ಬುಧವಾರ, ಏಪ್ರಿಲ್ 14, 2021
32 °C

ಕಾನೂನು ಸುವ್ಯವಸ್ಥೆ ಕುಸಿತ: ಆರ್‌ಪಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾಡಳಿತ ಮತ್ತು ಪೊಲೀಸ್ ವೈಫಲ್ಯದಿಂದ ಗುಲ್ಬರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ. ಉತ್ತಮ ಅಧಿಕಾರಿಗಳನ್ನು ಸರ್ಕಾರ ನಿಯುಕ್ತಿಗೊಳಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ರಾಜ್ಯ ಘಟಕವು ಆಗ್ರಹಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ, `ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಸಂಶಯಾಸ್ಪದ ಸಾವಿನ ತನಿಖೆ ಮತ್ತು ಪ್ರವೀಣ ರಾಠೋಡ ಎಂಬ ದಲಿತ ವಿದ್ಯಾರ್ಥಿ ಕೊಲೆ ಆರೋಪಿಗಳ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಉದಾಹರಣೆ~ ಎಂದರು. ಜಿಲ್ಲೆಯಲ್ಲಿ ಮರಳು ದಂಧೆ, ಸುಲಿಗೆ, ಸರ ಕಳವು, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಹುಬ್ಬಳ್ಳಿಯ ನಳಂದ ಫೌಂಡೇಶನ್ ಪಾಲಿಟೆಕ್ನಿಕ್ ವಿದ್ಯಾರ್ಥಿ, ಸರ್ವೋದಯ ಕಾಲೊನಿ ಅಂಬಾದಾಸ್ ಪುತ್ರ ಪ್ರವೀಣ ರಾಠೋಡ ಕೊಲೆ ನಡೆದು ಒಂದು ತಿಂಗಳಾದರೂ ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಆರೋಪಿಸಿದರು.ರಾಹುಲ್ ಹೊನ್ನಳ್ಳಿ, ವಿನೋದ ಗಿರಣಿ, ನಾಗೇಶ ಗಿರಣಿ, ವಿನಾಯಕ ಕಂಬಳಿ ಮತ್ತಿತರರು ಸೇರಿ ಜುಲೈ 4ರಂದು ಪ್ರವೀಣ ರಾಠೋಡ, ಹರ್ಷವರ್ಧನ ತಳವಾರ ಮತ್ತು ಬಸವರಾಜ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.ಇದರಿಂದ ಗಂಭೀರ ಗಾಯಗೊಂಡ ಪ್ರವೀಣ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಬಸವರಾಜ ಸಾವು-ಬದುಕಿನ ನಡುವ ಹೋರಾಡುತ್ತಾ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾನೆ. ಆರೋಪಿಗಳು ಬಹಿರಂಗವಾಗಿ ತಿರುಗಾಡುತ್ತಿದ್ದರೂ  ಪೊಲೀಸರು ಈ ತನಕ ಬಂಧಿಸಿಲ್ಲ. ಮೃತ ಪ್ರವೀಣ ರಾಠೋಡ  ಕುಟುಂಬಕ್ಕೆ ಜಿಲ್ಲಾಡಳಿತ ಪರಿಹಾರವನ್ನೂ ನೀಡಿಲ್ಲ ಎಂದು ದೂರಿದರು.ಜಿಲ್ಲಾಡಳಿತ ಹಾಗೂ ಪೊಲೀಸರು ಸ್ಪಂದಿಸದೇ ಇದ್ದರೆ ಆಗಸ್ಟ್ 13 ಶಹಾಬಾದ್‌ನಿಂದ ಗುಲ್ಬರ್ಗ ತನಕ ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ರಾಜೇಂದ್ರ ಪಾಮನೂರು, ಮಹಾಂತೇಶ ಹೂವಿನಹಳ್ಳಿ, ಹನುಮಂತ ಪವಾರ್, ವೆಂಕಟೇಶ್, ಮಹಾದೇವಿ ಮತ್ತಿತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.