ಕಾನೂನು ನಿರ್ಬಂಧ: ಪ್ರವಾಸಿಗರ ತಪ್ಪದ ಪರದಾಟ

7

ಕಾನೂನು ನಿರ್ಬಂಧ: ಪ್ರವಾಸಿಗರ ತಪ್ಪದ ಪರದಾಟ

Published:
Updated:
ಕಾನೂನು ನಿರ್ಬಂಧ: ಪ್ರವಾಸಿಗರ ತಪ್ಪದ ಪರದಾಟ

ಶೃಂಗೇರಿ (ಬಾಳೆಹೊನ್ನೂರು): ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆ ಅಂಚಿನಲ್ಲಿರುವ ಮೂರು ಅರಣ್ಯ ಇಲಾಖೆ ತಪಾಸಣಾ ಕೇಂದ್ರಗಳು ಮೂರು ವಿವಿಧ ಕಾನೂನನ್ನು ಪ್ರವಾಸಿಗರ ಮೇಲೆ ಹೇರುತ್ತಿದ್ದು, ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.ಶೃಂಗೇರಿಯಿಂದ ಕಾರ್ಕಳ ಸಂಪರ್ಕ ಕಲ್ಪಿಸುವ ರಸ್ತೆ ರಾಷ್ಟ್ರೀಯ ಉದ್ಯಾನ ಮೂಲಕ ಸಾಗಿದ್ದು ತನಿಕೋಡು ಎಂಬಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇದೆ. ಈ ಚೆಕ್‌ಪೋಸ್ಟ್ ಮೂಲಕ ತೆರಳುವ ಎಲ್ಲ ವಾಹನಗಳ ಮಾಲೀಕರು ವಾಹನದಿಂದ ಇಳಿದು ಇಲ್ಲಿನ ಸಿಬ್ಬಂದಿ ಕುಳಿತ ಜಾಗಕ್ಕೆ ತೆರಳಿ ಲಾಗ್‌ಬುಕ್‌ನಲ್ಲಿ ಸಹಿ ಮಾಡಿ ರಹದಾರಿ ಪತ್ರ ಪಡೆಯುವುದು ಕಡ್ಡಾಯ.ರಾಜ್ಯದ ಯಾವುದೇ ಮೂಲೆಯಲ್ಲೂ ಈ ರೀತಿ ಸಹಿ ಮಾಡುವ ಕಾನೂನು ಇಲ್ಲ. ಈ ಬಗ್ಗೆ ಇಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಹಿರಿಯ ಅಧಿಕಾರಿಗಳ ಅದೇಶ ಅವರನ್ನೇ ಕೇಳಿ ಎಂದು ಉತ್ತರಿಸುತ್ತಾರೆ.ಕಾರ್ಕಳ ಭಾಗದಿಂದ ಅರಣ್ಯ ಪ್ರವೇಶಿಸುವ ಮಾಳ ಗೇಟ್‌ಪ್ರತಿದಿನವೂ ತೆರೆದೇ ಇರುತ್ತದೆ. ಶೃಂಗೇರಿ, ಹೊರನಾಡಿಗೆ ತೆರಳುವವರಿಗೆ ಅಲ್ಲಿಯೇ ಇರುವ ಸಿಬ್ಬಂದಿ ಕನಿಷ್ಠ ಪಾಸ್ ಪಡೆಯುವ ಬಗ್ಗೆ ಸೂಚನೆಯನ್ನೂ ನೀಡುವುದಿಲ್ಲ. ಪಾಸ್ ಪಡೆಯುವ ಬಗ್ಗೆ ಗೊತ್ತಿರುವವರು ಮಾತ್ರ ಇಲ್ಲಿಯೂ ಇಳಿದು ಸಿಬ್ಬಂದಿ ಬಳಿ ತೆರಳಿ ರಹದಾರಿ ಪತ್ರ ಪಡೆಯಬೇಕಾಗಿದೆ. ಅದರೆ ಇಲ್ಲಿ ಸಹಿ ಕಡ್ಡಾಯ ಇಲ್ಲ.