ಕಾಡು ಹಂದಿ ಉಪಟಳ: ಹತ್ತಾರು ಎಕರೆ ಜೋಳ ನಾಶ

7

ಕಾಡು ಹಂದಿ ಉಪಟಳ: ಹತ್ತಾರು ಎಕರೆ ಜೋಳ ನಾಶ

Published:
Updated:

ಔರಾದ್: ತಾಲ್ಲೂಕಿನ ವಿವಿಧೆಡೆ ಕಾಡು ಹಂದಿಗಳ ಹಾವಳಿ ಜಾಸ್ತಿಯಾಗಿ ಹತ್ತಾರು ಎಕರೆ ಪ್ರದೇಶದಲ್ಲಿನ ಜೋಳ, ತೊಗರಿ ಮತ್ತು ಸೋಯಾ ಬೆಳೆ ಹಾಳು ಮಾಡಿವೆ. ಮುಂಗನಾಳ ಗ್ರಾಮವೊಂದರಲ್ಲೇ 20 ಎಕರೆಗೂ ಜಾಸ್ತಿ ಹೈಬ್ರಿಡ್ ಜೋಳ ಮತ್ತು ತೊಗರಿ ಬೆಳೆ ನಾಶವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಗೋವಿಂದ ಇಂಗಳೆ ತಿಳಿಸಿದ್ದಾರೆ.ಸಂಜೆಯಾಗುತ್ತಿದ್ದಂತೆ ಕಾಡು ಹಂದಿಗಳ ಹಿಂಡು ಹೊಲಗಳಿಗೆ ನುಗ್ಗಿ ಜೋಳದ ಬೆಳೆ ನೆಲಕ್ಕೆ ಹಾಕಿ ತೆನೆ ತಿಂದು ಹಾಕುತ್ತಿವೆ. ಕೆಲ ಕಡೆ ರಾಶಿ ಮಾಡಬೇಕಾದ ಸೋಯಾ ಸಂಪೂರ್ಣವಾಗಿ ಹಾಳು ಮಾಡಿವೆ. ಬೆದರಿಸಲು ಹೋದ ರೈತರ ಮೇಲೆ ದಾಳಿ ಮಾಡುತ್ತಿವೆ. ಈಚೆಗೆ ಗ್ರಾಮದ ಪಂಢರಿ ಎಂಬ ರೈತನ ಮೇಲೆ ಹಾಡು ಹಂದಿ ದಾಳಿ ಮಾಡಿ ಗಾಯಗೊಳಿಸಿದೆ. ಹೀಗಾಗಿ ಮಹಿಳೆಯರು ಒಬ್ಬರಾಗಿ ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ ಎಂದು ಮುಂಗನಾಳ ಗ್ರಾಮಸ್ಥರು ಗೋಳು ತೋಡಿಕೊಂಡಿದ್ದಾರೆ.ಶಿವಾಜಿ ಸಾದಗಿರ, ಪದ್ಮಿನಿ ಮಾಣಿಕರಾವ, ಸಂತಾರಾಮ ಜಾನಪುರಕರ್, ಭೀಮರಾವ ಜಗದಾಳೆ, ತ್ರಿವೇಣಿ ಇಂಗಳೆ, ಗಣಪತರಾವ ಮುದಾಳೆ, ತುಳಸಿರಾಮ ಸಂಗೆಕರ್, ಕಾಶಿಬಾಯಿ ವಿಜಯಕುಮಾರ ಸೇರಿದಂತೆ ಮುಂಗನಾಳ ಗ್ರಾಮದಲ್ಲಿ 15ಕ್ಕೂ ಹೆಚ್ಚು ರೈತರು ಕಾಡು ಹಂದಿ ದಾಳಿಯಿಂದ ತಮ್ಮ ಬೆಳೆ ಕಳೆದುಕೊಂಡಿದ್ದಾರೆ.ಪರಿಹಾರಕ್ಕೆ ಆಗ್ರಹ: ಮುಂಗನಾಳ, ಡೋಣಗಾಂವ್, ಬೆಳಕುಣಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಕಾಡು ಹಂದಿ ದಾಳಿ ತಪ್ಪಿಸಬೇಕು. ಈಗಾಗಲೇ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ರೈತರು ತಾಲ್ಲೂಕು ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry