ಕಾಫಿ ರಾಜ್

7

ಕಾಫಿ ರಾಜ್

Published:
Updated:

ಬೆಳಿಗ್ಗೆ ಏಳುತ್ತಿದ್ದಂತೆ ಬಿಸಿ ಬಿಸಿ ಕಾಫಿ ನಾಲಿಗೆ ತಾಕಿದರಷ್ಟೆ ದಿನ ಸಲೀಸಾಗುವುದು. ಅಷ್ಟು ಕಾಫಿ ಮೋಹ ಜನರಿಗಿದೆಯಂತೆ. ಈ ಕಾಫಿ ಪ್ರೀತಿಯನ್ನು ಮುಂದಿಟ್ಟುಕೊಂಡು ಕಾಫಿಯಲ್ಲೂ ಹಲವು ಪ್ರಯೋಗಗಳನ್ನು ಮಾಡಿದ್ದೇವೆ ಎನ್ನುತ್ತಾರೆ ಕಾಫಿ ಟ್ರೇನರ್‌ ಮರ್ಲಿನ್ ರಾಜ್‌.ಕಾರ್ತಿಕ ನಗರದ ಕೆಫೆ ಕಾಫಿ ಡೇ ‘ಕಾಫಿ ಉತ್ಸವ’ವನ್ನು ಇದೇ ಅಕ್ಟೋಬರ್ 11ರವರೆಗೂ ಹಮ್ಮಿಕೊಂಡಿದ್ದು, ಕಾಫಿ ತಯಾರಿಸುವ ಕಲೆಯನ್ನು ಪ್ರಚುರಪಡಿಸಲೆಂದೇ ಇಂಥದ್ದೊಂದು ಕಾರ್ಯಕ್ಕೆ ಚಾಲನೆ ನೀಡಿದೆಯಂತೆ. ಅಂದಹಾಗೆ, 2012ರ ನ್ಯಾಷನಲ್‌ ಬರಿಸ್ತಾ ಚಾಂಪಿಯನ್‌ ಆಗಿದ್ದ ಮರ್ಲಿನ್ ರಾಜ್‌, ಕಾಫಿ ಮಾಡುವ ಕಲೆ, ಕುಡಿಯುವ ಕಲೆ ಹಾಗೂ ಕಾಫಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ನಗರದಲ್ಲಿ ಕಾಫಿ ಟ್ರೆಂಡ್ ಹೇಗಿದೆ?

ಜನರಲ್ಲಿ ಕಾಫಿ ಬಗ್ಗೆ ತಿಳಿವಳಿಕೆ ಹೆಚ್ಚಿದೆ ಎನಿಸುತ್ತಿದೆ. ಹೊಸತನವನ್ನು ಬಯಸುವ ಮಂದಿ ಹೆಚ್ಚುತ್ತಿದ್ದಾರೆ. ಹೊಸತನ್ನು ಪರಿಶೀಲಿಸುವುದನ್ನೂ ಕಲಿತಿದ್ದಾರೆ. ಯಾವುದು ತಮಗೆ ಸೂಕ್ತ, ಯಾವುದರಲ್ಲಿ ಯಾವ ಅಂಶ ಹೆಚ್ಚಿದೆ?  ಅದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಹೀಗೆ ಪ್ರತಿಯೊಂದನ್ನೂ ಗಮನಿಸುತ್ತಾರೆ. ಅಷ್ಟೇ ಅಲ್ಲ, ಕಾಫಿಯಲ್ಲೂ ಹಲವು ವಿಶೇಷತೆಗಳು ಬಂದಿವೆ. ಕಾಫಿ ಮೇಲೆ ಡಿಸೈನ್‌ ಮಾಡುವುದು, ಕೋಲ್ಡ್ ಕಾಫಿ ಹೀಗೆ ಹಲವು ವೈವಿಧ್ಯದಿಂದ ಕಾಫಿ ಬಳಕೆ ಹೆಚ್ಚಾಗಿದೆ.ಕಾಫಿ ಬಗ್ಗೆ ಆಸಕ್ತಿ ಹೊಂದಲು ಕಾರಣವೇನು? ಯಾರ ಬಳಿ ತರಬೇತಿ ಪಡೆದುಕೊಂಡಿರಿ?

ಚಿಕ್ಕವನಿರಬೇಕಾದರೆ ನನ್ನ ತಾತ ಬೆಳಿಗ್ಗೆ ಎದ್ದಾಕ್ಷಣ ಬಿಸಿ ಬಿಸಿ ಫಿಲ್ಟರ್ ಕಾಫಿ  ಕುಡಿಯುತ್ತಿದ್ದರು. ನಾನೂ ಅವರೊಂದಿಗೆ ಕುಡಿಯಲು ಆರಂಭಿಸಿದೆ. ಆಗಿನಿಂದಲೂ ಕಾಫಿ ತುಂಬಾ ಇಷ್ಟ. ನಂತರ ‘ಫುಡ್‌ ಅಂಡ್‌ ಬೆವರೇಜಸ್’ ನಲ್ಲಿ ಪದವಿ ಪಡೆದುಕೊಂಡೆ. ನನಗೆ ಹೊಸತರ ಬಗ್ಗೆ ಸದಾ ಉತ್ಸಾಹ. ಆದ ಕಾರಣ ದಿನನಿತ್ಯದ ಪೇಯ ಕಾಫಿಯಲ್ಲೂ ಹೊಸತನ ಕಂಡುಹಿಡಿಯಲು ಆರಂಭಿಸಿದೆ. ಕಾಫಿಯಲ್ಲಿ ಪರಿಣತಿ ಹೊಂದಿದ್ದ ಸುನಾಲಿನಿ ಮೆನನ್‌ ಅವರ ಬಳಿ ಕಾಫಿ ಕುರಿತು ತರಬೇತಿ ಪಡೆದುಕೊಂಡೆ.ಭಾರತೀಯ ಕಾಫಿಯ ವಿಶೇಷವೇನು?

ಭಾರತದಲ್ಲಿ ಎರಡು ಬಗೆಯ ಕಾಫಿ ಇದೆ. ಅರೇಬಿಕಾ ಹಾಗೂ ರೊಬಸ್ಟಾ. ಆದರೆ ಇದರಲ್ಲಿ 800 ಫ್ಲೇವರ್‌ಗಳಿವೆ. ನಮ್ಮ ಮತ್ತೊಂದು ವಿಶೇಷವೆಂದರೆ, ಹೆಚ್ಚು ಗೊಬ್ಬರ ಬಳಸದೆ ನೈಸರ್ಗಿಕವಾಗಿ ಕಾಫಿಯನ್ನು ಬೆಳೆಯುವುದು. ಅಷ್ಟೇ ಅಲ್ಲದೆ ಒಂದೊಂದು ಪ್ರದೇಶದ ಕಾಫಿಯೂ ಒಂದೊಂದು ಫ್ಲೇವರ್ ಒಳಗೊಂಡಿರುತ್ತದೆ.ಕಾಫಿ ಕುಡಿಯುವುದೂ ಒಂದು ಕಲೆ ಎನ್ನುತ್ತೀರ. ಅದು ಹೇಗೆ?

ಹೌದು. ಪ್ರತಿಯೊಂದರಲ್ಲೂ ಶಿಷ್ಠತೆ ಇರಬೇಕು. ಹಾಗೆಯೇ ಕಾಫಿ ಕುಡಿಯುವುದೂ ಒಂದು ಕಲೆ. ಮೊದಲು ಕಾಫಿ ಸುವಾಸನೆಯನ್ನು ಆಸ್ವಾದಿಸಬೇಕು. ನಂತರ ಕಾಫಿ ಕಪ್‌ ಅನ್ನು ತುಟಿಯಂಚಿಗೆ ತಾಕಿಸಿ ಗುಟುಕು ಕಾಫಿ ರುಚಿ ಸವಿಯಿರಿ. 15 ಸೆಕೆಂಡ್‌ಗಳಷ್ಟು ಅಂತರ ಕೊಟ್ಟು ಮತ್ತೆ ಕುಡಿಯಿರಿ. ಈಗ ಕಾಫಿಯಲ್ಲಿ ಅಡಗಿರುವ ಫ್ಲೇವರ್ ಅನುಭವಕ್ಕೆ ಸಿಕ್ಕುತ್ತದೆ. ಕಾಫಿಯನ್ನು ಬೇಗ ಬೇಗನೆ ಕುಡಿಯಬಾರದು. ಮನಸಾರೆ ಅನುಭವಿಸಿ ಕುಡಿಯಬೇಕು. ಇದೇ ಕಾಫಿ ಕುಡಿಯುವ ಟಿಪ್ಸ್.ನಿಮ್ಮ ಸಿಗ್ನೇಚರ್ ಕಾಫಿ ಬ್ರಾಂಡ್ ಯಾವುದು?

‘ಕಪ್ಪಿ ಮಾರ್ತಾಂಡಂ’. ಇದು ಕೇರಳದ ಸಾಂಪ್ರದಾಯಿಕ ಫಿಲ್ಟರ್ ಕಾಫಿ. ಇದಕ್ಕೆಂದು ಬೆಸ್ಟ್ ಕ್ಯಾಪುಚಿನೊ ಅವಾರ್ಡ್ ಹಾಗೂ ಬೆಸ್ಟ್ ಸಿಗ್ನೇಚರ್ ಬ್ರ್ಯೂ ಅವಾರ್ಡ್ ಸಿಕ್ಕಿತು. ಇನ್ನು ವಿಯೆನ್ನಾದಲ್ಲೂ ‘ಕೋ ಕೋ ಬಾಂಗ್’ ಎಂಬ ನನ್ನದೇ ಬ್ರಾಂಡ್ ಇದೆ.ವೈಯಕ್ತಿಕವಾಗಿ ನಿಮಗೆ ಯಾವ ಕಾಫಿ ಇಷ್ಟ?

ನನಗೆ ಮೊದಲಿನಿಂದಲೂ ಸಾಂಪ್ರದಾಯಿಕ ಫಿಲ್ಟರ್ ಕಾಫಿಯೇ ಇಷ್ಟ.ಕಾಫಿಗೆ ಸಂಬಂಧಿಸಿದಂತೆ ಯಾವ ಹೊಸ ಸಾಧನವನ್ನು ಪರಿಚಯಿಸಿದ್ದೀರಿ?

ಕಾಫಿ ತಯಾರಿಸುವ ಮೂರು ರೀತಿಯ ಸಾಧನಗಳನ್ನು ಪರಿಚಯಿಸಿದ್ದೇವೆ. ಹಾಗೆಯೇ ಅರೇಬಿಕಾ, ಚಾರ್ಜ್, ಪರ್ಫೆಕ್ಟ್, ಮೈಸೂರು ರಾಯಲ್, ಡಾರ್ಕ್ ಫಾರೆಸ್ಟ್, ಟ್ರಿಸ್ಟ್, ಫಿಲ್ಟ ಫ್ರೆಶ್ ಕಾಫಿಪುಡಿಗಳನ್ನು ಹೊರತಂದಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ಕಾಫಿ ತಯಾರಿಸಿ ಕುಡಿಯಬಹುದು. ಕಾಫಿ ಕ್ಯಾಪ್ಸೂಲ್ ಗಳು ಕೂಡ ಈಗ ಬಂದಿವೆ.ಕಾಫಿ ಕುಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ. ನಿಮ್ಮ ಅಭಿಪ್ರಾಯವೇನು?

ಕಾಫಿ ಕುಡಿದರೆ ಆರೋಗ್ಯ ಕೆಡುತ್ತದೆ ಎನ್ನುವುದು ಸುಳ್ಳು. ಅದು ಮೆದುಳು, ಮನಸ್ಸಿಗೆ ಚೈತನ್ಯ ನೀಡುವ ಪೇಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬುದನ್ನು ಮರೆಯಬಾರದು.ದಿನಕ್ಕೆ ಎಷ್ಟು ಕಪ್‌ ಕಾಫಿ ಸೇವಿಸುವುದು ಒಳ್ಳೆಯದು?

ದಿನಕ್ಕೆ ಮೂರು ಕಪ್‌ ಸಾಕು.ಮಕ್ಕಳೂ ಕಾಫಿ ಡೇಗಳಿಗೆ ಹೋಗಿ ಕಾಫಿ ಕುಡಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕಾಫಿ ಮಕ್ಕಳ ಆರೋಗ್ಯಕ್ಕೆ ಮಾರಕವಲ್ಲವೇ?

ಮಕ್ಕಳಿಗೆ ಕಾಫಿ ಅಷ್ಟು ಮಾರಕವೇನಲ್ಲ. ಆದರೆ ಹಾಲು, ಐಸ್ ಕ್ರೀಂ ಜೊತೆ ಇರುವ ಕಾಫಿ ಕುಡಿದರೆ ಒಳಿತು.ಕಾಫಿ ಮಾಡುವ ಕಲೆ ಯಾವುದು?

ಕಾಫಿಯ ಪ್ರಮಾಣ, ಅದನ್ನು ಪ್ರಸ್ತುತ ಪಡಿಸುವ ಪರಿ, ಯಾರಿಗೆ ಯಾವುದು ಇಷ್ಟ ಎಂಬುದನ್ನು ಅರಿತು ಅವರ ರುಚಿಗೆ ತಕ್ಕಂತೆ ಮಾಡುವುದೇ ಕಾಫಿ ಕಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry