ಕಾಣೆಯಾದ ಕೊಟ್ಟೆ ಇಡ್ಲಿ; ಅರಿಶಿಣೆಲೆ ಕಡಬು

7

ಕಾಣೆಯಾದ ಕೊಟ್ಟೆ ಇಡ್ಲಿ; ಅರಿಶಿಣೆಲೆ ಕಡಬು

Published:
Updated:

ಕುಮಟಾ: ದೀಪಾವಳಿ ಹಬ್ಬದಂದು ಮಣ್ಣಿನಿಂದ ಬಲಿಚಕ್ರವರ್ತಿಯ ಮೂರ್ತಿ ತಯಾರಿಸಿ ಪೂಜೆ ಮಾಡುವ ಸಂಪ್ರದಾಯ ತಾಲ್ಲೂಕಿನಲ್ಲಿ ಇನ್ನೂ ಚಾಲ್ತಿಯಲ್ಲಿದೆ.ತ್ಯಾಗ, ಬಲಿದಾನಕ್ಕೆ ಹೆಸರಾದ ಬಲಿ ಚಕ್ರವರ್ತಿಯ ಪೂಜೆಯೇ ದೀಪಾವಳಿ ಹಬ್ಬದ ವಿಶೇಷ. ಹಳ್ಳಿಗಳ ಮನೆ ಮನೆಗಳಲ್ಲಿ ಮಣ್ಣಿನಿಂದ ಬಲಿಚಕ್ರವರ್ತಿ ಮೂರ್ತಿಯನ್ನು ತಯಾರಿಸಿ ಪೂಜಿಸಲಾಯಿತು. ಬಲಿಚಕ್ರವರ್ತಿಯ ಅಕ್ಕ ಪಕ್ಕ ಅವನ ಸಹಾಯಕರ ಮೂರ್ತಿಗಳೂ ಇದ್ದವು.

 

