ಶುಕ್ರವಾರ, ಏಪ್ರಿಲ್ 23, 2021
28 °C

ಕಾಡುವ ಹಾಡು

ಸಂದರ್ಶನ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಅಂದಿನ ಸಿನಿಮಾಗಳಲ್ಲಿ ಹಬ್ಬಹರಿದಿನಗಳಿಗೆ ಪ್ರಾಮುಖ್ಯವಿತ್ತು. ಹಬ್ಬದ ವಾತಾವರಣವನ್ನು ಸಿನಿಮಾದಲ್ಲಿ ನೋಡಲು ಜನರೂ ಇಷ್ಟಪಡುತ್ತಿದ್ದರು. `ದೀಪದಿಂದ ದೀಪವ ಹಚ್ಚಬೇಕು ಮಾನವ~, `ದೀಪಾವಳೀ ದೀಪಾವಳಿ~ ತರಹದ ಹಾಡುಗಳು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಜಾಗ ಪಡೆದಿವೆ.

 

ತಮ್ಮ ಇಷ್ಟದ ದೀಪಾವಳಿ ಕುರಿತ ಹಾಡು ಯಾವುದು ಮತ್ತು ಯಾಕೆ ಎಂದು ಕನ್ನಡದ ಈಗಿನ ಸಿನಿಮಾ ಸಂಗೀತ ನಿರ್ದೇಶಕರನ್ನು `ಮೆಟ್ರೊ~ ಕೇಳಿದಾಗ ಬಹುತೇಕರು `ಮುದ್ದಿನ ಮಾವ~ ಚಿತ್ರದ `ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ~ ಹಾಡನ್ನೇ ನೆನಪಿಸಿಕೊಂಡರು. ಅರ್ಜುನ್ ಜನ್ಯ, ವಿ. ಮನೋಹರ್, ಕೆ. ಕಲ್ಯಾಣ್ ಮೂವರಿಗೂ ಇಷ್ಟದ ಹಾಡು ಇದು. ಅವರಿಗೆ ಈ ಹಾಡು ಯಾಕಿಷ್ಟ ಎಂಬುದನ್ನು ಅವರ ಮಾತುಗಳಲ್ಲೇ ಓದಿ...ಸದಾ ಗುನುಗಬೇಕೆನಿಸುವ ಹಾಡು

ದೀಪಾವಳಿ ಬಂತೆಂದರೆ ನನಗೆ ನೆನಪಾಗುವುದು `ಮುದ್ದಿನ ಮಾವ~ ಸಿನಿಮಾದಲ್ಲಿ ರಾಜ್‌ಕುಮಾರ್ ಹಾಡಿರುವ `ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ~. ಆ ಹಾಡಿನ ಮಾಧುರ್ಯ ಒಂದು ಬಗೆಯಾದರೆ, ಇಡೀ ಹಾಡಿನಲ್ಲಿ ಒಂದು ಸಂಸಾರದ ಬಗ್ಗೆ ಬಹಳ ಸುಂದರವಾಗಿ ತಿಳಿಸಿದ್ದಾರೆ.ಆ ಹಾಡನ್ನು ಕೇಳುತ್ತಾ ಇದ್ದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಹಬ್ಬದ ದಿನದಲ್ಲಿ ಸದಾ ಈ ಹಾಡಿನ ಸಾಲನ್ನು ಗುನುಗುತ್ತೇನೆ. ಆದರೆ ಇತ್ತೀಚೆಗೆ ಈ ರೀತಿಯ ಹಾಡುಗಳು ಕಡಿಮೆಯಾಗಿವೆ. ಕೇವಲ ನಟ, ನಟಿಯರನ್ನು ಕೇಂದ್ರೀಕರಿಸಿಕೊಂಡು ಹಾಡುತ್ತಾರೆ. ಈ ಹಾಡುಗಳು ಮನಸ್ಸಿನಲ್ಲಿ ಉಳಿಯುವುದು ಕಡಿಮೆ. ಹಬ್ಬ ಹರಿದಿನಗಳ ಕುರಿತು ಹಾಡುಗಳನ್ನು ಹೆಣೆಯಬೇಕು ಎಂಬ ಕನಸಿದೆ. ಆದರೆ ಆ ರೀತಿ ಸಿನಿಮಾಗಳು ಈಗ ಸಿಗುತ್ತಿಲ್ಲ. ಸಿಕ್ಕರೆ ಖಂಡಿತ ಮಾಡುತ್ತೇನೆ.

