ಕಾನನವೇ ಕನಸಾಗಿ...

7

ಕಾನನವೇ ಕನಸಾಗಿ...

Published:
Updated:
ಕಾನನವೇ ಕನಸಾಗಿ...

ಅದಿನ್ನೂ ಪಾಠ ಕೇಳುವ ವಯಸ್ಸು. ಆದರೆ ಆ ವಿದ್ಯಾರ್ಥಿಗೆ ಕ್ಲಾಸ್‌ರೂಮಿನ ಕಿಟಕಿಯತ್ತ ಕಣ್ಣು. ಅಲ್ಲಿಂದ ಆಚೆಗೆ ಕಾಣುವ ನಾಯಿ, ಪಾರಿವಾಳಗಳತ್ತಲೇ ಚಿತ್ತ. ಆ ಹಂಬಲವೇ ಅವರನ್ನು ನಾಲ್ಕುಗೋಡೆಗಳ ಆಚೆಗೆ ಜಿಗಿಯುವಂತೆ ಮಾಡಿತು. ಇಪ್ಪತ್ತರ ಏರು ಜವ್ವನದಲ್ಲಿ ಕಾಡು ಮೇಡು ಅಲೆಯುವ ಪುಳಕ ಕೊಟ್ಟಿತು. ಆ ರೋಮಾಂಚನ ಇಮ್ಮಡಿಸಿದ್ದು ಅವರ ಕೈಗೆ ಕ್ಯಾಮೆರಾ ಸಿಕ್ಕ ಮೇಲೆ.ಅವರ ಹೆಸರು ವಿನಯ್ ಲಕ್ಷ್ಮಣ್. ಓದಿದ್ದು ಬಿಬಿಎಂ. ತಂದೆ ಲಕ್ಷ್ಮಣ್ ದೊಡ್ಡ ಉದ್ಯಮಿ. ಬೆಂಗಳೂರಿನ ಹೃದಯಭಾಗದಲ್ಲಿ ಅವರ ಗೂಡು. ಸುಖೀ ಕುಟುಂಬ. ಮನಸ್ಸು ಮಾಡಿದ್ದರೆ ಅಪ್ಪನ ವ್ಯವಹಾರವನ್ನು ನೋಡಿಕೊಳ್ಳುತ್ತ ಹಣದ ಲೋಕದಲ್ಲಿ ಮುಳಗಿ ಹೋಗಬಹುದಿತ್ತು. ಆದರೆ ಅವರಿಗೆ ಲೆಕ್ಕಾಚಾರಕ್ಕಿಂತಲೂ ದೊಡ್ಡದೇನೋ ಜಗತ್ತಿನಲ್ಲಿದೆ ಎಂಬುದು ಗೊತ್ತು. ಹಾಗಾಗಿಯೇ ಕ್ಯಾಲ್ಕುಲೇಟರ್‌ನ ಗೋಜಿಗೆ ಹೆಚ್ಚು ಹೋಗಲಿಲ್ಲ.ಕಾಡಿನ ಹುಚ್ಚು ಹಿಡಿದದ್ದು ಯಾವಾಗ? ವಿನಯ್ ಮನಸ್ಸು ಕೊಂಚ ತಡವರಿಸುತ್ತದೆ. ದಶಕಗಳ ಹಿಂದಕ್ಕೆ ಸರಿಯುತ್ತದೆ. ಟೀವಿಯಲ್ಲಿ `ಜಂಗಲ್ ಬುಕ್' ಪ್ರಸಾರವಾಗುತ್ತಿದ್ದ ದಿನಗಳವು. ಆ ಅನಿಮೇಷನ್ ಚಿತ್ರದ ಮೋಗ್ಲಿ, ಬಗೀರಾ, ಶೇರ್‌ಖಾನ್ ಪಾತ್ರಗಳು ಬಾಲಕನ ಕಣ್ಣುಗಳಲ್ಲಿ ಹೊಳಪು ತರುತ್ತಿದ್ದವು. ಹುಟ್ಟಿನಿಂದಲೂ ನಗರವನ್ನೇ ಕಂಡು ರೋಸಿದ್ದ ಮನಸ್ಸಿಗೆ ಮುದ ನೀಡುತ್ತಿದ್ದವು. ಮುಂದೆ ಜಿಮ್ ಕಾರ್ಬೆಟ್, ಕೆನ್ನೆತ್ ಆಂಡರ್‌ಸನ್‌ರ ಕಾಡಿನ ಕತೆಗಳು ಕೈ ಹಿಡಿದವು.ಚಿಕ್ಕಂದಿನಲ್ಲಿ ಒಮ್ಮೆ ನಾಗರಹೊಳೆಗೆ ಅವರ ಕುಟುಂಬ ಹೊರಟಿತು. ಎಷ್ಟೆಲ್ಲಾ ಪ್ರಾಣಿಗಳನ್ನು ನೋಡಿದರೂ ಹುಲಿ ಕಾಣಲಿಲ್ಲ. ಡ್ರೈವರ್ ಕರಿಯಪ್ಪ ಮಾತ್ರ ಹುಲಿ ಕಂಡದ್ದಾಗಿ ಬಲು ಉತ್ಸಾಹದಿಂದ ಹೇಳಿದರು. ಆದರೆ ಬಾಲಕ ವಿನಯ್ ಕಣ್ಣಿಗೆ ಮಾತ್ರ ಅದು ಗೋಚರಿಸಲೇ ಇಲ್ಲ. ಕಂಡೂ ಕಾಣದಂತೆ ಸರಿದು ಹೋದ ಆ ಮಾಯಾವಿ ಬಗ್ಗೆ ಪುಟ್ಟ ಹುಡುಗನೊಳಗೆ ಏನೇನೋ ಕನಸು. ಆ ಕನಸು ಹಟವಾಗಿ ಬದಲಾಯಿತು. ದೊಡ್ಡವನಾದ ಮೇಲೆ ಹುಲಿಯನ್ನು ನೋಡಿಯೇ ತೀರುತ್ತೇನೆ ಎಂಬ ಪಣ ತೊಡುವಂತೆ ಮಾಡಿತು.  ಆಮೇಲಿನ ಬದುಕು ಓದು ಬರಹಕ್ಕೆ ಮೀಸಲು. ಪರೀಕ್ಷೆ ಪಾಸು ಮಾಡಿ, ಕಾಲೇಜು ಮೆಟ್ಟಿಲು ಹತ್ತಿದ್ದಾಯಿತು. ಅದೆಲ್ಲೋ ಮರೀಚಿಕೆಯಂತೆ ಕಾಡುತ್ತಿದ್ದ ಕಾಡು ಮತ್ತೆ ಧುತ್ತನೆ ಕಣ್ಣಮುಂದೆ ಅವತರಿಸಿತು. ರಜೆ ದೊರೆತಾಗ ಹುಲಿ ನೋಡಲೆಂದು ಬಂಡೀಪುರಕ್ಕೆ ಹೋದರು. ಜತೆಯಲ್ಲಿದ್ದದು ಪುಟ್ಟ ಕ್ಯಾಮೆರಾ ಹಾಗೂ ದೊಡ್ಡ ಕನಸು. ದಿನ ಉರುಳಿ ವಾರವಾಯಿತು. ವಾರ ಕಳೆದು, ತಿಂಗಳು ಉರುಳಿದವು. ಹೀಗೆ ಸತತ ಎಂಟು ತಿಂಗಳು ಬಂಡೀಪುರಕ್ಕೆ ದಂಡೆಯಾತ್ರೆ ಮಾಡಿದರೂ ಹುಲಿರಾಯನ ದರ್ಶನವಿಲ್ಲ. ಬಂಡೀಪುರದಲ್ಲಿಯೇ ವ್ಯಾಘ್ರನನ್ನು ನೋಡಬೇಕೆಂಬ ಆಸೆ ಅಷ್ಟೂ ತಿಂಗಳ ಕಾಲ ಫಲಿಸಲಿಲ್ಲ.ತಪಸ್ಸು ಮಾಡಿದರೆ ಮಾತ್ರ ದೈವ ಒಲಿಯುವಂತೆ ಒಂದು ಒಳ್ಳೆಯ ದಿನ ಹುಲಿರಾಯ ಕಣ್ಣೆದುರು ನಿಂತ. ಅವನು ಬಂದ ಸ್ವಲ್ಪ ಹೊತ್ತಿನಲ್ಲಿ ಕರಡಿ, ಚಿರತೆಯ ಸಾಮ್ರಾಜ್ಯವನ್ನೂ ನೋಡಿದ್ದಾಯಿತು. ಖುಷಿಯೋ ಖುಷಿ. ಚಿಕ್ಕಂದಿನಿಂದ ಕಾಣುತ್ತಿದ್ದ ಕನಸು ಈಡೇರಿದೆ. ಆ ಸಂತಸದಲ್ಲಿ ಕೈ ನಡುಗುತ್ತಿದೆ. ಎಷ್ಟು ಪ್ರಯತ್ನ ಪಟ್ಟರೂ ಒಂದು ಒಳ್ಳೆಯ ಫೋಟೊ ಸಿಗಲಿಲ್ಲ. ಪಟ್ಟೆ ಹುಲಿ ಮತ್ತೆ ಕೈ ಕೊಟ್ಟಿತ್ತು!

ಕಾಡಿನ ಹುಚ್ಚು ಹೆಚ್ಚಾಗಲು ಆ ವಿಫಲ ಯತ್ನ ಸಾಕಷ್ಟು ಸಹಾಯ ಮಾಡಿತು. ಮತ್ತೆ ಮತ್ತೆ ಬಂಡೀಪುರಕ್ಕೆ ಭೇಟಿ ನೀಡುವ ಸಾಹಸ ಮೊದಲುಗೊಂಡಿತು. ಜತೆಗೆ ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ, ಕೆಮ್ಮಣ್ಣುಗುಂಡಿ, ದಾಂಡೇಲಿಯ ಕಾಡುಗಳೂ ಕೈ ಬೀಸಿ ಕರೆಯತೊಡಗಿದವು.ತೆಗೆದ ಛಾಯಾಚಿತ್ರಗಳನ್ನು ಯಾರಿಗಾದರೂ ತೋರಿಸಬೇಕಲ್ಲ? ಆ ಹೊತ್ತಿಗೆ ಸರಿಯಾಗಿ ನಗರದ ಬಿಎಂಎಸ್ ಕಾಲೇಜಿನ ವಾರ್ಷಿಕೋತ್ಸವದ ನೆಪದಲ್ಲಿ ಛಾಯಾಗ್ರಹಣ ಸ್ಪರ್ಧೆ ನಡೆಯುತ್ತಿತ್ತು. ವಿನಯ್ ಛಾಯಾಚಿತ್ರಗಳೂ ಸ್ಪರ್ಧೆಯಲ್ಲಿದ್ದವು. ಫಲಿತಾಂಶ ಮಾತ್ರ ಶೂನ್ಯ. ಬಹುಮಾನ ದೊರೆಯದಿದ್ದರೇನಂತೆ ಅದಕ್ಕಿಂತಲೂ ದೊಡ್ಡದಾದ ಪಾರಿತೋಷಕವೊಂದು ಅವರದಾಯಿತು. ಆ ಪಾರಿತೋಷಕದ ಹೆಸರು ಜಯಂತ್ ಶರ್ಮ. ಅದಾಗಲೇ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಶರ್ಮ ಅವರದಾಗಿತ್ತು. ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯ ಕಲಿತದ್ದು ಅಪಾರ.ಮೊದಲು ಕಲಿತ ಪಾಠದ ಹೆಸರೇ ನೈತಿಕತೆ. ವನ್ಯಜೀವಿ ಛಾಯಾಗ್ರಾಹಕನಿಗೆ ಇರಲೇಬೇಕಾದ ಮೂಲ ಗುಣ ಅದು. ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ಇಲ್ಲದೆ ಹೋದರೆ ಯಾವ ಛಾಯಾಗ್ರಾಹಕನೂ ಶ್ರೇಷ್ಠತೆ ಉಳಿಸಿಕೊಳ್ಳಲಾರ ಎಂಬ ಎಚ್ಚರಿಕೆ ಅವರೊಟ್ಟಿಗೆ ಇದೆ. ಮತ್ತೊಬ್ಬ ಛಾಯಾಗ್ರಾಹಕ ಗಿರಿ ಕಳಲೆ ಅವರು ಕೂಡ ವಿನಯ್‌ಗೆ ದಾರಿ ತೋರಿದ್ದಾರೆ.ಇಷ್ಟಾದ ನಂತರ ವಿನಯ್ ಕಣ್ಣಿನ ಹಸಿವೆಗೆ ರಾಜ್ಯದ ಕಾಡು ಸಾಕಾಗಲಿಲ್ಲ. ಅವರು ದೇಶದ ಬೇರೆಡೆಗಳಿಗೆ ಇಣುಕಿ ನೋಡತೊಡಗಿದರು. ವಿವಿಧ ವನ್ಯಜೀವಿ ತಾಣಗಳನ್ನು ಅಧ್ಯಯನ ಮಾಡತೊಡಗಿದರು. ಆಗ ಇನ್ನಿಲ್ಲದಂತೆ ಸೆಳೆದದ್ದು ಮಧ್ಯಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನ. ಕಾರಣ ಅದು ಸಹ್ಯಾದ್ರಿಯ ಮಳೆಕಾಡಿನಂತೆ ದಟ್ಟವಲ್ಲ. ಹುಲಿಗಳು ಸುಲಭವಾಗಿ ಕ್ಯಾಮೆರಾ ಕಣ್ಣಿಗೆ ದೊರೆಯಲು ಸತಾಯಿಸುವುದಿಲ್ಲ. ಈ ಬಾರಿ ಮೊದಲಿನ ರೋಮಾಂಚನವಿರಲಿಲ್ಲ. ಬದಲಿಗೆ ಅವರೊಳಗಿನ ಛಾಯಾಗ್ರಾಹಕ ಎಚ್ಚರದಿಂದ ಕೆಲಸ ಮಾಡುತ್ತಿದ್ದ. ಗುಜರಾತ್‌ನ ಘಿರ್, ಕಛ್ ಕಾಡು, ರಾಜಸ್ತಾನದ ರಣತಂಬೋರ್ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ್‌ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರ ಯಾತ್ರೆ ಮುಂದುವರಿಯಿತು.ಇದೂ ಸಾಕೆನಿಸಿದಾಗ ಹೊರದೇಶಗಳತ್ತ ಮುಖ ಮಾಡಿದರು. ಮೊದಲ ಬಾರಿಗೆ ನಡೆದ ಆಫ್ರಿಕಾ ಪ್ರವಾಸ, ಅಪ್ಪ ನೀಡಿದ ಅನಿರೀಕ್ಷಿತ ಕೊಡುಗೆ. ಕೀನ್ಯಾದ ಮಸೈಮರಾ ರಾಷ್ಟ್ರೀಯ ಉದ್ಯಾನದಲ್ಲಿ ತಂದೆ ತಾಯಿಯೊಂದಿಗೆ ತಿರುಗಿದ್ದು, ಕ್ಯಾಮೆರಾ ಕ್ಲಿಕ್ಕಿಸಿದ್ದು ಮರೆಯಲಾರದ ಅನುಭವವಾಗಿ ಉಳಿದಿದೆ. ಆಮೇಲೆ ಕಾನಾ ರಾಷ್ಟ್ರೀಯ ಉದ್ಯಾನ, ಅಂಬೋಸೆಲಿ ಕಾಡುಗಳಲ್ಲಿ ಸಂಚಾರ. ತಾಂಜೇನಿಯಾ ಗೊರೊನ್‌ಗೊರೊದಲ್ಲೂ ಕ್ಲಿಕ್ಕಿಸುವ ಕೆಲಸ ಮುಂದುವರಿಯಿತು. ಹೀಗೆ ನಿರಂತರವಾಗಿ ವಿಶ್ವದ ಮೂಲೆ ಮೂಲೆಯನ್ನು ತಲುಪುವ ಇಚ್ಛೆಯಿಂದಾಗಿ ಅವರ ಛಾಯಾಚಿತ್ರಗಳಿಗೆ ಹೆಚ್ಚಿನ ವೈವಿಧ್ಯತೆ ಹಾಗೂ ಸಮೃದ್ಧಿ. ಸೀಳುನಾಯಿಗಳು ದಕ್ಕುವಷ್ಟೇ ಸುಲಭವಾಗಿ ಅವರಿಗೆ ಸಮುದ್ರ ಸಿಂಹಗಳ ದರ್ಶನ ಲಭಿಸುತ್ತದೆ. ಮರಕುಟಿಕದ ಅಂದದಷ್ಟೇ ಆಫ್ರಿಕಾದ ಗೂಬೆಯ ಚೆಲುವೂ ದಕ್ಕುತ್ತದೆ.ಕ್ಯಾಮೆರಾ ಸಹವಾಸದಿಂದಾಗಿ ವಿನಯ್‌ರಿಗೆ ದಕ್ಕಿದ ದಿವ್ಯ ಅನುಭವಗಳು ಹಲವು. ಒಮ್ಮೆ ಹೀಗಾಯಿತು. ದಾಂಡೇಲಿಗೆ ಹೋದಾಗ ದೇಹ ಪ್ರಕೃತಿ ಚೆನ್ನಾಗಿರಲಿಲ್ಲ. ಆದರೆ ಕಪ್ಪು ಚಿರತೆಯನ್ನು ನೋಡುವ ತವಕ. ಕಾಡಂಚಿನ ಜನರ ಪ್ರಕಾರ ಬೆಳಗಿನ ಹೊತ್ತು ಕರಿಚಿರತೆಯ ದರ್ಶನ ಅಪರೂಪ. ಎಷ್ಟು ಅಪರೂಪವೆಂದರೆ ವರ್ಷದಲ್ಲಿ ಒಂದೆರಡು ಬಾರಿ ಬೆಳಗಿನ ಹೊತ್ತು ಕಂಡರೆ ಹೆಚ್ಚು. ಅಂದು ಜ್ವರದಲ್ಲಿ ಹೋದದಕ್ಕೂ ಸಾರ್ಥಕವಾಯಿತು. ಕಪ್ಪು ಚಿರತೆಯನ್ನು ಕ್ಲಿಕ್ಕಿಸಲೆಂದೇ 2013ನೇ ಇಸವಿಯನ್ನು ಅವರು ಮೀಸಲಾಗಿಡುತ್ತಾರಂತೆ!ಯಾವುದೇ ಕಾಡಿನಲ್ಲಿರಲಿ ಅವರ ಕಿವಿಯೆಲ್ಲಾ ಲಂಗೂರ್, ಜಿಂಕೆ, ಸಾರಂಗಗಳ ಧ್ವನಿಯತ್ತಲೇ ನೆಟ್ಟಿರುತ್ತದೆ. ಅವುಗಳಲ್ಲಿ ಯಾವುದಾದರೊಂದು ವಿಚಿತ್ರ ಸದ್ದು ಮಾಡಿದರೂ ಇವರ ಕ್ಯಾಮೆರಾ ಹೆಗಲೇರುತ್ತದೆ. ಅಲ್ಲಿಗೆ ಹುಲಿಯೋ, ಸಿಂಹವೋ ಬಂದಿದೆಯೆಂದೇ ಲೆಕ್ಕ. ಬಹುತೇಕ ಕಾನನ ಯಾನಗಳನ್ನು ಆಯ್ದುಕೊಳ್ಳುವಾಗ ಅವರ ಆಯ್ಕೆ ಪ್ರವಾಸಿ ಮಂದಿರ. ರೆಸಾರ್ಟ್‌ಗಳಂತೆ ಕಾಡಂಚಿನಲ್ಲಿರದೆ ಅವು ಅರಣ್ಯದ ಹೃದಯಭಾಗದಲ್ಲಿರುತ್ತವೆ ಎಂಬ ಎಣಿಕೆ ಇದಕ್ಕೆ ಕಾರಣ.ರಷ್ಯಾದ ಕಾಮ್‌ಚಟ್ಕಾ ಪರ್ಯಾಯ ದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಕಾಡಿಗೆ ಜೀಪಿನಲ್ಲಿ ತೆರಳುವಂತಿಲ್ಲ. ಹೆಲಿಕಾಪ್ಟರ್ ಇಳಿಸಿಹೋದನಂತರ ಪ್ರಪಂಚವೇ ಬೇರೆ ಅಲ್ಲಿನ ಕಾನನವೇ ಬೇರೆ. ಫೋನ್ ಸಂಪರ್ಕವಿರಲಿ, ವಿದ್ಯುತ್ ಸೌಲಭ್ಯ ಕೂಡ ಸಿಗದು. ಅಂತಹ ಕಾಡಿನಲ್ಲಿ ಸ್ನಾನ ಕೂಡ ಮಾಡದೆ ವಾರಗಟ್ಟಲೆ ತಂಗಿದ್ದಾಗ, ಪಶು ಪಕ್ಷಿಗಳನ್ನು ಸೆರೆ ಹಿಡಿಯುತ್ತಿದ್ದಾಗ ಬೆಂಗಳೂರಿನಲ್ಲಿದ್ದ ಪೋಷಕರ ಎದೆಯಲ್ಲಿ ಢವಢವ. ಅದೇ ಕಾಡು ಅದೇ ಪ್ರಾಣಿಗಳನ್ನು ಮತ್ತೆ ಮತ್ತೆ ತೆಗೆಯುವುದೇಕೆ, ನಮ್ಮನ್ನು ಆತಂಕಕ್ಕೆ ಸಿಲುಕಿಸುವುದು ಏಕೆ ಎಂಬ ಪ್ರಶ್ನೆ.ಆಗೆಲ್ಲಾ ವಿನಯ್‌ಗೆ ನಗು. ಅವರೆಂದೂ ಅದೇ ಸಿಂಹ, ಅದೇ ಹುಲಿ ಎಂದು ಭಾವಿಸಿದ್ದೇ ಇಲ್ಲ. ಪ್ರಾಣಿಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುವುದಕ್ಕಿಂತಲೂ ಹೆಚ್ಚಾಗಿ ಅದರ ಮನಸ್ಥಿತಿಯನ್ನು ಹಿಡಿದಿಡುತ್ತಿದ್ದೇನೆ ಎಂಬ ಭಾವ ಅವರದು. ಕುತೂಹಲವೇ ಇಲ್ಲದಿದ್ದರೆ, ಸರಳ ದೃಶ್ಯವೂ ದಿವ್ಯತ್ವಕ್ಕೆ ಏರದಿದ್ದರೆ ಛಾಯಾಗ್ರಾಹಕನಾಗಿದ್ದೂ ಫಲವೇನು?ಹುಲಿ ಅವರ ನೆಚ್ಚಿನ ಪ್ರಾಣಿಯಾದರೂ ಚಿರತೆಯತ್ತಲೇ ಅಪಾರ ಆಸಕ್ತಿ. ಕಾರಣ ಅದು, ಹುಲಿಯಂತೆ ಬಿಡುಬೀಸಾಗಿ ಕಾಣಿಸದು. ಬೇರೆ ಕ್ರೂರಮೃಗಗಳಿಗೆ ಹೋಲಿಸಿದರೆ ಬಲು ದೊಡ್ಡ ನಾಚಿಕೆ ಪ್ರಾಣಿ. ಅಲ್ಲದೆ ಹೊಂಚು ಹಾಕುವುದರಲ್ಲಿ ನಿಸ್ಸೀಮ. ಕೇವಲ ಐದಡಿ ದೂರದಲ್ಲಿದ್ದರೂ ಎದುರಾಳಿಯ ಊಹೆಗೆ ನಿಲುಕದಂತೆ ದಾಳಿ ಮಾಡುವ ಚಾಣಾಕ್ಷ. ನೆಲಕ್ಕಿಂತಲೂ ಮರವೇ ಅದರ ಇಷ್ಟದ ತಾಣ. ಮುಂದಿನ ದಿನಗಳಲ್ಲಿ ಪಡೆದರೆ ಚಿರತೆಯ ಚಿತ್ರವನ್ನೇ ಪಡೆಯಬೇಕು ಎಂದು ಹಂಬಲಿಸುವ ಅವರು ಹಕ್ಕಿ ಛಾಯಾಗ್ರಾಹಕರು ಕೂಡ. ನೂರಾರು ಅಪರೂಪದ ಪಕ್ಷಿ ಚಿತ್ರಗಳು ಅವರ ಜೋಳಿಗೆಯಲ್ಲಿವೆ.ವಿನಯ್ ಚಿತ್ರಗಳಲ್ಲಿ ಒಂದು ಬಗೆಯ ಅನನ್ಯತೆ ಇದೆ. ಅವರ ಬಹುತೇಕ ಚಿತ್ರಗಳು `ಆ್ಯಕ್ಷನ್' ಶೈಲಿಯಲ್ಲಿವೆ. ದಾಳಿ ಮಾಡುತ್ತಲೋ, ಚಿನ್ನಾಟವಾಡುತ್ತಲೋ, ಕೆನೆಯುತ್ತಲೋ ಇರುವ ಪ್ರಾಣಿಗಳೆಂದರೆ ಅವರಿಗೆ ಬಲು ಇಷ್ಟ. ತೆಗೆದಿರುವುದು ಹೆಚ್ಚಾಗಿ ಪ್ರಾಣಿಗಳ ಚಿತ್ರವಾದರೂ ಅವುಗಳ ಹಿನ್ನಲೆಗಿರುವ ಪ್ರತಿ ಭೂದೃಶ್ಯವೂ ಕಾಡುತ್ತದೆ. ಆಕ್ರಮಣ, ಅಂಜಿಕೆ, ಸಡಗರ, ದೈನ್ಯತೆ ಹೀಗೆ ಪ್ರಾಣಿಯ ಒಂದೊಂದೂ ಭಾವವನ್ನು ಅರಸಿ ಅವರ ಕ್ಯಾಮೆರಾ ಕೆಲಸ ಮಾಡುತ್ತದೆ.`ಹಕ್ಕಿ ಛಾಯಾಗ್ರಾಹಕರಿಗೆ ಪ್ರಾಣಿ ಛಾಯಾಗ್ರಹಣ ಸುಲಭವಾಗಿ ತೋರುತ್ತದೆ. ಪ್ರಾಣಿ ಛಾಯಾಗ್ರಾಹಕರಿಗೆ ಹಕ್ಕಿಗಳು ಸುಲಭವಾಗಿ ದಕ್ಕುತ್ತವೆ ಎಂಬ ಭಾವವಿದೆ. ಎರಡೂ ಕಷ್ಟವೇ. ಅದು ಛಾಯಾಗ್ರಾಹಕರ ಆಸಕ್ತಿಗೆ ಬಿಟ್ಟದ್ದು' ಎನ್ನುತ್ತಾರೆ ವಿನಯ್.ಛಾಯಾಚಿತ್ರಗಳ ಮೌಲ್ಯ ಅಳೆಯಲು ಪ್ರಶಸ್ತಿಯೊಂದೇ ಮಾನದಂಡವಾಗಬಾರದು ಎಂಬ ನಂಬಿಕೆ ಅವರದು. ಹಾಗಾಗಿ ಕೆಲವು ಸ್ಪರ್ಧೆಗಳಿಗೆ ಮಾತ್ರ ಅವರ ಛಾಯಾಚಿತ್ರಗಳು ಪ್ರವೇಶ ಪಡೆದಿವೆ. ಬೆರಳೆಣಿಕೆಯಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿವೆ. ಇವೆಲ್ಲದರ ಮಧ್ಯೆ `ಕನ್ಸರ್ವೇಷನ್ ಇಂಡಿಯಾ', `ಟೋ ಹೋಲ್ಡ್' ಸಂಘಟನೆಗಳೊಂದಿಗೆ ಹಾಗೂ ಎನ್‌ಡಿಟಿವಿಯ `ಟೈಗರ್ ಟೆಲಿಥಾನ್' ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಬಿಬಿಎಂ ಮುಗಿಸಿದ ನಂತರ `ಕಾಡಿನ ಡಿಪ್ಲೊಮಾ' ಪಡೆಯಲು ಒಂದು ವರ್ಷ ಸಂದು ಹೋಗಿದೆ. ಅದೇ ಹೊತ್ತಿಗೆ ಎಂಬಿಎ ಓದುವ ಕನಸೂ  ಸೇರಿಕೊಂಡಿದೆ. ಅಪ್ಪ ವ್ಯವಹಾರ ನೋಡಿಕೋ ಎನ್ನುತ್ತಿದ್ದಾರೆ. ಮಗನಿಗೆ ವನರಾಶಿಯೊಂದಿಗಿನ `ವ್ಯಾಪಾರ' ಇಷ್ಟ. ಎರಡೂ ದೋಣಿಗಳಲ್ಲಿ ಕಾಲಿಟ್ಟರೆ ಹೇಗೆ ಎಂಬ ಪ್ರಶ್ನೆಯೂ ಎದುರಾಗಿದೆ. ಮುಂದೇನು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.ಎರಡು ತಿಂಗಳಿಗೊಮ್ಮೆ ಕಾನನ ಎಡತಾಕುವ ಅವರು ನಗರದಲ್ಲಿ ಬೆಳೆಯುವ ಯುವಕರಿಗಿಂತ ತುಸು ಭಿನ್ನ. ಐಷಾರಾಮಿ ಜೀವನದ ಎಲ್ಲ ಅವಕಾಶಗಳು ಕೈಗೆಟಕುವಂತಿದ್ದರೂ ಕ್ಯಾಮೆರಾ ಅದಕ್ಕೆಲ್ಲಾ ಅವಕಾಶ ನೀಡುವುದಿಲ್ಲ. `ಸುಮ್ಮನೆ ನಡೆ ಕಾಡಿಗೆ' ಎಂದು ಬುದ್ಧಿ ಹೇಳುವ ಗುರು, ಗೆಳೆಯನಾಗುತ್ತದೆ ಅದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry