ಕಾಡುಹಂದಿ ಹಾವಳಿ ತಡೆಗೆ ಸೀರೆ ಬೇಲಿ!

7

ಕಾಡುಹಂದಿ ಹಾವಳಿ ತಡೆಗೆ ಸೀರೆ ಬೇಲಿ!

Published:
Updated:

ಶ್ರೀರಂಗಪಟ್ಟಣ: ಕಾಡು ಹಂದಿಗಳು ಬೆಳೆಯನ್ನು ನಾಶಮಾಡುತ್ತವೆ ಎಂಬ ಕಾರಣದಿಂದ ತಾಲ್ಲೂಕಿನ ಗರುಡನ ಉಕ್ಕಡ, ಎಂ.ಶೆಟ್ಟಹಳ್ಳಿ ಹಾಗೂ ಟಿ.ಎಂ.ಹೊಸೂರು ರೈತರು ಬತ್ತ, ಕಬ್ಬು ಹಾಗೂ ತರಕಾರಿ ಬೆಳೆಗಳಿಗೆ ಸೀರೆ ಬೇಲಿ ನಿರ್ಮಿಸಿಕೊಂಡಿದ್ದಾರೆ.ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಬೆಳೆಗಳಿಗೆ ಸೀರೆ ಬೇಲಿ ಹಾಕಿರುವುದು ಕಂಡು ಬರುತ್ತಿದೆ. ಬೆಳೆ ಇರುವ ಜಮೀನುಗಳ ಸುತ್ತಲೂ ಬಟ್ಟೆಯ ಬೇಲಿ ಹಾಕಲಾಗಿದೆ. ಮರದ ಟೊಂಗೆಗಳಿಗೆ ಉಪಯೋಗಕ್ಕೆ ಬಾರದ, ಹಳೆಯ ಸೀರೆಗಳನ್ನು ಕಟ್ಟುತ್ತಿದ್ದಾರೆ.ಇದರಿಂದ ಹಂದಿಗಳು ಹೆದರಿ ಪಲಾಯನ ಮಾಡುತ್ತವೆ ಎಂಬ ಭರವಸೆಯಿಂದ ಹೀಗೆ ಸೀರೆ ಕಟ್ಟಲಾಗುತ್ತಿದೆ. ಪಕ್ಕದ ಅರಣ್ಯದಿಂದ ರಾತ್ರಿ ವೇಳೆ ದಾಳಿ ಮಾಡುವ ಕಾಡು ಹಂದಿಗಳ ಹಿಂಡು ಬೆಳೆಯನ್ನು ಧ್ವಂಸ ಮಾಡುತ್ತವೆ. ಹಾಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಈ ತಂತ್ರ ಅನುಸರಿಸುತ್ತಿದ್ದಾರೆ.  ಕತ್ತಲು ಕವಿಯುತ್ತಿದ್ದಂತೆಯೇ ಕಾಡು ಹಂದಿಗಳು ಹಿಂಡು ಹಿಂಡಾಗಿ ಜಮೀನಿಗೆ ಲಗ್ಗೆ ಇಡುತ್ತವೆ. ಕಬ್ಬು ಮಾತ್ರವಲ್ಲದೆ ಬತ್ತ, ತರಕಾರಿ ಬೆಳೆಗಳನ್ನೂ ನಾಶ ಮಾಡುತ್ತವೆ. ಅವು ಬೆಳೆ ತಿನ್ನುವುದಕ್ಕಿಂತ ಹಾಳು ಮಾಡುವುದೇ ಹೆಚ್ಚು. ಏನೂ ಮಾಡದೆ ಸುಮ್ಮನಿದ್ದರೆ ಬೆಳೆ ಏನೇನೂ ಸಿಗುವುದಿಲ್ಲ.ಹಾಗಾಗಿ ಸೀರೆ, ಗೋಣಿ ಚೀಲ, ಪ್ಲಾಸ್ಟಿಕ್ ಹಾಳೆಗಳನ್ನು ಗದ್ದೆಯ ಬದುಗಳಿಗೆ ಕಟ್ಟುತ್ತಿದ್ದೇವೆ. ಬೆಳೆಗೆ ಮಾಡಿದ ಖರ್ಚಾದರೂ ಉಳಿಯಲಿ ಎಂಬುದು ನಮ್ಮ ಉದ್ದೇಶ. ಕಾಡು ಹಂದಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರೂ ಇತ್ತ ಗಮನ ಹರಿಸುತ್ತಿಲ್ಲ.ಹಾಗಾಗಿ ನಮ್ಮ ಬೆಳೆಯನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದು ರೈತರಾದ ಚೌಡಯ್ಯ, ಚಂದ್ರಶೇಖರ್, ರಾಮಣ್ಣ ಇತರರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry