ಕಾಣೆಯಾದ ನೀರಾವರಿ ಹೋರಾಟ

ಬುಧವಾರ, ಮೇ 22, 2019
24 °C

ಕಾಣೆಯಾದ ನೀರಾವರಿ ಹೋರಾಟ

Published:
Updated:

ಚಿಕ್ಕಬಳ್ಳಾಪುರ:  ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ನಿಧಾನವಾಗಿ ಒಂದೆಡೆ ಕಣ್ಮರೆ ಯಾಗಡತೊಗಿದರೆ, ಮತ್ತೊಂದೆಡೆ ನೀರಾವರಿಗೆ ಸಂಬಂಧಿಸಿದಂತೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ.ಜಿಲ್ಲಾ ಬಂದ್ ಆಚರಿಸಿದ ನಂತರವೂ  ಸರ್ಕಾರವು ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ನಿರಾಶಾಭಾವ ಕೆಲ ಹೋರಾಟಗಾರರಲ್ಲಿ ಮೂಡಿದ್ದರೆ, ಕೇಂದ್ರ ಮತ್ತು ರಾಜ್ಯ   ಸರ್ಕಾರಗಳ ಸಚಿವರು

ಆಶ್ವಾಸನೆಗಳನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿ ಜನರಲ್ಲಿ ಆಶಾಭಾವ ಮೂಡಿಸಲು ಯತ್ನಿಸುತ್ತಿದ್ದಾರೆ.ಆಸಕ್ತಿಮಯ ಸಂಗತಿಯೆಂದರೆ, ಒಬ್ಬೊಬ್ಬರು ಒಂದೊಂದು ಕಡೆಯಿಂದ ನೀರಾವರಿ ಸೌಲಭ್ಯ ತರುವುದರ ಬಗ್ಗೆ ಭರವಸೆಗಳನ್ನು ನೀಡುತ್ತಿದ್ದಾರೆ.ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ,  ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನೀರವಾರಿ ತಜ್ಞ ಡಾ. ಜಿ.ಎಸ್.ಪರಮಶಿವಯ್ಯ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ವರದಿ ಅನುಸಾರವಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು  ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಸಚಿವ ಬಸವರಾಜ ಬೊಮ್ಮೋಯಿ ಅವರು ಇದೇ ರೀತಿಯ ಭರವಸೆಗಳನ್ನು ನೀಡಿದ್ದರು.ನಂತರದ ದಿನಗಳಲ್ಲಿ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿಯವರು ಸಕಲೇಶಪುರ ಸಮೀಪದ ಎತ್ತಿನಹೊಳೆಯಿಂದ ಜಿಲ್ಲೆಗೆ ಕುಡಿಯುವ ನೀರು ತರುವುದಾಗಿ ಹೇಳಿದರೆ, ಸಚಿವ ಜಗದೀಶ ಶೆಟ್ಟರ್ ಅವರು ತುಂಗಭದ್ರ ನದಿಯಿಂದ ಜಿಲ್ಲೆಗೆ ನೀರು ತರುವುದಾಗಿ ಭರವಸೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿಯವರು ಸಹ ಬೇರೆಯೊಂದು ಯೋಜನೆಯ ಮೂಲಕ ನೀರು ತರುವುದಾಗಿ ಆಗಾಗ್ಗೆ ಭರವಸೆ ನೀಡುತ್ತಿದ್ದಾರೆ.ಈ ಬೆಳವಣಿಗೆ ಎಲ್ಲವೂ ಒಂದೆಡೆ ನಡೆದರೆ, ಮತ್ತೊಂದೆಡೆ ಶಾಸಕರು ಸೇರಿದಂತೆ ಸಂಘಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಮತ್ತು ಜನರು,  ಯಾವ ಮೂಲದಿಂದಾದರೂ ನೀರು ಬಂದ್ರೆ ಸಾಕು. ಬರಡು ಸ್ವರೂಪ ಪಡೆಯುತ್ತಿರುವ ಜಿಲ್ಲೆಯು ನೀರಿನಿಂದ ಸ್ವಲ್ಪವಾದರೂ ಸಂಪದ್ಭರಿತವಾದರೆ ಸಮಾಧಾನ  ಎಂಬ ಅಭಿಪ್ರಾಯಪಡುತ್ತಿದ್ದಾರೆ.ಆರು ತಿಂಗಳ ಹಿಂದೆ ನೀರಾವರಿ ಹೋರಾಟ ಸಮಿತಿಯು ತೀವ್ರ ಪ್ರತಿಭಟನೆ ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ಸಂದರ್ಭದಲ್ಲಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು,  ಪಶ್ಚಿಮ ಘಟ್ಟದಿಂದ ಇಲ್ಲದಿದ್ದರೆ ಸಕಲೇಶಪುರದ ಎತ್ತಿನಹೊಳೆಯಿಂದಾದರೂ ನೀರು ಬರಲಿ. ಅವೆರಡರಿಂದಲೂ ಸಾಧ್ಯವಾಗದಿದ್ದರೆ, ಆಲಮಟ್ಟಿ ಜಲಾಶಯದಿಂದಾದರೂ ನೀರು ಬರಲಿ  ಎಂದು ಒತ್ತಾಯಿಸಿದ್ದರು. ನಮಗೆ ನೀರು ಬೇಕು  ಎಂದು ಹೇಳಿ ಹೋರಾಟಗಾರರು ಒಂದೇ ಹಠವನ್ನು ಹಿಡಿದಿದ್ದರು.

ಆದರೆ ಇತ್ತೀಚಿನ ಕೆಲ ದಿನಗಳಿಂದ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಷಯ ಪ್ರಸ್ತಾಪವಾಗುತ್ತಿಲ್ಲ. ತಮ್ಮ ವರದಿಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗುವ ಬಗ್ಗೆ ಸ್ವತಃ

ಡಾ. ಜಿ.ಎಸ್.ಪರಮಶಿವಯ್ಯ ಅವರೇ ಅನುಮಾನ ವ್ಯಕ್ತಪಡಿಸುತ್ತಾರೆ. ಪ್ರತಿಯೊಂದು ಸಭೆ-ಸಮಾರಂಭಗಳಲ್ಲೂ  ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಕಾಮಗಾರಿ ಶೀಘ್ರವೇ ಕೈಗೊಳ್ಳಲಾಗುವುದು  ಎಂದು ಹೇಳುತ್ತಿದ್ದ ವೀರಪ್ಪ ಮೊಯಿಲಿಯವರು ಇತ್ತೀಚೆಗೆ ಸುಮ್ಮನಾಗಿದ್ದಾರೆ.ಪರಮಶಿವಯ್ಯ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡ ನಂತರವೂ ಸಚಿವರಾದ ಜಗದೀಶ ಶೆಟ್ಟರ್ ಮತ್ತು ಎ.ನಾರಾಯಣಸ್ವಾಮಿಯವರು ಬೇರೆ ನೀರಾವರಿ ಯೋಜನೆಗಳ ಗ್ಗೆ ಪ್ರಸ್ತಾಪಿಸುತ್ತಿರುವುದು ಗೊಂದಲ ಮೂಡಿಸುವಂತಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗುತ್ತಿದೆ. ಅಂತರ್ಜಲ ಕುಸಿಯುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗುತ್ತಿದ್ದರೆ, ಅಪಾಯಕಾರಿ ಫ್ರೋರೈಡ್ ಮಿಶ್ರಿತ ನೀರನ್ನು ಸೇವಿಸಿ ಜಿಲ್ಲೆಯ ಗಡಿಗ್ರಾಮಗಳಲ್ಲಿನ ಗ್ರಾಮಸ್ಥರು ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯು ತೀವ್ರ ಸ್ವರೂಪದ ಸಮಸ್ಯೆ ಎದುರಿಸಲಿದೆ ಎಂಬ ಅಂಶ ಗೊತ್ತಿದ್ದರೂ ಸರ್ಕಾರವೇಕೆ ನಿಶ್ಚಿತ ನಿರ್ಣಯವನ್ನು ತೆಗೆದುಕೊಳ್ಳುತ್ತಿಲ್ಲ.ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಅಥವಾ ಭರವಸೆಗಳನ್ನು ನೀಡುವುದರ ಬದಲು ಕನಿಷ್ಠ ಒಂದು ಯೋಜನೆಯನ್ನಾದರೂ ಅನುಷ್ಠಾನಗೊಳಿಸಲು ಯಾಕೆ ಮುಂದಾಗುತ್ತಿಲ್ಲ. ಭರವಸೆಗಳ ಮಹಾಪೂರ ವನ್ನು ಹಲವಾರು ತಿಂಗಳುಗಳಿಂದ ಹರಿಸಲಾಗು ತ್ತಿದ್ದರೂ ನೀರಾವರಿ ಯೋಜನೆಗೆ ಸಂಬಂಧಿಸಿ ದಂತೆ ಸರ್ಕಾರ ಮತ್ತು ಸಚಿವರು ಯಾಕೆ ಸ್ಪಷ್ಟವಾದ ಚಿತ್ರಣವನ್ನು ನೀಡಲಾಗುತ್ತಿಲ್ಲ  ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry