ಕಾನೂನುಬದ್ಧ ಹೋರಾಟಕ್ಕೆ ಮುಖ್ಯಮಂತ್ರಿ ಶಪಥ

7

ಕಾನೂನುಬದ್ಧ ಹೋರಾಟಕ್ಕೆ ಮುಖ್ಯಮಂತ್ರಿ ಶಪಥ

Published:
Updated:

ಬೆಂಗಳೂರು: ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಕೇಂದ್ರದ ಯುಪಿಎ ಸರ್ಕಾರದ ಏಜೆಂಟ್ ಎಂದು ನೇರ ಟೀಕೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅವರ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದರು. ಬಜೆಟ್ ಅಧಿವೇಶನ ಫೆಬ್ರುವರಿ ಕೊನೆ ವಾರದಲ್ಲಿ ನಡೆಯಲ್ಲಿದ್ದು, ಅಲ್ಲಿಯವರೆಗೂ ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‌ನ ಕುತಂತ್ರದ ಬಗ್ಗೆ ಸಾರಿ ಹೇಳುವುದಾಗಿ ತಿಳಿಸಿದರು.ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವುದರ ಬದಲು ವಿರೋಧಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ರಾಜಭವನ ಇವತ್ತು ವಿರೋಧಪಕ್ಷಗಳ ಕಚೇರಿಯಾಗಿದೆ. ಹೀಗಾಗಿ ಅವರ ವಿರುದ್ಧ ದೂರು ನೀಡಲು ನಮ್ಮ ಪಕ್ಷದ ಸಂಸದರು ಮತ್ತು ಪಕ್ಷದ ರಾಷ್ಟ್ರೀಯ ಮುಖಂಡರು ಇದೇ 24ರಂದು ದೆಹಲಿಯಲ್ಲಿ ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ’ ಎಂದರು.ರಾಜ್ಯಪಾಲರು ಆ ಹುದ್ದೆಯ ಘನತೆ, ಗಾಂಭೀರ್ಯಗಳಿಗೆ ಚ್ಯುತಿ ತಂದಿರುವುದಲ್ಲದೆ ರಾಜಕೀಯ ಮಹತ್ವಾಕಾಂಕ್ಷೆ ಇರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ರಾಜ್ಯಪಾಲರ ಹುದ್ದೆಯ ಘನತೆಯನ್ನೂ ಕುಗ್ಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.‘ಎಲ್ಲಿಯವರೆಗೆ ರಾಜ್ಯಪಾಲರು ಚೆಲ್ಲಾಟವಾಡಿದರು ಅಂದರೆ, ಮೊಕದ್ದಮೆ ದಾಖಲಿಗೆ ಅನುಮತಿ ನೀಡಿರುವ ಆದೇಶದ ಪ್ರತಿ ನೀಡುವುದಕ್ಕೂ ಹಿಂದೇಟು ಹಾಕಿದರು. ನನ್ನ ಪ್ರಧಾನ ಕಾರ್ಯದರ್ಶಿ ಶುಕ್ರವಾರ ರಾತ್ರಿ ಹೋಗಿ ಆದೇಶದ ಪ್ರತಿ ಕೇಳಿದರೆ, ‘ಕೊಡಲು ಸಾಧ್ಯ ಇಲ್ಲ. ಹಾಗಂತ ನಿಮ್ಮ ಸಿ.ಎಂಗೆ ಹೇಳಿ. ಬೇಕಿದ್ರೆ ಸೋಮವಾರ ಕೋರ್ಟ್‌ನಲ್ಲಿ ಪಡೆಯಲಿ’ ಎಂದು ಹೇಳುವ ಮಟ್ಟಕ್ಕೆ ಈ ರಾಜ್ಯಪಾಲರು ಇಳಿದಿದ್ದಾರೆ. ಈಗಲೇ ಆದೇಶದ ಪ್ರತಿ ಕೊಟ್ಟರೆ ಅದಕ್ಕೆ ತಡೆಯಾಜ್ಞೆ ತರಬಹುದು. ಅದನ್ನು ತಡೆಯುವುದೇ ನನ್ನ ಉದ್ದೇಶ ಎಂದೂ ಹೇಳಿ ಕಳುಹಿಸಿದ್ದಾರೆ. ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ’ ಎಂದು ಟೀಕಿಸಿದರು.‘ಇಷ್ಟೆಲ್ಲ ನಡೆದ ನಂತರ ಶನಿವಾರ ಬೆಳಿಗ್ಗೆ ನನ್ನ ಸಂಪುಟದ 10 ಮಂದಿ ಸಚಿವರು ರಾಜಭವನಕ್ಕೆ ಹೋಗಬೇಕಾಯಿತು. ಆ ನಂತರ ಅರ್ಧಗಂಟೆಯಲ್ಲಿ ಕಳುಹಿಸಿಕೊಡುವುದಾಗಿ ಹೇಳಿ ಅದರಂತೆ ನಡೆದುಕೊಂಡಿದ್ದಾರೆ. ನನ್ನ ವಿರುದ್ಧದ ಈ ಪ್ರಕರಣದಲ್ಲಿ ರಾಜ್ಯಪಾಲರೇ ತನಿಖಾಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆಗಳು ಎಂದೂ ಸಂಭವಿಸಿರಲಿಲ್ಲ’ ಎಂದರು.‘ನನ್ನ ವಿರುದ್ಧ ವಕೀಲರಿಬ್ಬರು ರಾಜ್ಯಪಾಲರಿಗೆ ಸಲ್ಲಿಸಿದ್ದ ಮನವಿಯಲ್ಲಿ ತೀವ್ರತರ ಕ್ರಮಕೈಗೊಳ್ಳುವ ಯಾವ ಖಚಿತ ವಿಷಯವೂ ನಮೂದಾಗಿಲ್ಲ. ಅಲ್ಲದೆ, ವಕೀಲರು ಸಲ್ಲಿಸಿದ್ದ ಮನವಿಯ ಪತ್ರವನ್ನೂ ರಾಜ್ಯಪಾಲರು ನೀಡಲಿಲ್ಲ. ಕೊನೆಪಕ್ಷ ಮೊಕದ್ದಮೆ ಹೂಡಲು ಅನುಮತಿ ನೀಡುವುದಕ್ಕಿಂತ ಮುಂಚೆ ನನ್ನ ಅಭಿಪ್ರಾಯವನ್ನೂ ಪಡೆಯಬಹುದಿತ್ತು. ಆದರೆ, ಆ ಯಾವ ಕೆಲಸವನ್ನೂ ಮಾಡದೆ, ನೇರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ನುಡಿದರು.ರಾಜೀನಾಮೆ ಇಲ್ಲ:
‘ರಾಜ್ಯಪಾಲರ ಈ ಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ  ನೀಡುವುದಿಲ್ಲ. ರಾಜಕೀಯ ಪ್ರೇರಿತವಾದ ಅವರ ಕ್ರಮವನ್ನು ರಾಜಕೀಯವಾಗಿಯೇ ಎದುರಿಸಲು ಸಿದ್ಧ ಇದ್ದೇನೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ಪೂರ್ಣ ವಿಶ್ವಾಸ ಇದ್ದು, ಅದರ ಮೂಲಕವೇ ಹೋರಾಟ ನಡೆಸುತ್ತೇನೆ. ನಾನು ಬೆನ್ನು ತೋರಿಸುವುದಿಲ್ಲ, ಓಡಿ ಹೋಗುವುದೂ ಇಲ್ಲ’ ಎಂದು ಹೇಳಿದರು.ಸಲಹೆ ನೀಡಲಿಲ್ಲ: ‘ರಾಜ್ಯದ ಅಭಿವೃದ್ಧಿಗೆ ಈ ರಾಜ್ಯಪಾಲರು ಒಂದೇ ಒಂದು ಸಲಹೆಯನ್ನೂ ನೀಡಲಿಲ್ಲ. ಬದಲಿಗೆ, ಪ್ರತಿ ಬಾರಿಯೂ ಇಕ್ಕಟ್ಟಿಗೆ ಸಿಲುಕಿಸುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದರು. ಅವೆಲ್ಲವನ್ನೂ ಸಹಿಸಿಕೊಂಡು ಅವರನ್ನು ಗೌರವದಿಂದಲೇ ಕಂಡೆವು. ಇನ್ನು ಮುಂದಾದರೂ ಅವರು ಗೌರವದಿಂದ ನಡೆದುಕೊಳ್ಳಲಿ’ ಎಂದು ನುಡಿದರು.ರಾಜ್ಯಪಾಲರನ್ನು ಸಮರ್ಥಿಸಿರುವ ಕೇಂದ್ರ ಗೃಹ ಸಚಿವ ಚಿದಂಬರಂ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ‘ಅವರ ಬಗ್ಗೆ ಅಪಾರ ಗೌರವ ಇದ್ದು, ಏನೂ ಹೇಳುವುದಿಲ್ಲ’ ಎಂದರು.ತಾವು ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಹೋರಾಟ ನಡೆಸುವ ಬೆದರಿಕೆ ಹಾಕಿದೆ ಎನ್ನುವ ಪ್ರಶ್ನೆಗೆ ‘ಕಾಂಗ್ರೆಸ್‌ನವರು ಇನ್ನು ಮುಂದೆ ಕಾಯಂ ಆಗಿಯೇ ಪ್ರತಿಭಟನೆಗಳನ್ನು ಮಾಡಬೇಕು. ಇದುವರೆಗೂ ಯಾರದೊ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ನೆಲೆ ಇಲ್ಲ. ಹೀಗಾಗಿ ಇನ್ನು ಮುಂದೆ ಪ್ರತಿಭಟನೆ ಮಾಡುವುದಷ್ಟೇ ಅವರ ಕೆಲಸ’ ಎಂದು ಹೇಳಿದರು.ಒಂದು ಹಂತದಲ್ಲಿ ಕೇಂದ್ರದ ಯುಪಿಎ ಸರ್ಕಾರ ಅತಿ ಭ್ರಷ್ಟ ಸರ್ಕಾರ ಎಂದು ಪತ್ರಿಕೆಯೊಂದರಲ್ಲಿನ ವ್ಯಂಗ್ಯಚಿತ್ರ ತೋರಿಸಿ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಜನರಿಗೆ ಅನಾನುಕೂಲ ಆಗಿದ್ದಕ್ಕೆ ಕ್ಷಮೆಯಾಚಿಸಿದ ಅವರು ಇದಕ್ಕೆ ಹೊಣೆಗಾರರೇ ರಾಜ್ಯಪಾಲರು. ಅವರೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ನುಡಿದರು.ವಿಸರ್ಜನೆಗೆ ಸಲಹೆ: ‘ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸಲು ಸಲಹೆ ನೀಡಿದ್ದರು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದು, ಚುನಾವಣೆಗೆ ಹೋದರೆ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೀರಿ’ ಎಂದು ಹೇಳಿದ್ದ ಸಂಗತಿಯನ್ನು ಯಡಿಯೂರಪ್ಪ ಬಹಿರಂಗಪಡಿಸಿದರು.‘ರಾಷ್ಟ್ರಪತಿ ಆಡಳಿತ ಹೇರಿ ಅಧಿಕಾರ ಚಲಾಯಿಸುವ ಆಸೆ ಈ ಅಜ್ಜನಿಗೆ ಇದೆ. ವಯಸ್ಸಾದ ಕಾರಣಕ್ಕೆ ಈ ರೀತಿಯ ಆಸೆ ಸಹಜವಾಗಿಯೇ ಬರುತ್ತದೆ’ ಎಂದು ವ್ಯಂಗ್ಯವಾಡಿದರು.ಮೊಕದ್ದಮೆಯಲ್ಲಿ ಉಲ್ಲೇಖಿತ ಕಲಮು

ಭಾರತೀಯ ದಂಡ ಸಂಹಿತೆಯ ಅಡಿ: ಸೆಕ್ಷನ್ 405 ಹಾಗೂ 406- ವಿಶ್ವಾಸದ್ರೋಹ, 420- ವಂಚನೆ, 463- ಫೋರ್ಜರಿ, 468- ಬೇರೆಯವರನ್ನು ವಂಚಿಸುವ ಸಲುವಾಗಿ ಫೋರ್ಜರಿ ಮಾಡುವುದು

471- ಫೋರ್ಜರಿ ಮಾಡಿರುವ ದಾಖಲೆಗಳನ್ನು ಅಸಲಿ ಎಂಬಂತೆ ಬಳಕೆ ಮಾಡಿಕೊಳ್ಳುವುದು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳು: ಸೆಕ್ಷನ್ 13(1)(ಡಿ)- ಸರ್ಕಾರಿ ಅಧಿಕಾರಿಯಿಂದ ಕ್ರಿಮಿನಲ್ ನಡವಳಿಕೆ (ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಕೃತ್ಯಗಳಿಂದ ಸ್ವಂತಕ್ಕೆ ಅಥವಾ ಬೇರೆಯವರಿಗೆ ಲಾಭ ಮಾಡಿಕೊಡುವುದು).

13(1)(ಇ)- ಅಧಿಕಾರದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಸಂಪಾದನೆ ಮಾಡಿರುವುದು.

13 (2)(2)- ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗೆ ನೀಡಬಹುದಾದ ಶಿಕ್ಷೆಯ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ. ಇದರ ಅಡಿ ಕನಿಷ್ಠ ಒಂದು ಹಾಗೂ ಗರಿಷ್ಠ ಏಳು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.

ಕರ್ನಾಟಕ ಭೂ (ಪರಭಾರೆ ಮೇಲಿನ ನಿಯಂತ್ರಣ) ಕಾಯ್ದೆಯ ಅಡಿ ದಾಖಲಾದ ಪ್ರಕರಣ: ಸೆಕ್ಷನ್ 3- ಸಾರ್ವಜನಿಕ ಉದ್ದೇಶಕ್ಕೆಂದು ನಗರ ಪ್ರದೇಶಗಳಲ್ಲಿ ಭೂ ಸ್ವಾಧೀನ ಕಾಯ್ದೆ- 1894ರ ಅಡಿ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಪರಭಾರೆ ಮಾಡುವುದು ಅಥವಾ ಗುತ್ತಿಗೆಗೆ ನೀಡುವುದು ನಿಷೇಧ

ಸೆಕ್ಷನ್ 4- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ- 1976ರ ಕಾಯ್ದೆಯ ಅಡಿ ಯೋಜನೆ ರೂಪಿಸುವ ಸಲುವಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಪರಭಾರೆ ಮಾಡುವುದು.ಮೊಕದ್ದಮೆ 2ರಲ್ಲಿ ಖಾಸಗಿ ವ್ಯಕ್ತಿಗಳು

ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ, ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ, ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ, ದೊಮ್ಮಲೂರಿನ ಮೋಹನ್ ರಾಜ್, ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್, ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ.ಶಿವಮೊಗ್ಗ ತಾಲ್ಲೂಕಿನ ಕುಂಸಿಯ ಎಂ.ಮಂಜುನಾಥ್, ಬೆಂಗಳೂರಿನ ಜಯನಗರ 4ನೇ ‘ಟಿ’ ಬ್ಲಾಕ್‌ನ ವಿ.ಅನಿಲ್‌ಕುಮಾರ್, ಬನಶಂಕರಿ ಎರಡನೇ ಹಂತದ ಬಿ.ರಮೇಶ್, ಗೆದ್ದಲಹಳ್ಳಿಯ ಶಾಂತಾ ದೇವಿ, ಫ್ರೇಜರ್ ಟೌನ್‌ನ ಶಾಂತಾ ಬಾಯಿ, ನ್ಯೂ ಬಂಬೂ ಬಜಾರ್‌ನ ಇಸ್ಮಾಯಿಲ್ ಷರೀಫ್, ಜಯನಗರ 4ನೇ ‘ಟಿ’ ಬ್ಲಾಕ್‌ನ ವಿ.ಮಂಜುನಾಥ್ ಮತ್ತು ಪುಟ್ಟೇನಹಳ್ಳಿಯ ಕೆ.ಶಿವಪ್ಪ.ಪ್ರಕರಣಗಳ ವಿವರ

1- ಬಿಡಿಎ ಭೂಸ್ವಾಧೀನಪಡಿಸಿಕೊಂಡಿದ್ದ ಬೆಂಗಳೂರಿನ ರಾಚೇನಹಳ್ಳಿಯ ಸರ್ವೇ ನಂಬರ್ 55/2ರ ಭೂಮಿಯನ್ನು ತಮ್ಮ ಕುಟುಂಬದ ಸದಸ್ಯರ ಅನುಕೂಲಕ್ಕಾಗಿ ಅಕ್ರಮವಾಗಿ ಡಿನೋಟಿಫೈ ಮಾಡಿರುವುದು.

2- ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ರಾಚೇನಹಳ್ಳಿಯ ಸರ್ವೇ ನಂಬರ್ 56ರ ಭೂಮಿಯನ್ನು ಮುಖ್ಯಮಂತ್ರಿಯವರ ಕುಟುಂಬದವರ ಲಾಭಕ್ಕಾಗಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದು.

3- ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್‌ಗೆ ಲಾಭವಾಗುವಂತೆ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ನಾಗವಾರ ಬಡಾವಣೆಯಲ್ಲಿ ರಸ್ತೆಯನ್ನೇ ಅಕ್ರಮವಾಗಿ ನಿವೇಶನವನ್ನಾಗಿ ಪರಿವರ್ತಿಸಿರುವುದು (ಅಮಾಲ್ಗಮೇಷನ್).

4- ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಸಬಾ ಹೋಬಳಿಯ ಅರಕೆರೆ ಗ್ರಾಮದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 2.05 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದು. ಬಳಿಕ ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರ ಬೇನಾಮಿದಾರರು ಅದನ್ನು ಖರೀದಿಸಿರುವುದು.

5- ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವರಚಿಕ್ಕನಹಳ್ಳಿಯ ಸರ್ವೇ ನಂಬರ್ 51/1ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಮುಖ್ಯಮಂತ್ರಿಯವರ ಸಹಚರ ಕೆ.ಮಂಜುನಾಥ್ ಅವರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಡಿನೋಟಿಫೈ ಮಾಡಿರುವುದು.

6- ಅರ್ಕಾವತಿ ಬಡಾವಣೆಗಾಗಿ ಗೆದ್ದಲಹಳ್ಳಿಯ ಸರ್ವೇ ನಂಬರ್ 42/1ಎ2, 42/4-ಎ2 ಮತ್ತು 42/2ಬಿಗಳಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಮುಖ್ಯಮಂತ್ರಿಯವರ ಸಹಚರರಾದ ವಿ.ಮಂಜುನಾಥ್ ಮತ್ತು ಕೆ.ಶಿವಪ್ಪ ಅವರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಡಿನೋಟಿಫೈ ಮಾಡಿರುವುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry