ಶುಕ್ರವಾರ, ನವೆಂಬರ್ 22, 2019
22 °C
ಬಾರದ ಮಳೆ: ಕಾಫಿ -ಚಹಾ ತೋಟಕ್ಕೆ ಮರ್ಮಾಘಾತ

ಕಾಫಿಗೆ ಮೀಲಿ ಬಗ್ : ಚಹಾಗೆ ರೆಡ್ ಸ್ಪೈಡರ್ ದಾಳಿ

Published:
Updated:
ಕಾಫಿಗೆ ಮೀಲಿ ಬಗ್ : ಚಹಾಗೆ ರೆಡ್ ಸ್ಪೈಡರ್ ದಾಳಿ

ಕಳಸ: ಏಪ್ರಿಲ್  ಮೊದಲರ್ಧ ಭಾಗ ಮುಗಿದೇ ಹೋದರೂ ಮಳೆ ಸುರಿಯುವ ಯಾವುದೇ ಲಕ್ಷಣಗಳೇ ಇಲ್ಲ. ಪರಿಣಾಮವಾಗಿ ಹೋಬಳಿಯ ಪ್ರಮುಖ ತೋಟಗಾರಿಕಾ ಬೆಳೆಗಳಿಗೆ ಅತ್ಯಂತ ಮಾರಕ ವಾತಾವರಣ ಸೃಷ್ಟಿಯಾಗಿದೆ.   ಮಾರ್ಚ್ ತಿಂಗಳ ಆರಂಭದಲ್ಲಿ ಅಲ್ಲಲ್ಲಿ ಬಿದ್ದಿದ್ದ ಮಳೆ ಬೆಳೆಗಾರರಲ್ಲಿ ಹೊಸ ಹುರುಪು ಮೂಡಿಸಿತ್ತು. ಆಗ ಸುರಿದಿದ್ದ ಮಳೆ  ಕಾಫಿ ಹೂವನ್ನು ಅರಳಿಸಿತ್ತು. ಆದರೆ ಆನಂತರ ಒಂದೂವರೆ ತಿಂಗಳ ಅವಧಿಯಲ್ಲಿ ಸೂಕ್ತ ಪ್ರಮಾಣದ ಮಳೆ ಆಗದೆ ಕಾಫಿ ಮಿಡಿಗಳು ಕಾಯಿ ಕಟ್ಟುವುದಕ್ಕೆ ಅಡ್ಡಿ ಆಗಿದೆ.ಉಷ್ಣಾಂಶ ಕೂಡ 36-37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇದ್ದು ಕಾಫಿಗೆ ಪ್ರತಿಕೂಲ ವಾತಾವರಣ ನಿರ್ಮಾಣ ಆಗಿದೆ. ಅನೇಕ ತೋಟಗಳಲ್ಲಿ ಮರಗಸಿ ಕೂಡ ಮುಗಿದಿದ್ದು ಬಿಸಿಲಿನ ತೀವ್ರತೆ ಗಿಡಗಳನ್ನು ಬಾಧಿಸುತ್ತಿದೆ.  `ಹಗಲು ಮತ್ತು ರಾತ್ರಿಯ ತಾಪಮಾನದಲ್ಲಿ ಆಗುತ್ತಿರುವ ವಿಪರೀತ ವ್ಯತ್ಯಾಸ ಕಾಫಿಯ ಮಿಡಿಗಳಿಗೆ ಮಾರಕ ಆಗಬಹುದು. ಹಗಲಲ್ಲಿ 36 ಡಿಗ್ರಿ ಇದ್ದರೆ ರಾತ್ರಿ 20 ಡಿಗ್ರಿವರೆಗೂ ಇಳಿಯುತ್ತದೆ. ಈ ಅಂತರ ಕಾಫಿ ಫಸಲಿಗೆ ಅನುಕೂಲ ಅಲ್ಲ' ಎಂದು ಕಾಫಿ ಸಂಶೋಧನಾ ಕೇಂದ್ರದ ಹಿರಿಯ ಅಧಿಕಾರಿ ಬಂಟಗನಹಳ್ಳಿ ಶಿವರಾಂ ಹೇಳುತ್ತಾರೆ.`ತಾಪಮಾನ ಹೆಚ್ಚಾದಂತೆ ಕಾಫಿ ಗಿಡಕ್ಕೆ ಮೀಲಿ ಬಗ್ ಕೀಟದ ಹಾವಳಿ ಕೂಡ ಹೆಚ್ಚಾಗುತ್ತದೆ. ನೆರಳಿನ ಮರಗಳಿಲ್ಲದ ತೆರೆದ ತೋಟಗಳಲ್ಲಿ ಬಿಳಿ ಬಣ್ಣದ ಬೂಷ್ಟಿನ  ಮಾದರಯಲ್ಲಿ ಮೀಲಿ ಬಗ್  ಕಂಡು ಬರುತ್ತದೆ. ಎಳೆ ಕಾಫಿ ಮಿಡಿಗಳನ್ನು ಅದು ನಾಶಪಡಿಸುತ್ತದೆ' ಎಂದೂ ಶಿವರಾಂ ಎಚ್ಚರಿಸುತ್ತಾರೆ.`ಈ ಪಾಟಿ ಬಿಸಿಲು, ಜೊತೆಗೆ  ಮಳೆನೂ ಇಲ್ಲ. ಮುಂದಿನ ವರ್ಷ ಕಾಫಿ ಹಣ್ಣು ಕೊಯ್ಯದೇ ಬೇಡ' ಎಂದು ಬೆಳೆಗಾರರು ಈಗಲೇ ನಿರಾಶೆ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಏರಿದ ತಾಪಮಾನ ಕಾಫಿ ತೋಟಗಳ ಮೇಲೆ ಪರಿಣಾಮ ಬೀರುತ್ತದೆ.ಚಹಾ ಉತ್ಪಾದನೆ ಕುಸಿತ: ಎಲ್ಲ ಕಾಲದಲ್ಲೂ ಸೊಪ್ಪಿನ ರೂಪದಲ್ಲಿ ಫಸಲು ಕೊಡುವ ಚಹಾ ತೋಟಕ್ಕೂ ಏರಿದ ಉಷ್ಣಾಂಶದಿಂದಾಗಿ ತೊಂದರೆ ಉಂಟಾಗಿದೆ.ವರ್ಷವಿಡೀ ತೇವಾಂಶ ಬಯಸುವ ಚಹಾ ಗಿಡಗಳಿಗೆ ಬಿಸಿಲು ಅತ್ಯಗತ್ಯ. ಜೊತೆಗೆ ನೀರು ಕೂಡ ಅನಿವಾರ್ಯ. ಆದರೆ ಕಳೆದ ಎರಡು ತಿಂಗಳಿನಿಂದ ಮಳೆ ಇಲ್ಲದೆ ಚಹಾ ಗಿಡಗಳಲ್ಲೂ ಸೊಪ್ಪಿನ ಪ್ರಮಾಣ ಕಡಿವೆು ಯಾಗಿದೆ. ಪ್ರತಿ ವರ್ಷವೂ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಚಹಾ ಸೊಪ್ಪಿನ ಪ್ರಮಾಣ ಅತ್ಯಂತ ಕಡಿಮೆಯೇ ಇರುತ್ತದೆ.  ಆದರೆ ಈ ಬಾರಿ ಹಿಂದಿನ ಎಲ್ಲ ವರ್ಷಗಳಿಗಿಂತ ಕಡಿಮೆ ಸೊಪ್ಪು ಉತ್ಪಾದನೆ ಆಗುವ ಭಯ ಇದೆ ಎಂದು ಕಳಸ ಸಮೀಪದ ಚಹಾ ತೋಟದ ಸಿಬ್ಬಂದಿ ಹೇಳುತ್ತಾರೆ.ಚಹಾ ತೋಟಕ್ಕೆ ಬೆಂಬಿಡದೆ ನೀರು ಪೂರೈಸುವ ಕೆಲಸಕ್ಕೆ ವಿದ್ಯುತ್ ಅಡಚಣೆ ಮತ್ತು ಕಾರ್ಮಿಕರ ಸಮಸ್ಯೆ ಕೂಡ ಅಡ್ಡಿಯಾಗಿದೆ. ಬೇಸಿಗೆಯಲ್ಲಿ ಹೆಚ್ಚಾದ ಉಷ್ಣಾಂಶ ಮತ್ತು ಮಾಯವಾದ ಮಳೆ ಚಹಾ ಗಿಡಗಳಿಗೆ ರೆಡ್‌ಸ್ಪೈಡರ್ ಎಂಬ ಕೆಂಪು ಜೇಡದ ಹಾವಳಿ ಹೆಚ್ಚಾಗಿಸಿದೆ. ಮಳೆ ಬಾರದ ಹೊರತು ಸೊಪ್ಪನ್ನು ತಿನ್ನುವ ಈ ಜೇಡದ ಹಾವಳಿಯೂ ಕಡಿಮೆ ಆಗದು.ಒಟ್ಟಾರೆ ಮಲೆನಾಡಿನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾಫಿ ಮತ್ತು ಚಹಾ ತೋಟದಲ್ಲಿ ಈ ಬಾರಿ ಏರಿರುವ ಉಷ್ಣಾಂಶ ಮತ್ತು ಮಳೆ ಕೊರತೆ ಗಣನೀಯ ಹಾನಿ ತಂದಿದೆ.

       

ಪ್ರತಿಕ್ರಿಯಿಸಿ (+)