ಕಾನನದ ನಡುವೆ ಚೆಲುವೆ

7

ಕಾನನದ ನಡುವೆ ಚೆಲುವೆ

Published:
Updated:

ಅರಣ್ಯದೊಳಗೆ ಅಜ್ಞಾತ ಜಲಪಾತಗಳು ಎಷ್ಟೆಷ್ಟೋ. ಕಣ್ಣಿಗೆ ಕಾಣಸಿಗುವುದು ಕೆಲವಾದರೆ ವನದ ಗರ್ಭದಲ್ಲೇ ಅಡಗಿರುವುದು ಹಲವು. ಅದರಲ್ಲಿ ಸುರ್ಲ ಜಲಪಾತವೂ ಒಂದು.ಕರ್ನಾಟಕ- ಗೋವಾ ಗಡಿಯ ಪರವಾಡ ಅರಣ್ಯ ಪ್ರದೇಶದ ಬೆಟ್ಟಗಳ ಮಧ್ಯೆ ಬೆಳ್ಳನೆಯ ನೊರೆಯಾಗಿ ಹಸಿರು ಹಾಸುಗಳ ನಡುವೆ ಅಬ್ಬರದ ಸದ್ದು ಮಾಡುತ್ತಾ ಧುಮ್ಮಿಕ್ಕುವ ಜಲಧಾರೆಯು ಏರು-ತಗ್ಗುಗಳನ್ನು ದಾಟಿ ಕಲ್ಲು ಬಂಡೆಗಳನ್ನು ಲೆಕ್ಕಿಸದೆ ಮುನ್ನುಗುತ್ತಾ ಸಾಗುವುದನ್ನು ನೋಡುತ್ತಿದ್ದರೆ ಜಲಪಾತಗಳಿಗಿರುವ ಅದ್ಭುತ ಶಕ್ತಿ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.ಆದರೆ ಈ `ಸುಂದರಿ~ ಅಷ್ಟು ಸುಲಭದಲ್ಲಿ ಕಾಣ ಸಿಗಲಾರಳು. ಅರಣ್ಯದೊಳಗೆ ಬಚ್ಚಿಟ್ಟುಕೊಂಡಿರುವ `ಈಕೆ~ಯ ಸೌಂದರ್ಯ ಸವಿಯಲು ಹರಸಾಹಸ ಮಾಡಲೇಬೇಕು.ಕಾರಣ, ಅಷ್ಟು ಸುಲಭವಾಗಿ ಈ ಜಲಪಾತ ಕಂಡು ಬರುವುದಿಲ್ಲ. ಕೆಲವು ಸಾರಿ ನಿರಾಸೆಯೂ ಉಂಟಾಗಬಹುದು. ಕೆಲ ಸಮಯ ತೆರೆದ ಕಣ್ಣುಗಳು ಮಿಟುಕಿಸದೆ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದರೆ ಕೆಲಕ್ಷಣದಲ್ಲಿ ಮೋಡಗಳು ಅದೃಶ್ಯವಾಗಿ ಜಲಧಾರೆ ಗೋಚರವಾಗುತ್ತದೆ. ಚಾರಣಪ್ರಿಯರು ಹಾಗೂ ಪ್ರಕೃತಿ ಸೊಬಗನ್ನು ನೋಡಿ ಆನಂದಿಸುವ ಪ್ರವಾಸಿಗರಿಗಂತೂ ಇದು ಒಂದು ವಿಸ್ಮಯ ಲೋಕವೆಂದು ಹೇಳಬಹುದು. ಚಾರ್ಮಾಡಿ ಘಾಟ್‌ನಲ್ಲಿ ಕಂಡುಬರುವ ಮಂಜಿನ ಮುಸುಕನ್ನು ಅನೇಕರು ಆಸ್ವಾದಿಸಿರಬಹುದು. ಆದರೆ ಇಲ್ಲಿಯ ಸೊಬಗು ಅದಕ್ಕಿಂತ ಒಂದು ತೂಕ ಹೆಚ್ಚೆನ್ನಬಹುದು.ಎತ್ತ ನೋಡಿದರೂ ಬೆಟ್ಟ ಗುಡ್ಡಗಳ ಸಾಲು, ಹಸಿರು ಸೀರೆಗೆ ಅಲ್ಲಲ್ಲಿ ಬಿಳಿಬಣ್ಣದ ಕಲಾಕೃತಿ ಮೂಡಿಸುವಂತ ಮಂಜು. ಇದರ ನಡುವೆ ಅಡಗಿದೆ ಜಲಪಾತ. ಮೋಡಗಳ ಚೆಲ್ಲಾಟದ ಜತೆಗೆ ಮರೆಯಲ್ಲಿ ಅವಿತು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಬೇಸತ್ತು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ರುದ್ರ ರಮಣೀಯವಾಗಿ ಧುಮ್ಮಿಕ್ಕುವ ಜಲಧಾರೆಯ ನೋಟ ಕಣ್ಮನ ತಣಿಸುತ್ತದೆ.ಬೇಸಿಗೆಯಲ್ಲಿ ಮೌನವಾಗಿದ್ದ ಜಲಪಾತಗಳು ಮಳೆ ಆರಂಭವಾದೊಡನೆ ಮೈದುಂಬಿ ಹರಿಯುತ್ತವೆ. ಪ್ರಕೃತಿ ಸೃಷ್ಟಿಸಿದ ಜಲಧಾರೆಗಳಲ್ಲಿ ಒಂದಾದ ಸುರ್ಲ ಜಲಪಾತವು ದಟ್ಟ ಅರಣ್ಯದ ಮಧ್ಯೆ ಭಾಗದಲ್ಲಿ ಸಹಜ ಸೌಂದರ್ಯದಿಂದ ಬಾಗುತ್ತಾ ಬಳುಕುತ್ತಾ ಭೋರ್ಗರೆಯುತ್ತಾ ಹಾಲಿನ ನೊರೆಯಂತೆ ಧುಮುಕುತ್ತದೆ. ಇದನ್ನು ಹತ್ತಿರದಿಂದ ನೋಡ ಬಯಸುವವರು ಕಾಲಿಗೆ ಒಂದಷ್ಟು ಶ್ರಮ ಕೊಡಲೇಬೇಕು. ಅದೃಷ್ಟವಿದ್ದರೆ ವನ್ಯಮೃಗಗಳ ಚಿತ್ರವನ್ನು ಕ್ಲಿಕ್ಕಿಸಬಹುದು.ಈ ಜಲಪಾತವು ಸುಮಾರು 660 ಅಡಿಗಳಿಂದ ಧುಮ್ಮುಕುತ್ತದೆ. ಕರ್ನಾಟಕದ ಹಳ್ಳ-ಕೊಳ್ಳಗಳಿಂದ ಹರಿಯುವ ನೀರು ಅರಣ್ಯ ಭಾಗದಿಂದ ಹರಿದು ಬೆಟ್ಟಗುಡ್ಡ ಕಣಿವೆಗಳ ಮಧ್ಯೆ ಹರಿಯುತ್ತಾ ಬೆಟ್ಟಗಳ ಮಧ್ಯ ಭಾಗದಿಂದ ಧುಮ್ಮಿಕ್ಕಿ ಕಣಿವೆಗಳಲ್ಲಿ ಹರಿಯುತ್ತಾ ಸಾಕುಳ್ಳಿಯಿಂದ ಮಹದಾಯಿ ನದಿಗೆ ಸೇರುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ಸಂಗೊಳ್ಳಿ ಹೇಳುತ್ತಾರೆ.ಕರ್ನಾಟಕದ ಕಡೆಯಿಂದಾದರೆ ಜಲಪಾತ ಸುಮಾರು 1 ಕಿಮಿ ದೂರದಿಂದ ಮಾತ್ರ ಕಾಣುತ್ತದೆ. ಕಾಡಿನ ಹಾದಿ ಹಿಡಿದು ಚಾರಣ ಮಾಡಿದರೆ ಮಾತ್ರ ಹತ್ತಿರದಿಂದ ನೋಡಿ ಆನಂದಿಸಬಹದು. ವ್ಯೆ ಪಾಯಿಂಟ್ ಬಳಿ ಯಾವದೇ ವಿಧದ ಕಾಂಪೌಂಡ್ ಅಥವಾ ಕಂಬಿಗಳ ಅಡೆತಡೆಗಳಿಲ್ಲ. ಮೊದಲೇ ಮಂಜು ಮುಸುಕಿದ ವಾತಾವರಣ. ಸ್ವಲ್ಪ ಎಚ್ಚರ ತಪ್ಪಿದರೆ ಮುಗಿಯಿತು. ಮಳೆಗಾಲ ಮುಗಿಯುವುದರ ಒಳಗೆ ಹೋದರೆ ಮಾತ್ರ ಸುರ್ಲ ಜಲಧಾರೆಯನ್ನು ಆನಂದಿಸಲು ಸಾಧ್ಯ. ಇಲ್ಲಿದೆ ಈ ಜಲಪಾತ

ಈ ಜಲಪಾತ ಇರುವುದು ಗೋವಾ ಮತ್ತು ಕರ್ನಾಟಕದ ಗಡಿಯಲ್ಲಿ, ಹುಬ್ಬಳ್ಳಿಯಿಂದ ಸುಮಾರು 135 ಕಿ ಮೀ ದೂರದ ಕನಕುಂಬಿ ಬಳಿ. ಇಲ್ಲಿಂದ 8 ಕಿಮೀ ಪಯಣದ ನಂತರ ಸಿಗುವುದೇ ಸುರ್ಲಹಳ್ಳಿ. ಅಲ್ಲಿಂದ 2 ಕಿ.ಮೀ. ದೂರದಲ್ಲಿ `ಏರಿಯಲ್ ವ್ಯೆ ಪಾಯಿಂಟ್~ನಿಂದ ವೀಕ್ಷಿಸಿದರೆ ಹಸಿರು ಹೊದಿಕೆಯ ಬೆಟ್ಟಗಳ ಮಧ್ಯೆ ಬೆಳ್ಳಿ ನೊರೆಯಿಂದ ಧುಮ್ಮಿಕ್ಕುವ ಜಲಪಾತ ಕಾಣುತ್ತದೆ. ಬಳುಕುತ್ತ ಬರುವ ಈ ಬಿಳುಪಿನ ಬಿನ್ನಾಣಗಿತ್ತಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry