ಗುರುವಾರ , ಜೂನ್ 24, 2021
23 °C

ಕಾಫಿ ರುಚಿಕಟ್ಟಿದ ಧಾರಣೆ!

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಕಾಫಿ ಉದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಫಿ ಬೆಲೆ 12 ಸಾವಿರ ರೂಪಾಯಿಗಳ ಗಡಿ ದಾಟಿ ಮುನ್ನಡೆದಿದೆ! ಎಲ್ಲರ ಚಿತ್ತ ಮತ್ತೆ ಕಾಫಿ ಉದ್ಯಮದತ್ತ ನೆಡುವಂತಾಗಿದೆ. ಕಾರ್ಮಿಕರ ಕೊರತೆ, ಕೂಲಿ ದರ ಏರಿಕೆ, ವಾತಾವರಣ ವೈಪರೀತ್ಯ, ವಿವಿಧ ಬಗೆಯ ರೋಗಗಳ ಹಾವಳಿ, ರಸಗೊಬ್ಬರ ಮತ್ತು ಕೀಟನಾಶಕಗಳು ದುಬಾರಿ ಆಗಿರುವುದು, ಕಾಫಿಗೆ ತಕ್ಕ ಬೆಲೆ ಸಿಗದೇ ಇರುವುದು ಮೊದಲಾದ ಹತ್ತಾರು ಸಮಸ್ಯೆಗಳು ಮತ್ತು ಸವಾಲುಗಳ ನಡುವೆ ಕಾಫಿ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದ ಬೆಳೆಗಾರರಲ್ಲಿ ಈಗ ಮತ್ತೆ ಆಸೆಗಳು ಹೊಸದಾಗಿ ಚಿಗುರೊಡೆದಿವೆ. ಕಾಫಿ ನಾಡಿನಲ್ಲಿ ಕುಂಟುತ್ತಾ, ತೆವಳುತ್ತಾ ಸಾಗಿದ್ದ ಆರ್ಥಿಕ ಚಟುವಟಿಕೆಗಳು ಮತ್ತೆ ಚುರುಕು ಪಡೆಯುವ ನಿರೀಕ್ಷೆ ಮೂಡಿದೆ.ಸಾಲವೋ–ಶೂಲವೋ ಕಾಫಿ ತೋಟಗಳನ್ನು ಹಾಳು ಬಿಡದೆ, ವರ್ಷ ವರ್ಷವೂ ಕೆಲಸ ಮಾಡಿಸಿ ಸುಸ್ಥಿತಿಯಲ್ಲಿಟ್ಟಕೊಂಡರೆ ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಬೆಳೆಗಾರರಲ್ಲಿ ಈಗ ಮತ್ತೊಮ್ಮೆ ಬಲವಾಗುತ್ತಿದೆ.ಮೊದಲ ಬಾರಿಗೆ 1990ರ ದಶಕದಲ್ಲಿ ಕಾಫಿ ಉದ್ಯಮದಲ್ಲಿ ದಿಢೀರ್‌ ಉಂಟಾದ ‘ಬೂಮರ್‌’ ದಿನಗಳನ್ನು ಈ ವರ್ಷದ ಬೆಲೆ ಏರಿಕೆ ಮತ್ತೆ ನೆನಪಿಸುವಂತೆ ಮಾಡಿದೆ. ಆದರೆ, ಅಂದು ಬಹುತೇಕ ಬೆಳೆಗಾರರ ಬಳಿ ಕೊಯ್ಲು ಮಾಡಿ ಕಾಫಿ ದಾಸ್ತಾನು ಇತ್ತ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬೆಲೆ ಏರಿಕೆಯ ಲಾಭವನ್ನು ಬೆಳೆಗಾರರು ನೇರವಾಗಿ ಪಡೆದಿದ್ದರು. ಪರಿಣಾಮ ಮಲೆನಾಡಿನ ಕಾಫಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಐಶಾರಾಮಿ ವಾಹನಗಳು ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು.ದುಬಾರಿ ಬೆಲೆಯ ಕಾರುಗಳನ್ನು ಇಟ್ಟುಕೊಳ್ಳದ ಕಾಫಿ ಬೆಳೆಗಾರರೇ ಇಲ್ಲ ಎನ್ನುವ ಮಟ್ಟಕ್ಕೆ ಜೀವನಶೈಲಿ ಮತ್ತು ಆರ್ಥಿಕ ಮಟ್ಟ ಸುಧಾರಿಸಿತ್ತು. ಬೆಲೆ ಏರಿಕೆಯಿಂದ ಬದಲಾದ ಕಾಫಿ ಬೆಳೆಗಾರರ ಐಶಾರಾಮಿ ಬದುಕು, ಭಿನ್ನ ಜೀವನ ಶೈಲಿ ಅಕ್ಷರಶಃ ಅಂದು ಬಡರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಕಣ್ಣು ಕುಕ್ಕುವಂತೆ ಮಾಡಿತ್ತು.ಒಂದೊಂದು ಮನೆಗೆ ಎರಡು ಮೂರು ಕಾರುಗಳು, ಜೀಪುಗಳು ಬಂದವು. ಹೆಣ್ಣು ಕೊಡುವವರು, ತರುವವರು ಕಾಫಿ ಪ್ಲಾಂಟರ್ಸ್‌ ಕುಟುಂಬಗಳನ್ನು ಹುಡುಕಲಾರಂಭಿಸಿದರು. ಕಾಫಿ ತೋಟವಿದ್ದ ವರನಿಗೆ ಎಲ್ಲಿಲ್ಲದ ಡಿಮ್ಯಾಂಡೋ ಡಿಮ್ಯಾಂಡೊ... ನಾಲ್ಕೈದು ಎಕರೆ ಕಾಫಿ ತೋಟ ಹೊಂದಿದ್ದವರು ತಮ್ಮ ಮಕ್ಕಳನ್ನು ಸರ್ಕಾರಿ ನೌಕರಿಗೂ ಕಳುಹಿಸಲಿಲ್ಲ! ಅಷ್ಟರ ಮಟ್ಟಿಗೆ ಸಾಮಾಜಿಕ ಬದಲಾವಣೆಗೆ ಕಾರಣವಾಗಿತ್ತು 1990ರ ದಶಕದಲ್ಲಿ ಕಾಫಿಗೆ ಸಿಕ್ಕಿದ ಭಾರಿ ಬೆಲೆ.ಮೂರೇ ವರ್ಷ ಕಾಫಿ ಬೆಲೆ ಜರ್ರನೆ ಇಳಿಯುತ್ತಿದ್ದಂತೆಯೇ, ‘ಕಾಫಿ ಬೆಳೆಗಾರರು ಮುಳುಗಿ ಹೋದರು’.... ಎನ್ನುವ ಮಾತುಗಳು ಜನರ ನಡುವೆ  ನಿತ್ಯ ಕೇಳಿಬರಲಾರಂಭಿಸಿದವು. ಕುಳಿತಲ್ಲಿ ನಿಂತಲ್ಲಿ ಅದೇ ವಿಚಾರ ಚರ್ಚೆಯಾಗತೊಡಗಿತ್ತು. ದುಂದು ವೆಚ್ಚದ ಜತೆಗೆ ಹೊಸ ತೋಟಗಳ ನಿರ್ಮಾಣ, ಕಟ್ಟಡಗಳ ನಿರ್ಮಾಣ, ನಿವೇಶನ, ಭೂಮಿ ಖರೀದಿ.... ಹೀಗೆ ಕೈಯಲ್ಲಿದ್ದ ಹಣವನ್ನೆಲ್ಲ ಭವಿಷ್ಯಕ್ಕೆ ಇಟ್ಟುಕೊಳ್ಳದೆ ಬಹಳಷ್ಟು ಮಂದಿ ಖಾಲಿ ಮಾಡಿಕೊಂಡಿದ್ದರು. ಕಾಫಿಗೆ ಕಾಡುವ ರೋಗ ಬಾಧೆ, ಬರಗಾಲ, ತಗ್ಗಿದ ಇಳುವರಿ, ಬೆಲೆ ಕುಸಿತ ಮತ್ತೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು.ಬಹುತೇಕ ಕಾಫಿ ಬೆಳೆಗಾರರ ಮಕ್ಕಳು, ಓದು, ಉದ್ಯೋಗ, ಭವಿಷ್ಯ ಅರಸಿ ಬೆಂಗಳೂರು, ಮಂಗಳೂರು, ಮೈಸೂರು ನಗರಗಳತ್ತ ಹೊರಟರು. ಬಹಳಷ್ಟು ಕಾಫಿ ತೋಟಗಳು ಹಾಳು ಬಿದ್ದವು. ಈಗ ಮತ್ತೆ 3ದಶಕಗಳ ಹಿಂದಿನ ದಿನಗಳನ್ನು ನೆನಪಿಸುವ ಮಟ್ಟಿಗೆ ಕಾಫಿ ಬೆಲೆ ಏರಿಕೆಯಾಗಿದೆ. ಇಲ್ಲಿಯವರೆಗೂ ಕಾಫಿ ಮಾರಾಟ ಮಾಡದೆ ಇಟ್ಟುಕೊಂಡವನೇ ಕುಬೇರ ಎಂಬಂತಾಗಿದೆ. ಅಷ್ಟೊಂದು ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ.ಆದರೆ, ಬಹುತೇಕ ಬೆಳೆಗಾರರ ಬಳಿ ಸದ್ಯ ಕಾಫಿ ದಾಸ್ತಾನಿಲ್ಲ. ಉತ್ತಮ ಬೆಲೆ ಬರುವ ನಿರೀಕ್ಷೆ ಇಲ್ಲದೆ ಅಥವಾ ಬೆಲೆ ಕುಸಿದರೆ ಏನು ಗತಿ ಎಂಬ ಆತಂಕದಲ್ಲಿ ನವೆಂಬರ್‌, ಡಿಸೆಂಬರ್‌ನಲ್ಲೇ ಬಹಳಷ್ಟು ಬೆಳೆಗಾರರು ಕಾಫಿ ಮಾರಾಟ ಮಾಡಿದ್ದಾರೆ. ಈಗ ಅಂತಹವರ ಕಥೆ ‘ಹಲ್ಲು ಇದ್ದಾಗ ಕಡಲೆ ಇಲ್ಲ; ಕಡಲೆ ಇದ್ದಾಗ ಹಲ್ಲು ಇಲ್ಲ’ ಎನ್ನುವಂತಾಗಿದೆ. ಬೆಳೆಗಾರರು ತಮ್ಮ ದುರದೃಷ್ಟವನ್ನು ತಾವೇ ಹಳಿದುಕೊಳ್ಳು­ತ್ತಿದ್ದಾರೆ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದವರು ಮತ್ತು ಅಂತರ­ರಾಷ್ಟ್ರೀಯ ವಿದ್ಯಮಾನಗಳನ್ನು ಸದಾ ಗಮನಿಸುವ ಮಾರುಕಟ್ಟೆ ಜ್ಞಾನ ಹೊಂದಿರುವ ಬೆಳೆಗಾರರು ಮಾತ್ರ ಗೋದಾಮಿನಿಂದ ಈಗಷ್ಟೇ ಕಾಫಿ ದಾಸ್ತಾನು ಹೊರ ತೆಗೆಯುತ್ತಿದ್ದಾರೆ. ಇನ್ನು ಕೆಲವರು ಈಗಿನ ಬೆಲೆಗೂ ಮಾರಾಟ ಮಾಡಲು ಮನಸು ಮಾಡದೆ ಇನ್ನಷ್ಟು ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಏರಿಳಿತ ಏಕೆ; ಲಾಭ ಯಾರಿಗೆ?

ಕಚ್ಚಾತೈಲದ ವಹಿವಾಟಿನ ನಂತರ ಕಾಫಿ ವಹಿವಾಟು ಜಾಗತಿಕವಾಗಿ ಅತ್ಯಂತ ಹೆಚ್ಚಿನ ವ್ಯಾಪಾರವಾಗುವ ವಸ್ತುವೆನಿಸಿದೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ 4.5ರಷ್ಟು ಮಾತ್ರ. ಏನಿದ್ದರೂ ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ, ಮೆಕ್ಸಿಕೊ ಮತ್ತು ಇಂಡೋನೇಷ್ಯಾ ದೇಶಗಳದ್ದೇ ಕಾಫಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ. ಈ ದೇಶಗಳ ನಂತರ ಕಾಫಿ ಉತ್ಪಾದಕರ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಕಾಫಿ ಬೆಳೆಯುವ ಪ್ರದೇ­ಶಗಳು ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರ­ಗಳಾದರೆ, ಅದನ್ನು ಬಳಸುವ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಾಗಿವೆ. ನಮ್ಮ ರಾಷ್ಟ್ರದ  ಕಾಫಿ ಉತ್ಪಾದನೆಯ ಶೇ 80 ಜಾಗತಿಕ ಮಾರುಕಟ್ಟೆ­ಯಲ್ಲಿ ವ್ಯಾಪಾರವಾದರೆ ಶೇ 20 ಆಂತರಿಕ ಬಳಕೆಗೆ ಮಾರಾಟವಾಗುತ್ತದೆ.2012ರಲ್ಲಿ ರೂ.11 ಸಾವಿರಕ್ಕೆ ಏರಿದ್ದ ಅರೇಬಿಕಾ ಪಾರ್ಚಮೆಂಟ್ (50 ಕೆ.ಜಿ. ಚೀಲ) 2012 ರ ಫೆಬ್ರುವರಿಯಿಂದ ನಿರಂತರ ಇಳಿಯುತ್ತಾ ಬಂದು, 2013ರ ಜನವರಿಯಲ್ಲಿ ರೂ.6500ರಿಂದ ರೂ.6800 ಇತ್ತು. ಈ ವರ್ಷ ಜನವರಿ ಮೊದಲ ವಾರದಲ್ಲಿ ರೂ.5800ಕ್ಕೂ ಇಳಿದಿತ್ತು. ಆದರೆ, ಈಗ ಮಾರ್ಚ್‌­ನಲ್ಲಿ ರೂ.12000 ದಾಟಿದೆ. ನವೆಂಬರ್‌­ನಲ್ಲಿ ಕಾಫಿ ಕೊಯ್ಲು ಶುರುವಾಗಿದ್ದು, ಫೆಬ್ರುವರಿ­ಯ ಬೆಲೆ ಏರಿಕೆ ದಿನಗಳ ವೇಳೆಗಾಗಲೇ ಈ ವರ್ಷದ ಶೇ 80ರಷ್ಟು ಕಾಫಿಯನ್ನು ಬೆಳೆಗಾರರು ಮಾರಾಟ ಮಾಡಿಬಿಟ್ಟಿದ್ದಾರೆ.ಬ್ರೆಜಿಲ್‌­ನಲ್ಲಿ ಈ ವರ್ಷ ತೀವ್ರ ಬರಗಾಲ ಎದು­ರಾ­ಗಿರು­ವುದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸ­ಲಾ­ಗುತ್ತಿದೆ. ಬ್ರೆಜಿಲ್‌ನ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಾರ್ಚ್‌–ಏಪ್ರಿಲ್‌ನಲ್ಲೂ ಮಳೆ ಸರಿಯಾಗಿ ಆಗದಿದ್ದರೆ ಕಾಫಿ ಬೆಲೆ ಮತ್ತೆ ಗಗನ­ಮುಖಿಯಾಗುವುದರಲ್ಲಿ ಅನುಮಾ­ನವೇ ಇಲ್ಲ ಎನ್ನುತ್ತಾರೆ ಕಾಫಿ ಮಾರುಕಟ್ಟೆ ತಜ್ಞರು.‘ಬೆಳೆಗಾರರ ಮುಖವಾಡ ಹೊಂದಿರುವ ವ್ಯಾಪಾರಿಗಳಿಂದ ಪೋಷಿತವಾಗಿರುವ ಪತ್ರಿಕೆಯೊಂದು ಸಮ್ಮೇಳನ ನಡೆಸಿ ಬೆಳೆಗಾರರನ್ನು ದಾರಿ ತಪ್ಪಿಸಿ, ವರ್ತಕರ ಬಲೆಗೆ ಸಿಕ್ಕುವಂತೆ ಮಾಡಿತು. ಬೆಳೆಗಾರರ ಸಂಸ್ಥೆ ಎಂದೇ ಬಿಂಬಿತವಾಗಿರುವ ‘ಕಾರ್ಪೊ­ರೇಟ್ ಸಂಸ್ಥೆ’ಯೊಂದು, ‘ಬ್ರೆಜಿಲ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಕಾಫಿ ಬೆಳೆ ಬಂದಿದ್ದು, ಧಾರಣೆ ಈ ಬಾರಿ ಪಾತಾಳಕ್ಕೆ ಕುಸಿಯಲಿದೆ’ ಎಂದು ‘ಭವಿಷ್ಯ’ ನುಡಿಯಿತು.ಜತೆಗೆ, ಆ ದೇಶಕ್ಕೆ ಭೇಟಿ ನೀಡಿದ್ದಾಗ ತೆಗೆದ ಕಾಫಿ ತೋಟದ ಫಸಲಿನ ಚಿತ್ರಣಗಳು ಎಂದು ‘ಡಿವಿಡಿ’ಯನ್ನೂ ಬೆಳೆಗಾರರಿಗೆ ತೋರಿಸಿ ವ್ಯಾಪಾರಿಗಳ ಪರವಾಗಿ ಕೆಲಸ ಮಾಡಿತು. ಇದರಿಂದ ಆತಂಕಗೊಂಡ ಬೆಳೆಗಾರರಲ್ಲಿ ಬಹುತೇಕರು ತರಾತುರಿಯಲ್ಲಿ (ಈಗಿನ ಬೆಲೆ  ಏರಿಕೆಗೂ ಮೊದಲೇ) ತಮ್ಮಲ್ಲಿದ್ದ ಕಾಫಿ ದಾಸ್ತಾನು ಮಾರಾಟ ಮಾಡುವಂತಾಯಿತು. ಕಾಫಿ ಮಂಡಳಿಯ ಅಧ್ಯಕ್ಷರು, ಅಂತರರಾಷ್ಟ್ರೀಯ ಕಾಫಿ ಸಂಘಟನೆ ಅಧ್ಯಕ್ಷರಾಗಿದ್ದುಕೊಂಡು ಸರಿಯಾಗಿ ಅಧ್ಯಯನ ಮಾಡದೇ, ವ್ಯಾಪಾರಿ ಸಂಸ್ಥೆಗಳ ಏಜೆಂಟ­ರಾಗಿ ವರ್ತಿಸಿದ್ದು ಸಹಾ ಬೆಳೆಗಾರರ ಈ ದುಡುಕಿನ  ನಿರ್ಧಾರಕ್ಕೆ ಪ್ರಮುಖ ಕಾರಣ. ಕಾಫಿ ಮಂಡಳಿ­ಯಂತಹ ಸರ್ಕಾರಿ ಸಂಸ್ಥೆಗಳಲ್ಲಿ ಮಾರುಕಟ್ಟೆಯ ಸ್ಥಿತಿಗತಿ ಬಗ್ಗೆ ಮಾಹಿತಿ ದೊರೆಯದೇ ಇರುವುದು ಬೆಳೆಗಾರರ ದೌರ್ಭಾಗ್ಯ’ ಎಂದು ವಿಷಾದಿಸುತ್ತಾರೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್.ಬೆಲೆ ದಿಢೀರ್ ಏರಿಕೆಗೆ ಕಾರಣ?

‘ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ಒಟ್ಟು ಮಾರುಕಟ್ಟೆಯ ಶೇ 52ರಷ್ಟು ವಹಿವಾಟನ್ನು ನೆಸ್ಲೆ, ಪ್ರಾಕ್ಟರ್ ಅಂಡ್‌ ಗಾಂಬಲ್, ಕ್ರಾಪ್ಟ್ ಮತ್ತು ಸಾರಾಲೀ ಕಂಪೆನಿಗಳೇ ನಡೆಸುತ್ತವೆ. ಈ ಜಾಗತಿಕ ಕಂಪೆನಿಗಳ ಮರ್ಜಿ ಅನುಸರಿಸಿಯೇ ಮಾರುಕಟ್ಟೆ ಏರಿಳಿತ ನಡೆಯುತ್ತದೆ. ಕಾಫಿ ಬೆಲೆ ಕುಸಿದಾಗ ಬ್ರೆಜಿಲ್‌ನಲ್ಲಿ 5.20 ಕೋಟಿ ಕಾಫಿ ಚೀಲ ಉತ್ಪಾದನೆ ಆಗಲಿದೆ ಎಂದು ಯುಎಸ್‌ಡಿಎ (ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಚರ್) ಅಂದಾಜು ಮಾಡಿತ್ತು.ಆಗ ಈ ಬಹುರಾಷ್ಟ್ರೀಯ ಕಂಪೆನಿಗಳು ಕಡಿಮೆ ಬೆಲೆಗೆ ಕಾಫಿ ಖರೀದಿಸಿ ಶೇಖರಿಸಿಟ್ಟುಕೊಂಡವು. ಇದರಿಂದ ಯುರೋಪ್ ಮತ್ತು ಅಮೆರಿಕದಲ್ಲಿನ ಸಣ್ಣ ವ್ಯಾಪಾರಿಗಳಿಗೆ ಕಾಫಿಯ ದಾಸ್ತಾನಿನ ಕೊರತೆ ಉಂಟಾಯಿತು. ಜತೆಗೆ ಕಾಫಿ ಬೀಜ ಮಾರಾಟದ ಸಂಸ್ಥೆಗಳು ಬ್ರೆಜಿಲ್‌ನಲ್ಲಿ ಬರಗಾಲ ಬಂದು ಮುಂದಿನ ವರ್ಷ ಫಸಲು ಕಡಿಮೆ ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಕೊರತೆ ಉಂಟಾಗಲಿದೆ ಎಂಬ ವದಂತಿಯನ್ನೂ ಹರಿಯಬಿಟ್ಟವು.ಪರಿಣಾಮ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪೆನಿಗಳು ಈಗ ಕಾಫಿಯನ್ನು ದಾಸ್ತಾನಿಡಲು ಪೈಪೋಟಿ ನಡೆಸುತ್ತಿವೆ. ದೊಡ್ಡ ಕಂಪೆನಿಗಳು ತಾವು ದಾಸ್ತಾನಿಟ್ಟ ಕಾಫಿಯನ್ನು ಹೆಚ್ಚಿನ ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುತ್ತಿವೆ. ಇಂತಹ ಕಾರ್ಪೊರೇಟ್‌ ಕಂಪೆನಿಗಳ ಪ್ರಹಸನಗಳನ್ನು ಜಾಗತಿಕವಾಗಿ ಕಾಫಿ ಬೆಳೆಗಾರರು ಶತಮಾನಗಳಿಂದ ನೋಡುತ್ತಿದ್ದಾರೆ. ಹಾಗಿದ್ದೂ ಸಂಘಟಿತರಾಗದೇ (ಜಾಗತಿಕವಾಗಿ) ಮೂಕಪ್ರೇಕ್ಷಕರಂತೆ ವ್ಯಾಪಾರಿಗಳ ಮರ್ಜಿಗೆ ಒಳಗಾಗಿ ಸಂಪೂರ್ಣ ಅವನತಿ ಹಾದಿ ಹಿಡಿಯುತ್ತಿದ್ದಾರೆ.ಹಿಂದೆ  ಹಿಮಪಾತದಿಂದ (ಫ್ರಾಷ್ಟ್) ಬ್ರೆಜಿಲ್‌ನಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗಲಿದೆ ಎಂಬ ಸುದ್ದಿ ಹಬ್ಬಿದ್ದರಿಂದ 1976–-77ರಲ್ಲಿ ಮತ್ತು 1993–-94ರಲ್ಲಿ ಇದೇ ರೀತಿ ಬೆಲೆ ದಿಢೀರ್‌ ಏರಿಕೆಯಾಗಿತ್ತು. ಈಗಲೂ ಅದೇ ಬಗೆಯಲ್ಲಿ ಮಾರುಕಟ್ಟೆ ಚಟುವಟಿಕೆ ನಡೆದಿದೆ. ಆದರೆ, ಈಗ ಏರಿರುವ ಬೆಲೆ ಹಠಾತ್ತನೆ ಒಂದು ದಿನ ಇಳಿಯುತ್ತದೆ. ಆ ದಿನಕ್ಕೂ ಮೊದಲು ಬೆಳೆಗಾರರು ದಾಸ್ತಾನು ಖಾಲಿ ಮಾಡಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಜಗನ್ನಾಥ್‌. ಪುನರಾವರ್ತನೆ ಆಗದು

ಮೂರು ದಶಕಗಳ ಹಿಂದೆ ಮಲೆನಾಡಿ­ನಲ್ಲಿ ಕಾಫಿ ಬೆಲೆ ಉಂಟುಮಾಡಿದ ‘ಆಟೋ ಮೊಬೈಲ್‌ ಕ್ರಾಂತಿ’ಯ ಕಂಪನ ಅದೇ ಪ್ರಮಾಣದಲ್ಲಿ ಪುನರಾವರ್ತನೆ ಆಗುತ್ತದೆ ಎನ್ನುವಂತಿಲ್ಲ. ಈಗ ಕಾಲ ಬದಲಾಗಿದೆ. ಕಾಫಿ ಬೆಲೆ ಏರಿಳಿತದ ಅರಿವೂ ಆ ಬದಲಾವಣೆಯ ಹಿಂದಿರುವ ಕಾರಣಗಳಲ್ಲಿ ಒಂದೆನಿಸಿದೆ.ಸ್ವತಃ ಬೆಳೆಗಾರರೇ ‘ಕಾಫಿ ಬೆಲೆ ರೂ.12 ಸಾವಿರದ ಮೇಲೆ ಏರಲೇಬಾರದು. ಈಗ ಇರುವ ಬೆಲೆಯೇ ಮೂರು ನಾಲ್ಕು ವರ್ಷ ಕಾಲ ಸ್ಥಿರಗೊಂಡರೆ ಸಾಕು. ಇಡೀ ಕಾಫಿ ಉದ್ಯಮ ಚೇತರಿಸಿಕೊಳ್ಳುತ್ತದೆ. ಬೆಳೆಗಾರರು ಸಾಲ ತೀರಿಸಿಕೊಳ್ಳಬಹುದು. ಬೆಲೆ ಮತ್ತಷ್ಟು ಏರಿದರೆ ಬೆಳೆಗಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಕಾರ್ಮಿಕರ ಕೂಲಿ ದರ ಈಗಲೇ ದುಬಾರಿ ಆಗಿದೆ. ಮರಗಸಿ ಕೆಲಸ ಮಾಡುವ ಕೂಲಿ ಆಳುಗಳು ಆಗಲೇ ಕಾಫಿ ಧಾರಣೆ ಏರಿಕೆ ವಿಚಾರವನ್ನೇ ಮುಂದಿಟ್ಟುಕೊಂಡು ರೂ.750 ಕೂಲಿ ಕೇಳುತ್ತಿದ್ದಾರೆ.ಕಾಫಿ ಬೆಲೆ ಕುಸಿದರೆ ಕೂಲಿ ದರದಲ್ಲಿ ಮಾತ್ರ ಏನೇನೂ ಇಳಿಕೆ ಆಗುವುದಿಲ್ಲ. ಕೂಲಿ ಮತ್ತೆ ದುಬಾರಿಯಾದರೆ ತೋಟ ನಿರ್ವಹಣೆ ಮಾಡುವುದೇ ಕಷ್ಟವಾಗುತ್ತದೆ. ಅಲ್ಲದೇ, ಧಾರಣೆ­ಯೇನಾದರೂ ರೂ.14 ಸಾವಿರದಿಂದ 15 ಸಾವಿರದ ಮಟ್ಟಕ್ಕೇರಿದರೆ ಕಾಫಿ ಪುಡಿ ಮಾರುಕಟ್ಟೆ ಮೇಲೆಯೂ ಪರಿಣಾಮ ಬೀರುತ್ತದೆ. ಇದರಿಂದ ಕಾಫಿ ಕುಡಿಯುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಉತ್ತಮ್‌ ಗೌಡ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.