ಭಾನುವಾರ, ಜೂಲೈ 12, 2020
22 °C

ಕಾಫಿ: ವಿಯೆಟ್ನಾಂ ಪಾಠ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಕಾಫಿ: ವಿಯೆಟ್ನಾಂ ಪಾಠ

ತನ್ನ ಮೇಲಿದ್ದ ಭೂತಕಾಲದ ಅಗಾಧ ಹೊರೆಯನ್ನು ನಾಜೂಕಾಗಿ ಪಕ್ಕಕ್ಕೆ ಸರಿಸಿರುವ ಪುಟ್ಟ ರಾಷ್ಟ್ರ ವಿಯೆಟ್ನಾಂ ತನ್ನ ಪ್ರಜೆಗಳಿಗೆ ಬಂಗಾರದಂಥ ಭವಿಷ್ಯ ಕಲ್ಪಿಸಿಕೊಡಬೇಕೆಂಬ ಕನಸಿನ ಕುದುರೆಯ ಬೆನ್ನು ಹತ್ತಿದೆ. ಆ ದೇಶದ ಯಾವುದೇ ಹಳ್ಳಿಯಲ್ಲಿರುವ ಯುವಕರನ್ನು ಮಾತನಾಡಿಸಿದರೂ ಅವರು ಮುಂದಿನ 10 ವರ್ಷದ ನಂತರ ನಾನು ಹೀಗಿರುತ್ತೇನೆ. ನನ್ನ ತೋಟ ಹೀಗಾಗುತ್ತದೆ ಎಂದು ಉತ್ಸಾಹದಿಂದ ವಿವರಿಸುತ್ತಾರೆ.ನಾವು ಅಮೆರಿಕವನ್ನು ಮಣ್ಣುಮುಕ್ಕಿಸಿದೆವು ಎಂದು 1975ರ ಯುದ್ಧದ ಹೆಮ್ಮೆ ಕೊಚ್ಚಿಕೊಳ್ಳುವುದಾಗಲೀ ಅಥವಾ ಅಮೆರಿಕದಿಂದ ನಮ್ಮ ದೇಶದ ಆರ್ಥಿಕತೆ ನುಚ್ಚುನೂರಾಯಿತು, ಸಂಸ್ಕೃತಿಗೆ ಅವಮಾನವಾಯಿತು ಎಂಬ ಹಳಹಳಿಕೆಯಾಗಲೀ ಅವರ ಮಾತಿನಲ್ಲಿ ಅಪ್ಪಿತಪ್ಪಿಯೂ ಇಣುಕುವುದಿಲ್ಲ.ಭೂತಕಾಲದ ಭಾರವನ್ನು ಹೀಗೆ ನಾಜೂಕಾಗಿ ಪಕ್ಕಕ್ಕೆ ಸರಿಸಿರುವ ವಿಯೆಟ್ನಾಂ ಯುವಕರ ಉತ್ಸಾಹದ ಫಲವೇ ಇರಬೇಕು, ಇದೀಗ ವಿಯೆಟ್ನಾಂ ವರ್ಷಕ್ಕೆ 10 ಲಕ್ಷ ಟನ್ ರೊಬಸ್ಟಾ ಕಾಫಿ, 1.2 ಲಕ್ಷ ಟನ್ ಕಾಳು ಮೆಣಸು ಉತ್ಪಾದಿಸುತ್ತಿದೆ. ಈ ಎರಡೂ ಕೃಷಿ ಉತ್ಪನ್ನಗಳಲ್ಲಿ ವಿಯೆಟ್ನಾಂ ವಿಶ್ವದ ನಂ 1 ಸ್ಥಾನದಲ್ಲಿದೆ. ರಬ್ಬರ್ ಉತ್ಪಾದನೆಯಲ್ಲಿ ಅವರದು ವಿಶ್ವಕ್ಕೆ 4ನೇ ಸ್ಥಾನ. ಭತ್ತದ ರಫ್ತಿನಲ್ಲಿ ವಿಶ್ವಕ್ಕೆ 2ನೇ ಸ್ಥಾನ. ಗೇರುಬೀಜ ಉತ್ಪಾದನೆಯ ಪ್ರಗತಿಯೂ ಸಾಕಷ್ಟು ವೇಗವಾಗಿದೆ. 1975ರ ನಂತರವೇ ಈ ಎಲ್ಲ ಬೆಳವಣಿಗೆಗಳೂ ಆಗಿವೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿ.ವಿಯೆಟ್ನಾಂನ ಒಟ್ಟು ಜನಸಂಖ್ಯೆಯ ಶೇ 65 ಮಂದಿ 35 ವರ್ಷಕ್ಕೂ ಕಡಿಮೆ ವಯಸ್ಸಿನವರು. ಅಮೆರಿಕ ಜತೆಗಿನ ಯುದ್ಧದಲ್ಲಿ ವಿಯೆಟ್ನಾಂ ತನ್ನ ಇತರೆಲ್ಲಾ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವನ್ನು ಕಳೆದುಕೊಂಡಿತ್ತು. ಆ ದೇಶದ ಶೇ 20ರಷ್ಟು ಜನಸಂಖ್ಯೆಯೇ ಯುದ್ಧಕ್ಕೆ ಬಲಿಯಾಗಿತ್ತು. ಒಂದು ಸಲ ಅಮೆರಿಕ ಸೋಲೊಪ್ಪಿಕೊಂಡು ವಿಯೆಟ್ನಾಂನಿಂದ ಜಾಗ ಖಾಲಿ ಮಾಡಿದ ಮೇಲೆ ಅಲ್ಲಿನ ಸರ್ಕಾರ ಮುಂದಿನ ಭವಿಷ್ಯದ ಬಗ್ಗೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತು.ಸರ್ಕಾರದ ಒಡೆತನದಲ್ಲಿದ್ದ ಕೃಷಿ ಭೂಮಿಯನ್ನು  (ನಿಬಂಧನೆಗಳ ಮೇಲೆ) ಯುವಕರಿಗೆ ನೀಡುವ ಮೂಲಕ ದುಡಿಯುವ ಶಕ್ತಿಗೆ ಪ್ರೋತ್ಸಾಹ ನೀಡುವುದೂ ಅದರಲ್ಲಿ ಒಂದು.  ಸಾವಿರಾರು ಎಕರೆ ವಿಸ್ತಾರದ ಭೂಮಿಯನ್ನು ಪ್ರತಿ ಕಾರ್ಮಿಕನಿಗೆ ಇಂತಿಷ್ಟೆಂದು ಸರ್ಕಾರ ವಿಂಗಡಿಸಿಕೊಡುತ್ತದೆ. ಆ ಭೂಮಿಯಲ್ಲಿ ಕೃಷಿ ಮಾಡುವ ಬೆಳೆಗಾರನಿಗೆ ಗೊಬ್ಬರ- ಔಷಧಿಯನ್ನೂ ಸರ್ಕಾರವೇ ನೀಡುತ್ತದೆ. ಕೊನೆಗೆ ಬಂದ ಬೆಳೆಯಲ್ಲಿ ಎಕರೆಗೆ 500 ಕೆಜಿಯನ್ನು ಕಾರ್ಮಿಕ ಸರ್ಕಾರಕ್ಕೆ ನೀಡಬೇಕು. ಉಳಿದದ್ದು ಅವರು ಜೀವನಕ್ಕೆ.ವಿಯೆಟ್ನಾಂನಲ್ಲಿ ಕಾಫಿ ಕ್ರಾಂತಿ ಶುರುವಾಗಿದ್ದೇ ಹೀಗೆ. ಭಾರತ, ಕೊಲಂಬಿಯಾ, ಬ್ರೆಜಿಲ್ ಇತ್ಯಾದಿ ರಾಷ್ಟ್ರಗಳು 50ಕ್ಕೂ ಹೆಚ್ಚು ವರ್ಷಗಳಿಂದ ಕಾಫಿ ಬೆಳೆಯುತ್ತಿವೆ. ಆದರೆ, ಈ ಎಲ್ಲ ರಾಷ್ಟ್ರಗಳಿಂತ ಬಹು ತಡವಾಗಿ ಕಾಫಿ ಬೆಳೆಯಲು ಪ್ರಾರಂಭಿಸಿದ ವಿಯೆಟ್ನಾಂ ಈ ಎಲ್ಲ ರಾಷ್ಟ್ರಗಳನ್ನು ಉತ್ಪಾದನಾ ಸಾಮರ್ಥ್ಯದಲ್ಲಿ ಹಿಂದೆ ಹಾಕಿದೆ.ನಮ್ಮಲ್ಲಿ ಒಂದು ಎಕರೆಗೆ ಒಂದು ಟನ್ ಕಾಫಿ ಕೊಯ್ದರೆ ಹೆಚ್ಚು ಎಂಬ ಭಾವನೆಯಿದೆ. ಆದರೆ ವಿಯೆಟ್ನಾಂನಲ್ಲಿ ಒಂದು ಎಕರೆಗೆ 1.5 ಟನ್ ಕ್ಲೀನ್ ಕಾಫಿ ಬಂದರೆ ಅದು ಸಾಧಾರಣ ಎನಿಸಿಕೊಳ್ಳುತ್ತದೆ. ಒಳ್ಳೆಯ ತೋಟದಲ್ಲಿ 3 ಟನ್‌ವರೆಗೆ ಇಳುವರಿ ಸಿಗುತ್ತದೆ! ವಿಯೆಟ್ನಾಂನ ಈ ಸಾಧನೆಯ ಹಿನ್ನೆಲೆ ಹುಡುಕಿದರೆ ಎರಡು ಮುಖ್ಯ ಅಂಶಗಳು ಕಂಡು ಬರುತ್ತವೆ. ಮೊದಲನೆಯದು ಅಲ್ಲಿನ ಜನರ ದುಡಿಯುವ ಉತ್ಸಾಹ, ಎರಡನೆಯದು ಸರ್ಕಾರ ಒದಗಿಸಿರುವ ಸೌಲಭ್ಯಗಳು. ಅಲ್ಲಿನ ಬೆಳೆಗಾರರಿಗೆ ಸಾಮಾಜಿಕ ವೆಚ್ಚ ಇತ್ಯಾದಿ... ಎಂದು ಸರ್ಕಾರ ನಿಯಂತ್ರಣಗಳನ್ನು ಹೇರಿಲ್ಲ. ಹೀಗಾಗಿ ಬೆಳೆಗಾರರು ತಮ್ಮ ತೋಟದ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ವಿಮಾನ ನಿಲ್ದಾಣಗಳಿವೆ, ಉತ್ತಮ ಹೊಟೆಲ್‌ಗಳಿವೆ, ಗ್ರಾಮಗಳನ್ನು ಬೆಸೆಯುವ ಸಂಪರ್ಕ ರಸ್ತೆ ಉತ್ತಮ ಸ್ಥಿತಿಯಲ್ಲಿದೆ. ರಸಗೊಬ್ಬರಕ್ಕೆ ಅಲ್ಲಿನ ಸರ್ಕಾರ ಸಬ್ಸಿಡಿಕೊಟ್ಟಿಲ್ಲ.ಹೀಗಾಗಿ ಬಹುರಾಷ್ಟ್ರೀಯ ಕಂಪೆನಿಗಳ ಪ್ರತಿನಿಧಿಗಳು ಬೆಳೆಗಾರರ ಜತೆಗೆ ನೇರ ಸಂಪರ್ಕ ಇಟ್ಟುಕೊಂಡು ಕಾಫಿ ಖರೀದಿ ನಡೆಸುವುದು ಸಾಧ್ಯವಾಗಿದೆ. ಪ್ರಕೃತಿಯು ಫಲವತ್ತಾದ ಮಣ್ಣು ಮತ್ತು ಧಾರಾಳ ನೀರು ಕೊಟ್ಟಿದೆ. ಸರ್ಕಾರ 24 ತಾಸು ಉತ್ತಮ ಗುಣಮಟ್ಟದ ವಿದ್ಯುತ್ ನೀಡುತ್ತದೆ. ಹೀಗಾಗಿ ಬೆಳೆಗಾರರು ವರ್ಷವಿಡೀ ತಮ್ಮ ತೋಟಕ್ಕೆ ನೀರು ಕಡಿಮೆಯಾಗದಂತೆ ನೋಡಿಕೊಳ್ಳುತ್ತಾರೆ.ಕಮ್ಯುನಿಸ್ಟ್ ರಾಷ್ಟ್ರವಾಗಿದ್ದರೂ ವಿಯೆಟ್ನಾಂ ಬಹುರಾಷ್ಟ್ರೀಯ ಕಂಪೆನಿಗಳನ್ನು ದೂರವಿಟ್ಟಿಲ್ಲ. ಕಾಫಿ ಕೊಳ್ಳುವ ವಿಶ್ವದ ಟಾಪ್ 10 ಕಂಪೆನಿಗಳು ವಿಯೆಟ್ನಾಂನಲ್ಲಿ ಕಚೇರಿಗಳನ್ನು ತೆರೆದಿವೆ. ಹಳ್ಳಿಹಳ್ಳಿಗಳಲ್ಲಿ ತಮ್ಮ ಏಜೆಂಟ್‌ಗಳ ಮೂಲಕ ಜಾಲ ಬೆಸೆದಿರುವ ಈ ಕಂಪೆನಿಗಳು ಖರೀದಿ, ಕ್ಯೂರಿಂಗ್ ಮತ್ತು ಟ್ರೇಡಿಂಗ್‌ಗಳನ್ನು ಸ್ಥಳೀಯರ ಸಹಾಯದಿಂದಲೇ ನಿಭಾಯಿಸುತ್ತವೆ. ಲೂಯಿ ಟ್ರೇಡಿಂಗ್ ಎಂಬ ಕಂಪೆನಿ 40 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕ್ಯೂರಿಂಗ್ ವ್ಯವಸ್ಥೆ ಸ್ಥಾಪಿಸಿದೆ.ಭಾರತಕ್ಕೆ ಹೋಲಿಸಿದರೆ ಭಾರತದ ವಾರ್ಷಿಕ ರೊಬಸ್ಟಾ ಕಾಫಿ ಉತ್ಪಾದನೆ 2 ಲಕ್ಷ ಟನ್, ಕಾಳು ಮೆಣಸು ಉತ್ಪಾದನೆ 70 ಸಾವಿರ ಟನ್, ರಬ್ಬರ್- ಗೇರು- ಭತ್ತದ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಗ್ರಾಮ ಕೇಂದ್ರಿತವಾಗಿದ್ದ ಕೃಷಿ ಪ್ರಧಾನ ಆರ್ಥಿಕತೆಯನ್ನು ನಗರ ಕೇಂದ್ರಿತ ಸೇವಾಕ್ಷೇತ್ರ ಪ್ರಧಾನ ಆರ್ಥಿಕತೆಯನ್ನಾಗಿ ಬದಲಿಸುವ ಯತ್ನ ನಡೆಯುತ್ತಿದೆ. ನಾವು ಮಾಹಿತಿ ತಂತ್ರಜ್ಞಾನದಲ್ಲಿ (ಐಟಿ) ವಿಶ್ವದ ಸೂಪರ್ ಪವರ್ ಆಗಲು ಹಾತೊರೆಯುತ್ತಿದ್ದೇವೆ.ಮಹಾನಗರ ಕೇಂದ್ರಿತ ಆರ್ಥಿಕತೆ ಹೊಂದಿರುವ ನಮ್ಮ ದೇಶದಲ್ಲಿ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳೇ ಸರಿಯಿಲ್ಲ. ಇನ್ನು ವಿಮಾನ ನಿಲ್ದಾಣಗಳು ಕನಸಿನ ಮಾತು. ಕುಶಲ ಕೃಷಿ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಕೃತಿ ಸಾಕಷ್ಟು ನೀರನ್ನೂ ಕೊಟ್ಟಿಲ್ಲ- ಸರ್ಕಾರ ಕರೆಂಟನ್ನೂ ಕೊಟ್ಟಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಇನ್ನೂ ಬ್ರಿಟಿಷರನ್ನು ಬೈಯುವುದನ್ನು ಬಿಟ್ಟಲ್ಲ. ಸಾವಿರಾರು ವರ್ಷಗಳ ಇತಿಹಾಸದ ಹೊರೆ ಭವಿಷ್ಯದ ಕನಸು ಕಾಣಲೂ ಅಂಜುವಂತೆ ಮಾಡಿದೆ.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.