ಸೋಮವಾರ, ಮೇ 25, 2020
27 °C

ಕಾಮಗಾರಿಗೆ ಮೊದಲೇ ಲಕ್ಷಾಂತರ ಬಿಲ್ ಪಾವತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಕಾಮಗಾರಿಯನ್ನೇ ಆರಂಭಿಸದ ಇಲ್ಲಿಯ ಗುತ್ತಿಗೆದಾರರೊಬ್ಬರಿಗೆ ರೂ 3 ಲಕ್ಷ ಹಣ ಪಾವತಿಸುವ ಮೂಲಕ ಇಲ್ಲಿಯ ಪುರಸಭೆ ಮುಖ್ಯಮಂತ್ರಿ ಹೆಸರಿನ ಯೋಜನೆ ನಿಯಮಗಳನ್ನು ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಯವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ (ಸಿ.ಎಂ.ಎಸ್.ಎಂ.ಟಿ.ಡಿ.ಪಿ) ಅನ್ವಯ ಪಟ್ಟಣದ ಏಳನೇ ವಾರ್ಡಿನ ಪ್ರಗತಿ ಗ್ರಾಮೀಣ ಬ್ಯಾಂಕ್ ಪಕ್ಕದ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಥಮದರ್ಜೆ ಗುತ್ತಿಗೆದಾರ ಎನ್ನಲಾದ ಬಿ.ಎಸ್.ಮಾಲಿಪಾಟೀಲ್ ಎಂಬುವವರು ಟೆಂಡರ್ ಪಡೆದಿದ್ದರು. ಆದರೆ ಸದರಿ ರಸ್ತೆಯಲ್ಲಿನ ಅತಿಕ್ರಮಣ ತೆರವುಗೊಳಿಸುವ ಕೆಲಸ ಪೂರ್ಣಗೊಳಿಸದ ಕಾರಣ ಸಿ.ಸಿ ರಸ್ತೆ ಕಾಮಗಾರಿ ಆರಂಭಿಸಿಲ್ಲ ಎನ್ನಲಾಗಿದೆ. ಆದರೆ ಕೆಲಸ ನಡೆಯದಿದ್ದರೂ ಹಣ ಪಾವತಿಸಿರುವ ಪುರಸಭೆ ಅಧಿಕಾರಿಗಳ ‘ಸರ್ಕಾರಿ ಕರ್ತವ್ಯನಿಷ್ಟೆ’ ಅಚ್ಚರಿಗೆ ಕಾರಣವಾಗಿದೆ. ಆದರೆ ಗುತ್ತಿಗೆದಾರರಿಗೆ ಕೆಲಸ ಆರಂಭಿಸುವಂತೆ ಸೂಚಿಸಿದ್ದರೂ ಅವರು ಅದನ್ನು ಕಡೆಗಣಿಸಿದ್ದು ನೋಟಿಸ್ ನೀಡುತ್ತೇವೆ ಎಂದು ಮುಖ್ಯಾಧಿಕಾರಿ ಈರಣ್ಣ ಅಣ್ಣಿಗೇರಿ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.ಆದರೆ ಕೆಲಸ ಆರಂಭಗೊಳ್ಳುವ ಸೂಚನೆಯೇ ಇಲ್ಲದಿದ್ದರೂ 2010ರ ಅಕ್ಟೋಬರ್ 13ರಂದು ಗುತ್ತಿಗೆದಾರ ಬಿ.ಎಸ್.ಮಾಲಿಪಾಟೀಲ ಅವರಿಗೆ ರೂ 3 ಲಕ್ಷ ಮೊತ್ತದ ಚೆಕ್ (ಸಂಖ್ಯೆ 153930, ಪುರಸಭೆ ಕ್ಯಾಷ್‌ಬುಕ್ ವೋಚರ್ ಸಂಖ್ಯೆ 761) ನೀಡಿರುವುದು ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಯಿಂದ ತಿಳಿದುಬಂದಿದೆ. ಈ ಮಧ್ಯೆ ಸದರಿ ವಾರ್ಡ್‌ನ ರಸ್ತೆ ಅತಿಕ್ರಮಣ ತೆರವುಗೊಳಿಸುವ ಕೆಲಸವನ್ನು ಪುರಸಭೆ ಅಧಿಕಾರಿಗಳು ಅರ್ಧಕ್ಕೆ ನಿಲ್ಲಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳ ಮನವಿಯ ಮೇರೆಗೆ ತೆರವು ಮುಂದೂಡಲಾಗಿತ್ತು. ಆದರೆ ಎರಡು ತಿಂಗಳು ಕಳೆದರೂ ಅತಿಕ್ರಮಣ ತೆರವುಗೊಳಿಸದೇ ಪುರಸಭೆಯವರು ‘ಮುಖನೋಡಿ ಮಣೆ’ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯನ್ನು ಕಡೆ ಗಣಿಸಿದ್ದಾರೆ ಎಂದೆ ಜನ ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.