ರಹದಾರಿ ಪತ್ರ ಪಡೆಯಲು ಗೊತ್ತಿಲ್ಲದೆ ಮಾಳಗೇಟ್ ಮೂಲಕ ಒಳ ಬರುವ ವಾಹನಗಳನ್ನು ಶೃಂಗೇರಿ ಭಾಗದ ತನಿಕೋಡ್ ಅಥವಾ ಕುದುರೆಮುಖ ಸಮೀಪದ ಬೆಳ್ಳ ಗೇಟ್‌ನಲ್ಲಿ ತಡೆ ಹಿಡಿಯಲಾಗುತ್ತದೆ. ವಾಪಸ್ ತೆರಳಿ ಪಾಸ್ ತರಬೇಕು ಎಂದು ಅಧಿಕಾರಿಗಳು ಒತ್ತಾಯಿಸುತ್ತಾರೆ. ಮತ್ತೆ ಸುಮಾರು 20 ಕಿ.ಮೀ. ವಾಪಾಸ್ ತೆರಳುವುದು ಕಷ್ಟ ಎಂಬುದನ್ನರಿತ ಗೇಟ್ ಸಿಬ್ಬಂದಿ  ವಾಹನ ಮಾಲೀಕರಿಂದ `ಮಾಮೂಲಿ~ ಪಡೆದು ಹೊರಬಿಡುತ್ತಾರೆ ಎಂಬುದು ದಾವಣಗೆರೆಯ ಪ್ರವಾಸಿ ಶ್ರೀನಿವಾಸ್ ಪ್ರಜಾವಾಣಿಗೆ ತಿಳಿಸಿದರು.ಕುದುರೆಮುಖ ಸಮೀಪದ ಬೆಳ್ಳಗೇಟ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಸ್ಥಳಕ್ಕೆ ತೆರಳಿ ಪಾಸ್ ಪಡೆಯುವ  ಬಗ್ಗೆ ಹಲವು ಬಾರಿ ಪ್ರವಾಸಿಗರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಗಳಾಗಿದೆ.ತಪಾಸಣಾ ಕೇಂದ್ರಕ್ಕೆ ಪಾಸ್ ಪಡೆಯಲು ತೆರಳಿದ ವೇಳೆ ವಾಹನ ಮಾಲೀಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾರ್ಕಳ ವ್ಯಾಪ್ತಿಯ ಎಸಿಎಫ್ ಮತ್ತು ಡಿಸಿಎಫ್ ಇತ್ತೀಚೆಗೆ  ದಿಢೀರನೆ ಭೇಟಿ ನೀಡಿ ಗೇಟ್ ಸಿಬ್ಬಂದಿಯನ್ನು ತಪಾಸಣೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಪ್ರವಾಸಿಗರು ಸಿಬ್ಬಂದಿಗೆ ಹಣ ನೀಡದಂತೆ ನಾಮಫಲಕ ಹಾಕಿದ್ದಾರೆ.`ಸಿಬ್ಬಂದಿ ಇರೋದೆ ಪಾಸ್ ನೀಡುವುದಕ್ಕೆ. ಅವರಿಗೆ ಬೇರೆ ಏನೂ ಕೆಲಸ ಇಲ್ಲ, ವಾಹನ ಬಂದಾಗ ಪಾಸ್ ಬರೆದು ಪ್ರವಾಸಿಗರ ಕೈಗೆ ಕೊಡಬಹುದು. ಹೀಗೆ ಮಾಡುವುದರಿಂದ ಅಕ್ರಮ ವಸೂಲಿಗೆ ಅವಕಾಶ ಇರುವುದಿಲ್ಲ. ಆದರೆ ಇಲ್ಲಿ ಇನ್ನೂ ಸಿಬ್ಬಂದಿ ಸುಧಾರಿಸಿಲ್ಲ~ ಎಂದು ಬೆಂಗಳೂರಿನ ಪ್ರವಾಸಿ ರಮೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry