ಕಾಫಿ ಬೆಳೆಗಾರರು ಭೂ ಒತ್ತುವರಿ ಮಾಡಿದ್ದು ಪಾಪವಲ್ಲ

ಮಡಿಕೇರಿ: ಕಾಫಿ ತೋಟ ಮಾಡುವ ಸಂದರ್ಭದಲ್ಲಿ ಅಲ್ಲಲ್ಲಿ ಕೆಲವು ಬೆಳಗಾರರು ಭೂ ಒತ್ತುವರಿ ಮಾಡಿಕೊಂಡಿರಬಹುದು. ಇದೇನು ಮಹಾ ಪಾಪವಲ್ಲ. ಕಾಫಿ ಕೃಷಿ ಮಾಡುವ ಮೂಲಕ ಇಲ್ಲಿನ ಪರಿಸರವನ್ನು ಕಾಪಾಡುತ್ತಿದ್ದೇವೆ. ಬಳ್ಳಾರಿಯಂತೆ ಭೂಮಿ ಅಗೆದು ಹಾಕುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಬೆಳೆಗಾರರ ಫೆಡರೇಷನ್ನ (ಕೆಜಿಎಫ್) ಮಾಜಿ ಅಧ್ಯಕ್ಷ ಡಾ.ಎಂ.ಕೆ. ಪ್ರದೀಪ್ ಹೇಳಿದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘವು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಫಿ ಕೃಷಿಯ ಮೂಲಕ ಸರ್ಕಾರಕ್ಕೂ ಬೆಳೆಗಾರರು ಆದಾಯ ತಂದುಕೊಡುತ್ತಿದ್ದಾರೆ. ಭೂ ಒತ್ತುವರಿ ಬಗ್ಗೆ ಗುಲ್ಲೆದ್ದಾಗ ಎಲ್ಲ ಬೆಳೆಗಾರರು ಒಂದಾಗಿ ಹೋರಾಟಕ್ಕೆ ಇಳಿಯಬೇಕು. ಒತ್ತುವರಿ ಮಾಡಿರುವ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಬೆಳೆಗಾರರಿಗೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡೋಣ ಎಂದರು.
ಸನ್ ಕಾಫಿ– ಆತಂಕ: ತೋಟದಲ್ಲಿ ನೆರಳು ನೀಡುವ ಮರಗಳನ್ನು ಕತ್ತರಿಸಿ, ಸೂರ್ಯನ ಬೆಳಕಿನಲ್ಲಿ ಕಾಫಿ ಬೆಳೆಸಲು ಈಚೆಗೆ ಕೆಲವು ಬೆಳೆಗಾರರು ಮುಂದಾಗಿರುವುದು ಆತಂಕಕಾರಿ. ಹೀಗಾದರೆ ಸೂಕ್ಷ್ಮ ಪರಿಸರ ತಾಣವಾಗಿರುವ ಪಶ್ಚಿಮ ಘಟ್ಟಕ್ಕೆ ಧಕ್ಕೆ ಉಂಟಾಗಲಿದೆ. ಬೆಳೆಗಾರರು ಪರಿಸರ ಕಾಪಾಡಲು ಬದ್ಧರಾಗಬೇಕು ಎಂದು ಕರೆ ನೀಡಿದರು.
ಕರಿಮೆಣಸು, ಸಿಲ್ವರ್ ಓಕ್ ಮರಗಳು, ಅಡಿಕೆ ಸೇರಿದಂತೆ ಇತರ ಬೆಳೆಗಳ ಜತೆ ಮಿಶ್ರಬೆಳೆಯಾಗಿ ಕಾಫಿಯನ್ನು ಬೆಳೆಸಬೇಕು. ಕಾಫಿ ಮಾರುಕಟ್ಟೆ ಏರುಪೇರಾದಾಗ ಮಿಶ್ರ ಬೆಳೆಗಳು ಬೆಳೆಗಾರರ ಕೈ ಹಿಡಿಯುತ್ತವೆ ಎಂದರು.
ಇಂದು ಕಾಫಿ ಉದ್ಯಮವು ದೊಡ್ಡ ದೊಡ್ಡ ಕಾಫಿ ಕಂಪೆನಿಗಳ ಕೈಯಲ್ಲಿದೆ. ಈ ಕಂಪೆನಿಗಳೇ ಕಾಫಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಹೆಚ್ಚಿನ ಲಾಭಾಂಶವು ಕೂಡ ಇದೇ ಕಂಪೆನಿಗಳ ಪಾಲಾಗುತ್ತಿದೆ. ಬೆಳೆಗಾರರಿಗೆ ದಕ್ಕುತ್ತಿರುವ ಲಾಭಾಂಶ ಅತ್ಯಲ್ಪ ಎಂದು ತಿಳಿಸಿದರು.
ಕೆಜಿಎಫ್ ಪ್ರಧಾನ ಕಾರ್ಯದರ್ಶಿ ತೀರ್ಥಮಲ್ಲೇಶ್ ಮಾತನಾಡಿ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘವು ತನ್ನದೇ ಆದ ಬ್ರಾಂಡ್ ಹೆಸರಿನಡಿ ಕಾಫಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಕಾಫಿ ಸೇವನೆಯನ್ನು ಜನಪ್ರಿಯಗೊಳಿಸಲು ಮುಂದಾಗಬೇಕು ಎಂದು ಹೇಳಿದರು.
ಪ್ರತಿ ವರ್ಷ ಅ. 1ರ ದಿನವನ್ನು ಅಂತರರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಫಿ ಬೆಳೆಯದ ಪ್ರದೇಶಗಳಲ್ಲಿ ಕಾಫಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಕಾರ್ಯದರ್ಶಿ ಅನಿತಾ ನಂದಾ ಬೆಳ್ಯಪ್ಪ, ಉಪಾಧ್ಯಕ್ಷೆ ಸುಮಾ ತಿಮ್ಮಯ್ಯ, ಖಜಾಂಚಿ ಭಾವನಾ ಪ್ರವೀಣ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.