ಕಾನೂನು ಕಾಲೇಜು ವಿದ್ಯಾರ್ಥಿಗಳ ಧರಣಿ

7

ಕಾನೂನು ಕಾಲೇಜು ವಿದ್ಯಾರ್ಥಿಗಳ ಧರಣಿ

Published:
Updated:

ಕೋಲಾರ: ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಹೊರವಲಯದ ಅರಹಳ್ಳಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜು ನೂರಾರು ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು.ಶೌಚಾಲಯ, ಕುಡಿಯುವ ನೀರು, ತರಗತಿ ಕೊಠಡಿಗಳು, ಗ್ರಂಥಾಲಯ ಸೇರಿದಂತೆ ಹಲವು ಮೂಲಸೌಕರ್ಯ ಕೊರತೆ ಕಾಲೇಜು ಸ್ಥಳಾಂತರಗೊಂಡ ಆರಂಭದಿಂದಲೂ ಇದೆ. ಕೊರತೆ ನೀಗಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಾಂಶುಪಾಲರು ಸ್ಪಂದಿಸಿಲ್ಲ. ಕೇವಲ ಭರವಸೆ ನೀಡಿ ದಿನ ನೂಕುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಲೇಜಿನಲ್ಲಿ ಒಂದು ಶೌಚಾಲಯವಿದೆ. ಅದನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ. ವಿಪರ್ಯಾಸವೆಂದರೆ ಅಲ್ಲಿ ನೀರಿನ ಸೌಕರ್ಯವೇ ಇಲ್ಲ. ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಬಾಲಕರು ಸುತ್ತಮುತ್ತಲಿನ ತೋಪುಗಳನ್ನೇ ಅವಲಂಬಿಸುವಂತಾಗಿದೆ. ಕಾಲೇಜಿನಲ್ಲಿ ಕುಡಿಯುವ ನೀರಂತೂ ಇಲ್ಲವಾಗಿದೆ.ಅಧ್ಯಾಪಕರು ನಿಯಮಿತವಾಗಿ ತರಗತಿಗಳನ್ನು ನಡೆಸುವುದಿಲ್ಲ. ಪ್ರಾಂಶುಪಾಲರು ವಾರಕ್ಕೊಮ್ಮೆ ಮಾತ್ರ ಭೇಟಿ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ ಇದೆ. ಪರಾಮರ್ಶನ ಗ್ರಂಥಗಳಂತೂ ಇಲ್ಲವೇ ಇಲ್ಲ. ತರಗತಿ ಕೊಠಡಿಗಳ ಕೊರತೆ ಇರುವುದರಿಂದ ದ್ವಿತೀಯ ಮತ್ತು ತೃತೀಯ ಎಲ್‌ಎಲ್‌ಬಿ ತರಗತಿಗಳನ್ನು ಒಂದೇ ಬೃಹತ್ ಕೊಠಡಿಯಲ್ಲಿ ಅಲ್ಮೆರಾಗಳನ್ನು ಅಡ್ಡವಿಟ್ಟು ನಡೆಸಲಾಗುತ್ತಿದೆ. ಪಾಠ ಕೇಳಲು ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಸಲ್ಲಿಸಿದ್ದರೂ ಅವುಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ರವಾನಿಸಿಲ್ಲ. 8ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಿಸಿಲ್ಲ. ಕೇಳಿದರೆ, ವಿಶ್ವವಿದ್ಯಾಲಯಕ್ಕೇ ಹೋಗಿ ತಿಳಿದುಕೊಳ್ಳಿ ಎಂಬ ಉತ್ತರವನ್ನೂ ಪ್ರಾಂಶುಪಾಲರು ನೀಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಸೋಮವಾರದಿಂದ ಅರಹಳ್ಳಿ ಗೇಟ್‌ನಲ್ಲಿ ರಸ್ತೆ ತಡೆ ಮಾಡಲಾಗುವುದು ಎಂದು ತಿಳಿಸಿದರು.ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳಾದ ರಾಜೇಶ್, ಗೋಪಿನಾಥ್, ಎಚ್.ಕೆ.ಮುರುಳಿ, ಶಿವಪ್ಪ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry