ಕಾನನ ಮರೆಯ ಕಾಂತಬೈಲು

7

ಕಾನನ ಮರೆಯ ಕಾಂತಬೈಲು

Published:
Updated:

ದಟ್ಟ ಕಾನನದ ನಡುವೆ ಹಾಲಿನಷ್ಟೇ ಬಿಳುಪಾದ ನಿರ್ಮಲ ಜಲಧಾರೆಯೊಂದು ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ಹರಿಯುತ್ತಿದೆ.

ಕೊಡಗಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿರುವ ದಿನಗಳು ಕಾಂತಬೈಲು ಜಲಪಾತ ವೀಕ್ಷಣೆಗೆ ಪ್ರಶಸ್ತ.ಕೊಡಗು ಜಲಪಾತ ಪ್ರಿಯರ ಸ್ವರ್ಗ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಧಾರೆಗಳ ಸೊಬಗು ಮನಮೋಹಕ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲೇ ೫ ಜಲಪಾತಗಳಿವೆ. ಅವುಗಳಲ್ಲಿ ಒಂದು ಕಾಂತಬೈಲು ಜಲಪಾತ. ಸುಂದರವಾಗಿದ್ದರೂ ಪ್ರವಾಸಿಗರ ಕಣ್ಣಿಂದ ಮಾತ್ರ ಇದು ದೂರವೇ ಉಳಿದಿದೆ.ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ೩೦ ಕಿ.ಮೀ. ಕ್ರಮಿಸಿದಾಗ ಕಲ್ಲುಗುಂಡಿ ಎಂಬ ಪುಟ್ಟ ಊರು ಸಿಗುತ್ತದೆ. ಇಲ್ಲಿಂದ ೮ ಕಿ.ಮೀ. ದೂರವಿರುವ ಕಾಂತಬೈಲಿನ ದಟ್ಟ ಕಾನನದಲ್ಲಿ ಈ ಜಲಪಾತವಿದೆ. ಇಲ್ಲಿಗೆ ಬಸ್ ಸೌಲಭ್ಯವಿಲ್ಲ. ಕಲ್ಲುಗುಂಡಿಯಿಂದ ಜೀಪು ಮಾಡಿಕೊಂಡು ಹೋಗಬೇಕಾಗುತ್ತದೆ. ಹಾದಿಯುದ್ದಕ್ಕೂ ಕಂಡುಬರುವ ಸುಂದರ ಪರ್ವತಶ್ರೇಣಿಗಳು, ಒತ್ತೊತ್ತಾಗಿ ಬೆಳೆದು ನಿಂತ ಮರ-ಗಿಡ-ಬಳ್ಳಿಗಳು ಹಾಗೂ ತೊರೆಗಳು ಮೈ-ಮನಸ್ಸಿಗೆ ಮುದ ನೀಡುತ್ತವೆ.ಕಾಂತಬೈಲು ಮಹೇಶ್ವರ ಭಟ್ ಎಂಬುವರ ಮನೆ ಪಕ್ಕ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಎದುರು ಕಾಣುವ ಅಡಿಕೆ ತೋಟವನ್ನು ದಾಟಬೇಕು. ಅಲ್ಲಿಂದ ಜುಳು ಜುಳು ಹರಿವ ತೊರೆಯನ್ನು ಅನುಸರಿಸಿ ಜೀರುಂಡೆಯ ಸಂಗೀತ ಆಲಿಸುತ್ತ ಕಾಡು ದಾರಿಯಲ್ಲಿ ಒಂದು ಕಿ.ಮೀ. ನಡೆದರೆ ನಯನ ಮನೋಹರ ಕಾಂತಬೈಲು ಜಲಪಾತ ಎದುರಾಗುತ್ತದೆ. ಸುಮಾರು ೬೦ ಅಡಿ ಎತ್ತರದಿಂದ ಬೃಹತ್ ಬಂಡೆಗಳ ನಡುವೆ ಪದರ ಪದರವಾಗಿ ಇಳಿದು ಬರುವ ಬೆಳ್ನೊರೆಯ ದೃಶ್ಯ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.ಜಲಪಾತಕ್ಕಿಳಿದು ನೋಡಲು ಇಲ್ಲಿ ಅವಕಾಶವಿದೆ. ಸುರಿವ ಜಲಧಾರೆಗೆ ಮೈಯೊಡ್ಡಿ ಜಳಕದ ಪುಳಕ ಅನುಭವಿಸಬಹುದು. ಬಂಡೆಗಲ್ಲಿನ ಮೇಲೆ ಕುಳಿತು ಸುತ್ತಲಿನ ನಿಸರ್ಗ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಪ್ರಶಾಂತ ವಾತಾವರಣ, ಮುಗಿಲನ್ನು ಚುಂಬಿಸುವ ಮರಗಳು, ಶುದ್ಧ ಸ್ಫಟಿಕದ ಅನುಭವದಿಂದಾಗಿ ಜಲ ಸ್ವರ್ಗವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ. ಸ್ಥಳೀಯರು ಈ ಜಲಪಾತದ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತಾರೆ.ಇಲ್ಲಿಂದ ಮುಂದೆ ರಕ್ಷಿತಾರಣ್ಯವಿದೆ. ಅದೃಷ್ಟ ಚೆನ್ನಾಗಿದ್ದರೆ ಆನೆ, ಕಾಟಿ, ಕಡವೆ, ಕಾಡುಹಂದಿ, ಕಾಳಿಂಗ ಸರ್ಪ, ಕಾಡುನಾಯಿ, ಹೆಬ್ಬಾವು, ಕೃಷ್ಣ ಸರ್ಪ, ಚಿರತೆ ಇತ್ಯಾದಿ ಕಾಡುಪ್ರಾಣಿಗಳ ದರ್ಶನವೂ ಆಗಬಹುದು.ಪ್ರಕೃತಿಯ ಆರಾಧಕರಿಗೆ, ಚಾರಣಿಗರಿಗೆ ಈ ಜಲಪಾತ ಅಚ್ಚುಮೆಚ್ಚಾಗಬಹುದು. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ಸುತ್ತಮುತ್ತ ಹೋಟೆಲು ಇಲ್ಲದಿರುವುದರಿಂದ ಊಟ ತಿಂಡಿಯನ್ನು ಪ್ರವಾಸಿಗರೇ ತರಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry