ಕಾಫಿ ರಫ್ತು ಶೇ 42 ಪ್ರಗತಿ

ಮಂಗಳವಾರ, ಜೂಲೈ 16, 2019
25 °C

ಕಾಫಿ ರಫ್ತು ಶೇ 42 ಪ್ರಗತಿ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಮಾರುಕಟ್ಟೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕಾಫಿ ರಫ್ತು ಶೇ 42ರಷ್ಟು ಹೆಚಿದ್ದು, 80,367 ಟನ್‌ಗಳಿಗೆ ಏರಿಕೆಯಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 56,690 ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. 2011ನೇ ಸಾಲಿನಲ್ಲಿ ಒಟ್ಟು ಕಾಫಿ ರಫ್ತು ಮೌಲ್ಯ ಎರಡು ಪಟ್ಟು ಹೆಚ್ಚಳವಾಗಿದ್ದು, 113 ದಶಲಕ್ಷ ಡಾಲರ್‌ಗಳಿಂದ ( ರೂ. 5,08,500) 244 ದಶಲಕ್ಷ ಡಾಲರ್‌ಗಳಿಗೆ ( ರೂ.10,98,000) ಏರಿಕೆಯಾಗಿದೆ.ಕಳೆದ ವರ್ಷದ  ರೂ. 94,018ಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಪ್ರತಿ ಟನ್ ಕಾಫಿ ಧಾರಣೆ ರೂ.1,35,442ಕ್ಕೆ ಏರಿಕೆಯಾಗಿದೆ. 2010-11ನೇ ಸಾಲಿನ ಮೊದಲ ಎಂಟು ತಿಂಗಳಲ್ಲಿ (ಅಕ್ಟೋಬರ್-ಸೆಪ್ಟಂಬರ್) ಕಾಫಿ ರಫ್ತು ಶೇ 44ರಷ್ಟು ಹೆಚ್ಚಿದೆ. ಈ ಅವಧಿಯಲ್ಲಿ 2,47,372 ಟನ್‌ಗಳಷ್ಟು ಕಾಫಿ ರಫ್ತಾಗಿದೆ. ಇಟಲಿ, ಜರ್ಮನಿ, ಬೆಲ್ಜಿಯಂ, ರಷ್ಯಾ ಮತ್ತು ಸ್ಪೇನ್ ದೇಶಗಳಿಗೆ ಪ್ರಮುಖವಾಗಿ ದೇಶದಿಂದ ಕಾಫಿ ರಫ್ತಾಗುತ್ತದೆ.ಜಾಗತಿಕ ಕಾಫಿ ರಫ್ತು ಹೆಚ್ಚಳ: 2011ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಜಾಗತಿಕ ಕಾಫಿ ರಫ್ತು ಶೇ 24ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7.84 ದಶಲಕ್ಷ ಕಾಫಿ ಬ್ಯಾಗ್‌ಗಳನ್ನು ರಫ್ತು ಮಾಡಲಾಗಿತ್ತು. ಪ್ರಸಕ್ತ ಅವಧಿಯಲ್ಲಿ ಇದು 9.73 ದಶಲಕ್ಷ ಬ್ಯಾಗ್‌ಗಳಿಗೆ ಏರಿದೆ ( ಪ್ರತಿ ಬ್ಯಾಗ್ 60 ಕೆ.ಜಿ) ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ (ಐಸಿಒ) ಹೇಳಿದೆ.ಆದರೆ, ಕಳೆದ ಮಾರ್ಚ್‌ನಲ್ಲಿ ದಾಖಲಿಸಿದ್ದ ದಾಖಲೆ ಪ್ರಗತಿ 10.4 ದಶಲಕ್ಷ ಬ್ಯಾಗ್‌ಗಳಿಗೆ ಹೋಲಿಸಿದರೆ ಇದು ಕಡಿಮೆ ಇದೆ. ಪ್ರಸಕ್ತ ಕಾಫಿ ಇಳುವರಿ ವರ್ಷದ ಮೊದಲ ಏಳು ತಿಂಗಳಲ್ಲಿ ರಫ್ತು ಶೇ 16.7ರಷ್ಟು ಹೆಚ್ಚಿದ್ದು, 62 ದಶಲಕ್ಷ ಬ್ಯಾಗ್‌ಗಳಿಗೆ ಏರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry