ಕಾನ್‌ಸ್ಟೇಬಲ್ ಮೇಲೆ ಹಲ್ಲೆ: ಯೆಮನ್ ಪ್ರಜೆಯ ಬಂಧನ

7

ಕಾನ್‌ಸ್ಟೇಬಲ್ ಮೇಲೆ ಹಲ್ಲೆ: ಯೆಮನ್ ಪ್ರಜೆಯ ಬಂಧನ

Published:
Updated:

ಬೆಂಗಳೂರು: ಆಡುಗೋಡಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಗಂಗಾಧರಪ್ಪ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಯೆಮನ್ ದೇಶದ ಪ್ರಜೆಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಸಲಾಹ್ (20) ಬಂಧಿತ ಆರೋಪಿ. ತಾವರೆಕೆರೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆತ ಹಳೆ ವಿಮಾನ ನಿಲ್ದಾಣ ರಸ್ತೆ ಬಳಿ ಇರುವ ಇಂಗ್ಲಿಷ್ ಕಲಿಕಾ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿದ್ದ.

ಸೋಮವಾರ ಮಧ್ಯಾಹ್ನ ಕೋರಮಂಗಲ ನೂರು ಅಡಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಮ್ಮದ್ ಹೆಲ್ಮೆಟ್ ಧರಿಸಿರಲಿಲ್ಲ. ಈ ವೇಳೆ ಅದೇ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಡುಗೋಡಿ ಸಂಚಾರ ಠಾಣೆ ಎಸ್‌ಐ ನರಸಿಂಹಯ್ಯ ಮತ್ತು ಗಂಗಾಧರಪ್ಪ ಅವರು ಆತನ ವಾಹನವನ್ನು ಅಡ್ಡಗಟ್ಟಿ ದೂರು ದಾಖಲಿಸಿದರು. ನಂತರ ದೂರಿನ ಪ್ರತಿಯನ್ನು ನೀಡಿ ದಂಡ ಪಾವತಿಸುವಂತೆ ತಿಳಿಸಿದರು. ಇದಕ್ಕೆ ಪ್ರತಿರೋಧ ತೋರಿದ ಆತ, `ನಾನು ವಿದೇಶಿ ಪ್ರಜೆ, ದಂಡ ಕಟ್ಟುವುದಿಲ್ಲ~ ಎಂದು ಹೇಳಿದ.

ಈ ಹಿನ್ನೆಲೆಯಲ್ಲಿ ನರಸಿಂಹಯ್ಯ ಅವರು ಆತನ ಬೈಕ್ ಅನ್ನು ವಶಕ್ಕೆ ತೆಗೆದುಕೊಂಡು ಅದರ ಕೀಯನ್ನು ಕಾನ್‌ಸ್ಟೇಬಲ್‌ಗೆ ಕೊಟ್ಟರು. ಬಳಿಕ, ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಸೂಚಿಸಿದರು. ಇದರಿಂದ ಕೋಪಗೊಂಡ ಮಹಮ್ಮದ್ ಕೀ ಕಿತ್ತುಕೊಳ್ಳಲು ಯತ್ನಿಸಿದ. ಕಾನ್‌ಸ್ಟೇಬಲ್ ಕೀ ಕೊಡದಿದ್ದರಿಂದ ಆಕ್ರೋಶಗೊಂಡ ಆತ ಅವರನ್ನು ಎಳೆದಾಡಿ ಎಡಗೈ ತಿರುಚಿ ಹಲ್ಲೆ ನಡೆಸಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್‌ಸ್ಟೇಬಲ್ ನೆರವಿಗೆ ಧಾವಿಸಿದ ಎಸ್‌ಐ ಅವರಿಗೂ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಇದ ರಿಂದಾಗಿ ಎಸ್‌ಐ ಅವರು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಆತನನ್ನು ಠಾಣೆಗೆ ಕರೆದುಕೊಂಡು ಬಂದರು. ಆತನ ವಿರುದ್ಧ ಹಲ್ಲೆ, ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಯನ್ನು ಎಂಟನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದರಿಂದ ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಹಲ್ಲೆಗೊಳಗಾಗಿರುವ ಗಂಗಾಧರಪ್ಪ ಅವರ ಕೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry