ಮಂಗಳವಾರ, ಆಗಸ್ಟ್ 20, 2019
25 °C

ಕಾಫಿ ಸ್ವಾದಕ್ಕೆ `ಸ್ವರ'ದ ಸಾಥ್

Published:
Updated:
ಕಾಫಿ ಸ್ವಾದಕ್ಕೆ `ಸ್ವರ'ದ ಸಾಥ್

ಜಯನಗರ ನಾಲ್ಕನೇ ಹಂತದಲ್ಲಿ ಹಾದು ಹೋಗುವಾಗ ಬ್ಯಾಂಡ್‌ನ ರಿದಂ ಕಿವಿಗಪ್ಪಳಿಸುತ್ತಿತ್ತು. ಭಾರತದ ಶಾಸ್ತ್ರೀಯ, ಜನಪದ ಹಾಗೂ ಪಾಶ್ಚಾತ್ಯ ಶೈಲಿಗಳ ಮಿಶ್ರಣದಂತಿದ್ದ ಆ ಗೀತೆಯನ್ನು ನುಡಿಸುತ್ತಿದ್ದವರು ಪ್ರಸಿದ್ಧ ಬ್ಯಾಂಡ್ ತಂಡ `ಸ್ವರಾತ್ಮ'ದ ಸಂಗೀತಗಾರರು. ಕೆಫೆ ಕಾಫಿ ಡೇ ಆಯೋಜಿಸಿರುವ `ದಿ ಲಾಂಜ್ ಜರ್ನಲ್ಸ್'ನ ಮೂರನೇ ಆವೃತ್ತಿ ಇದಾಗಿತ್ತು. `ಟೆಟೆ-ಎ-ಟೆಟೆ' ಎಂಬ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಬ್ಯಾಂಡ್ ಸೆಲೆಬ್ರೆಟಿಗಳು ತಮ್ಮ ಹವ್ಯಾಸ, ಇಷ್ಟದ ವಿಷಯ ಹಾಗೂ ಆಸಕ್ತಿ ಕುರಿತು ಯುವಜನತೆಯೊಂದಿಗೆ ಮುಕ್ತವಾಗಿ ಹರಟುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.`ದಿ ಲಾಂಜ್ ಜರ್ನಲ್ಸ್' ಮೂಲಕ ಯುವಜನತೆಯಲ್ಲಿನ ಕ್ರಿಯಾತ್ಮಕ ಹವ್ಯಾಸಗಳನ್ನು ಉತ್ತೇಜಿಸುವುದರ ಜತೆಗೆ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕುವುದೇ ಮುಖ್ಯ ಉದ್ದೇಶ. `ಬೆಂಗಳೂರಿನಲ್ಲಿ ಛಾಯಾಗ್ರಹಣ ಹಾಗೂ ಡಿಜೆ ಕಾರ್ಯಕ್ರಮಗಳ ನಂತರ ಇದೀಗ ರಾಕ್ ಗೀತೆಗಳ ಸಮಯ.ಸಂಗೀತ ಕಾರ್ಯಕ್ರಮದ ಮೂಲಕ ಯುವಜನತೆಯ ಶಕ್ತಿಯನ್ನು ಕ್ರಿಯಾತ್ಮಕ ಹಾಗೂ ಉತ್ಪಾದಕತೆಯತ್ತ ಹರಿಸಲು ಪ್ರೇರೇಪಿಸುವುದು ಇದರ ಹಿಂದಿನ ಉದ್ದೇಶ. ಈ ಕಾರ್ಯಕ್ರಮದ ಮೂಲಕ ಯುವಜನತೆ ಕ್ರಿಯಾಶೀಲರಾಗುವುದು ಮಾತ್ರವಲ್ಲ ಬದಲಿಗೆ ತಮ್ಮಳಗಿರುವ ವ್ಯಕ್ತಿಯನ್ನು ಜಗತ್ತಿಗೆ ತೋರಿಸಲು ಒಂದು ವೇದಿಕೆ ಇದಾಗಲಿದೆ' ಎಂಬ ವಿಶ್ವಾಸವನ್ನು ಕೆಫೆ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಕೆ. ರಾಮಕೃಷ್ಣನ್ ಅಭಿಪ್ರಾಯಪಟ್ಟರು.ಅಂದಿನ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಸ್ವರಾತ್ಮ ತಂಡದ ಸದಸ್ಯರು ಸಂಗೀತ ಕ್ಷೇತ್ರ ಹಾಗೂ ತಮ್ಮ ಆರಂಭಿಕ ದಿನಗಳ ಕುರಿತು ಮೆಲುಕು ಹಾಕಿದರು. ಜತೆಗೆ ಬ್ಯಾಂಡ್ ಕಟ್ಟಲು ಪ್ರೇರಣೆಯಾದ ಘಟನೆ ಹಾಗೂ ಈವರೆಗೆ ಸಾಗಿಬಂದ ಹಾದಿಯ ಕುರಿತು ಸಭಿಕರೊಂದಿಗೆ ಮುಕ್ತವಾಗಿ ಹರಟಿದರು.`ಇದೊಂದು ವಿನೂತನ ಬಗೆಯ ಕಾರ್ಯಕ್ರಮವಾಗಿದ್ದು, ಹೊಸತನ್ನು ಉತ್ತೇಜಿಸುವುದು ಮಾತ್ರವಲ್ಲ ಅದಕ್ಕೊಂದು ವೇದಿಕೆ ಕಲ್ಪಿಸುವ ಕೆಲಸ ಇದಾಗಿದೆ. ಸಭಿಕರೂ ಬಹಳ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಕೇಳಿದ ಪ್ರಶ್ನೆಗೆ ಉತ್ಸಾಹದಿಂದ ಉತ್ತರಿಸಿದ್ದು ಸಂಗೀತಗಾರರಾದ ನಮ್ಮನ್ನೂ ಪ್ರೇರೇಪಿಸಿತು' ಎಂದು ಸ್ವರಾತ್ಮ ತಂಡದ ಜಿಶ್ನು ದಾಸ್‌ಗುಪ್ತ ಅಭಿಪ್ರಾಯಪಟ್ಟರು.ಇದಾದ ನಂತರ ಸಭಿಕರ ಕೋರಿಕೆಯ ಮೇರೆಗೆ ತಮ್ಮ ಕೆಲವು ಪ್ರಸಿದ್ಧ ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಭಿಕರಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ವಿಶೇಷ ಕಾಫಿ ಮಗ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.ಭಾರತದ 40 ಕೆಫೆ ಕಾಫಿ ಡೇ ಕೇಂದ್ರಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳಲ್ಲಿ ಛಾಯಾಗ್ರಹಣ, ಕ್ರಿಯಾತ್ಮಕ ಬರವಣಿಗೆ, ಪೇಂಟಿಂಗ್, ನೃತ್ಯ ಇತ್ಯಾದಿ ಆಸಕ್ತಿದಾಯಕ ವಿಷಯಗಳ ಕುರಿತು ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆ ತಿಳಿಸಿದೆ.

Post Comments (+)