ಶುಕ್ರವಾರ, ಮೇ 20, 2022
27 °C

ಕಾನೂನು ಶಿಕ್ಷಣ: ಹೊಸ ಸಾಧ್ಯತೆಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1998ರವರೆಗೆ  ಹೆಚ್ಚಿನ ಕಾಲೇಜುಗಳು ಕಾನೂನು ಶಿಕ್ಷಣವನ್ನು  ಸಂಜೆ ವೇಳೆಯಲ್ಲಿ ಅಥವಾ ಬೆಳಗಿನ ವೇಳೆಯಲ್ಲಿ ನಡೆಸುತ್ತಿದ್ದವು. ಈ ವ್ಯವಸ್ಥೆ ಕಲಿಯುವವರಿಗೆ ಹಾಗೂ ಕಲಿಸುವವರಿಗೆ ಸೂಕ್ತವಾಗಿತ್ತು.ಈ ಹಿಂದೆ ಕಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿ ನಿರತ ವಕೀಲರಾಗಿದ್ದರು. ಕಲಿಯುವವರೂ ಸಹ ಉದ್ಯೋಗಿಗಳು ಅಥವಾ ಉದ್ಯೋಗರಹಿತ ಪದವೀಧರರಾಗಿದ್ದರು.

 

ವಿದ್ಯಾರ್ಥಿಗಳು ಈ ಶಿಕ್ಷಣವನ್ನು ಅರೆಕಾಲಿಕ ಶಿಕ್ಷಣವೆಂದು ಪರಿಗಣಿಸುತ್ತಿದ್ದರು. ಹಲವು ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ತಮ್ಮ ಉದ್ಯೋಗಕ್ಕಾಗಿ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಕಾನೂನು ವೃತ್ತಿಗೆ ಸಂಬಂಧಿಸಿದಂತೆ ಅನೇಕ ನಗೆಹನಿಗಳಿದ್ದವು.ಅವುಗಳಲ್ಲಿ ಒಂದು ಹೀಗಿದೆ: ಕಾನೂನು ಪದವೀಧರ ಉದ್ಯೋಗ ಪಡೆಯದಿದ್ದಲ್ಲಿ ವಕೀಲರಾಗುತ್ತಿದ್ದರು. ವಕೀಲ ವೃತ್ತಿಯಲ್ಲಿ ವಿಫಲತೆಯನ್ನು ಕಂಡಾಗ ನ್ಯಾಯಾಧೀಶರಾಗುತ್ತಿದ್ದರು. ಇಲ್ಲದಿದ್ದಲ್ಲಿ ಕಾನೂನು ಉಪನ್ಯಾಸಕರಾಗುತ್ತಿದ್ದರು.ಆದರೆ, ಕಾನೂನು ಶಿಕ್ಷಣವು ಜಾಗತೀಕರಣದ ಹಿನ್ನೆಲೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. 1998ರ ನಂತರ ಕಾನೂನು ಶಿಕ್ಷಣದಲ್ಲಿ ಸಮಗ್ರ ಸುಧಾರಣೆಗಳಾಗಿದ್ದು ಕಾಲೇಜುಗಳು ಪೂರ್ಣಕಾಲಿಕ ವೃತ್ತಿಪರ ಕಾಲೇಜುಗಳಾಗಿವೆ.ನ್ಯಾಯ ಆಡಳಿತ ವ್ಯವಸ್ಥೆಗೆ ಪೂರಕವಾಗಿರುವ ಕಾನೂನಿನ ಶಿಕ್ಷಣವನ್ನು ಈ ಕಾಲೇಜುಗಳು ನೀಡುತ್ತಾ ಇವೆ. ಇತ್ತೀಚೆಗೆ ಸೇವಾಕ್ಷೇತ್ರವು ಬಹಳ ವಿಶಾಲವಾಗಿ ಬೆಳೆಯುತ್ತಿದ್ದು ಕಾನೂನು ಶಿಕ್ಷಣ ಪಡೆದವರಿಗೆ ಸಾಕಷ್ಟು ಅವಕಾಶಗಳು ಸಿಗುವಂತಾಗಿದೆ.ಜಾಗತಿಕ ಸ್ಪರ್ಧೆಗೆ ತಕ್ಕಂತೆ ಪಠ್ಯಕ್ರಮ ರೂಪಿಸಲಾಗಿದೆ. ಕೇವಲ ಅತ್ಯಾಧುನಿಕ ಕಾನೂನು ಶಿಕ್ಷಣ ನೀಡುವುದಲ್ಲದೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ರೂಢಿಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವನ್ನು ನಿರ್ವಹಿಸಲು ಹಲವಾರು ನೈಪುಣ್ಯತೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಸರ್ಕಾರಿ ಸಂಸ್ಥೆ, ಬಹು ರಾಷ್ಟ್ರೀಯ ಕಂಪನಿ, ಸೇನೆ ಹಾಗೂ ವಿವಿಧ  ಕ್ಷೇತ್ರಗಳಲ್ಲಿ  ಸೇವೆಯನ್ನು ಸಲ್ಲಿಸಲು ಇವತ್ತಿನ ಕಾನೂನು ವಿದ್ಯಾರ್ಥಿಗಳನ್ನು  ತಯಾರು ಮಾಡುವ ಹೊಣೆಯನ್ನು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸಮರ್ಪಕವಾಗಿ ನಿರ್ವಹಿಸುತ್ತಿವೆ.ವಕೀಲ ವೃತ್ತಿ ಎಂದಿಗೂ `ಎವರ್ ಗ್ರೀನ್~. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕಾನೂನಿನ ಅರಿವನ್ನು ಹೊಂದುವುದಕ್ಕೆ ಕಾನೂನು ಕಾಲೇಜುಗಳು ಅವಶ್ಯವಾಗಿ ಸಹಕಾರಿಯಾಗುತ್ತವೆ. ಎಲ್ಲಿಯವರೆಗೆ ವ್ಯಕ್ತಿ ಸಂಘ ಜೀವಿಯಾಗಿರುತ್ತಾನೋ ಅಲ್ಲಿಯವರೆಗೆ ಕಾನೂನಿನ ಅಸ್ತಿತ್ವ ಇರುತ್ತದೆ.

ಕಾನೂನು ವಿಶ್ವವಿದ್ಯಾಲಯ

ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ರಂಗದಲ್ಲಿಯೂ ಕಾನೂನಿನ ಪಧವೀಧರರಿಗೆ ಹಲವಾರು ಅವಕಾಶಗಳು ಇವೆ.  ಐದು ವರ್ಷದ ಕಾನೂನು ಶಿಕ್ಷಣ ಹಾಗೂ 3 ವರ್ಷದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿ ಹಲವಾರು ಕಾನೂನು ವಿಶ್ವವಿದ್ಯಾಲಯಗಳಿದ್ದು  ಕರ್ನಾಟಕದಲ್ಲಿ ಮೊಟ್ಟ ಮೊದಲ ಕಾನೂನು ವಿಶ್ವವಿದ್ಯಾಲಯವನ್ನು 2009-10ನೇ ಸಾಲಿನಿಂದ ಹುಬ್ಬಳಿಯ ನವನಗರದಲ್ಲಿ ಪ್ರಾರಂಭಿಸಲಾಗಿದೆ. ಇದರ  ಸಂಸ್ಥಾಪಕ ಕುಲಪತಿಯಾಗಿ ಡಾ.ಜೆ.ಎಸ್.ಪಾಟೀಲ್ ಅವರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಕಾನೂನು ಶಿಕ್ಷಣದ ಕ್ಷೇತ್ರದಲ್ಲಿ ಸುಮಾರು 13 ರಾಷ್ಟ್ರೀಯ ಕಾನೂನಿನ ಶಾಲೆಗಳನ್ನು ನಡೆಸುತ್ತಿರುವ ವಿವಿಧ ಕಾನೂನು ವಿಶ್ವವಿದ್ಯಾಲಯಗಳಿದ್ದು ಜೊತೆಗೆ ಕೆಲವು ರಾಜ್ಯಗಳ್ಲ್ಲಲೂ ಕಾನೂನು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

ಕಾನೂನು ಪದವೀಧರರಿಗೆ ಇರುವ ಉದ್ಯೋಗಾವಕಾಶಗಳು ಯಾವ ಬಗೆಯವು?

ವಕೀಲಿ ವೃತ್ತಿ  

 ಕಾನೂನು ಪದವಿ ಪಡೆದ ನಂತರ ಪದವೀಧರರು ತಮ್ಮ ಇಚ್ಛೆಗನುಗುಣವಾಗಿ ವಿಶೇಷ ಕ್ಷೇತ್ರದಲ್ಲಿ ವೃತ್ತಿಯನ್ನು ಪ್ರಾರಂಭಿಸಬಹುದು.  ಉದಾಹರಣೆಗೆ ಆಡಳಿತಾತ್ಮಕ ಟ್ರಿಬ್ಯೂನಲ್‌ಗಳು, ತೆರಿಗೆ ಟ್ರಿಬ್ಯೂನಲ್ ಗಳು, ಗ್ರಾಹಕರ ಸಂರಕ್ಷಣಾ ವೇದಿಕೆ, ಕಾರ್ಮಿಕ ಟ್ರಿಬ್ಯೂನಲ್‌ಗಳಲ್ಲಿ ಪ್ರಾಕ್ಟೀಸ್ ಮಾಡಬಹುದು.ನ್ಯಾಯಾಲಯಗಳಲ್ಲಿ  ಪೂರ್ಣ ಪ್ರಮಾಣದ ವೃತ್ತಿಯನ್ನು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಲ್ಲಿ, ಕೆಳಹಂತದ ನ್ಯಾಯಾಲಯಗಳು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನವರೆಗೆ ಪ್ರಾಕ್ಟೀಸ್ ಮಾಡಲು ಸಾಕಷ್ಟು ಅವಕಾಶವಿರುತ್ತದೆ.