ಗಣಪತಿಯ ಹಾಗೆ ಇಂಥದೇ ನಿರ್ದಿಷ್ಟ ರೂಪ ಇಲ್ಲದಿರುವುದರಿಂದ ತಮಗೆ ತೋಚಿದ ಹಾಗೇ ಮನೆ ಮನೆಗಳಲ್ಲಿಯೇ ಬಲಿಚಕ್ರವರ್ತಿ ಮೂರ್ತಿ ತಯಾರಿಸಿ ತುಳಸಿ ಮುಂದೆ ಇಟ್ಟು ದೀಪಾವಳಿಯ ಮೂರು ದಿನ ಪೂಜೆ ಮಾಡುವುದು ವಿಶೇಷ.ಅಪರೂಪವಾದ ಅರಿಶಿಣ ಎಲೆ: ದೀಪಾವಳಿಯ ನರಕಚತುದರ್ಶಿ ದಿನ ಅರಿಶಿಣ ಎಲೆಯ ಕಡಬು ತಯಾರಿಸುವುದು ಸಂಪ್ರದಾಯ. ಹಿಂದೆಲ್ಲ ಮನೆಯ ಹಿತ್ತಲಲ್ಲೇ ಅರಶಿಣ ತೋಟ (ಓಳಿ) ಬೆಳೆಸುತ್ತಿದ್ದರು. ದೀಪಾವಳಿಯ ನಂತರ ಬರುವ ಎಷ್ಟೋ ಹಬ್ಬಗಳ ಸಂದರ್ಭದಲ್ಲೂ ಅರಿಶಿಣದೆಲೆ ಕಡುಬು ಮಾಡುತ್ತಿದ್ದರು. ಗಿಡ ಒಣಗಿದ ನಂತರ ಅರಿಶಿಣ ಕೊಂಬು ಅಗೆದು ಒಣಗಿಸಿ ವರ್ಷಪೂರ್ತಿ ಅಡುಗೆಗೆ ಬಳಸುತ್ತಿದ್ದರು.ಈಗ ಮನೆಯ ಹಿತ್ತಲಲ್ಲಿ ಅರಿಶಿಣ ಬೆಳೆಯುವ ಸಂಪ್ರದಾಯವೇ ಇಲ್ಲದ್ದರಿಂದ ದೀಪಾವಳಿ ಕಡಬು ತಯಾರಿಸು ವುದಕ್ಕೂ ಅರಿಶಿಣದೆಲೆಗೆ ಪರದಾಡುವಂತಾಗಿದೆ.  ಬಲಿಪಾಡ್ಯದ ದಿನ ಹಲಸಿನ ಎಲೆಯಿಂದ ಕಲಾತ್ಮಾಕವಾಗಿ ತಯಾರಿಸಿದ ಕೊಟ್ಟೆಯಲ್ಲಿ ಉದ್ದಿನ ಹಿಟ್ಟು ಹಾಕಿ ತಯಾರಿಸುವ ಇಡ್ಲಿ ರುಚಿಯನ್ನು ಬಲ್ಲವರೇ ಬಲ್ಲರು.ಹಲಸಿನ ಎಲೆಯ ಇಡ್ಲಿಯನ್ನಂತೂ ಅಂಗಳದಲ್ಲಿ ಕಡಗಲ್ಲು ಹೂಡಿ ಮಾಡಿದ ದೊಡ್ಡ ಒಲೆಯ ಮೇಲಿಟ್ಟ ಹಂಡೆಯಲ್ಲೇ ಬೇಯಿಸುತ್ತಿದ್ದರು. ಬಲಿಪಾಡ್ಯದ ಹಿಂದಿನ ದಿನ ಮನೆಯಲ್ಲಿ  ಗಂಡಸರು, ಮಕ್ಕಳೆಲ್ಲ ಸೇರಿ ಹಲಸಿನ ಎಲೆಯ ಕಲಾತ್ಮಕ ಕೊಟ್ಟೆಯನ್ನು ತಯಾರಿಸುವುದರಲ್ಲಿ ನಿರತರಾಗುತ್ತಿದ್ದರು.ಹಲಸಿನ ಎಲೆಯ ಕೊಟ್ಟೆ ಎಷ್ಟು ಅಚ್ಚುಕಟ್ಟಾಗಿರುತ್ತದೆ ಎಂದರೆ, ಅದರಲ್ಲಿ ಹಾಕುವ ತೆಳು ಇಡ್ಲಿ ಹಿಟ್ಟು ಕೊಂಚವೂ ಸೋರುತ್ತಿರಲಿಲ್ಲ. ಕೊಟ್ಟೆ ತಯಾರಿಸುವುದರಲ್ಲೇ  ಮೂರು ಮೂಲೆ ಕೊಟ್ಟೆ, ಎರಡು ಮೂಲೆ, ಒಂದೇ ಮೂಲೆ ಕೊಟ್ಟೆ... ಹೀಗೆ ಮೂರ‌್ನಾಲ್ಕು ವಿಧ.ಸಣ್ಣ ಮಕ್ಕಳಿಗೆ ಪುಟ್ಟ ಪುಟ್ಟ ಕೊಟ್ಟೆಯನ್ನು ತಯಾರಿಸಿ ಅದರಲ್ಲಿ ಇಡ್ಲಿ ಮಾಡಿ ಕೊಡಲಾಗುತ್ತಿತ್ತು. ಈಗ ಹೆಚ್ಚು-ಕಡಿಮೆ ಇವೆಲ್ಲವುಗಳ ಸಂಭ್ರಮ ಕಡಿಮೆಯಾಗಿ ಅವುಗಳ ಅಸ್ತಿತ್ವ ಮಾತ್ರ ಉಳಿದಂತಿದೆ. ಯಾರ ಮನೆಯ್ಲ್ಲಲೂ ಅರಿಶಿಣದ ಎಲೆಗಳು ಸಿಗುವುದಿಲ್ಲ, ಹಲಸಿನ ಎಲೆಯ ಕೊಟ್ಟೆ ತಯಾರಿಸೋಣವೆಂದರೆ ಹಲಸಿನ ಮರಗಳೇ ಕಾಣೆಯಾವಾಗಿವೆ. ಹಬ್ಬದ ಸಂದರ್ಭದಕ್ಕೆಂದೇ ಇವುಗಳನ್ನೆಲ್ಲ ತಯಾರಿಸಿ ಮಾರುವವರಿಂದ ಖರೀದಿ ಮಾಡಬೇಕಾಗಿದೆ.ದೀಪಾವಳಿಯ ಎರಡು ದಿನ ಆರತಿ ತಟ್ಟೆ ಕಾಣುವ ಸಂಪ್ರದಾಯ ಕೂಡ ಸಾಮಾನ್ಯ. ಮನೆಯ ಗಂಡುಮಕ್ಕಳು, ಅಳಿಯಂದಿರು ಆರತಿ ತಟ್ಟಗೆ ಹಣ ಹಾಕುವುದು ಸಂಪ್ರದಾಯ. ದೊಡ್ಡ ಮೊತ್ತದ ನೋಟುಗಳನ್ನೇ ಹಾಕುವಂತೆ ತವರಿಗೆ ಬಂದ ಹಣ್ಣು ಮಕ್ಕಳು, ಸೊಸೆಯಂದಿರು  ತಮ್ಮ ಗಂಡಸರಿಗೆ ಹುರಿದುಂಬಿಸುತ್ತಾರೆ. ಏಕೆಂದರೆ ಆರತಿ ತಟ್ಟೆ ನೋಟುಗಳನ್ನೆಲ್ಲ ಹಂಚಿಕೊಳ್ಳು ವವರು ಹೆಂಗಸರೇ ಆಗಿರುತ್ತಾರೆ.ದೀಪಾವಳಿ ಸಂದರ್ಭದಲ್ಲಿಯೇ ಎಷ್ಟೋ ಜನರು ವಾಹನ, ಸೈಟು, ಮನೆ, ಚಿನ್ನ, ಬಟ್ಟೆ, ಖರೀದಿ ಮಾಡುತ್ತಾರೆ. ಕೆಲವರು  ಬೇರೆ ಬೇರೆ ಯೋಜನೆಗಳಲ್ಲಿ ಹಣ ತೊಡಗಿಸುತ್ತಾರೆ. ಮೂರು ದಿವಸಗಳ ಹಬ್ಬ ಮುಗಿಸಿ ಮರುದಿನ ಬೆಳಗಿನ ಜಾವ ಸೂರ್ಯ ಹುಟ್ಟುವ ಮೊದಲೇ ಅನ್ನ, ಮೊಸರಿನ ಬುತ್ತಿಯೊಂದಿಗೆ ಬಲಿಕಚ್ರವರ್ತಿಯನ್ನು ಬೀಳ್ಕೊಡುವಾಗ ಎಲ್ಲರಲ್ಲೂ ಅಗಲಿಕೆ ಭಾವ ತುಂಬಿರುತ್ತದೆ. ಮೂರು ದಿನದ ಮಟ್ಟಿಗೆ ದೀಪಾವಳಿ ಹೆಸರಲ್ಲಿ ಬರುವ ಎಲ್ಲ ಸಂಭ್ರಮಕ್ಕೆ ಬಲಿ ಚಕ್ರವರ್ತಿಯೇ ಕಾರಣವಾಗಿದ್ದರಿಂದ ಆತನನ್ನು ಕಳಿಸಿಕೊಡುವಾಗ ಅಗಲಿಕೆಯ ದುಃಖ ಇದ್ದೇ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry