ಶುಕ್ರವಾರ, ಮೇ 14, 2021
32 °C

ಕಾನೂನಿನ ಕಠಿಣ ಹಾದಿ

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ನಟ ದರ್ಶನ್ ತೂಗುದೀಪ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಹಾಗೂ ನಂತರದ ಬೆಳವಣಿಗೆಗಳು ಮಹಿಳೆಯರ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಿದೆ- ಬದಲಾಗುತ್ತಿದೆ ಎಂಬ ಭಾವನೆ ಸುಳ್ಳೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.ಮಹಿಳೆ ಅಬಲೆಯಲ್ಲ ಸಬಲೆ ಎಂದೂ ಎಷ್ಟೇ ಜೋರಾಗಿ ಹೇಳಿದರೂ ದೌರ್ಬಲ್ಯದ ಲಾಭ ಪಡೆದು ಪರಿಸ್ಥಿತಿಯ ಸುಳಿಯಲ್ಲಿ ಆಕೆಯನ್ನು ಅಬಲೆಯಾಗಿಸುವ ತಂತ್ರ ನಡೆಯುತ್ತಲೇ ಇದೆ ಎಂಬ ಸಂಗತಿಯೂ ಸ್ಪಷ್ಟವಾಗಿದೆ.ಪತಿಯಿಂದ ನಿರಂತರ ದೌರ್ಜನ್ಯಕ್ಕೀಡಾಗಿ, ತೀವ್ರ ಹಲ್ಲೆಗೊಳಗಾಗಿ ನೋವಿನಲ್ಲಿರುವ ವಿಜಯಲಕ್ಷ್ಮಿ ಕಾನೂನಿನ ಅಡಕತ್ತರಿಯಲ್ಲಿ ಸಿಲುಕುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಚಿತ್ರರಂಗದ ದಿಗ್ಗಜರಿಂದ ಹಿಡಿದು ಸಣ್ಣಪುಟ್ಟ ವ್ಯಕ್ತಿಗಳವರೆಗೆ ಎಲ್ಲರೂ ವಿಜಯಲಕ್ಷ್ಮಿ ಅವರ ಮೇಲೆ ಒತ್ತಡ ಹೇರಿ ದೂರು ವಾಪಸ್ ಪಡೆಯುವಂತೆ ಮಾಡಲು ಸಫಲರಾಗಿದ್ದಾರೆ. ಆದರೆ ಇದು ವಿಜಯಲಕ್ಷ್ಮಿ ಅವರ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಅವರು ಯೋಚಿಸಿದಂತಿಲ್ಲ. ಚಾಲೆಂಜಿಂಗ್ ಸ್ಟಾರ್‌ಗೆ ತೊಂದರೆ ಆಗಬಾರದು, ಅವರ ಭವಿಷ್ಯಕ್ಕೆ ಪೆಟ್ಟು ಬೀಳಬಾರದು. ವಿಜಯಲಕ್ಷ್ಮಿ ಅವರಿಗೆ ಏನಾದರೂ ಪರವಾಗಿಲ್ಲ ಎಂಬಂತಿದೆ ಅವರ ಧೋರಣೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 182ರ ಪ್ರಕಾರ, ಸುಳ್ಳು ಪ್ರಕರಣ ದಾಖಲಿಸಿದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲಿಸಲು ಅವಕಾಶವಿದೆ.ದರ್ಶನ್ ವಿರುದ್ಧ ದೂರು ನೀಡಿ ಅವರನ್ನು ಬಂಧಿಸಿದ ನಂತರ ಹಲವೆಡೆ ಗದ್ದಲ ಆಗಿದೆ. ಕೆಲವು ಕಡೆ ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ. ಮೂರು ಬಿಎಂಟಿಸಿ ಬಸ್‌ಗಳ ಮೇಲೆ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ. ಈ ಎಲ್ಲ ಘಟನೆಗಳು ಈ ಪ್ರಕರಣವನ್ನು ಗಟ್ಟಿಗೊಳಿಸುವ ಅವಕಾಶವೂ ಇರುತ್ತದೆ.ವಿಜಯಲಕ್ಷ್ಮಿ ವಿರುದ್ಧ ಅವರ ನಾದಿನಿ ಶ್ರೀಲಕ್ಷ್ಮಿ ಅವರು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಚಕಾರವೆತ್ತಿಲ್ಲ. ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಯಾರೂ ಬಂದಿಲ್ಲ.ಹೆಣ್ಣು ಸಮಸ್ಯೆಯ ಸುಳಿಯಲ್ಲಿ ಸಿಕ್ಕಾಗ ಸಮಾಜ ನೆರವಿಗೆ ಬರುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಯಾರೂ ಬರಲಿಲ್ಲ. ಬಂದವರೆಲ್ಲ ದರ್ಶನ್ ಪರ ಮಾತನಾಡಿದ್ದರು. ಕಷ್ಟ ಪಟ್ಟು ಬೆಳೆದಿರುವ ದರ್ಶನ್ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂದೇ ಮಾತನಾಡಿದರು. ಅವರ ಮನಸ್ಸಿನಲ್ಲಿ ದರ್ಶನ್ ಕಷ್ಟ ಪಟ್ಟು ಬೆಳೆದ ಎಂಬ ಸಂಗತಿ ಇತ್ತೇ ಹೊರತು ವರ್ಷಾನುಗಟ್ಟಲೆ ಗಂಡ ನೀಡಿದ ಕಷ್ಟ ಸಹಿಸಿದ ಮಹಿಳೆ ಸಾವಿನ ದವಡೆಗೆ ಹೋಗಿ ಬಂದಿದ್ದರ ಬಗ್ಗೆ ಯಾರಿಗೂ ಕನಿಕರ ಇರಲಿಲ್ಲ.`ದೂರುದಾರರೇ ರಾಜಿ ಮಾಡಿಕೊಂಡಾಗ ಪ್ರಕರಣ ಸಹಜವಾಗಿ ತೀವ್ರತೆ ಕಳೆದುಕೊಳ್ಳುತ್ತದೆ. ದರ್ಶನ್ ಪ್ರಕರಣದಲ್ಲಿಯೂ ಹಾಗೇ ಆಗಬಹುದು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಹಣ, ಹೆಸರು, ತೋಳ್ಬಲ ಇರುವ ವ್ಯಕ್ತಿಯ ವಿರುದ್ಧ ಕಾನೂನು ಹೋರಾಟ ಮಾಡಲು ಸಂಘ ಸಂಸ್ಥೆಗಳು, ಚಿತ್ರರಂಗ ಮತ್ತು ಕುಟುಂಬ ವಿಜಯಲಕ್ಷ್ಮಿ ಅವರ ಪರ ನಿಂತಿದ್ದರೆ ಚಿತ್ರಣ ಬೇರೆಯೇ ಆಗಿರುತ್ತಿತ್ತು. ಅಂತಹ ವಾತಾವರಣ ನಿರ್ಮಾಣ ಆಗುವುದು ಹೇಗೆ, ಎಂದು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.