ಕಾಫಿ ನಾಡಿನ ರಸ್ತೆ ಸ್ಥಿತಿ ನೋಡಾ..!

7

ಕಾಫಿ ನಾಡಿನ ರಸ್ತೆ ಸ್ಥಿತಿ ನೋಡಾ..!

Published:
Updated:
ಕಾಫಿ ನಾಡಿನ ರಸ್ತೆ ಸ್ಥಿತಿ ನೋಡಾ..!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್ ಪಾಲಿನ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ಜಿಲ್ಲೆಯ ಸುಮಾರು 229 ಕಿ.ಮೀ. ಉದ್ದದ ರಸ್ತೆಗಳಿಗೆ ಮರುಜೀವ ಬರಲಿದೆ.ಈ ಮೊತ್ತದ ಪೈಕಿ 16.55 ಕೋಟಿ ರೂಪಾಯಿಯಲ್ಲಿ 33 ಜಿಲ್ಲಾ ಮುಖ್ಯ ರಸ್ತೆಗಳ ಕಾಮಗಾರಿಗಳು ಹಾಗೂ ಇನ್ನುಳಿದ 13.45 ಕೋಟಿ ರೂಪಾಯಿಯಲ್ಲಿ 12 ರಾಜ್ಯ ಹೆದ್ದಾರಿಗಳ ದುರಸ್ತಿ ಕಾಮಗಾರಿಗಳು ನಡೆಯಲಿವೆ. ಇಲಾಖೆಗೆ ಹಣ ತಲುಪಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು, ಕಾಮಗಾರಿಗಳನ್ನು ವಹಿಸಿಕೊಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಹಣ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಈ ಎಲ್ಲ ಕಾಮಗಾರಿಗಳನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.ಸೋಮವಾರ ಪೇಟೆ ತಾಲ್ಲೂಕನ್ನೂ ಒಳಗೊಂಡಿರುವ ಮಡಿಕೇರಿ ವಿಧಾನಸಭಾಕ್ಷೇತ್ರದ ವ್ಯಾಪ್ತಿಯ 53 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 79 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳಿಗೆ ಹೊಸ ರೂಪಬರಲಿದೆ. ಇದರಂತೆ ವೀರಾಜಪೇಟೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ 80 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 17 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳು ಹೊಸ ಖದರು ಪಡೆದುಕೊಳ್ಳಲಿವೆ.ಕೊಡಗಿನಲ್ಲಿ ಆರು ತಿಂಗಳು ಕಾಲ ಮಳೆಯಿರುವುದು ವಾಡಿಕೆ. ಹೀಗಾಗಿ ಇನ್ನುಳಿದ ಆರು ತಿಂಗಳ ಸಮಯದಲ್ಲಿಯೇ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈಗ ಸರ್ಕಾರದಿಂದ ಸಕಾಲದಲ್ಲಿಯೇ ಹಣ ಬಂದಿದೆ ಎಂದು ಹೇಳಬಹುದು. ಇನ್ನು ಸುಂದರ ರಸ್ತೆಗಳನ್ನು ನಿರ್ಮಿಸುವುದು ಇಲಾಖೆಯ ಕೆಲಸವಾಗಿದೆ.ತೇಪೆ ಹಾಕುವ ಕೆಲಸ: ಹೊಸ ಕಾಮಗಾರಿ ಆರಂಭಿುವುದಕ್ಕೆ ಮೊದಲು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದು ಹಾಗೂ ಇತರೆ ತೇಪೆ ಹಾಕುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ. ಮುಖ್ಯಮಂತ್ರಿಗಳ ಆದೇಶದಂತೆ ಈ ಕೆಲಸವನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.ರಸ್ತೆ ಕಾಮಗಾರಿಗೆ ಜಲ್ಲಿಕಲ್ಲು ಸೇರಿದಂತೆ ಬೇಕಾದ ಇತರೆ ಅಗತ್ಯ ವಸ್ತುಗಳು ಜಿಲ್ಲೆಯಲ್ಲಿ ಸುಲಭವಾಗಿ ದೊರಕುತ್ತಿರಲಿಲ್ಲ. ಹೀಗಾಗಿ ರಸ್ತೆ ಕಾಮಗಾರಿಗಳು ಕುಂಠುತ್ತಾ ಸಾಗುತ್ತಿದ್ದವು. ಈಗ ಕುಶಾಲನಗರದಲ್ಲಿ ಮತ್ತೊಂದು ಜಲ್ಲಿಕಲ್ಲು ಘಟಕ ಕಾರ್ಯಾರಂಭಿಸಲಿದೆ. ಇದಲ್ಲದೇ, ಮೂರನೇ ಘಟಕವೊಂದು ಸ್ಥಾಪನೆಯಾಗಲಿದೆ. ಈ ಘಟಕಗಳೆಲ್ಲವು ಕಾರ್ಯಾರಂಭಿಸಿದರೆ ರಸ್ತೆ ಕಾಮಗಾರಿಗಳು ತ್ವರಿತವಾಗಿ ನಡೆಯಲಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.200 ಕಿ.ಮೀ ರಸ್ತೆಗೆ ಕಾಯಕಲ್ಪ: ಪ್ರಸಕ್ತ 2011-12ನೇ ಸಾಲಿನಲ್ಲಿ ಕನಿಷ್ಠ 200 ಕಿ.ಮೀ ರಸ್ತೆಗೆ ಕಾಯಕಲ್ಪ ನೀಡಬೇಕೆನ್ನುವುದು ನಮ್ಮ ಸಂಕಲ್ಪ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಹಣ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಾಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಳ್ಳಿ ರಸ್ತೆ `ನಾಚಿಸುವ~  ರಾಜ್ಯ ಹೆದ್ದಾರಿ

ಸಿದ್ದಾಪುರ: ಜಿಲ್ಲೆಯ ಗಡಿಭಾಗವಾದ ಕುಟ್ಟದಿಂದ ಮಡಿಕೇರಿಯವರೆಗೆ ಸಿದ್ದಾಪುರ, ಹುಂಡಿ, ಪಾಲಿಬೆಟ್ಟ ಮಾರ್ಗದಲ್ಲಿ ಸಾಗುವ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಸಿದ್ದಾಪುರದಿಂದ ಮೈಸೂರಿಗೆ ಸಾಗುವ ಮಾಲ್ದಾರೆ ರಸ್ತೆಗಳ ಸ್ಥಿತಿಯು ಹಳ್ಳಿಗಾಡಿನ ಕಚ್ಚಾ ರಸ್ತೆಗಳಿಗಿಂತ ದುರ್ಬರವಾಗಿದೆ.ವಾಹನಗಳ ಸಂಚಾರ ಬಿಡಿ, ಪಾದಚಾರಿಗಳಿಗೂ ನಡೆದಾಡಲೂ ಸಾಧ್ಯವಾಗುವುದಿಲ್ಲ. ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವುದರಿಂದ ಇಲ್ಲಿ ವಾಹನ ಸಂಚಾರ ನರಕ ಯಾತನೆಯಾಗಿದೆ. ಎರಡೂ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ನಿಷ್ಪ್ರಯೋಜಕವಾಗಿದ್ದು, ಅಪಾಯಕ್ಕೆ ನಿತ್ಯ ಆಮಂತ್ರಣ ನೀಡುತ್ತಿವೆ.ಪ್ರತಿನಿತ್ಯ ವಾಹನ ಅವಘಡಗಳು ಕೂದಲೆಳೆಯಲ್ಲಿ ಪಾರಾಗುತ್ತಿದ್ದರೂ ಇದರ ಬಗ್ಗೆ ಅರಿವಿರುವ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಂಬಂಧವಿಲ್ಲದಂತೆ ಮೌನವಹಿಸಿರುವುದರಿಂದ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿದೆ.ರಸ್ತೆ ದುರಸ್ಥಿಗೆ ಆಗ್ರಹಿಸಿ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ 20ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ. ರಸ್ತೆ ತಡೆಗಳು ಚಳುವಳಿಗಳು ಮಾಮೂಲಿನಂತಾಗಿದೆ. ಸಿದ್ದಾಪುರದಿಂದ ಪಾಲಿಬೆಟ್ಟಕ್ಕೆ ಚನ್ನಯ್ಯನಕೋಟೆ ಮಾರ್ಗವಾಗಿ ಹಾಗೂ ಮೇಕೂರು ಮಾರ್ಗವಾಗಿ ಎರಡು ರಸ್ತೆಗಳಿದ್ದರೂ ಇವೆರಡೂ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಾಗಿಲ್ಲ.ಸ್ಥಳೀಯ ಗ್ರಾಮಸ್ಥರು ಹೋರಾಟ ಸಮಿತಿ ರಚಿಸಿಕೊಂಡು, ಆ ಮೂಲಕ ಸಂಬಂಧಪಟ್ಟ ಇಲಾಖೆಗೆ 30ಕ್ಕೂ ಹೆಚ್ಚು ಮನವಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೋರಾಟ ಸಮಿತಿಯ ಮುಖಂಡ ಪಿ.ವಿ.ಜಾನ್ಸ್‌ನ್ ಕಿಡಿಕಾರುತ್ತಾರೆ.ಕಳೆದ ಹತ್ತು ವರ್ಷಗಳಿಂದ ರಸ್ತೆ ದುರಸ್ಥಿ ಆಗ್ರಹಿಸಿ ಪ್ರತಿಭಟನೆ ಮಾಡಿದಾಗಲೆಲ್ಲ ಇಲಾಖೆ ವತಿಯಿಂದ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಭರವಸೆ ನೀಡಿ ಕಾಲ್ಕಿತ್ತುಕೂಳ್ಳುವ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತೆ ಇತ್ತ ಮುಖ ಹಾಕುವುದೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.2008ರಲ್ಲಿ ಗಟ್ಟದಹಳ್ಳ ಪಾಲಿಬೆಟ್ಟ 9 ಕಿ.ಮಿ.ರಸ್ತೆ ದುರಸ್ಥಿಗೆ 99 ಲಕ್ಷ ಅನುದಾನ ಮಂಜೂರಾಗಿತ್ತು. ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರು ಕಾಲ್ನಡಿಗೆಯಲ್ಲೆ ಸಾಗಿ ರಸ್ತೆ ಬದಿಯ ಕಾಫಿ ತೋಟದ ಮಾಲೀಕರನ್ನು ಮನವೂಲಿಸಿ ರಸ್ತೆಯ ಇಕ್ಕಲಗಳಲ್ಲಿಯೂ ಎರಡು ಅಡಿಗಳಷ್ಟು ಜಮೀನನ್ನು ರಸ್ತೆ ಅಭಿವೃದ್ಧಿಗಾಗಿ ನೀಡುವಂತೆ ಕೇಳಿಕೂಂಡ ಬಳಿಕ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಯಿತು.ರಸ್ತೆ ಅಗಲೀಕರಣದ ಬಳಿಕ ಇಲ್ಲಿ ಯಾವುದೇ ಕೆಲಸ ನಿರ್ವಹಿಸಲ್ಲಿಲ್ಲ ಎಂದು ಸ್ಥಳೀಯರಾದ ಅಜೀಜ್ ಹೇಳಿದ್ದಾರೆ. ಅಲ್ಲದೇ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆ ಮಾಡಿದ ತಾ.ಪಂ.ಸದಸ್ಯ ಪಿ.ವಿ.ಜಾನ್ಸ್‌ನ್, ಮಾಲ್ದಾರೆ ಗ್ರಾ.ಪಂ.ಅಧ್ಯಕ್ಷ ಸಜಿ ಥೋಮಸ್, ಕೃಷ್ಣನ್‌ಕುಟ್ಟಿ, ರಾಧಾಕೃಷ್ಣನ್, ಅ್ಯಂಟನಿ, ಮೂಹಮ್ಮದ್ ಆಲಿ, ರಮೇಶ, ಗಫೂರ್, ಅಬ್ದಲ್ ರಹಿಮಾನ್ ಸೇರಿದಂತೆ ಹನ್ನೆರಡು ಮಂದಿಯ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೋರಾಟ ಸಮಿತಿಯ ಸದಸ್ಯರಾದ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.ಸಿದ್ದಾಪುರ-ಪಿರಿಯಾಪಟ್ಟಣ ರಸ್ತೆಯೂ ಕೂಡ ಡಾಂಬರೀಕರಣ ಕಾಣದೇ ಹಲವು ದಶಕಗಳೇ ಕಳೆದಿವೆ. ಇಲ್ಲಿಯ ಗದ್ದಿಗೆ, ಕಲ್ಲಹಳ್ಳ ಗ್ರಾಮಗಳಲ್ಲಿರುವ ಕಿರುದಾದ ಕೇವಲ ಹತ್ತು ಅಡಿ ಅಗಲದ ರಸ್ತೆಗಳು ಬ್ರಿಟಿಷರ ಕಾಲದ್ದಾಗಿದೆ. ಇದೇ ರಸ್ತೆಯಲ್ಲಿ ಪ್ರತಿದಿನವೂ ಐನೂರಕ್ಕೂ ಹೆಚ್ಚು ವಾಹನಗಳು ಸಂಚರಿಸುತಿವೆ.ರಿಸಾರ್ಟ್‌ಗಳು, ಗಿರಿಜನ ಹಾಡಿಗಳು, ಗದ್ದುಗೆ ಸಿದ್ದೇಶ್ವರ ದೇವಸ್ಥಾನ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಕಾಡಾನೆ ಶಿಬಿರಗಳು ಕೂಡ ಇದೇ ರಸ್ತೆಯಲ್ಲಿ ಇದೆ ಎಂಬುವುದನ್ನೂ ಇಲಾಖೆ ಮರೆತಿದೆ.

-ಗುರುದರ್ಶನ್

ಹೊಂಡಕ್ಕೆ ಮುಕ್ತಿ ಎಂದು?

ಗೋಣಿಕೊಪ್ಪಲು: `ಅಯ್ಯ ಹೊಂಡ!  ಮೆಲ್ಲೆ ಹೋಗಪ್ಪ...~ ಎನ್ನುವುದು ಈ ಭಾಗದ ಆಟೊ ಪ್ರಯಾಣಿಕರ ಕೋರಿಕೆ. `ಥೂ! ಬ್ರೇಕ್ ಹಾಕಿ, ಹಾಕಿ, ಗೇರ್ ಬದಲಾಯಿಸಿ ಸಾಕಾಗಿ ಹೋಯ್ತು.  ಸಂಜೆಯಾದ ಮೇಲೆ ಬಂಡಿಯಿಂದ ಇಳಿದರೆ ಮೈ ಕೈ ಎಲ್ಲ ನೋವು....~ ಇದು ದಕ್ಷಿಣ ಕೊಡಗಿನಲ್ಲಿ ಸಂಚರಿಸುವ ವಾಹನ ಚಾಲಕರ ನಿತ್ಯದ ಗೋಳು.ದಕ್ಷಿಣ ಕೊಡಗಿನ ಬಹುತೇಕ ಎಲ್ಲ ರಸ್ತೆಗಳು ಹದಗೆಟ್ಟಿವೆ. ತೀವ್ರ ವಾಹನ ದಟ್ಟಣೆಯಿಂದ ಕೂಡಿರುವ ಪೊನ್ನಂಪೇಟೆ ರಸ್ತೆಯ ಸ್ಥಿತಿಯನ್ನು ಕೇಳುವುದೇ ಬೇಡ. ಗೋಣಿಕೊಪ್ಪಲಿನಿಂದ ಪೊನ್ನಂಪೇಟೆ ವರೆಗೆ 5 ಕಿ.ಮೀ. ದೂರ ಇರುವ ಈ ರಸ್ತೆ ಬಹಳ ಕಿರಿದಾಗಿದೆ. ರಸ್ತೆಯ ದಡಗಳಂತೂ ಕೊರಕಲು ಬಿದ್ದಿವೆ. ಮಳೆ ನೀರು ರಸ್ತೆ ಬದಿಯಲ್ಲಿ ಹರಿದು ವಾಹನ ಇಳಿಸುವುದೇ ಕಷ್ಟವಾಗಿಬಿಟ್ಟಿದೆ.ಗೋಣಿಕೊಪ್ಪಲು ಪಟ್ಟಣದಿಂದ ಮುಂದೆ ಚೆಸ್ಕಾಂ ಕಚೇರಿ ಹತ್ತಿರ ರಸ್ತೆ ತಿರುವಿನಿಂದ ಕೂಡಿದೆ. ಜತೆಗೆ ಡಾಂಬರ್ ಕಿತ್ತು ಹೊಂಡ ಬಿದ್ದು ಶೋಚನೀಯವಾಗಿದೆ. ಬೇರೆ ಮಾರ್ಗವಿಲ್ಲದೆ ಇದೇ ರಸ್ತೆ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತಿವೆ.  ಕುಟ್ಟ, ಶ್ರೀಮಂಗಲ, ಮಾನಂದವಾಡಿಯ ಮುಖ್ಯ ರಸ್ತೆ ಇದು. ದಕ್ಷಿಣಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣವಾದ ಗೋಣಿಕೊಪ್ಪಲಿಗೆ ಬರುವ ಜನತೆ  ಈ ರಸ್ತೆಯನ್ನೆ ಅವಲಂಬಿಸದೇ ಬೇರೆ ದಾರಿಯಿಲ್ಲ.ಅಲ್ಲದೆ ಮಡಿಕೇರಿ, ಮೈಸೂರಿಗೆ ಹೋಗುವ ಜನತೆಗೆ ಇದೇ ಹೆದ್ದಾರಿ. ಈ ರಸ್ತೆಗೆ ಡಾಂಬರೀಕರಣವಾಗಿ ಸುಮಾರು 5 ವರ್ಷಗಳೇ ಕಳೆದಿವೆ. ಅಂದಿನಿಂದ ಗುಂಡಿ ಮುಚ್ಚುವ ಕೆಲಸವು ನಡೆದಿಲ್ಲ ಎಂಬುದು ಸಾರ್ವಜನಿಕರ ದೂರು. ಈ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹತ್ತಾರು ಶಾಲಾ ವಾಹನಗಳು ಓಡಾಡುತ್ತವೆ. ಅರುವತ್ತೊಕ್ಕಲುವಿನ ಸರ್ಕಾರಿ ಮತ್ತು ಖಾಸಗಿ ಶಾಲೆ ಈ ರಸ್ತೆ ಪಕ್ಕದಲ್ಲಿಯೇ ಇವೆ. ರಸ್ತೆ ಕಿರಿದಾಗಿರುವುದರಿಂದ ಯಾವಾಗ ಅಪಘಾತ ಸಂಭವಿಸುತ್ತದೆ ಎಂಬ ಆತಂಕ ತಪ್ಪಿದ್ದಲ್ಲ.  ದಕ್ಷಿಣ ಕೊಡಗಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆ. ಇವೆರಡೂ ಅವಳಿ ನಗರದಂತಿವೆ.  ಗೋಣಿಕೊಪ್ಪಲು ಪ್ರಮುಖ ವಾಣಿಜ್ಯ  ಪಟ್ಟಣವಾದರೂ ಇನ್ನೂ ಗ್ರಾ.ಪಂ.ಯಾಗಿಯೇ ಮುಂದು ವರಿಯುತ್ತಿದೆ. ಇದರಿಂದ ಸರ್ಕಾರದಿಂದ ಬರುತ್ತಿರುವ ಅನುದಾನವೂ ಕಡಿಮೆ ಎಂದು ಹೇಳಲಾಗುತ್ತಿದೆ.ಆದರೂ ಜನತೆಯ ನೆಮ್ಮದಿಯ ಪ್ರಯಾಣಕ್ಕೆ  ಮೂಲ ಸೌಕರ್ಯಗಳಾದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾದದು ಅಗತ್ಯ. ರಸ್ತೆ ಅಗಲೀಕರಣ ಮಾಡುವುದರ ಜತೆಗೆ ವಿಭಜಕ ಮಾಡಬೇಕು.  ಮುಂದಾಲೋಚನೆ ಇಟ್ಟುಕೊಂಡು ಈಗಲೆ ರಸ್ತೆ ಅಗಲೀಕರಣ  ಮಾಡುವುದು  ಉಚಿತ ಎನ್ನುವುದು ಪ್ರಜ್ಞಾವಂತರ ಬೇಡಿಕೆ.

 ಲೋಕೋಪಯೋಗಿ ಇಲಾಖೆಯು ರಸ್ತೆ ದುರಸ್ತಿಗೆ ಇದುವರೆಗೆ ಮಳೆ ನೆಪ ಹೇಳುತ್ತಿತ್ತು. ಇದೀಗ ಮಳೆ ನಿಂತಿದೆ.  ಕೂಡಲೆ  ಕಾಮಗಾರಿ ಆರಂಭಮಾಡಬೇಕು. ಇದಕ್ಕಾಗಿ ಅನುದಾನವೂ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಾಮಗಾರಿ ಯಾವಾಗ ಆರಂಭವಾಗುವುದೋ  ಎನ್ನುವ ಕಾತುರ ಸಾರ್ವಜನಿಕರದ್ದು.

ಮಳೆಗಾಲದಲ್ಲಿ ಕೆಸರಿನ ಹೊಂಡ!

ನಾಪೋಕ್ಲು: ದೂರದವರಿಗೆ ಕೊಡಗು ಎಂದರೆ ಮನಸ್ಸಿನ ಎದುರು ಸುಂದರ ದೃಶ್ಯಗಳು ಮೂಡುತ್ತವೆ. ಇಲ್ಲಿನ ನಿಸರ್ಗ ಸಿರಿ, ಜಲಧಾರೆಗಳು, ಚಾರಣ ಯೋಗ್ಯ ಶಿಖರಗಳು - ಈ ಪುಟ್ಟ ಜಿಲ್ಲೆಯ ಎಲ್ಲವೂ ಆಕರ್ಷವೇ. ಇದರ ಜೊತೆಗೆ ಸುಂದರವಾದ ರಸ್ತೆಗಳು ತಿರುವುಗಳ ನಡುವೆಯು ಸುಗಮ ಸಂಚಾರ ಇತ್ಯಾದಿ. ಆದರೆ ಪ್ರವಾಸಿಗರು ಕೊಡಗಿಗೆ ಕಾಲಿರಿಸಿದರೆ ಪರಿಸ್ಥಿತಿಯೇ ಬೇರೆ!ಇಲ್ಲಿನ ಸಂಸ್ಕೃತಿ ವಿಶಿಷ್ಠ ತಾಣಗಳು ಎಲ್ಲವೂ ರಸ್ತೆಯ ಹೊಂಡದೊಳಗೆ ಮಾಯವಾಗಿ ಬಿಡುತ್ತವೆ.  ರಸ್ತೆಗಳೆಂದರೆ ಗುಂಡಿಗಳು. ಏರುತಗ್ಗು ತಿರುವುಗಳ ರಸ್ತೆಯಲ್ಲಿ ನೂರಾರು ಗುಂಡಿಗಳು ಪ್ರವಾಸಿಗರಿಗೆ ಬಾಯಿಬಿಟ್ಟು ಸ್ವಾಗತ ಹೇಳುತ್ತವೆ. ಮಾರುಮಾರಿಗೆ ಹೊಂಡಗುಂಡಿಗಳು. ಗ್ರಾಮೀಣ ರಸ್ತೆಗಳ ದುಸ್ಥಿತಿ ಇದು.ಯಾವುದೇ ಒಂದು ಪಟ್ಟಣ ನಗರ ಎಷ್ಟೇ ಪ್ರಸಿದ್ದಿ ಪಡೆದರೂ ಸಂಪರ್ಕ ವ್ಯವಸ್ಥೆ ಅತ್ಯಗತ್ಯ. ಅದರಲ್ಲೂ ಮುಖ್ಯವಾಗಿ ಬೇಕಾಗಿರುವುದು ಉತ್ತಮ ರಸ್ತೆಗಳು. ಹದಗೆಟ್ಟ ರಸ್ತೆಗಳು ಪ್ರವಾಸಿಗರಿಗೂ ಸ್ಥಳೀಯರಿಗೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ನಾಪೋಕ್ಲುವಿನಿಂದ ಮಡಿಕೇರಿಗೆ ಒಮ್ಮೆ ಸ್ವಂತ ವಾಹನದಲ್ಲಿ ತೆರಳಿದವರು ನೇರವಾಗಿ ವರ್ಕ್ ಶಾಪ್‌ಗೆ ಹೋಗಬೇಕಾದಂತಹ ಪರಿಸ್ಥಿತಿ ಇದೆ.ಹಾಕತ್ತೂರು ಗ್ರಾಮದಲ್ಲಂತೂ ರಸ್ತೆ ಸಂಪೂರ್ಣ ಹೊಂಡಮಯ. ಮೂರ್ನಾಡು ನಾಪೋಕ್ಲು ನಡುವಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಬೊಳಿಬಾಣೆ ಬಳಿ ಒಂದೆರಡು ಕಿ.ಮೀ. ರಸ್ತೆ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.ಮೂರ್ನಾ ಡಿನಿಂದ ಹೊದ್ದೂರಿನ ವರೆಗೆ ಹದಗೆಟ್ಟ ರಸ್ತೆಯನ್ನು ಸರಿಪಡಿಸಲು ಸಾಮಗ್ರಿಗಳು ಬಂದು ಬಿದ್ದಿವೆಯಷ್ಟೇ, ಆದರೆ ಕಾಮಗಾರಿ ಆರಂಭವಾಗಿಲ್ಲ. ಕೊಟ್ಟಮುಡಿಯಿಂದ ನಾಪೋಕ್ಲು ವರೆಗಿನ ರಸ್ತೆಯೂ ಹೊಂಡ ಮಯ. ನಾಪೋಕ್ಲು ಪಟ್ಟಣಕ್ಕೆ ಬಸ್ ನಿಲ್ದಾಣವಿಲ್ಲದೆ ರಸ್ತೆ ಬದಿಯೇ ವಾಹನ ನಿಲುಗಡೆಯಾಗಿದ್ದರಿಂದ ರಸ್ತೆಯೋ ವಾಹನ ನಿಲ್ದಾಣವೋ ಎಂಬ ಗೊಂದಲ ಕಾಡುತ್ತದೆ.

- ಸಿ.ಎಸ್. ಸುರೇಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry