ಮಂಗಳವಾರ, ನವೆಂಬರ್ 12, 2019
28 °C

`ಕಾನೂನು ಸುವ್ಯವಸ್ಥೆ: ಪೊಲೀಸರ ಸೇವೆ ಶ್ಲಾಘನೀಯ'

Published:
Updated:

ಬಳ್ಳಾರಿ: `ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಮಹತ್ವವಾದ್ದಾಗಿದೆ' ಎಂದು ನಿವೃತ್ತ ಪೊಲೀಸ್ ಉಪ ನಿರೀಕ್ಷಕ  ಎಂ. ನರಸಿಂಗರಾವ್ ತಿಳಿಸಿದರು.ನಗರದ ಡಿ.ಎ.ಆರ್.(ಜಿಲ್ಲಾ ಪೊಲೀಸ್ ಕವಾಯತು) ಮೈದಾನದಲ್ಲಿ ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಟ್ರಾಫಿಕ್ ಅಪಘಾತದಿಂದ ಸಾವು ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಅಡಚಣೆ ನಿವಾರಿಸುವುದರಲ್ಲಿ ಪೊಲೀಸರು ಮುಂದಾಗಬೇಕು. ರಸ್ತೆ ಅಗಲೀಕರಣ, ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಸಹಕರಿಸಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತಾ, ಸಮವಸ್ತ್ರ ಧರಿಸಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಇದನ್ನು ಸದ್ವಿನಿಯೋಗ ಪಡೆದುಕೊಂಡು ಇಲಾಖೆಯ ಘನತೆಯನ್ನು  ಸದಾಕಾಲ ಎತ್ತಿ ಹಿಡಿಯಲು ಶ್ರಮಿಸಬೇಕು. ಯಾವುದೇ  ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಅತ್ಯಂತ ಸೌಜನ್ಯತೆಯಿಂದ  ಇಲಾಖೆಯ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು.

ಧ್ವಜ ಮಾರಾಟದಿಂದ ಬಂದ ಹಣವನ್ನು ಪೊಲೀಸ್ ಕಲ್ಯಾಣನಿಧಿಗೆ ಬಳಸಲಾಗುವುದು ಎಂದು ತಿಳಿಸಿದರು. ಎಎಸ್‌ಪಿ ಚಂದ್ರಶೇಖರ ಕೊಡಬಾಗಿ ಹಾಗೂ ಎಲ್ಲ ಡಿವೈಎಸ್‌ಪಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ವಂದಿಸಿದರು.2012-13ನೇ ಸಾಲಿನಲ್ಲಿ ನಿವೃತ್ತರಾದ 55 ಅಧಿಕಾರಿ,ಸಿಬ್ಬಂದಿಗೆ ಸನ್ಮಾನಿಸಲಾಯಿತು.ಗೃಹರಕ್ಷಕರ ಪಥ ಸಂಚಲನ: ಗೃಹರಕ್ಷಕ ದಳದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಜಿಲ್ಲಾ ಗೃಹರಕ್ಷಕರ ಪಥಸಂಚಲನ ಏರ್ಪಡಿಸಲಾಗಿತ್ತು. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಡಾ.ಬಿ. ಶರಣಪ್ಪ, ಗೃಹರಕ್ಷಕದಳದ ಸಮಾದೇಷ್ಟ ಎಂ.ಎ. ಷಕೀಬ್ ಹಸಿರು ನಿಶಾನೆ ತೋರಿಸುವ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.ಪಥ ಸಂಚಲನವು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಪ್ರಾರಂಭವಾಗಿ ರಾಯಲ್‌ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ, ಮೋತಿ ವೃತ್ತ, ಸ್ಟೇಷನ್ ರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು. ಕಚೇರಿ ಸಿಬ್ಬಂದಿ ತಿಪ್ಪೇಸ್ವಾಮಿ, ಗೃಹರಕ್ಷಕ ದಳದ ಅಧಿಕಾರಿ ಬಸವರಾಜ್, ಸುರೇಶ್, ಬಸವಲಿಂಗ, ಗೃಹರಕ್ಷಕರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)