ಬುಧವಾರ, ನವೆಂಬರ್ 13, 2019
23 °C

ಕಾಫಿ ತ್ಯಾಜ್ಯ; ಬಾಳೆ ರಾಜ್ಯ

Published:
Updated:

ಒಂದು ಟನ್ ಕಾಫಿ ಹಣ್ಣಿನಿಂದ ಬೀಜ ತೆಗೆಯಲು ಇಪ್ಪತ್ತು ಸಾವಿರ ಲೀಟರ್ ನೀರು ಬೇಕು. ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು ಒಂದು ಲಕ್ಷ ಟನ್ ಕಾಫಿ ಬೀಜ ಸಂಸ್ಕರಿಸುತ್ತಾರೆ. ಅದಕ್ಕೆಷ್ಟು ನೀರು ಬೇಕು ಲೆಕ್ಕ ಹಾಕಿ!ವಿಷಯ ಅದಲ್ಲ. ಅಷ್ಟು ಪ್ರಮಾಣದ ಕಾಫಿ ಸಂಸ್ಕರಿಸಿದ ನೀರು ಕಲ್ಮಶಗಳಿಂದ ಕೂಡಿದ ಒಂದು ತ್ಯಾಜ್ಯ ಪದಾರ್ಥವಾಗಿ ಹೊರ ಬೀಳುತ್ತಿರುವುದು. ಸಾಮಾನ್ಯವಾಗಿ ಮಲೆನಾಡಿನಲ್ಲಿ ಅದು ನದಿ, ಝರಿ, ಕೆರೆ ಮೊದಲಾದ ಜಲಮೂಲವನ್ನು ಸೇರುತ್ತದೆ. ಅಲ್ಲಿರುವ ಜಲಚರ ಪ್ರಾಣಿಗಳು ಉಸಿರುಗಟ್ಟಿ ಸಾಯುವ ಪರಿಸ್ಥಿತಿ ಉಂಟಾಗುತ್ತದೆ. ಬತ್ತದ ಗದ್ದೆಗೆ ಹಾಯಿಸಿ ಕೃಷಿ ಮಾಡುವವರೂ ಇದ್ದಾರೆ. ಇದರಿಂದ ಅಂತರ್ಜಲ ಮಲಿನವಾಗುವ ಸಂಭವ ಹೆಚ್ಚು. ಅತಿಯಾದ ಸಾರಜನಕದ ಪ್ರಮಾಣದಿಂದಾಗಿ ಪೈರು ಸೊಕ್ಕಿ ಬೆಳೆದು ಬತ್ತದ ಇಳುವರಿ ಕಡಿಮೆ ಬರುವುದೂ ಇದೆ.ಇದಕ್ಕೊಂದು ಅಪರೂಪದ ಪರಿಹಾರ ಕಂಡುಹಿಡಿದಿದೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಇದರ ನೇತೃತ್ವ ವಹಿಸಿದ್ದಾರೆ ಬೇಸಾಯ ವಿಜ್ಞಾನ ವಿಭಾಗದ ಡಾ ಭಾಸ್ಕರ್. ಇದು ಕೇವಲ ಪರಿಹಾರ ಆಗಿರದೇ ಬಾಳೆ ಸೇರಿದಂತೆ ಅನೇಕ ಬೆಳೆಗಳ ಸಮೃದ್ಧ ಫಸಲಿಗೂ ದಾರಿಯಾಗಿದೆ.ಏನು ಪರಿಹಾರ?

ಕಾಫಿಯ ಹಣ್ಣನ್ನು ಬಿಸಿಲಿನಲ್ಲಿ ಒಣಗಿಸಿ ಬೀಜವನ್ನು ಬೇರ್ಪಡಿಸಿದರೆ (ಚೆರ‌್ರಿ ವಿಧಾನ) ನೀರಿನ ಅವಶ್ಯಕತೆಯೇ ಇಲ್ಲ. ಆದರೆ ಈ ಕಾಫಿಗೆ ಬೇಡಿಕೆ ಕಡಿಮೆ. ಹಾಗಾಗಿ ಧಾರಣೆಯೂ ಕಮ್ಮಿ. ಅದರ ಬದಲು ಕಾಫಿ ಹಣ್ಣಿನ ಸಿಪ್ಪೆಯನ್ನು ತಗೆದು ಬೀಜವನ್ನು ನೀರಿನಲ್ಲಿ ನೆನೆಹಾಕುತ್ತಾರೆ (ಪಲ್ಪರ್). ಬೀಜಕ್ಕೆ ಅಂಟಿರುವ ತಿರುಳು ಕೊಳೆತು ನೀರಿನೊಂದಿಗೆ ಮಿಶ್ರವಾಗುತ್ತದೆ. ಹೀಗೆ ಬೇರ್ಪಡಿಸಿದ ಕಾಫಿ ಬೀಜ (ಪಾರ್ಚ್‌ಮೆಂಟ್ ಕಾಫಿ)ಕ್ಕೆ ಅಧಿಕ ಬೆಲೆ ಸಿಗುತ್ತದೆ. ಈಗ ಹೆಚ್ಚಿನವರು ಈ ರೀತಿ ಸಂಸ್ಕರಿಸುವತ್ತ ಗಮನ ಹರಿಸುತ್ತಿದ್ದಾರೆ.ಈ ರೀತಿ ಉಪಯೋಗವಾದ ನೀರು ತುಂಬಾ ಹುಳಿ ಅಂಶದಿಂದ ಕೂಡಿರುತ್ತದೆ. ಸಾವಯವ ಪದಾರ್ಥಗಳನ್ನೇ ಒಳಗೊಂಡಿರುವುದರಿಂದ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಸಾರಜನಕ, ರಂಜಕ ಮತ್ತು ಪೊಟಾಷಿಯಂನಂತಹ ಸಸ್ಯ ಪೋಷಕಾಂಶಗಳೂ ಅಧಿಕ ಪ್ರಮಾಣದಲ್ಲಿರುತ್ತವೆ. ಈ ನೀರನ್ನು ಹೇಗೆ ಕೃಷಿಗೆ ಯೋಗ್ಯವನ್ನಾಗಿಸುವುದು ಎಂಬುದೇ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆ.ಈ ತ್ಯಾಜ್ಯ ನೀರಿನಲ್ಲಿರುವ ಹುಳಿಯ ಪ್ರಮಾಣವನ್ನು ತಗ್ಗಿಸಲು ಶೇಕಡಾ 0.5ರಷ್ಟು (ಲೀಟರ್‌ಗೆ 5 ಗ್ರಾಂ) ಸುಣ್ಣವನ್ನು ಸೇರಿಸಬೇಕು. ಅಲ್ಲದೇ ಬೆಳೆಯ ಪ್ರಾರಂಭಿಕ ಹಂತಗಳಲ್ಲಿ ಬಳಸದೇ ಇರುವುದು ಒಳ್ಳೆಯದು ಅನ್ನುತ್ತಾರೆ ಡಾ. ಭಾಸ್ಕರ್.ಈ ನೀರನ್ನು ಶುದ್ಧ ನೀರಿನೊಂದಿಗೆ 1:1ರ ಪ್ರಮಾಣದಲ್ಲಿ ಸೇರಿಸಿ ಬಳಸುವುದು ಸೂಕ್ತ. ಇಲ್ಲದೇ ಹೋದರೆ ಒಂದು ಬಾರಿ ತ್ಯಾಜ್ಯ ನೀರು ಮತ್ತು ಇನ್ನೊಮ್ಮೆ ಶುದ್ಧ ನೀರು ಕಟ್ಟುವುದನ್ನೂ ಮಾಡಬಹುದು. ಹೀಗೆ ಮಾಡಿದಾಗ ಇಳುವರಿ ಪ್ರಮಾಣದಲ್ಲಿ ಏನೂ ವ್ಯತ್ಯಾಸ ಕಂಡುಬಂದಿಲ್ಲ. ಅಷ್ಟೇ ಅಲ್ಲದೇ ಈ ನೀರನ್ನು ಕಾಫಿ ಸಿಪ್ಪೆ, ತರಗೆಲೆ, ಕಳೆ ಮತ್ತು ಸಗಣಿಯೊಂದಿಗೆ ಮಿಶ್ರ ಮಾಡಿ ಗೊಬ್ಬರವನ್ನೂ ತಯಾರಿಸಬಹುದು.ಭಾಸ್ಕರ್‌ರವರ ಪ್ರಕಾರ ಈ ರೀತಿಯ ನೀರಿನ ಮರುಬಳಕೆಯಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಮಾತ್ರವಲ್ಲದೇ ಸಸ್ಯ ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಸಿ ಕೃಷಿ ಉತ್ಪಾದನೆಯನ್ನೂ ಹೆಚ್ಚಿಸಿಕೊಳ್ಳಬಹುದು. ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಧಿಕ ಕಾಫಿ ಬೆಳೆಗಾರರಿರುವುದರಿಂದ ಈ ಸಂಶೋಧನೆ ಅವರಿಗೆ ತುಂಬಾ ಉಪಯೋಗವಾಗಬಹುದು. ಇತ್ತೀಚೆಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಾ ಕಾಫಿ ಬೆಳೆಗಾರರ ಮೇಲೆ ಕಣ್ಣಿಟ್ಟಿರುವುದು ಗೊತ್ತೇ ಇದೆ. ಬಹುಶಃ ಇನ್ನು ಅವರ ಕೆಂಗಣ್ಣಿಗೆ ಗುರಿಯಾಗುವ ಪ್ರಮೇಯವೇ ಇಲ್ಲ. ಭಾಸ್ಕರ್ ಅವರ ದೂರವಾಣಿ:  9845563671.

ಪ್ರತಿಕ್ರಿಯಿಸಿ (+)