ಗುರುವಾರ , ಆಗಸ್ಟ್ 22, 2019
27 °C
ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಕಾನೂನು ತೊಡಕಿನ ಭಯ : ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಮುಂದೂಡಿಕೆ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್) : ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಕಾನೂನು ತೊಡಕು ಎದುರಿಸುವ ಭಯದಿಂದಾಗಿ ಶುಕ್ರವಾರ ನಡೆಯಬೇಕಿದ್ದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಮುಂದೂಡಿಕೆಯಾಗಿದ್ದು, ಮುಂದಿನ ಆದೇಶದವರೆಗೆ ಜಗಮೋಹನ್ ದಾಲ್ಮಿಯಾ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇದರಿಂದಾಗಿ ಎನ್. ಶ್ರೀನಿವಾಸನ್ ಅವರಿಗೆ ಭಾರೀ ಹಿನ್ನೆಡೆಯಾದಂತಾಗಿದೆ.ಬಿಸಿಸಿಐ ಅಧ್ಯಕ್ಷರ ನೇಮಕ ಸಂಬಂಧ ಇಂದು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶ್ರೀನಿವಾಸನ್ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಮರಳಿದರೆ ಉಂಟಾಗಬಹುದಾದ ಸಮಸ್ಯೆಯ ಕುರಿತು ಬಿಸಿಸಿಐ ಹಿರಿಯರ ಸದಸ್ಯರು ಗಂಭೀರ ಚರ್ಚೆ ನಡೆಸಿದ ಬಳಿಕ ಕಾರ್ಯಕಾರಿ ಸಮಿತಿ ಸಭೆ ಮುಂದೂಡಲಾಯಿತು.ಮತ್ತೆ ಅಧ್ಯಕ್ಷ ಸ್ಥಾನಕ್ಕೇರುವ ನಿರ್ಧಾರವನ್ನು ಕೈಬಿಡುವಂತೆ ಎನ್ ಶ್ರೀನಿವಾಸನ್ ಅವರಿಗೆ ಬಿಸಿಸಿಐ ಉಪಾಧ್ಯಕ್ಷ ಹಾಗೂ ವಕೀಲರಾಗಿರುವ ಅರುಣ್ ಜೈಟ್ಲಿ, ಬಿಸಿಸಿಐ ಹಂಗಾಮಿ ಅಧ್ಯಕ್ಷ ದಾಲ್ಮಿಯಾ ಮತ್ತು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ತೀವ್ರ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಲ್ಲದೆ ಶ್ರೀನಿವಾಸನ್ ಅವರು ಮತ್ತೆ ಅಧ್ಯಕ್ಷರಾದಲ್ಲಿ ದೇಶದೆಲ್ಲೆಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ಅಲೆಯನ್ನೆಬ್ಬಿಸಿ ಮಂಡಳಿಯನ್ನು ಮತ್ತಷ್ಟು ಮುಜುಗರಕ್ಕೀಡುಮಾಡುವ ಸಾಧ್ಯತೆ ಇದೆ ಎಂಬುದನ್ನು ಶ್ರೀನಿವಾಸನ್ ಅವರಿಗೆ ಬಿಸಿಸಿಐ ತಿಳಿಸಿದೆ ಎನ್ನಲಾಗಿದೆ.ಇದೇ ವೇಳೆ ಬಿಸಿಸಿಐ ತನಿಖಾ ಆಯೋಗವನ್ನು `ಕಾನೂನು ಬಾಹಿರ' ಮತ್ತು `ಅಸಂವಿಧಾನಿಕ' ಎಂದು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.ಐಎಎನ್ ಎಸ್ ವರದಿ : ಈ ಮಧ್ಯೆ ಶ್ರೀನಿವಾಸನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಕ್ಕೆ ಮಂಡಳಿಯಲ್ಲಿ ಭಿನ್ನಮತ ಉಂಟಾದ ಕಾರಣಕ್ಕೆ ಸಭೆ ಮುಂದೂಡಲಾಯಿತು ಎಂದು ಐಎಎನ ಎಸ್ ವರದಿ ಮಾಡಿದೆ. ಬಿಸಿಸಿಐ ನಿಯಮದ ಪ್ರಕಾರ ವಾರದಲ್ಲಿ ಎರಡು ಬಾರಿ ಸಭೆ ಸೇರುವಂತಿಲ್ಲ. ತನಿಖಾ ಆಯೋಗದ ವರದಿ ಪಡೆಯುವ ಸಲುವಾಗಿ ಕೋಲ್ಕತ್ತದಲ್ಲಿ ಭಾನುವಾರ ಸಭೆ ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ಐಎಎನ್‌ಎಸ್ ಹೇಳಿದೆ.ಹಿನ್ನೆಲೆ : ಹಗರಣದ ತನಿಖೆ ಮುಗಿಯುವವರೆಗೂ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡಗಳು ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಶ್ರೀನಿವಾಸನ್ ಅವರು ರಾಜೀನಾಮೆ ನೀಡಿದ್ದರು. ಬದಲಾಗಿ ದಾಲ್ಮಿಯಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಲ್ಲದೆ ಹಗರಣದ ತನಿಖೆಗೆ ಬಿಸಿಸಿಐ ಇಬ್ಬರು ನಿವೃತ್ತ ನ್ಯಾಯಾಧೀಶರ ತನಿಖಾ ಆಯೋಗವನ್ನು ನೇಮಿಸಿತ್ತು.ತನಿಖೆ ನಡೆಸಿದ ಆಯೋಗವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳು ಹಗರಣದದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಜುಲೈ 28 ರಂದು ವರದಿ ನೀಡಿತ್ತು. ಇದಾದ ಬಳಿಕ ಶ್ರೀನಿವಾಸನ್ ಅವರು ಮತ್ತೆ ಅಧ್ಯಕ್ಷ ಹುದ್ದೆಗೇರುವ ಎಲ್ಲಾ ಲಕ್ಷಣಗಳೂ ಕಂಡುಬಂದಿದ್ದವು.ಅದರೆ ತನಿಖಾ ಆಯೋಗದ ವರದಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಜುಲೈ 30ರಂದು ಕೈಗೆತ್ತಿಕೊಂಡ ಬಾಂಬೆ ಹೈಕೋಟ್, ಬಿಸಿಸಿಐ ನೇಮಿಸಿದ್ದ ತನಿಖಾ ಆಯೋಗವೇ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು.

Post Comments (+)