ಸೋಮವಾರ, ಏಪ್ರಿಲ್ 12, 2021
26 °C

ಕಾಫಿ ತೋಟಗಳಿಂದ ಕಾಡಾನೆ ಓಡಿಸಲು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ತೋಟಗಳಿಂದ ಕಾಡಾನೆ ಓಡಿಸಲು ಕಾರ್ಯಾಚರಣೆ

ಮಡಿಕೇರಿ: ಇಲ್ಲಿಗೆ ಸಮೀಪದ ಕಡಗದಾಳು ಗ್ರಾಮದ ಕಾಫಿ ಎಸ್ಟೇಟ್‌ಗಳಲ್ಲಿ ಸುಮಾರು 2-3 ತಿಂಗಳುಗಳಿಂದ  ವಾಸವಾಗಿರುವ ಆರೇಳು ಕಾಡಾನೆಗಳನ್ನು ಕಾಡಿಗೆ ಅಟ್ಟಲು ಸೋಮವಾರ ಸಾಕಾನೆಗಳನ್ನು ಬಳಸಿದರೂ ಅರಣ್ಯ ಇಲಾಖೆಗೆ ಯಶಸ್ಸು ದಕ್ಕಲಿಲ್ಲ.ಇಲ್ಲಿನ ರೋಸ್ ವ್ಯಾಲಿ ಎಸ್ಟೇಟ್, ಮೊದೂರು ಎಸ್ಟೇಟ್, ಕೊರ್ತಿ ಕಾಡು ಸುತ್ತಮುತ್ತ ಈ ಆನೆ ತಂಡ ಸುಳಿದಾಡುತ್ತಿದೆ. ಈ ತಂಡದಲ್ಲಿ ಮರಿಯಾನೆ ಕೂಡ ಕಾಣಿಸಿಕೊಂಡಿದೆ.ಇವುಗಳನ್ನು ಕಾಡಿಗೆ ಅಟ್ಟಲು ದುಬಾರೆ ಹಾಗೂ ಆನೆಕಾಡು ಶಿಬಿರದಿಂದ ಆರು ಸಾಕಾನೆಗಳನ್ನು ತರಲಾಯಿತು. ಈಚೆಗೆ ಮುಗಿದ ಮೈಸೂರು ದಸರೆಯ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ವಿಕ್ರಮ್, ಗೋಪಿ, ಹರ್ಷ, ತೀರ್ಥ ಮತ್ತು ಇತರ ಎರಡು ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಯಿತು.ಸೋಮವಾರ ಬೆಳಿಗ್ಗೆಯಿಂದಲೇ ಈ ಕಾರ್ಯಾಚರಣೆಗೆ ಇಳಿದ ಮಡಿಕೇರಿ ಹಾಗೂ ಕುಶಾಲನಗರ ಅರಣ್ಯ ಇಲಾಖೆ ಸಿಬ್ಬಂದಿ ಸಂಜೆಯವರೆಗೆ ಪ್ರಯತ್ನ ಪಟ್ಟರೂ ಕಾಡಾನೆಗಳ ತಂಡ ಪತ್ತೆಯಾಗಲಿಲ್ಲ. ಪಟಾಕಿ ಸಿಡಿಸಿ, ಗುಂಡು ಹಾರಿಸಿದರೂ ಪ್ರಯೋಜನವಾಗಲಿಲ್ಲ.ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿ ಜೊತೆ ಮಾತನಾಡಿದ ಡಿಆರ್‌ಎಫ್‌ಓ ರಾಘವ, `ಆನೆಗಳು ಹಗಲು ಹೊತ್ತಿನಲ್ಲಿ ಹೆಚ್ಚು ನಡೆದಾಡಲಾರವು. ಈ ಕಾರಣಕ್ಕಾಗಿ ಎಸ್ಟೇಟ್‌ಗಳಲ್ಲಿಯೇ ತಲೆಮರೆಸಿಕೊಂಡು ನಿಂತಿರಬಹುದು. ಇವುಗಳನ್ನು ಕಾಡಿಗೆ ಅಟ್ಟುವವರೆಗೆ ಕಾರ್ಯಾಚರಣೆ ಮುಂದುವರಿಸುತ್ತೇವೆ~ ಎಂದರು.  ಕುಶಾಲನಗರ ಆರ್‌ಎಫ್‌ಓ ಅಚ್ಚಪ್ಪ ತಂಡದ ನೇತೃತ್ವ ವಹಿಸಿದ್ದರು.ಆತಂಕದಲ್ಲಿ ಕಾರ್ಮಿಕರು: `ಕಾಡಾನೆಗಳ ಕಾಟದಿಂದಾಗಿ ಕಾಫಿ  ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಆತಂಕಕ್ಕೀಡಾಗಿದ್ದಾರೆ. ಯಾವಾಗಲೂ ಆನೆಯ ಭಯದಲ್ಲಿಯೇ ಕೂಲಿ ಕೆಲಸ ಮಾಡಬೇಕಾಗಿದೆ. ಎಷ್ಟೋ ಕಡೆ ಮಕ್ಕಳು ಸಹ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾರೆ~ ಎಂದು ಕೂಲಿಕಾರ್ಮಿಕ ಮಹಿಳೆ ಓಮನ್ ಹೇಳುತ್ತಾರೆ.ನಮಗೆ ಇದುವರೆಗೆ ಈ ಆನೆಗಳ ತಂಡವು ಯಾವುದೇ ರೀತಿಯ ತೊಂದರೆ ಮಾಡಿಲ್ಲ. ಆದರೂ, ಇಲ್ಲಿನ ಜನರ ಸುರಕ್ಷತೆಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗನೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟಬೇಕು ಎಂದು  ಮನವಿ ಮಾಡಿಕೊಳ್ಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.