ಕಾದರವಳ್ಳಿ ವಾಂತಿಭೇದಿ ಪ್ರಕರಣ ತಹಬಂದಿಗೆ

ಶನಿವಾರ, ಜೂಲೈ 20, 2019
23 °C

ಕಾದರವಳ್ಳಿ ವಾಂತಿಭೇದಿ ಪ್ರಕರಣ ತಹಬಂದಿಗೆ

Published:
Updated:

ಕಾದರವಳ್ಳಿ (ಚನ್ನಮ್ಮನ ಕಿತ್ತೂರು): ಇಲ್ಲಿಗೆ ಸಮೀಪದ ಕಾದರವಳ್ಳಿ ಗ್ರಾಮದಲ್ಲಿ ನಲ್ಲಿ ಮೂಲಕ ಸೇರಿ ಹರಿದು ಬಂದಿದ್ದ ಕಲುಷಿತ ನೀರು ಕುಡಿದು ಪರಿಣಾಮ ಜನರಲ್ಲಿ ಕಾಣಿಸಿಕೊಂಡಿದ್ದ ವಾಂತಿಭೇದಿ ಪ್ರಕರಣಗಳು ತಹಬಂದಿಗೆ ಬಂದಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.ಗ್ರಾಮದ ಸಿದ್ಧಾರೂಢ ಮಠದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ತಪಾಸಣೆ ಕೇಂದ್ರದಲ್ಲಿ ಪರೀಕ್ಷಿಸಲಾದ ಜನರಲ್ಲಿ 19 ಜನ ಮಾತ್ರ ವಾಂತಿಭೇದಿಯಿಂದ ಬಳಲುತ್ತಿದ್ದು, ಇವರಲ್ಲಿ 10ವರ್ಷದೊಳಗಿನ 5 ಮಕ್ಕಳಿದ್ದಾರೆ. ವಾಂತಿಭೇದಿ ತೀವ್ರವಾಗಿದ್ದರಿಂದ ಇಬ್ಬರು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ದಿನದ 24ಗಂಟೆಯೂ ತಾತ್ಕಾಲಿಕ ತಪಾಸಣೆ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೆಲಸಕ್ಕಾಗಿಯೇ ವೈದ್ಯರಾದ ಹರ್ಷ ಪಾಟೀಲ, ವರ್ಷಾ ಹೊಂಗಲ, ಎಚ್.ಬಿ. ಕುಡಚಿ, ಸುಷ್ಮಾ ಬಾಳಮಟ್ಟಿ ಹಾಗೂ 20 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಅಂಬ್ಯುಲೆನ್ಸ್ ವಾಹನದ ಸೌಲಭ್ಯ ಸಹ  ಕಲ್ಪಿಸಲಾಗಿದೆ.ಗ್ರಾಮದ ಗಣಾಚಾರಿ ಮತ್ತು ಹೈಬತ್ತಿ ಓಣಿಗಳಲ್ಲಿ ಮಾತ್ರ ಈ ಪ್ರಕರಣಗಳು ನಡೆದಿರುವ ವರದಿಯಾಗಿದೆ. ಗಣಾಚಾರಿ ಓಣಿಯಲ್ಲಿ ನಿರ್ಮಿಸಿರುವ ಗಟಾರಿನ ಉದ್ದಕ್ಕೂ ಕುಟುಂಬಗಳು ನಲ್ಲಿಗಳ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಗಟಾರಿನ ಕೊಳಚೆ ನೀರು ನಲ್ಲಿ ನೀರಿನೊಂದಿಗೆ ಸೇರಿಕೊಂಡಿದ್ದು ವಾಂತಿಭೇದಿ ಪ್ರಕರಣಗಳು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.ಸದ್ಯಕ್ಕಿರುವ ಪೈಪ್‌ಲೈನ್‌ಗೆ ಪರ್ಯಾಯವಾಗಿ ಬೇರೆ ಪೈಪ್‌ಲೈನ್ ಮಾರ್ಗ ನಿರ್ಮಿಸುವ ಕಾಮಗಾರಿ ಬಿರುಸಿನಿಂದ ಸಾಗಿದೆ. ಒಡೆದಿರುವ ಪೈಪ್ ಮಾರ್ಗವನ್ನು ಬಿಟ್ಟು, ಹೊಸ ಪೈಪ್‌ಲೈನ್ ಈ ಓಣಿಗೆ ಅಳವಡಿಸುವ ವಿಚಾರವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮಾಡಿದೆ.ಜಿ. ಪಂ. ಸದಸ್ಯ ಭೇಟಿ: ಸಂಗೊಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಸಿ. ಪಾಟೀಲ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ.ಎಸ್. ಕೊಣ್ಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ದಿಲೀಪಕುಮಾರ ಮನೋಳಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ್, ನೋಡಲ್ ಅಧಿಕಾರಿ ಡಾ. ಶೈಲಜಾ ತಮ್ಮಣ್ಣವರ ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಕುರಿತು ಮಾರ್ಗದರ್ಶನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry