ಕಾಮಗಾರಿ ಅಪೂರ್ಣ: ಸಂಚಾರ ದುಸ್ತರ

ಸಂತೇಮರಹಳ್ಳಿ: ಹೆಗ್ಗವಾಡಿಪುರ ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯಡಿಯಲ್ಲಿ ₨ 38 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲು ಆರಂಭಿಸಲಾಗಿತ್ತು.
ಆದರೆ, ಕಾಮಗಾರಿ ಪ್ರಗತಿ ಕಂಡಿಲ್ಲ. ಈಗಾಗಲೇ ಕಾಮಗಾರಿ ಮೊಟಕುಗೊಂಡು 6 ತಿಂಗಳು ಕಳೆದಿದೆ. ರಸ್ತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಾಗಲೀ, ಗುತ್ತಿಗೆದಾರರಾಗಲೀ ಇತ್ತ ಕಡೆ ಗಮನ ಹರಿಸಿಲ್ಲ. ಈ ರಸ್ತೆಯಲ್ಲಿ ದಿನ ನಿತ್ಯ ಸಂಚಾರ ಮಾಡುವ ವಾಹನಗಳ ಸವಾರರು ಸಂಕಷ್ಟ ಅನುಭವಿಸುಂತಾಗಿದೆ.
ರಸ್ತೆಯಲ್ಲಿ ಜಲ್ಲಿಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ದಿನ ಕಳೆದಂತೆ ವಾಹನ ಓಡಾಟದಿಂದ ಜಲ್ಲಿಕಲ್ಲು ಮೇಲೆದ್ದಿವೆ. ರಸ್ತೆ ಧೂಳು ಮಯವಾಗಿದೆ. ವಾಹನ ಸವಾರರ ಜತೆಗೆ ಪಾದಚಾರಿಗಳು ತಿರುಗಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಯ ಸನಿಹದಲ್ಲಿರುವ ಮನೆಗಳ ನಿವಾಸಿಗಳು ಪ್ರತಿದಿನ ಧೂಳಿನ ಸ್ನಾನದಿಂದ ಮಿಂದೇಳುತ್ತಿದ್ದು, ವಾಹನ ಓಡಾಟದ ಸಂದರ್ಭದಲ್ಲಿ ಮಣ್ಣು ರಾಚುತ್ತದೆ. ನಿವಾಸಿಗಳು ಸೇವಿಸುವ ಊಟ ತಿಂಡಿಯ ಮೇಲೆ ಧೂಳು ಬೀಳುತ್ತಿದೆ. ಜನರು ತಮ್ಮ ಮನೆಗಳ ಮುಂಭಾಗ ಪರದೆ ಕಟ್ಟಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ವಾಹನ ಸಂಚರಿಸುವ ಸಮಯದಲ್ಲಿ ಜಲ್ಲಿಕಲ್ಲು ಮೇಲೆದ್ದು ಪಾದಚಾರಿಗಳಿಗೆ ತಾಕಿ ನೋವು ಉಂಟಾಗಿರುವ ನಿದರ್ಶನಗಳಿವೆ.
ಕಾಮಗಾರಿ ಮುಂದುವರಿಸಿ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಗ್ರಾಮಸ್ಥರ ಕೂಗಿಗೆ ಸಂಬಂದಪಟ್ಟವರು ಗಮನ ಹರಿಸಿಲ್ಲ. ಕಾಮಗಾರಿ ಆರಂಭಿಸುವ ಮುನ್ನ ಇದ್ದ ಡಾಂಬರ್ ರಸ್ತೆ ಕಿತ್ತು ಹಾಕಿ ಮಣ್ಣಿನ ರಸ್ತೆಯನ್ನಾಗಿ ಮಾಡಲಾಗಿದೆ. ಇದು ಗ್ರಾಮಸ್ಥರ ಆಕ್ರೊಶಕ್ಕೆ ಕಾರಣವಾಗಿದೆ.
‘ಮಳೆ ಆರಭವಾದರೇ ರಸ್ತೆಯೆಲ್ಲಾ ಕೆಸರುಮಯವಾಗಿ ಗುಂಡಿ ನಿರ್ಮಾಣವಾಗುತ್ತವೆ. ಆದ್ದರಿಂದ ಮಳೆಗಾಲ ಆರಂಭವಾಗುವ ಮುನ್ನ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ. ಮುಂದಿನ ವಾರ ಗ್ರಾಮದೇವತೆ ಹಬ್ಬ ಇರುವುದರಿಂದ ಸಂಬಂಧಪಟ್ಟವರು ತುರ್ತಾಗಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.