-ವಿ. ಮನೋಹರ್ಹಾಡು ಕಟ್ಟುವ ಕನಸಿದೆ

ಬಡವರು ಆಚರಿಸುವ ದೀಪಾವಳಿ ನಿಜವಾದ ದೀಪಾವಳಿ. ಅಲ್ಲಿ ಖುಷಿ ಇರುತ್ತದೆ. ನಾನು ಬಡತನದ ದೀಪಾವಳಿಯನ್ನು ನೋಡಿದ್ದೇನೆ, ಈಗ ಸಿರಿತನದ್ದೂ ನೋಡುತ್ತಿದ್ದೇನೆ. ಆದರೆ ಆಗಿನ ಸಂಭ್ರಮ ಈಗಿಲ್ಲ. ಹೊಸಬಟ್ಟೆ ಹಾಕಿಕೊಂಡು ಹಬ್ಬದೂಟ ಮಾಡುವುದು ಎಂದರೆ ಎಲ್ಲಿಲ್ಲದ ಸಂಭ್ರಮ ಆಗ. ಆಗಿನ ಹಾಡುಗಳು ಕೂಡ ಅಷ್ಟೇ ಮಧುರವಾಗಿತ್ತು. ಹಿಂದಿ ಸಿನಿಮಾ `ಶಿರಡಿವಾಲೆ ಸಾಯಿಬಾಬಾ~ದಲ್ಲಿ `ದೀಪಾವಳಿ ಮನಾಯಿ ಸುಹಾನಿ~ ಎಂಬ ಹಾಡು ಬರುತ್ತದೆ. ಈಗಲೂ ಅದರ ಗುಂಗು ನನ್ನನ್ನು ಬಿಟ್ಟಿಲ್ಲ.ಇಂದು ಜನಜೀವನ ಶೈಲಿ ಬದಲಾಗಿದೆ. ಅದಕ್ಕೆ ತಕ್ಕಂತೆ ಸಿನಿಮಾಗಳು ಬದಲಾಗಿವೆ. ದಿನ ಹಬ್ಬದೂಟ ಮಾಡುತ್ತೇವೆ ಹಾಗಾಗಿ ನಾಲಿಗೆ ರುಚಿ ಕಡಿಮೆಯಾಗಿದೆ. ಹಬ್ಬ ಹರಿದಿನಗಳ ಕುರಿತಾದ ಹಾಡುಗಳು ಕಡಿಮೆಯಾಗಿವೆ. ಆದರೆ ಮರಳಿ ನಮ್ಮ ಹಿಂದಿನ ಸಂಸ್ಕೃತಿಯತ್ತ ನಾವು ವಾಲುತ್ತೇವೆ ಎಂಬ ನಂಬಿಕೆ ನನಗಿದೆ. ಕನ್ನಡ ರಾಜ್ಯೋತ್ಸವದ ಕುರಿತು ಒಂದು ಹಾಡು ಕಟ್ಟಬೇಕು ಎಂಬ ಕನಸಿದೆ. 

 -ಶ್ರೀಧರ್ ವಿ. ಸಂಭ್ರಮ್ದೀಪಾವಳಿಯ ಸಂಕೇತ

ನನಗೆ `ದೀಪಾವಳಿ ದೀಪಾವಳಿ~ ಹಾಡು ತುಂಬಾ ಇಷ್ಟ. ಆ ಹಾಡಿನಲ್ಲಿ ನಿಷ್ಕಲ್ಮಶ ಮನಸ್ಸಿದೆ. ನಿಜವಾದ ಸಾಹಿತ್ಯ, ಸಂಭ್ರಮ ಇದರಲ್ಲಿ ವ್ಯಕ್ತವಾಗಿದೆ. ದೀಪಾವಳಿಗೆ ಈ ಹಾಡು ಸಂಕೇತವಾಗಿದೆ. ಆ ಹಾಡು ಕೇಳುವಾಗಲೇ ಖುಷಿ ಸಿಗುತ್ತದೆ. ಇಂದಿನ ಸಿನಿಮಾದಲ್ಲಿ ದೀಪಾವಳಿ, ಯುಗಾದಿ ಹಬ್ಬಗಳ ಸನ್ನಿವೇಶ ಬರುವುದೇ ಕಡಿಮೆ. ಹಾಗಾಗಿ ಹಬ್ಬದ ಕುರಿತಾದ ಹಾಡುಗಳು ಕಡಿಮೆ ಎಂದು ಹೇಳಬಹುದು.

-ಕೆ. ಕಲ್ಯಾಣ್ಬೇಡಿಕೆ ಇಲ್ಲ

ದೀಪಾವಳಿ ಹಾಡು ಎಂದಾಕ್ಷಣ ನೆನಪಾಗುವುದೇ `ದೀಪಾವಳಿ, ದೀಪಾವಳಿ~. ಈ ಹಾಡು ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ರಾಜ್‌ಕುಮಾರ್ ಅವರ ಗಾಯನ, ಎಸ್‌ಪಿಬಿ ಅವರ ನಟನೆ, ಹಂಸಲೇಖ ಅವರ ಸಾಹಿತ್ಯದಿಂದ ಹೊರಬಂದ ಈ ಹಾಡು ಕೇಳುವುದೇ ಒಂದು ಸಂಭ್ರಮ. ಇಂದಿನ ಸಿನಿಮಾದಲ್ಲಿ ಆ ಹಾಡಿನ ಕುರಿತಾದ ಸನ್ನಿವೇಶಗಳೇ ಇಲ್ಲ. ಅಲ್ಲದೇ ಜನ ಈ ತರಹದ ಹಾಡುಗಳನ್ನು ಸಾಕಷ್ಟು ಕೇಳಿ ಬಿಟ್ಟಿದ್ದಾರೆ~.ಸಿನಿಮಾದಲ್ಲಿ ಒಂದು ಹಾಡು ಕೂಡ ವ್ಯರ್ಥವಾಗಬಾರದು ಎಂಬುವುದು ನಿರ್ದೇಶಕರ ಅಭಿಪ್ರಾಯ. ಹಾಗಾಗಿ ಈ ಹಬ್ಬದ ಹಾಡುಗಳು ಬೇಡಿಕೆ ಕಳೆದುಕೊಂಡಿದೆ. ಹಬ್ಬದ ಕುರಿತಾದ ಹಾಡುಗಳನ್ನು ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಇದೆ. ಅವಕಾಶ ಸಿಕ್ಕರೆ ಮಾಡುತ್ತೇನೆ.

-ಅರ್ಜುನ್ ಜನ್ಯಅವಕಾಶಕ್ಕಾಗಿ ಕಾಯುತ್ತಿದ್ದೇನೆ

`ನಂಜುಂಡಿ~ ಚಿತ್ರದ `ದೀಪದಿಂದ ದೀಪವ ಹಚ್ಚಬೇಕು ಮಾನವ~ ಈ ಹಾಡಿನ ಸಾಲಿನಲ್ಲಿ ಜೀವನದ ಸಾರವಿದೆ. ಹಾಗಾಗಿ ಈ ಹಾಡು ನನಗೆ ತುಂಬಾ ಇಷ್ಟ. ಎಂದೂ ಮರೆಯಲಾಗದ ಹಾಡು ಇದು. ದೀಪಾವಳಿಯೆಂದರೆ ಮನಸ್ಸಿನ ಅಂಧಕಾರ ತೊಡೆದು ಹಾಕಿ ಬೆಳಕು ಮೂಡಿಸುವ ಸಮಯ.ಪ್ರೀತಿ ಹಂಚುವ  ಕೆಲಸಕ್ಕೆ ಮುಂದಾಗುವ ಗಳಿಗೆ. ಇಂದು ಜನ ಹೊಸತನ್ನು ಕೇಳುತ್ತಾರೆ. ಹಾಗಾಗಿ ಈ ಹಬ್ಬದ ಕುರಿತಾದ ಹಾಡುಗಳು ಕಡಿಮೆಯಾಗಿದೆ. ನಿರ್ದೇಶಕರು ನಮ್ಮ ಮುಂದೆ ಪ್ರೀತಿಗೆ ಸಂಬಂಧಪಟ್ಟ ಕತೆ ಹೇಳುತ್ತಾರೆ. ಆಗ ಈ ಹಬ್ಬದ ಕುರಿತ ಹಾಡನ್ನು ಹೆಣೆಯಲು ಹೇಗೆ ಸಾಧ್ಯ?ಇಂದು ಪ್ರೀತಿ, ಆ್ಯಕ್ಷನ್ ಸಿನಿಮಾಗಳೇ ಹೆಚ್ಚಾಗಿರುವುದರಿಂದ ಈ ಹಬ್ಬದ ಸನ್ನಿವೇಶಗಳು ಕಡಿಮೆ. ಹಾಗಾಗಿ ಹಬ್ಬದ ಪ್ರಾಮುಖ್ಯ ಸಾರುವ ಹಾಡುಗಳಿಗೆ ಅವಕಾಶ ಇಲ್ಲವಾಗಿವೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಾಡುಗಳನ್ನು ಹಾಡಬೇಕು ಎಂಬ ಆಸೆ ಇದೆ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ.

-ಅನೂಪ್ ಸೀಳಿನ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.