ಕಾಡು ಹಣ್ಣು ಬಕುಲ

7

ಕಾಡು ಹಣ್ಣು ಬಕುಲ

Published:
Updated:

ಚಳಿಗಾಲದೊಂದಿಗೆ ಮಲೆನಾಡಿನಲ್ಲಿ ಕಾಡು ಹಣ್ಣುಗಳ ಹಂಗಾಮು ಆರಂಭ. ನಗರದ ಜನರಿಗೆ ಈ ಹಣ್ಣುಗಳ ಪರಿಚಯ ಅಷ್ಟಾಗಿರುವುದಿಲ್ಲ. ಇಂಥ ಹಣ್ಣುಗಳಲ್ಲಿ ಬಕುಲದ ಹಣ್ಣೂ ಒಂದು.ಜನವರಿಯಿಂದ ಮೇ ತಿಂಗಳ ವರೆಗೆ ದೊರೆವ ಬಕುಲದ ಹಣ್ಣನ್ನು ಇಂಗ್ಲಿಷ್‌ನಲ್ಲಿ `ಸ್ಪಾನಿಷ್ ಚೆರ‌್ರಿ~ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಮಿಮುಸೋಪ್ಸ್ ಎಲಂಗಿ. ಇದು ಸಪೋಟೇಸಿ ಕುಟುಂಬಕ್ಕೆ ಸೇರಿದೆ. ಭಾರತ ಮೂಲದ್ದೇ ಆದ ಬಕುಲವನ್ನು ರಂಜಲು, ಪಗಡೆಮರ, ಕೇಸರ, ಎಲಂಗಿ, ಮಲಸುರಿ ಎಂದೂ ಕರೆಯುತ್ತಾರೆ.ಒರಿಸ್ಸಾದ ಬುಡಕಟ್ಟು ಜನ ದೈವೀ ವೃಕ್ಷವೆಂದು ಅಂಗಳದಲ್ಲಿ ಬೆಳೆಸುವ ಬಕುಲದ ಮರ, ಪಶ್ಚಿಮಘಟ್ಟದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಂಡುಬರುತ್ತದೆ. ಕಾಫಿ, ಏಲಕ್ಕಿ ತೋಟಗಳಲ್ಲಿಯೂ ಇದನ್ನು ನೋಡಬಹುದು.

 

ನಕ್ಷಾತ್ರಾಕಾರದ ಸುಗಂಧಿತ ಬಿಳಿ ಹೂಗಳು, ಹೊಳಪಿನ ಹಸಿರು ಕಾಯಿಗಳು ಪಕ್ವಗೊಂಡು ಕೇಸರಿ ಬಣ್ಣದ ಹಣ್ಣಾಗುತ್ತವೆ. ಇವು ಸವಿಯಾಗಿರುತ್ತವೆ. ಪ್ರತಿ ಹಣ್ಣಿನಲ್ಲೂ ಸಪೋಟ ಬೀಜಾಕೃತಿಯ ಕಂದು ಬಣ್ಣದ ಬೀಜವಿರುತ್ತದೆ.ಹೂಗಳು ಜೇನುಹುಳುಗಳನ್ನು  ಆಕರ್ಷಿಸುತ್ತವೆ. ಸಿಹಿರುಚಿಯ ಹಣ್ಣುಗಳನ್ನು ಭಕ್ಷಿಸಲು ಬರುವ ಪಕ್ಷಿಗಳಿಂದ ತೋಟಗಳಲ್ಲಿನ ಕೀಟಗಳ ಹತೋಟಿಯಾಗುತ್ತದೆ. ಚೆಂದದ ಹೂಗಳನ್ನು ಮಾಲೆ ಮಾಡಿಟ್ಟರೆ ಬಹು ದಿನಗಳವರೆಗೂ ಬಾಡುವುದಿಲ್ಲ.ಮಲೆನಾಡ ಜನರು ಇಷ್ಟಪಟ್ಟು ತಿನ್ನುವ ಬಕುಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಹಣ್ಣುಗಳು ಶರ್ಕರ ಪಿಷ್ಟ, ಸಸಾರಜನಕ, ಸುಣ್ಣ, ರಂಜಕವನ್ನು ಒಳಗೊಂಡಿವೆ. ಇದರ ರೆಂಬೆ ಮತ್ತು ಕಡ್ಡಿಯನ್ನು ಹಲ್ಲುಜ್ಜಲು ಉಪಯೋಗಿಸಬಹುದು.ತೊಗಟೆಯು ಅತಿಸಾರ ಆಮಶಂಕೆಗೆ ಬಳಕೆಯಾಗುತ್ತದೆ. ಹೂವನ್ನು ಒಣಗಿಸಿ ತಲೆನೋವಿಗೆ ಮದ್ದು ತಯಾರಿಸುತ್ತಾರೆ. ಇದರ ಬೀಜದಿಂದ ಮಲಬದ್ಧತೆಗೆ, ತೊಗಟೆಯಿಂದ ಹುಳುಕುಹಲ್ಲು ಮತ್ತು ಗಾಯಕ್ಕೆ ಔಷಧ ತಯಾರಿಸಬಹುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೂವನ್ನು ಸುಗಂದ ದ್ರವ್ಯದ ತಯಾರಿಕೆಗೂ ಬಳಸಬಹುದು.ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಒಣಹವೆಯಲ್ಲಿ ಬೆಳವಣಿಗೆ ತಡವಾಗುತ್ತದೆ. ಒಂದೇ ಬಗೆಯ ಸಸಿಗಳನ್ನು ಬೆಳೆಸಿ ಒದಗಿಸುವ ಅರಣ್ಯ ಇಲಾಖೆ ಇವುಗಳ ಕಡೆಯೂ ಗಮನ ಹರಿಸಿದರೆ ಅಳಿವಿನ ಅಂಚಿನಲ್ಲಿ ಇರುವ ಸಸ್ಯಗಳ ಸಂರಕ್ಷಣೆ  ಮಾಡಿದಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry