ಮಂಗಳವಾರ, ಮಾರ್ಚ್ 9, 2021
18 °C
ಖಾಸಗಿ ವಾಹಿನಿಯ ಪತ್ತೆದಾರಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನವನೀತ್‌

ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಂಚು

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಂಚು

ಉಡುಪಿ: ಕೊಲೆಯಾದ ಕೋಟ್ಯಧಿಪತಿ ಉದ್ಯಮಿ ಭಾಸ್ಕರ್‌ ಶೆಟ್ಟಿ ಅವರ ಮಗ ನವನೀತ್‌ ಹಿಂದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಸಿಐಡಿ’ ಎಂಬ ಅಪರಾಧ ಪತ್ತೆ ವಿಷಯ ಆಧಾರಿತ ಕಾರ್ಯಕ್ರಮವನ್ನು ಹೆಚ್ಚಾಗಿ ನೋಡುತ್ತಿದ್ದ.ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಹಂತಕರು ಮಾಡುವ ಸಂಚು ಹಾಗೂ ಸಿಕ್ಕಿಬೀಳದ ಹಾಗೆ ಅಪರಾಧ ಕೃತ್ಯವನ್ನು ಕಾರ್ಯಗತಗೊಳಿಸುವುದನ್ನು ನೋಡಿದ್ದ ಆತ ಅದರಿಂದ ಪ್ರೇರೇಪಣೆಗೊಂಡಿದ್ದ. ಅದರಂತೆಯೇ ಆತ ತಂದೆಯನ್ನು ಕೊಲೆ ಮಾಡಿದ ನಂತರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶವವನ್ನು ಸುಟ್ಟು ಅವಶೇಷಗಳು ಸಿಗದಂತೆ ಮಾಡಲು ಉಪಾಯ ಮಾಡಿದ್ದ ಎನ್ನಲಾಗಿದೆ.ಸಿಐಡಿ ಕಾರ್ಯಕ್ರಮ ಅಚ್ಚುಮೆಚ್ಚಿನ ಕಾರ್ಯಕ್ರಮ ಎಂದು ಹೇಳಿಕೊಳ್ಳುತ್ತಿದ್ದ ಎಂದು ಪರಿಚಯಸ್ಥರು ತಿಳಿಸಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ನವನೀತ್ ತಂದೆಯ ಕೊಲೆ ಮಾಡಲು ನಿರ್ಧರಿಸಿದಾಗಲೇ ಕಾನೂನಿನ ಕುಣಿಕೆಯಿಂದಲೂ ತಪ್ಪಿಸಿಕೊಳ್ಳಲು ವ್ಯವಸ್ಥಿತ ಸಂಚು ಮಾಡಿದ್ದ. ಆಜಾನುಬಾಹು ದೇಹದ ತಂದೆಯನ್ನು ಇಬ್ಬರು ಅಥವಾ ಮೂರು ಮಂದಿ ಸೇರಿ ಕೊಲ್ಲಲು ಸಾಧ್ಯವಾಗುವುದಿಲ್ಲ.ಆದ್ದರಿಂದ ಸ್ನಾನ ಮಾಡಿಕೊಂಡು ಹೊರಗೆ ಬರುವಾಗ ಬಾಗಿಲ ಹೊರಗೆ ಅವರಿಗೆ ಕಾಣದಂತೆ ನಿಂತು ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಆ ನಂತರ ಸಲಾಕೆಯಿಂದ ಹಲ್ಲೆ ಮಾಡಲು ನಿರ್ಧರಿಸಿದ್ದ. ತಾಯಿಯೊಂದಿಗೆ ಸೇರಿಕೊಂಡು ಅದರಂತೆಯೇ ಮಾಡಿದ ಆತ, ಕುಸಿದು ಬಿದ್ದ ತಂದೆಯನ್ನು ಬಾತ್‌ಟಬ್‌ನಲ್ಲಿ ಹಾಕಿ ಮತ್ತಷ್ಟು ಹೊಡೆದು ಸಾಯಿಸಿದ್ದ. ಮನೆಯ ಮುಂಬಾಗಿಲಿನಿಂದ ಶವ ಇಡುವಾಗ ಯಾರಾದರೂ ನೋಡಬಹುದು ಎಂದು ಕಾರನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಹಿಂಬಾಗಿಲ ಬಳಿ ತಂದು ಡಿಕ್ಕಿಗೆ ಶವ ತುಂಬಿದ್ದ. ಶವ ಸಾಗಿಸುವಾಗ ಕಾರಿನ ನೋಂದಣಿ ಸಂಖ್ಯೆ ಎಲ್ಲಿಯಾದರೂ ದಾಖಲಾಗಬಹುದು ಅಥವಾ ಯಾರಾದರೂ ನೋಡಬಹುದು ಎಂದುಕೊಂಡ ಆತ ಕಾರಿನ ನೋಂದಣಿ ಸಂಖ್ಯೆಯನ್ನು ಬದಲಾಯಿಸಿದ್ದ. ಕಾರಿನ ನೋಂದಣಿ ಸಂಖ್ಯೆ ಕೆಎ 20– ಎಂಎ 7825ಯನ್ನು ಬದಲಾಯಿಸಿದ್ದ. 7 ಸಂಖ್ಯೆಯನ್ನು ತೆಗೆದು ಬೇರೆ ಸಂಖ್ಯೆ ಹಾಕಿದ್ದ. ಕೃತ್ಯ ಮಾಡಿದ ನಂತರ ಮತ್ತೆ ವಾಹನದ ಅಸಲಿ ಸಂಖ್ಯೆಯನ್ನು ಜೋಡಿಸಿದ್ದ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮಹಜರು ನಡೆಸುವಾಗ ಕಾರಿನ ನೋಂದಣಿ ಸಂಖ್ಯೆ ಬದಲಾಯಿಸಿರುವುದು ಗಮನಕ್ಕೆ ಬಂದಿದೆ.ಅಪರಾಧ ಪತ್ತೆ ಕಾರ್ಯಕ್ರಮವನ್ನು ಹೆಚ್ಚಾಗಿ ನೋಡುತ್ತಿದ್ದ ಆತನಿಗೆ ಕೊಲೆ ಖಚಿತವಾಗುವುದು ಶವ ಸಿಕ್ಕ ನಂತರ ಎಂಬುದು ಮನದಟ್ಟಾಗಿತ್ತು. ಆದ್ದರಿಂದ ಶವವೇ ಪತ್ತೆಯಾಗಬಾರದು ಎಂದು ಮೊದಲೇ ಯೋಜನೆ ರೂಪಿಸಿದ್ದ. ನಂದಳಿಕೆಗೆ ಶವ ತೆಗೆದುಕೊಂಡು ಹೋದ ನಂತರ ನಿರಂಜನ ಭಟ್ ಸಹಾಯದಿಂದ ಅದನ್ನು ಸುಟ್ಟು ಅವಶೇಷಗಳನ್ನು ಹೊಳೆಯಲ್ಲಿ ವಿಲೇವಾರಿ ಮಾಡಿದ್ದ.ಈಗ ಮಳೆಗಾಲ ಆಗಿರುವ ಕಾರಣ ತುಂಬಿ ಹರಿಯುವ ಹೊಳೆಯಲ್ಲಿ ಅವಶೇಷ ಎಸೆದರೆ ಅವುಗಳನ್ನು ಯಾವುದೇ ಕಾರಣಕ್ಕೂ ಮತ್ತೆ ವಶಪಡಿಸಿಕೊಳ್ಳಲಾಗದು.

ಶವವೇ ಪತ್ತೆಯಾಗದಿದ್ದರೆ ನ್ಯಾಯಾಲಯದಲ್ಲಿಯೂ ಕೊಲೆ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ ಎಂದು ಆತ ಹೀಗೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಸ್ವತಃ ದೇಹಧಾರ್ಡ್ಯ ಪಟು ಆಗಿದ್ದ ಆತ ಉಡುಪಿ ನಗರದಲ್ಲಿ ಸ್ವಂತ ಜಿಮ್ ಅನ್ನು ಇತ್ತೀಚೆಗೆ ಆರಂಭಿಸಿದ್ದ. ಖಾಸಗಿ ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಆತ ಉಪನ್ಯಾಸಕರೊಬ್ಬರ ಮೇಲೆಯೂ ಹಲ್ಲೆ ಮಾಡಿದ್ದ ಎಂದು ತಿಳಿದುಬಂದಿದೆ.

₹ 300 ಕೋಟಿ ಆಸ್ತಿ ಒಡೆಯ

ಕೊಲೆಯಾಗಿರುವ ಭಾಸ್ಕರ್ ಶೆಟ್ಟಿ ಅವರು ಸುಮಾರು ₹300 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದರು. ಸೌದಿ ಅರೇಬಿಯಾದಲ್ಲಿ 6 ಸೂಪರ್‌ ಮಾರ್ಕೆಟ್‌ಗಳನ್ನು ಅವರು ನಡೆಸುತ್ತಿದ್ದರು. ಉಡುಪಿಯಲ್ಲಿಯೂ ಮೂರ್ನಾಲ್ಕು ವಾಣಿಜ್ಯ ಮಳಿಗೆಗಳು, ಲಾಡ್ಜ್‌ ಇದೆ.

‘ಅಣ್ಣ ಸೌದಿ ಅರೇಬಿಯಾಗೆ ಹೋಗಿ ಹಣ ಸಂಪಾದನೆ ಮಾಡಿದ್ದ. ಹತ್ತಾರು ವ್ಯವಹಾರಗಳನ್ನು ಆತ ನೋಡಿಕೊಳ್ಳುತ್ತಿದ್ದ’ ಎಂದು ಸಹೋದರ ಸುರೇಂದ್ರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ಆಗಸ್ಟ್‌ 15ರ ವರೆಗೆ ಮಾತ್ರ ವೀಸಾ ಪಡೆದಿದ್ದ ಭಾಸ್ಕರ್ ಶೆಟ್ಟಿ ಅವರು ಅದರೊಳಗೆ ಸೌದಿಗೆ ಹೋಗಲು ನಿರ್ಧರಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.