ಕಾನನದಲ್ಲಿ ಸಾವಯವ ಕೃಷಿ

7

ಕಾನನದಲ್ಲಿ ಸಾವಯವ ಕೃಷಿ

Published:
Updated:

ಸಾವಯವ ಗೊಬ್ಬರಗಳನ್ನಷ್ಟೇ ಬಳಸಿ ಬೇಸಾಯ ಮಾಡುವಂತೆ ಸರ್ಕಾರ ಸೇರಿದಂತೆ ವಿವಿಧ  ಸಾವಯವ ಸಂಸ್ಥೆಗಳು ರೈತರಿಗೆ ಉತ್ತೇಜನ ನೀಡುತ್ತಿದೆ. ಆದರೆ ಸಾವಯವ ಗೊಬ್ಬರ ಬಳಸಿ ಬೇಸಾಯ ಮಾಡುವ ರೈತರ ಸಂಖ್ಯೆ ಕಡಿಮೆ ಇದೆ. ಸಾವಯವ ಗೊಬ್ಬರವನ್ನಷ್ಟೇ ಬಳಸಿ ಗುಣಮಟ್ಟದ ತರಕಾರಿ,ಹಣ್ಣು ಇತ್ಯಾದಿಗಳನ್ನು ಬೆಳೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದೆ ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಬರಡನಪುರ ಗ್ರಾಮದ ’ಕಾನನ’ ಬಳಗ.ಆರು ಸಮಾನ ಮನಸ್ಕ ಕುಟುಂಬಗಳ ಸದಸ್ಯರು ಸೇರಿ ರಚಿಸಿಕೊಂಡಿರುವ ಕಾನನ ಬಳಗ ಬರಡನಪುರ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಖರೀದಿಸಿದೆ. ಈ ಆರೂ ಕುಟುಂಬಗಳು ತಮ್ಮ ಮನೆ ಬಳಕೆಗೆ ಬೇಕಾದ ಹಣ್ಣು, ತರಕಾರಿಗಳನ್ನು ಬೆಳೆದುಕೊಳ್ಳಲು ಈ ಭೂಮಿ ಖರೀದಿಸಿವೆ.ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಹೆಚ್ಚುತ್ತಿರುವ ಹಿನ್ನೆಲೆ ಮತ್ತು ರಾಸಾಯನಿಕ ಗೊಬ್ಬರ ಕೀಟನಾಶಕ ಸಿಂಪಡಿಸಿ ಬೆಳೆದ ತರಕಾರಿ ತಿನ್ನುವ ಬದಲು ಸಾವಯವದಲ್ಲಿ ಬೆಳೆದ ತರಕಾರಿಗಳನ್ನು  ಬೆಳೆದು ಉಪಯೋಗಿಸಬೇಕು ಎನ್ನುವುದು ಕಾನನ ಬಳಗದ ಉದ್ದೇಶ.ಬಳಗ ತಮ್ಮ  ತೋಟಕ್ಕೆ ‘ಕಾನನ’ ಎಂದು ಹೆಸರಿಟ್ಟಿದೆ. ನಾಲ್ಕು ಎಕರೆ ಭೂಮಿಯಲ್ಲಿ ವಿವಿಧ ಜಾತಿಯ ಮಾವು, ಪರಂಗಿ, ಸೀತಾಫಲ, ರಾಮಫಲ, ನಿಂಬೆ, ಚಕ್ಕೋತ ಸೇರಿದಂತೆ ಒಟ್ಟು 20 ಜಾತಿಯ ಹಣ್ಣುಗಳನ್ನು ಬೆಳೆಯಲಾಗಿದೆ. ಅರ್ಧ ಎಕರೆಯಲ್ಲಿ ಭತ್ತ, ಇನ್ನರ್ಧ ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ. ಆದರೆ ಈ ಯಾವ ಬೆಳೆಗಳಿಗೂ ರಾಸಾಯನಿಕ ಗೊಬ್ಬರವನ್ನು ಬಳಸಿಲ್ಲ. ಸಾವಯವ  ಗೊಬ್ಬರದಿಂದ ಬೆಳೆಗಳನ್ನು ಬೆಳೆಯಲಾಗಿದೆ. ಗೊಬ್ಬರಕ್ಕಾಗಿ ನಾಲ್ಕು ಹಳ್ಳಿಕಾರ್ ಹಸುಗಳನ್ನು ಸಾಕಿದ್ದಾರೆ. ಇವುಗಳ ಸಗಣಿ, ಗಂಜಳ ಬಳಸಿ ಗೊಬ್ಬರ ತಯಾರಿಸುತ್ತಾರೆ.ಗುರುಪ್ರಸಾದ್-ಮಂಜುಳಾ, ಸುಬ್ರಹ್ಮಣ್ಯ ಶರ್ಮಾ-ರೇವತಿ, ಡಾ.ಎಂ.ಸಿ.ಮನೋಹರ್-ರಜನಿ, ಡಾ.ಕೆ.ಕೆ.ಗಣೇಶ್-ರಾಧಾ, ವಿಜಯ್-ಜಯಶ್ರೀ ಹಾಗೂ ಶ್ಯಾಮಸುಂದರ್-ಸುಮಾ ದಂಪತಿ ಬಳಗದ ಸದಸ್ಯರು.ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿರುವ ಈ ಸದಸ್ಯರು ತಾವು ಗಳಿಸಿದ ಆದಾಯದಲ್ಲಿ ಅಲ್ವಸ್ವಲ್ಪ ಉಳಿಸಿ ಭೂಮಿ ಖರೀದಿಸಿ ಬೇಸಾಯ ಮಾಡುತ್ತಿದ್ದಾರೆ. ಬೆಳೆದ ತರಕಾರಿ, ಹಣ್ಣುಗಳನ್ನು ಈ ಆರು ಕುಟುಂಬಗಳು ಬಳಸುತ್ತವೆ. ಹೆಚ್ಚಾದುದನ್ನು ಮಾರಾಟ ಮಾಡುತ್ತಾರೆ.ಕಾನನ ಬಳಗ 2004ರಲ್ಲಿ ಖರೀದಿಸಿದ ಭೂಮಿ ಬರಡಾಗಿತ್ತು. ಆದರೆ ಆರು ವರ್ಷಗಳ ಸತತ ಪರಿಶ್ರಮದ ನಂತರ ಈ ಭೂಮಿ ಹಸಿರಿನಿಂದ ನಗುತ್ತಿದೆ. ಒಂದು ಬೋರ್‌ವೆಲ್‌ನ ಬಳಸಿಕೊಂಡು ಬೇಸಾಯ, ತೋಟಗಾರಿಕೆ ಮಾಡುತ್ತಿದ್ದಾರೆ.ತೋಟದ ನಡುವೆ ಇರುವ ಬತ್ತಿದ ಕಲ್ಯಾಣಿಯ ಪುನಶ್ಚೇತನ ಮಾಡುವ ಪ್ರಯತ್ನವನ್ನು ಬಳಗ ಮಾಡುತ್ತಿದೆ. ತೋಟ ನೋಡಿಕೊಳ್ಳಲು ಆಳುಗಳನ್ನು ನೇಮಿಸಿದ್ದಾರೆ. ನಿತ್ಯ ಒಬ್ಬರು ತೋಟಕ್ಕೆ ಹೋಗಿ ಉಸ್ತುವಾರಿ ನೋಡುತ್ತಾರೆ. ಭಾನುವಾರ ಹಾಗೂ ಇತರ ರಜಾ ದಿನಗಳಲ್ಲಿ ಆರೂ ಕುಟುಂಬಗಳ ಸದಸ್ಯರು ‘ಕಾನನ’ದಲ್ಲಿಯೇ ಕಳೆಯುತ್ತಾರೆ.ತೋಟದಲ್ಲೇ ರುಚಿಯಾದ ಅಡುಗೆ ಮಾಡುತ್ತಾರೆ. ಸಾವಯವ ಉತ್ಪನ್ನಗಳಿಂದ ತಯಾರಿಸಿದ ಆಹಾರವನ್ನೇ ಸೇವಿಸುತ್ತಾರೆ. ನಗರದ ಯಾಂತ್ರಿಕ ಜೀವನದ ಏಕತಾನತೆ ಮರೆಯಲು ಇದು ಸಹಕಾರಿಯಾಗಿದೆ. ಬಳಗದ ಸದಸ್ಯರ ಮಕ್ಕಳಿಗೆ ಬೇಸಾಯ, ತೋಟಗಾರಿಕೆಯ ಜತೆಗೆ ಪರಿಸರದ ಪರಿಚಯವೂ ಆಗುತ್ತಿದೆ.ತೋಟದ ನಡುವೆ ಸುಂದರವಾದ ಹೆಂಚಿನ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಮನೆಯ ಛಾವಣಿಯಲ್ಲಿ ಬೀಳುವ ಮಳೆ ನೀರು ಸಂಗ್ರಹಿಸುತ್ತಾರೆ. ಆ ನೀರನ್ನು ತೋಟಕ್ಕೆ ಬಳಸಿಕೊಳ್ಳುತ್ತಾರೆ.ಕಾನನ ಬಳಗದ ತೋಟದ ಮೈಸೂರು-  ಮಾನಂದವಾಡಿ ರಸ್ತೆಯಲ್ಲಿ ಮೈಸೂರಿನಿಂದ 17 ಕಿ.ಮೀ ದೂರದಲ್ಲಿದೆ. ಆಸಕ್ತರು ರಜಾ ದಿನಗಳಲ್ಲಿ ಈ ತೋಟವನ್ನು ನೋಡಬಹುದು. ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಬೇಕಾದ ಮೊಬೈಲ್ ನಂ: 99456 06160.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry