬೆಳೆಯುತ್ತವೆ. ಅವು ತೆಳುವಾಗಿ, ಸೂಕ್ಷ್ಮವಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಕೆಲವರಲ್ಲಿ ಆನುವಂಶಿಕವಾಗಿಯೇ ತುಸು ದಪ್ಪ ರೋಮ ಇರುತ್ತದೆ. ಅದೂ ತೊಂದರೆ ಇಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ಕ್ರಮೇಣವಾಗಿ ಮುಖ, ಕತ್ತು, ಹೊಟ್ಟೆ, ಎದೆ ಮುಂತಾದ ಭಾಗಗಳಲ್ಲಿ ಕಪ್ಪಾದ ಹಾಗೂ ಒರಟಾದ ಕೂದಲು ಬೆಳೆದರೆ ಅದನ್ನು ಕಡೆಗಣಿಸುವಂತಿಲ್ಲ. ಮಹಿಳೆಯರ ಮುಖ ಹಾಗೂ ದೇಹದ ಮೇಲೆ ಪುರುಷರಲ್ಲಿ ಬೆಳೆಯುವ ರೀತಿಯಲ್ಲಿ ಕೂದಲು ಬೆಳೆಯುವುದು ಕೇವಲ ಅಂದವನ್ನು ಕೆಡಿಸುವುದಷ್ಟೇ ಅಲ್ಲ, ಅದು ಅನಾರೋಗ್ಯದ ಕುರುಹೂ ಆಗಿರಬಹುದು.....

 

ಮಹಿಳೆಯರ ಮುಖದ ಮೇಲೆ ಗಂಡಸರಿಗೆ ಬೆಳೆಯುವಂತೆ ಬೆಳೆಯುವ ಒರಟಾದ ರೋಮದ ಬಗ್ಗೆ ಮಾಹಿತಿ ನೀಡಿ.

ಇದನ್ನು ವೈದ್ಯಕೀಯ ಭಾಷೆಯಲ್ಲಿ `Hirsutism' ಸಮಸ್ಯೆ ಎಂದು ಕರೆಯಲಾಗುತ್ತದೆ. ಮುಖ ಹಾಗೂ ದೇಹದ ಕೆಲ ಭಾಗಗಳಲ್ಲಿ ಗಡುಸಾದ- ಕಪ್ಪಾದ ಅನಿಯಂತ್ರಿತ ರೋಮ ಬೆಳೆಯುತ್ತದೆ.


ಅನೇಕರು ಈ ಬಗ್ಗೆ ಗಂಭೀರವಾಗಿ ಆಲೋಚಿಸುವುದೇ ಇಲ್ಲ. ಪಾರ್ಲರ್‌ಗಳ ಮೊರೆ ಹೋಗಿ ವಿನಾಕಾರಣ ಹಣ ಹಾಗೂ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಇದೊಂದು ವೈದ್ಯಕೀಯ ಸ್ಥಿತಿ ಆಗಿರಬಹುದಾದ ಸಾಧ್ಯತೆ ಇರುತ್ತದೆ. ಮೈ ಮತ್ತು ಮುಖದ ಮೇಲೆ ಗಂಡಸರಿಗೆ ಬೆಳೆಯುವಂತೆ ಒರಟಾದ ಕೂದಲು ಬೆಳೆದಾಗ ಕೂಡಲೇ ಚರ್ಮ ತಜ್ಞರನ್ನು ಕಾಣಬೇಕು.

ಇದಕ್ಕೆ ಕಾರಣವೇನು?

* ಹಾರ್ಮೋನ್ ಅಸಮತೋಲನವನ್ನು ಮುಖ್ಯ ಕಾರಣ ಎಂದು ಗುರುತಿಸಲಾಗಿದೆ. ಶೇ 90ರಷ್ಟು ಪ್ರಕರಣಗಳಲ್ಲಿ ಇದೇ ಕಾರಣ ಆಗಿರುತ್ತದೆ.

* ಮಹಿಳೆಯರಲ್ಲಿ ಆಂಡ್ರೊಜನ್ ಎನ್ನುವ `ಪುರುಷ ಹಾರ್ಮೋನ್' ಹೆಚ್ಚು ಉತ್ಪತ್ತಿಯಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

* ಇನ್ನು ಕುಟುಂಬದ ಇತಿಹಾಸ ಶೇ 5ರಿಂದ 10ರಷ್ಟು ಕಾರಣವಾದರೆ, ಭೌಗೋಳಿಕ ಹವಾಮಾನ, ಸಮುದಾಯದ ಪ್ರಭಾವವೂ ಕೆಲ ಮಟ್ಟಿಗೆ ಕಾರಣವಾಗುತ್ತದೆ.

* ಸ್ಥೂಲಕಾಯ, ಋತುಬಂಧ, ಹೈಪೊಥೈರಾಯಿಡ್ ಮುಂತಾದ ಕಾರಣಗಳನ್ನೂ ಹೆಸರಿಸಬಹುದು.

ವೈದ್ಯಕೀಯ ಕಾರಣಗಳನ್ನು ತಿಳಿಸಿ

* ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಒಎಸ್) ಎನ್ನುವ ಕಾಯಿಲೆಯಿಂದ ಮುಖ ಹಾಗೂ ದೇಹದ ಭಾಗಗಳ ಮೇಲೆ ಬೇಡದ ಕೂದಲು ಬೆಳೆಯುತ್ತವೆ.

* ಜನ್ಮಜಾತ ಮೂತ್ರಜನಕಾಂಗದ ಹೈಪರ್‌ಪ್ಲಾಸಿಯ (congenital adrenal hyperplasia) ಎಂಬ ಕಾಯಿಲೆಯಿಂದಲೂ ಈ ಸಮಸ್ಯೆ ಉದ್ಭವಿಸಬಹುದು.

* ಸ್ಟಿರಾಯ್ಡನಂತಹ ಕೆಲವು ಮಾತ್ರೆಗಳು ಅಥವಾ ಕ್ರೀಂ ಬಳಕೆ ಮುಖ ಹಾಗೂ ದೇಹದ ಭಾಗಗಳ ಮೇಲೆ ಬೇಡದ ರೋಮ ಬೆಳೆಯಲು ಕಾರಣವಾಗಬಹುದು.

ಈ ಸಮಸ್ಯೆಯನ್ನು ಗುರುತಿಸುವುದು ಹೇಗೆ?

ಕೆಲವು ಕುಟುಂಬಗಳು ಹಾಗೂ ಸಮುದಾಯಗಳಲ್ಲಿ ಈ ಸ್ಥಿತಿಯನ್ನು ಸಾಮಾನ್ಯ ಎಂದೇ ಪರಿಗಣಿಸಲಾಗುತ್ತದೆ. ಆದರೆ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ದಟ್ಟವಾಗಿ ಒರಟಾದ ಕೂದಲು ಬೆಳೆಯುತ್ತಿರುವುದು ಗಮನಕ್ಕೆ ಬಂದರೆ ವೈದ್ಯರನ್ನು ಕಾಣಬೇಕು.ಮುಖದ ಮೇಲೆ ಕೂದಲು ಬೆಳೆಯುವುದರ ಜೊತೆಗೆ ಮೊಡವೆಯೂ ಕಾಣಿಸಿಕೊಳ್ಳುವುದು, ಧ್ವನಿ ಗಡಸಾಗುವುದು, ತೂಕದಲ್ಲಿ ವ್ಯತ್ಯಾಸ ಮುಂತಾದ ಲಕ್ಷಣಗಳು ಕಂಡುಬಂದಾಗ ತಡಮಾಡದೇ ಚಿಕಿತ್ಸೆಗೆ ಮುಂದಾಗಬೇಕು.

ತಪಾಸಣೆಗಳೇನು?

ಮೊದಲು ದೈಹಿಕ ಪರೀಕ್ಷೆಯ ಮೂಲಕ ಮುಖ ಹಾಗೂ ದೇಹದ ಭಾಗಗಳ ಮೇಲಿನ ಕೂದಲಿನ ಬೆಳವಣಿಗೆಯನ್ನು ಗಮನಿಸಲಾಗುತ್ತದೆ. ನಂತರ ರಕ್ತದಲ್ಲಿನ ನಿರ್ದಿಷ್ಟ ಹಾರ್ಮೋನುಗಳನ್ನು ಪರೀಕ್ಷಿಸಲು ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಅಂಡಾಶಯ ಅಥವಾ ಮೂತ್ರಜನಕಾಂಗದ ಗ್ರಂಥಿಗಳ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗುತ್ತದೆ. ಕೊನೆಯದಾಗಿ ಸಿ.ಟಿ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ.

ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೇ?

ಇಲ್ಲ, ಈ ಮೊದಲೇ ಹೇಳಿದಂತೆ ಅನಾರೋಗ್ಯ ಅಥವಾ ಕಾಯಿಲೆಯ ಕಾರಣದಿಂದಲೇ ಇವು ಕಾಣಿಸಿಕೊಳ್ಳಬಹುದು. ಆದರೆ ಇವುಗಳ ಕಾರಣದಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಇದು ಸೌಂದರ್ಯಕ್ಕೆ ಸಂಬಂಧಿಸಿದ ವಿಚಾರವಾದ್ದರಿಂದ ಹೆಚ್ಚಿನ ಮಹಿಳೆಯರು ವರ್ತನೆಯ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೀಳರಿಮೆ, ಆಘಾತದಂತಹ ಮಾನಸಿಕ ತೊಳಲಾಟಕ್ಕೆ ಗುರಿಯಾಗುತ್ತಾರೆ. ಹೆಚ್ಚಿನ ಜನರಲ್ಲಿ ಇದು ಕಿರಿಕಿರಿ ಹಾಗೂ ಅಸಹ್ಯದ ಭಾವನೆ ಮೂಡಿಸುತ್ತದೆ. ಸಾಮಾಜಿಕವಾಗಿಯೂ ಅವರು ದೂರ ಉಳಿಯಲು ಯತ್ನಿಸುತ್ತಾರೆ.

ಬೇಡದ ರೋಮವನ್ನು ತಡೆಯಲು ಮನೆ ಮದ್ದು ಏನು?

ಇದು ರಕ್ತದಿಂದ ಬರುವ ಸಮಸ್ಯೆಯಾದ್ದರಿಂದ ಅಲ್ಲಿಂದಲೇ ಚಿಕಿತ್ಸೆ ಆರಂಭವಾಗಬೇಕು. ಆದ್ದರಿಂದ ಮನೆ ಮದ್ದು ಅಷ್ಟೇನೂ ಕೆಲಸ ಮಾಡದು. ಆದರೆ ಆಹಾರ- ಪಥ್ಯ ಹಾಗೂ ವ್ಯಾಯಾಮ ಸೇರಿದಂತೆ ಜೀವನಶೈಲಿಯ ಬದಲಾವಣೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.ನಾರಿನಾಂಶ ಹೆಚ್ಚಿರುವ ಆಹಾರ ಸೇವನೆ ಉತ್ತಮ. ಇದು ಸಾಮಾನ್ಯವಾಗಿ ಮೀನು ಹಾಗೂ ತಾಜಾ ತರಕಾರಿಯಲ್ಲಿ ಹೇರಳವಾಗಿರುತ್ತದೆ. ಹಾಗೆಯೇ ಕರಿದ ತಿಂಡಿಯನ್ನು ಕಡಿಮೆ ಮಾಡಬೇಕು. ವೈದ್ಯರು ಅಥವಾ ತಜ್ಞರು ಸೂಕ್ತವಾದ ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಇದರಿಂದ ಹಾರ್ಮೋನ್ ಸಮತೋಲನಕ್ಕೆ ಬರುವುದರಿಂದ ಬೇಡದ ರೋಮ ತೊಲಗಬಹುದು.

ಚಿಕಿತ್ಸೆ ಏನು?

ಹಾರ್ಮೋನ್ ಸಮತೋಲನಕ್ಕೆ ಸಂಬಂಧಿಸಿದ ಔಷಧಿ ಮಾತ್ರೆಗಳನ್ನು ಸೂಚಿಸಬಹುದು. ಆದರೆ ಹಾರ್ಮೋನ್‌ನಲ್ಲಿ ಮತ್ತೆ ವ್ಯತ್ಯಾಸ ಉಂಟಾದಾಗ ಪುನಃ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಗರ್ಭಧಾರಣೆಗೆ ಪ್ರಯತ್ನಿಸುವವರಿಗೆ ಇದನ್ನು ನೀಡಲಾಗದು. ಅಂತಹ ಸಂದರ್ಭದಲ್ಲಿ ಲೇಸರ್ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಇದು ಕೇವಲ ಕಪ್ಪು ಕೂದಲನ್ನು ಮಾತ್ರ ತೊಲಗಿಸುತ್ತದೆ. ಒಂದು ವೇಳೆ ಮುಖದ ಮೇಲೆ ಬಿಳಿ ಕೂದಲು ಇದ್ದರೆ ಅದಕ್ಕೆ ವಿದ್ಯುದ್ವಿಚ್ಛೇದನ (electrolysis) ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಇದು ನೋವಿನ ಚಿಕಿತ್ಸೆ ಎಂದೇ ಹೇಳಬಹುದು. ಇದನ್ನು ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುತ್ತದೆ.

ಪ್ರತಿಕ್ರಿಯಿಸಿ (+)