           

ನ್ಯಾಯಾಧೀಶ ಹುದ್ದೆ 

ಕಾನೂನು ಪದವಿ ಪಡೆದ ನಂತರ ಮೊದಲನೆಯದಾಗಿ ಸಿವಿಲ್ ಜಡ್ಜ್ ಜೂನಿಯರ್ ಡಿವಿಷನ್ ಅಥವಾ ಪ್ರಥಮ ದರ್ಜೆ ಮ್ಯೋಜಿಸ್ಟ್ರೇಟ್ ಆಗಿ ನೇಮಕಾತಿಗೆ ಅವಕಾಶವಿರುತ್ತದೆ. ಎರಡನೆಯದಾಗಿ ನೇರವಾಗಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ನೇಮಕಾತಿಗೆ ಅವಕಾಶವಿರುತ್ತದೆ.ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ನೇರವಾಗಿ ನೇಮಕಾತಿ ಹೊಂದಲು ಕನಿಷ್ಠ 7 ವರ್ಷದ ವಕೀಲ ವೃತ್ತಿಯ ಅನುಭವವಿರಬೇಕಾಗುತ್ತದೆ. ವಕೀಲ  ವೃತ್ತಿಯ 10 ವರ್ಷಗಳ ಅನುಭವದ ನಂತರ ವಕೀಲರು ತಮ್ಮ ಅರ್ಹತೆಯ ಆಧಾರದ ಮೇಲೆ ಹೈಕೋರ್ಟ್ ನ್ಯಾಯಾಧೀಶರಾಗಬಹುದು.

 

ಪ್ರಾಸಿಕ್ಯೂಟರ್

ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಡೈರೆಕ್ಟರೇಟ್ ಆಫ್ ಪ್ರಾಸಿಕ್ಯೂಷನ್ ಇಲಾಖೆಯ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ರಾಜ್ಯದ ಪರವಾಗಿ ಪ್ರಕರಣಗಳನ್ನು ನಡೆಸಲು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ನೇಮಕ ಮಾಡಲಾಗುತ್ತದೆ.

 

ಕಾನೂನು ಪದವೀಧರರು ತಮ್ಮ 3 ವರ್ಷದ ಕಾನೂನು ವೃತ್ತಿಯ ಅನುಭವದ ಆಧಾರದ ಮೇಲೆ ಹಾಗೂ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಪ್ರಾಸಿಕ್ಯೂಷನ್ ಇಲಾಖೆಯಲ್ಲಿ  ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟ್‌ರ್ ಆಗಿ ಸೇವೆ ಸಲ್ಲಿಸಬಹುದು.

 

ರಾಜ್ಯ ಸರ್ಕಾರವು ವಕೀಲರ ಸಂಘದಿಂದ ಕೆಲವು ಸದಸ್ಯರನ್ನು ಆದ್ಯತೆಯ ಮೇರೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ನೇಮಕ ಮಾಡಬಹುದು.

ಕಾನೂನು ಅಧಿಕಾರಿ

 ಸರ್ಕಾರವು ತನ್ನ ದಿನನಿತ್ಯದ ಆಡಳಿತ ಹಾಗೂ ವ್ಯವಹಾರಗಳನ್ನು ನಡೆಸಲು ಕಾನೂನು ಪದವೀಧರರನ್ನು ಕಾನೂನು ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಬಹುದು.

 

ಉದಾಹರಣೆಗೆ : ಸೆಂಟ್ರಲ್ ಬ್ಯೂರೊ ಆಫ್ ಇನವೆಸ್ಟಿಗೇಷನ್(ಸಿಬಿಐ). ಈ ಇಲಾಖೆಯು ತನ್ನ ಇಲಾಖೆಯ ಕೇಸ್ ಗಳನ್ನು ನಡೆಸಲು ಹಾಗೂ ಸಲಹೆಗಳನ್ನು ನೀಡಲು ವಕೀಲರನ್ನು ನೇಮಕ ಮಾಡಿಕೊಳ್ಳಬಹುದು.

ಪೋಲಿಸ್, ಸಿ.ಓ.ಡಿ ಇಲಾಖೆಗಳಲ್ಲಿ ಕಾನೂನು ಪದವೀಧರರನ್ನು ಇನ್ಸ್‌ಪೆಕ್ಟರ್ ಆಫ ಪೋಲಿಸ್ ಲೆವಲ್‌ನಲ್ಲಿ ಅಪರಾಧಗಳ ತನಿಖಾಧಿಕಾರಿಯಾಗಿ ನೇಮಿಸಿಕೊಳ್ಳಬಹುದು. ಸಾರ್ವಜನಿಕ ಕ್ಷೇತ್ರಗಳಾದ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳಲ್ಲಿ  ಕಾನೂನು ಅಧಿಕಾರಿಗಳಾಗಿ ನೇಮಕಾತಿ ಹೊಂದಬಹುದು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ಅರ್ಬನ್ ಇನ್‌ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ ಕಾರ್ಪೊರೇಷನ್, ಕರ್ನಾಟಕ ಪವರ್ ಕಾರ್ಪೊರೇಷನ್ ಇತ್ಯಾದಿ ಇಲಾಖೆಗಳಲ್ಲಿ ಅವುಗಳ ಪರ ವಕೀಲರಾಗಿ ಕೇಸುಗಳನ್ನು ನಡೆಸುವ ಅವಕಾಶವಿರುತ್ತದೆ. ಇನ್‌ಷೂರೆನ್ಸ್ ಕಂಪನಿಯ ಪರ ವಕೀಲರಾಗಿ ಸೇವೆಯನ್ನು ಸಲ್ಲಿಸುವ ಅವಕಾಶವಿದೆ.ಸೇನೆಯಲ್ಲಿ...  

ಸೇನಾ ಸೇವೆಗಳಲ್ಲಿ ಆರ್ಮಿ ಟ್ರಿಬ್ಯೂನಲ್ಸ್  ಮುಂದೆ ನಡೆಯುವ ಸೇನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಅವಕಾಶವಿರುತ್ತದೆ.ಕಾನೂನು ಸಂಸ್ಥೆಗಳಲ್ಲಿ  


1990ಕ್ಕೂ ಹಿಂದೆ ಕಾನೂನು ಪದವೀಧರರು ವಕೀಲ ವೃತ್ತಿಯನ್ನು ಮಾತ್ರ ಅವಲಂಬಿಸಿದ್ದರು. ಜಾಗತೀಕರಣದ ಪ್ರಭಾವದಿಂದ ಈಗ ಕಾನೂನು ಪದವೀಧರರಿಗೆ ಹಲವಾರು ಅವಕಾಶಗಳು ಲಭ್ಯವಿವೆ. ಕಾನೂನು ಪದವೀಧರರು ಈಗ ಛೇಂಬರ್ ಪ್ರಾಕ್ಟೀಸ್ ಹಾಗೂ ನ್ಯಾಯಾಲಯದಲ್ಲಿ ವೃತ್ತಿಯನ್ನು ಮಾಡಬಹುದಾಗಿದೆ.ಕಾನೂನು ಸಂಸ್ಥೆಗಳು (ಲಾ ಫರ್ಮ್) ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿದ್ದು ಅವರ ಅರ್ಹತೆಯ ಅನುಭವದ ಆಧಾರದ ಮೇಲೆ ಸಂಬಳವನ್ನು ನೀಡುತ್ತಿವೆ. ಕಾನೂನು ಪದವೀಧರರು ಸಾಮಾನ್ಯವಾಗಿ ಕಾನೂನು ಸಂಸ್ಥೆಯಿಂದ ತಿಂಗಳಿಗೆ ರೂ.30,000ದಿಂದ ರೂ.50,000ದವರೆಗೆ ಸಂಬಳವನ್ನು ಪಡೆಯುತ್ತಾರೆ. ಕಾನೂನಿನ ಕ್ಷೇತ್ರದಲ್ಲಿ ವಿಶೇಷತೆ ಹೊಂದಿದ ಪದವೀಧರರು ಕಾನೂನು ಸಂಸ್ಥೆಯಿಂದ ವರ್ಷಕ್ಕೆ 10ರಿಂದ 15ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ.

 

ರಾಷ್ಟ್ರೀಯ ಮಟ್ಟದಲ್ಲಿ ಅಮರ್ ಚಂದ್ ಮಂಗಲ್ ದಾಸ್, ಎ ಜಡ್ ಬಿ ಪಾರ್ಟ್‌ನರ್ಸ್, ಜಿಯಾ ಮೋದಿ, ಫಾಕ್ಸ್ ಆಂಡ್ ಮಂಡಲ್, ಸಾಗರ್ ಅಸೋಸಿಯೇಟ್ಸ್ ಲೂತ್ರಾ ಆಂಡ್ ಲೂತ್ರಾ ಹಾಗೂ ಇನ್ನಿತರ ಹಲವಾರು ಕಾನೂನು ಸಂಸ್ಥೆಗಳಲ್ಲಿ ಹಾಗೂಅಂತರರಾಷ್ಟ್ರೀಯ ಮಟ್ಟದಲ್ಲಿ, ಮೋರ್ಸನ್ ಆಂಡ್ ವಾಕರ್, ಕ್ಲಿಫೋರ್ಡ್ ಆಂಡ್ ಛಾನ್ಸ್, ಮೇಯರ್ ಹಾಗೂ ಇನ್ನೂ ಹಲವಾರು ಕಾನೂನು ಸಂಸ್ಥೆಗಳು ಒಂದು ಸಾವಿರದಿಂದ ಎರಡು ಸಾವಿರದವರೆಗೆ ಕಾನೂನು ಪದವೀಧರರನ್ನು ವಿವಿಧ ವಿಭಾಗಗಳಲ್ಲಿ ನೇಮಕಮಾಡಿಕೊಳ್ಳುತ್ತವೆ. ಕಾರ್ಪೊರೇಟ್ ಆಸ್ಪತ್ರೆಗಳಾದ ಮಣಿಪಾಲ್, ಅಪೊಲೊ ಇತ್ಯಾದಿ ಆಸ್ಪತ್ರೆಗಳಲ್ಲಿ ಕಾನೂನು ಪದವೀಧರರನ್ನು ನೇಮಕ  ಮಾಡಿಕೊಳ್ಳಲಾಗುತ್ತದೆ.ಖಾಸಗಿ ಕಾನೂನು ಅಧಿಕಾರಿ

ಖಾಸಗಿ ಇಂಡಸ್ಟ್ರಿಗಳಲ್ಲಿ ಕಾನೂನು ಪದವೀಧರರು ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವಿದೆ. ಕಾನೂನು ಪದವೀಧರರ ಅರ್ಹತೆ ಅನುಭವದ ಆಧಾರದ ಮೇಲೆ ಹಲವಾರು ಖಾಸಗಿ ಇಂಡಸ್ಟ್ರಿಗಳು ಕಾನೂನಿನ ಸಲಹೆ ನೀಡಲು ಕಾನೂನು ಪದವೀಧರರನ್ನು  ನೇಮಕ ಮಾಡಿಕೊಳ್ಳುತ್ತಾರೆ.

 

ಉದಾಹರಣೆಗೆ: ಇನ್ಫೊಸಿಸ್ ಕಂಪೆನಿಯು ತನ್ನದೇ ಆದ ಕಾನೂನು ವಿಭಾಗವನ್ನು ಹೊಂದಿದ್ದು 15 ರಿಂದ 20 ವಕೀಲರು ಈ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸರ್ಕಾರೇತರ ಸಂಸ್ಥೆಗಳಲ್ಲಿ

ಕಾನೂನು ಪದವೀಧರರು ವಿವಿಧ ಸರ್ಕಾರೇತರ ಸಂಸ್ಥೆ  (ಎನ್‌ಜಿಓ)ಗಳಲ್ಲಿ ಹಲವು ವಿಷಯಗಳಲ್ಲಿ ಸೇವೆ ಸಲ್ಲಿಸಬಹುದು. ಮಾನವ ಹಕ್ಕುಗಳು, ಪರಿಸರ ರಕ್ಷಣೆ, ಮಹಿಳೆ ವಿರುದ್ಧ ದೌರ್ಜನ್ಯ ಇನ್ನೂ ಹಲವಾರು ಕ್ಷೇತ್ರಗಳ ವಿಷಯದಲ್ಲಿ ಸಲಹೆಗಾರರಾಗಿ ಹಾಗೂ ಸಂಶೋಧಕರಾಗಿ ಕಾನೂನು ಮಾಡುವ ಪ್ರಕ್ರಿಯೆಗೆ ಸಹಾಯಕರಾಗಿ ಸೇವೆ ಸಲ್ಲಿಸಬಹುದು.ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ

ಪ್ರತಿಭಾನ್ವಿತ ಕಾನೂನು ಪದವೀಧರರಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಾದ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್, ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್, ಇಂಟರ್‌ನ್ಯಾಷನಲ್ ರೆಡ್ ಕ್ರಾಸ್ ಸೊಸೈಟಿ, ಯುನೈಟೆಡ್ ನ್ಯಾಷನಲ್ ಡೆವಲಪಮೆಂಟ್ ಪ್ರೋಗ್ರಾಂ ಇತ್ಯಾದಿಗಳಲ್ಲಿ ಸೇವೆ ಸಲ್ಲಿಸಬಹುದು.ಪ್ರಸ್ತುತ  ಯುನೈಟೆಡ್ ನ್ಯಾಷನಲ್ ಡೆವಲಪಮೆಂಟ್ ಪ್ರೋಗ್ರಾಂ ಒಂದು ದೊಡ್ಡ ಪ್ರಾಜೆಕ್ಟ್ ಆದ  `ಅಕ್ಸೆಸ್ ಟು ಜಸ್ಟೀಸ್~  ( ಚ್ಚ್ಚಛಿ ಠಿಟ ್ಜ್ಠಠಿಜ್ಚಿಛಿ )ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭಿಸಲು  ಯೋಜಿಸಲಾಗಿದೆ. ಇದರ ಜೊತೆಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆ ಕುರಿತು ಕಾನೂನಿನಲ್ಲಿ ಸಂಶೋಧನೆ ಮಾಡುವ ಅವಕಾಶವಿದೆ.ಮಧ್ಯಸ್ಥಗಾರ

ವೃತ್ತಿ ನಿರತ ವಕೀಲರು ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಹಾಗೂ ನ್ಯಾಯಾಲಯಕ್ಕೆ ಪ್ರಕರಣಗಳನ್ನು ಸಲ್ಲಿಸುವ ಮೊದಲು ಪ್ರಕರಣಗಳಿಗೆ ಬೇಕಾದ ಸಲಹೆಗಳನ್ನು ನೀಡಲು ಮಧ್ಯಸ್ಥಗಾರರಾಗಿ ಲೋಕ್ ಅದಾಲತ್ ನಲ್ಲಿಯೂ ಸಹ ಸೇವೆ ಸಲ್ಲಿಸಬಹುದು.ಕಾನೂನು ಸಲಹೆಗಾರ 

ಈ ಸೇವೆಯು ಕಾನೂನು ವೃತ್ತಿಯಲ್ಲಿ ಇತ್ತೀಚೆಗೆ ಬಹಳ ಬೆಳವಣಿಗೆಯಾಗುತ್ತಿದೆ.  ಅನೇಕರು ತಮ್ಮ  ವೈಯುಕ್ತಿಕ, ಕುಟುಂಬದ ಆಸ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಲಹೆಗಳಿಗೆ ಕಾನೂನಿನ ಪರಿಹಾರವನ್ನು ಕಂಡುಕೊಳ್ಳಲು ಸಲಹೆಗಾಗಿ ವಕೀಲರನ್ನು ಸಂಪರ್ಕಿಸುತ್ತಾರೆ.  ಇಂತಹ ಸಮಸ್ಯೆಗಳಿಗೆ ವಕೀಲರು ಕಾನೂನಿನ ಸಲಹೆ ನೀಡಿ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡುವ ಕಾನೂನಿನ ಶಿಲ್ಪಿಗಳಾಗಿ ಸೇವೆ ಸಲ್ಲಿಸಬಹುದು.ಸಂಧಾನಕಾರ

ಇತ್ತೀಚಿನ ದಿನಗಳಲ್ಲಿ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಹಾಗೂ ಕಂಪೆನಿ ವಿಷಯಗಳಾದ ವಿಭಿನ್ನಗೊಳಿಸುವಿಕೆ, ವಿಸರ್ಜನೆಗೊಳಿಸುವಿಕೆ, ಇನ್ನೊಂದು ಕಂಪೆನಿಯನ್ನು ಕೊಂಡುಕೊಳ್ಳುವ ವಿಷಯ ಇತ್ಯಾದಿಗಳಲ್ಲಿ ವಕೀಲರು ಸಂಧಾನಕಾರರಾಗಿ ಸೇವೆ ಸಲ್ಲಿಸಬಹುದು. ಅಂತರರಾಷ್ಟ್ರೀಯ ಕಂಪೆನಿಗಳಲ್ಲಿ ಈ ಅವಕಾಶಗಳು ಹೆಚ್ಚಾಗಿ ಲಭ್ಯವಿವೆ.ಕಾನೂನಿನ ಸಂಶೋಧನೆ, ಸುಧಾರಣೆ

 ಬಹಳಷ್ಟು ವರ್ಷಗಳ ಕಾಲ ಕಾನೂನಿನ ಸಂಶೋಧನೆಯನ್ನು ಗ್ರಂಥಾಲಯದಲ್ಲಿ ಪುಸ್ತಕಗಳ ಸಹಾಯದಿಂದ ಮಾತ್ರ ಮಾಡುತ್ತಿದ್ದರು.  ಆದರೆ ಇತ್ತೀಚೆಗೆ ಸಾಮಾಜಿಕ ಬದಲಾವಣೆಯ ಹಿನ್ನೆಲೆಯಲ್ಲಿ ಗ್ರಂಥಾಲಯ ಸಹಾಯದ ಸಂಶೋಧನೆ ಜೊತೆಗೆ ವಾಸ್ತವಿಕ ಸಂಶೋಧನೆ (ಎಂಪಿರಿಕಲ್ ರಿಸರ್ಚ್)ಗೂ ಬಹಳಷ್ಟು ಅವಕಾಶವಿದೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದಕ್ಕೆ ವಾಸ್ತವಿಕ ಸಂಶೋಧನೆ ಸಹಕಾರಿಯಾಗಿದೆ.

 

ಉದಾಹರಣೆಗೆ: ಸಾಮಾಜಿಕ ಭದ್ರತೆ ಮಸೂದೆ, ಅಸಂಘಟಿತ ವಲಯದ ಕೆಲಸಗಾರರಿಗೆ 2005ರ ಮಸೂದೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ವಾಸ್ತವಿಕ ಸಂಶೋಧನೆ ಮಾಡುವ ಅವಕಾಶ ಸ್ನಾತಕೋತ್ತರ ಪದವೀಧರರಿಗಿದೆ.ಲಾ ಕಮೀಷನ್ ಆಫ್ ಇಂಡಿಯಾ, ಟಾಟಾ ಇನ್‌ಸ್ಟಿಟ್ಯೂಟ್, ಶ್ರೀರಾಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ರಿಲೇಷನ್ಸ್, ಇಂಡಿಯನ್ ಲಾ ಇನ್‌ಸ್ಟಿಟ್ಯೂಟ್ ಇತ್ಯಾದಿಗಳಲ್ಲಿ ಸಂಶೋಧನೆ ಮಾಡುವ ಅವಕಾಶವಿದೆ.ಲೀಗಲ್ ಪ್ರೊಸೆಸ್ ಔಟ್‌ಸೋರ್ಸಿಂಗ್


ಕಾನೂನು ಪದವೀಧರರಿಗೆ ಇತ್ತೀಚೆಗೆ  ಪ್ರಚಲಿತವಿರುವ ಬಹಳಷ್ಟು ಅವಕಾಶಗಳು ಇರುವ ಕ್ಷೇತ್ರವೆಂದರೆ ಲೀಗಲ್ ಪ್ರೊಸೆಸ್ ಔಟ್ ಸೋರ್ಸಿಂಗ್ (ಎಲ್.ಪಿ.ಓ). ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿವಿಧ ದೇಶಗಳ ಜೊತೆ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸೇವೆಯನ್ನು ಸಲ್ಲಿಸುವ ಅವಕಾಶವಿದೆ. ಅಮೆರಿಕಾ ಮತ್ತು ಇಂಗ್ಲೆಂಡ್ ದೇಶಗಳು ಹೆಚ್ಚಾಗಿ ತಮ್ಮ ವ್ಯವಹಾರಗಳಿಗೆ ವಕೀಲರ ಕಾನೂನು ಸೇವೆಯನ್ನು ಪಡೆಯುತ್ತಿವೆ.ಲೀಗಲ್ ಪ್ರೊಸೆಸ್ ಔಟ್ ಸೋರ್ಸಿಂಗ್ ಕಂಪೆನಿಗಳು ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಕೊಲ್ಕೊತ್ತಾ  ಮುಂತಾದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇದ್ದು ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿವೆ.ಕಾನೂನಿನ ಪತ್ರಕರ್ತರು

ಪತ್ರಿಕೋದ್ಯಮ ಇವತ್ತು ಒಂದು ದೊಡ್ಡ ಉದ್ಯಮವಾಗಿ ಬೆಳವಣಿಗೆ ಆಗಿದೆ. ಎಲ್ಲಾ ಪತ್ರಿಕೆಗಳು ದಿನನಿತ್ಯದ ಸಮಸ್ಯೆಗಳು ಹಾಗೂ ಕಾನೂನಿನ ವಿಚಾರಗಳನ್ನು ವರದಿ ಮಾಡುತ್ತಿವೆ.ತೆರಿಗೆ ವಿಷಯಗಳು, ಷೇರು ವಿನಿಮಯ, ಗ್ರಾಹಕರ ರಕ್ಷಣೆ, ವೈವಾಹಿಕ ವಿವಾದಗಳು, ವ್ಯವಹಾರಕ್ಕೆ ಸಂಬಂಧ ಪಟ್ಟ ವಿವಾದಗಳು, ನಾಯಾಲಯಗಳ ತೀರ್ಪು, ಸರ್ಕಾರದ ಮಸೂದೆಗಳನ್ನು  ಕುರಿತಂತೆ ವಿವರವಾದ ವರದಿಗಳಿಗಾಗಿ ಕಾನೂನು ಪದವೀಧರರು ಪತ್ರಕರ್ತರಾಗಿ ದೊಡ್ದ ದೊಡ್ಡ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ.ಸುಪ್ರೀಂ ಕೋರ್ಟ್‌ನಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರು ನೇರವಾಗಿ ಪ್ರಕರಣಗಳನ್ನು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ತೆಗೆದುಕೊಳ್ಳಲು ಅಡ್ವೊಕೇಟ್ ಆನ್ ರೆಕಾರ್ಡ್ ಆಗಿ ಹಾಗೂ ವಕಾಲತ್‌ಗೆ ಸಹಿ ಮಾಡಲು ವಕೀಲರುಗಳಿಗೆ ಅವಕಾಶವಿದೆ.ಕಾನೂನು ಸೇವೆಗಳ ಪ್ರಾಧಿಕಾರ: ಕಾನೂನು ಸೇವಾ ಪ್ರಾಧಿಕಾರಗಳು ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 1997ರಿಂದ ಸ್ಥಾಪನೆಯಾಗಿವೆ. ಇದರ ಉದ್ದೇಶ ಬಡವರಿಗೆ ಉಚಿತ ಕಾನೂನಿನ ನೆರವು ನೀಡುವುದು. ಬಡವರ ಕೇಸ್‌ಗಳನ್ನು ನಡೆಸಲು ಸರ್ಕಾರವೇ ವಕೀಲರನ್ನು ನೇಮಕ ಮಾಡಿ ಅವರಿಗೆ ಸಂಭಾವನೆ ಕೂಡ ನೀಡುತ್ತದೆ.ಭಾರತದಲ್ಲಿ ಸುಮಾರು ಶೇಕಡ 60ಕ್ಕಿಂತ ಹೆಚ್ಚಿನ ಕಕ್ಷಿದಾರರು ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ವಕೀಲರುಗಳಿಗೆ ಬಹಳಷ್ಟು ಅವಕಾಶವಿರುತ್ತದೆ.ವಿಚಾರಣಾ ಅಧಿಕಾರಿ: ವಕೀಲರುಗಳು ಸಾರ್ವಜನಿಕ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ನೌಕರರಿಗೆ ಸಂಬಂಧಿಸಿದ ವಿಚಾರಣೆಯನ್ನು ನಡೆಸಲು ವಿಚಾರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವಿರುತ್ತದೆ.ಕಾನೂನಿನ ಉಪನ್ಯಾಸಕರು: ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 55 ಅಂಕ ಪಡೆದಿರುವ, ನೆಟ್ ಅಥವ್ ಪಿ.ಎಚ್.ಡಿ., ಪದವಿಯನ್ನು ಪಡೆದುಕೊಂಡಿರುವ ಸ್ನಾತಕೋತ್ತರ ಪದವೀಧರರು ಕಾನೂನಿನ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ,ಯು.ಜಿ.ಸಿ, ಲಾ ಕಮಿಷನ್ ಹಾಗೂ ಇತರೆ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. 

ಕಾನೂನಿನ ದಸ್ತಾವೇಜು ಹಾಗೂ ದಾಖಲೆಗಳನ್ನು ರಚಿಸುವ ಅವಕಾಶ ಪ್ರತಿ ನಿತ್ಯದ ವ್ಯವಹಾರಗಳಲ್ಲಿ, ಆಸ್ತಿಗೆ ಸಂಬಂಧ ಪಟ್ಟ ವಿಚಾರಗಳಿಗೆ ದಾಖಲೆಗಳನ್ನು ರಚಿಸುವ ಹಾಗೂ ನೊಂದಾವಣೆ ಮಾಡಿಸುವ ಕಾರ್ಯ ಪ್ರಮುಖವಾದುದು. ಹಿಂದೆ ದಾಖಲೆಗಳನ್ನು ಕಾನೂನಿನ ಅರಿವು ಹೊಂದದೆ ಪತ್ರಗಳನ್ನು ಬರೆಸುತ್ತಿದ್ದು ಅದರಿಂದ ಹಲವಾರು ಕಾನೂನಿನ ಸಮಸ್ಯೆಗಳು ಉಂಟಾಗುತ್ತಿದ್ದವು. ಆ್ದ್ದದರಿಂದ ಇತ್ತೀಚೆಗೆ ಯಾವುದೇ ದಾಖಲೆಯನ್ನು ರಚಿಸುವಾಗ ವಕೀಲರ ಅವಶ್ಯಕತೆ ಬಹಳ ಇರುತ್ತದೆ.ರಿಯಲ್‌ಎಸ್ಟೇಟ್ ವ್ಯವಹಾರಗಳು, ಟ್ರಸ್ಟ್  ಡೀಡ್‌ಗಳು, ಪಾರ್ಟ್‌ನರ್‌ಷಿಪ್ ಡೀಡ್‌ಗಳು, ವಿಲ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪತ್ರವನ್ನು ರಚಿಸಲು ಹಾಗೂ ನೊಂದಾವಣೆ ಮಾಡಿಸಲು ವಕೀಲರುಗಳಿಗೆ ಬಹಳಷ್ಟು ಅವಕಾಶಗಳಿವೆ.ಮೇಲ್ಕಂಡ ಎಲ್ಲಾ ಅವಕಾಶಗಳು  ಕಾನೂನಿನ ಪದವೀಧರರಿಗೆ ಲಭ್ಯವಿರುವುದರಿಂದ ಕಾನೂನಿನ ಪದವೀಧರರು ವೃತ್ತಿಯೊಂದನ್ನೇ ಅವಲಂಬಿಸದೆ ತಮ್ಮ ಪ್ರತಿಭೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲೂ ಸದುಪಯೋಗ ಪಡಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.