ಭಾನುವಾರ, ಮೇ 9, 2021
18 °C

ಕಾನ್ಶಿರಾಂ ನಗರದಲ್ಲಿ ನೀರಿಗಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ವಿಶೇಷ ವರದಿ

ನಾಪೋಕ್ಲು:
ಇಲ್ಲಿ ಪ್ರತಿದಿನ ಖಾಲಿ ಕೊಡ ಹಿಡಿದು ಊರಿನ ಮಂದಿ ನೀರಿಗಾಗಿ ನಲ್ಲಿ ಬಳಿ ಕಾಯುವುದು ಮಾಮೂಲು. ಕಾದು ನೀರು ಬಾರದಿದ್ದಾಗ ಕೆಲವರು ಕೊಡಗಳನ್ನು ಅಲ್ಲೇ ಬಿಟ್ಟು ತೋಟದ ಕೆಲಸಕ್ಕೆ ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ಮಕ್ಕಳನ್ನು ಸೈಕಲ್‌ನಲ್ಲಿ ಕೊಡಗಳನ್ನು ಹೇರಿ ದೂರದ ಕೊಳವೆ ಬಾವಿಯಿಂದ ನೀರು ತರಲು ಅಟ್ಟುತ್ತಾರೆ. ಅಲ್ಲೂ ಕ್ಯೂ ತಪ್ಪಿದಲ್ಲ. ಆಗ ಆಟೊರಿಕ್ಷಾದಲ್ಲಿ ಇಲ್ಲವೇ ಜೀಪಿನಲ್ಲಿ ಕೊಡ, ಬಕೆಟ್ ಹಾಗೂ ಡ್ರಂಗಳನ್ನು ತುಂಬಿಕೊಂಡು ಹೊಳೆಯತ್ತ ಸಾಗುತ್ತಾರೆ. ಕಿಲೋ ಮೀಟರ್ ಗಟ್ಟಲೆ ದೂರದ ಹೊಳೆಯಿಂದ ನೀರು ತುಂಬಿಸಿ ತರಬೇಕು.ಇದು ಸಮೀಪದ ಹೊದ್ದೂರಿನ ಪಾಲೆಮಾಡು ಕಾನ್ಶಿರಾಂ ನಗರ ನಿವಾಸಿಗಳ ಪ್ರತಿದಿನದ ಸಮಸ್ಯೆ. ಈ ಪೈಸಾರಿಯಲ್ಲಿ 310 ಕುಟುಂಬಗಳು ವಾಸವಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಟ್ಯಾಂಕ್‌ನಿಂದ ನೀರು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ನೀರಿಗಾಗಿ ಕಾಯುವುದೇ ದೊಡ್ಡ ಸಮಸ್ಯೆ. ಅಲ್ಲಲ್ಲಿ ನಲ್ಲಿಗಳನ್ನು ಬಂದ್ ಮಾಡಲಾಗಿದೆ. ಉಳಿದ ನಲ್ಲಿಗಳಲ್ಲಿ ಕಡಿಮೆ ಪ್ರಮಾಣದ ನೀರು ಬರುತ್ತದೆ. ಯಾವದಕ್ಕೂ ಸಾಲುವುದಿಲ್ಲ. ಪಾಲೇಮಾಡು ಪೈಸಾರಿಯ ಮಂದಿ ನೀರಿಗಾಗಿ ದೂರದ ಬೋರ್‌ವೆಲ್‌ನತ್ತ ಸಾಗಬೇಕು. ಇರುವ ಒಂದೇ ಕೊಳವೆಬಾವಿಯಲ್ಲಿ ನೀರಿಗಾಗಿ ಸಾಕಷ್ಟು ಉದ್ದದ ಕ್ಯೂ. ಪೈಸಾರಿಯ ಒಳಗೆ ಎರಡು ಬಾವಿಗಳಿವೆ. ಸುಮಾರು 80 ಅಡಿ ಅಳದ ಬಾವಿಯಿಂದ ನೀರೆತ್ತುವುದು ಕಷ್ಟ. ನೆಲದ ಮೇಲೆ ಎರಡು -ಮೂರು ರಿಂಗ್‌ಗಳನ್ನು ಇರಿಸಿದ್ದು ಬಿಟ್ಟರೆ ಒಳಭಾಗಕ್ಕೆ ರಿಂಗ್ ಅಳವಡಿಸಿಲ್ಲ. ಮಳೆ ಇಳಿಮುಖವಾಗಿರುವುದರಿಂದ 8-10 ದಿನ ಮಾತ್ರ ಬಾವಿ ನೀರನ್ನು ಬಳಕೆ ಮಾಡಬಹುದು.“ಮೂರು ದಿನದಿಂದ ನಲ್ಲಿ ನೀರು ಬಿಟ್ಟಿಲ್ಲ. ಅಪರೂಪಕ್ಕೊಮ್ಮೆ ನೀರು ಬಿಡುತ್ತಾರೆ. ನಲ್ಲಿಗಳನ್ನು ಅಲ್ಲಲ್ಲಿ ಬಂದ್ ಮಾಡಲಾಗಿದೆ. ನೀರಿನ ಸಮಸ್ಯೆ  ಬಹಳವಾಗಿ ಕಾಡುತ್ತಿವೆ.”ಎಂದು ಗ್ರಾಮದ ಜನತೆ ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿ ಬಳಿ ಅಳಲು ತೋಡಿಕೊಂಡರು.“ವ್ಯವಸ್ಥಿತ ನೀರು ಸರಬರಾಜಿಗಾಗಿ ಹೊದ್ದೂರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಸಂಗ್ರಹ ಮಾಡುತ್ತಿರುವ ನೀರಿನ ಟ್ಯಾಂಕ್ ಚಿಕ್ಕದು. ಏನು ಮಾಡಲಾಗುವುದಿಲ್ಲ ಎಂದು ಪಂಚಾಯಿತಿ ಅಸಹಾಯಕತೆ ಪ್ರದರ್ಶಿಸಿದೆ~ ಎನ್ನುತ್ತಾರೆ ಇಲ್ಲಿನ ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮೊಣ್ಣಪ್ಪ.ಎಲ್ಲೂ ನೀರು ಸಿಕ್ಕಿಲ್ಲವೆಂದರೆ ದೂರದ ಬಲಮುರಿ ಹೊಳೆಯೇ ಗತಿ. ಹಾಗಾಗಿ ದಿನನಿತ್ಯ  ಸೈಕಲ್ ಮತ್ತು  ಆಟೋರಿಕ್ಷಾಗಳಲ್ಲಿ ನೀರು ತುಂಬಿಕೊಂಡು ಹೋಗುವುದು ಮಾಮೂಲು.ಪಾಲೇಮಾಡು ಪೈಸಾರಿಯ ಬಹುತೇಕ ಮಂದಿ ಅಕ್ಕಪಕ್ಕದ ಗ್ರಾಮಗಳ ಕಾಫಿ ತೋಟಗಳಲ್ಲಿ ದುಡಿಯುತ್ತ್ದ್ದಿದಾರೆ. ಜನರ ಮೂಲಭೂತ ಸಮಸ್ಯೆಯನ್ನು ನೀಗಿಸಲು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.