ಮಂಗಳವಾರ, ಮೇ 18, 2021
24 °C

ಕಾಮಗಾರಿ ಆಗದಿದ್ದರೂ ಹಣ ಪಾವತಿ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಕಾಮಗಾರಿ ಆಗದಿದ್ದರೂ ಹಣ ಪಾವತಿ

ಚಿಕ್ಕಬಳ್ಳಾಪುರ: ನಗರದ ಮೂಲಸೌಕರ್ಯ ವಂಚಿತ ಬಡಾವಣೆಗಳಲ್ಲಿ ಒಂದಾದ ಕೆಳಗಿನತೋಟ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಗಳ್ನು ಎದುರಿಸುತ್ತಿದ್ದಾರೆ. ಮಳೆಯಾದಾಗ ಒಂದು ರೀತಿಯ ಸಮಸ್ಯೆ ಕಾಡಿದರೆ, ಬಿಸಿಲಿನಲ್ಲಿ ಇನ್ನೊಂದು ರೀತಿಯ ಸಮಸ್ಯೆ ಎದುರಿಸುತ್ತಾರೆ.`ಅಭಿವೃದ್ದಿ~ ಎಂಬುವುದರಿಂದ ದೂರವೇ ಉಳಿದಿರುವ ಇಲ್ಲಿನ ನಿವಾಸಿಗಳು ಈಗ ಇನ್ನೊಂದು ರೀತಿಯ ಅಚ್ಚರಿಗೆ ಒಳಗಾಗಿದ್ದಾರೆ. ಅಭಿವೃದ್ದಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದ್ದು, ನಗರಸಭೆಯೇ ಇದನ್ನು ಒಪ್ಪಿಕೊಂಡಿದೆ!ಮುಖ್ಯ ರಸ್ತೆ, ಅಡ್ಡರಸ್ತೆ ಮತ್ತು ಚರಂಡಿ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗುತ್ತಿಗೆದಾರರಿಗೆ ಕಾಮಗಾರಿಯ ಜವಾಬ್ದಾರಿ ವಹಿಸಿ ಹಲವು ತಿಂಗಳುಗಳೇ ಕಳೆದರೂ ಕಾಮಗಾರಿಯ ಲಕ್ಷಣಗಳು ಕಂಡು ಬಂದಿಲ್ಲ. ಯಾವುದೇ ಕಾಮಗಾರಿ ನಡೆಯದಿದ್ದರೂ ನಗರಸಭೆಯು ಶೇ 90ರಷ್ಟು ಹಣ ಪಾವತಿ ಮಾಡಿದ್ದಾದರೂ ಹೇಗೆ? `ಕಾಮಗಾರಿ ಪೂರ್ಣಗೊಂಡಿರುವುದಿಲ್ಲ~ ಎಂದು ನಗರಸಭೆಯು ತಾನೇ ದಾಖಲೆಪತ್ರಗಳಲ್ಲಿ ಸ್ಪಷ್ಟವಾಗಿ ತಿಳಿಸಿದ ನಂತರವೂ ಹಣ ಪಾವತಿಆಗಿದ್ದಾದರೂ ಹೇಗೆ ಎಂದು ನಿವಾಸಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.ನಗರಸಭೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ಪ್ರಕಾರ, ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ಕೆಳಗಿನತೋಟದ ಬಡಾವಣೆಯ ಆನಂದ ಲೇಔಟ್, ಅಶೋಕ್ ಲೇಔಟ್, ವೆಂಕಟರಾಯಪ್ಪ ಲೇಔಟ್‌ನ ರಸ್ತೆಗಳಲ್ಲಿ ಮೆಟ್ಲಿಂಗ್ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲು ಸರ್ಕಾರ ಅನುಮೋದಿಸಿದೆ. ಕಾಮಗಾರಿಯ ಒಟ್ಟು ಮೊತ್ತ 15 ಲಕ್ಷ ರೂಪಾಯಿ. ಕಾಮಗಾರಿ ಪೂರ್ಣಗೊಳ್ಳದಿದ್ದರೂ 13,59,154 ರೂಪಾಯಿ ಗುತ್ತಿಗೆದಾರರಿಗೆ ಪಾವತಿಸಲಾಗಿದೆ.ಅದೇ ರೀತಿ ಲಾಯರ್ ವೆಂಕಟೇಶ್ ಮನೆಯಿಂದ ಅಶ್ವತ್ಥಪ್ಪ ಮನೆಯವರೆಗೆ, ಪಾಪಣ್ಣ ಛತ್ರದಿಂದ ಮೂರ್ತಿ ಮನೆವರೆಗೆ, ಚನ್ನಪ್ಪ ಮನೆಯಿಂದ ಮುನಿಕೃಷ್ಣಪ್ಪ ಮನೆಯವರೆಗೆ ಮತ್ತು ಅಡುಗೆ ಕೃಷ್ಣಪ್ಪ ಮನೆಯಿಂದ ಅಂಗನವಾಡಿ ಶಾಲೆಯವರೆಗೆ ರಸ್ತೆಗಳ ಮೆಟ್ಲಿಂಗ್ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಈ ಕಾಮಗಾರಿಯ ಒಟ್ಟು ಮೊತ್ತವೂ 15 ಲಕ್ಷ ರೂಪಾಯಿಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರರಿಗೆ ಈಗಾಗಲೇ 13,41,224 ರೂಪಾಯಿ ಪಾವತಿಯಾಗಿದೆ.ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ಪಡೆದ ಇಲ್ಲಿನ ನಿವಾಸಿಗಳು, `ಕಾಮಗಾರಿ ಪೂರ್ಣಗೊಳ್ಳದೆಯೇ ಶೇ 90ರಷ್ಟು ಹಣವನ್ನು ಗುತ್ತಿಗೆದಾರರಿಗೆ ಹೇಗೆ ಪಾವತಿಸಲಾಯಿತು. ಕಾಮಗಾರಿ ಪೂರ್ಣಗೊಂಡ ನಂತರವೂ ಹಣ ಸಂದಾಯ ಮಾಡಲು ಕೆಲ ಬಾರಿ ವಿಳಂಬ ಮಾಡುವ ನಗರಸಭೆಯು ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಂಡಿದ್ದು ಹೇಗೆ~ ಎಂದು ಪ್ರಶ್ನಿಸುತ್ತಿದ್ದಾರೆ.`ಕಾಮಗಾರಿಗಾಗಿ ಸರ್ಕಾರ ಅನುಮೋದಿಸಿದ ಸ್ಥಳಗಳಲ್ಲಿ ಯಾವುದೇ ರೀತಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ರಸ್ತೆಗಳ ಮೆಟ್ಲಿಂಗ್ ಮತ್ತು ಚರಂಡಿ ಕಾಮಗಾರಿ ನಡೆದೇ ಇಲ್ಲ. ಅಡ್ಡರಸ್ತೆ ಎಂದು ಕರೆಯಲ್ಪಡುವ ಸ್ಥಳವು ಇನ್ನೂ  ಮೈದಾನವಾಗಿ ಉಳಿದಿದೆ. ತೋರಿಕೆಗೆ ಚರಂಡಿ ಕಾಮಗಾರಿ ಕೈಗೊಳ್ಳಲಾಯಿತಾದರೂ ಅರ್ಧಕ್ಕೆ ಸ್ಥಗಿತಗೊಂಡಿದೆ. ಚರಂಡಿಯಲ್ಲಿ ನಿಂತ ನೀರು, ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ ಎಂದು ನಿವಾಸಿ ಗೋವಿಂದರಾಜು `ಪ್ರಜಾವಾಣಿ~ಗೆ ತಿಳಿಸಿದರು.`ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂಬರ್ಥದಲ್ಲಿ ನಗರಸಭೆಯು ಶೇ 90ರಷ್ಟು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದೆ. ಹಣವನ್ನು ಪಾವತಿಮಾಡುವ ಮುನ್ನ ನಗರಸಭೆ ಆಯುಕ್ತರು, ಅಧಿಕಾರಿಗಳು ಮತ್ತು ಸದಸ್ಯರು ಸ್ಥಳ ಪರಿಶೀಲನೆ ನಡೆಸಿಲ್ಲ. ಕಾಮಗಾರಿ ಪೂರ್ಣಗೊಂಡಿದೆಯೋ ಅಥವಾ ಇಲ್ವೊ ಎಂದು ತಿಳಿಯಲು ಸಹ ಆಸಕ್ತಿ ತೋರಿಲ್ಲ. ಹಣ ಪಾವತಿಸಿರುವ ಹಿಂದಿನ ರಹಸ್ಯವೇನು ಎಂದು ಅವರು ಪ್ರಶ್ನಿಸಿದರು.ಮಾಹಿತಿಗಾಗಿ ಹರಸಾಹಸ !

ಚಿಕ್ಕಬಳ್ಳಾಪುರ: ಮಾಹಿತಿ ಹಕ್ಕು ಕಾಯ್ದೆಯಡಿ ಯೋಜನೆ ಮತ್ತು ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಾರ್ವಜನಿಕರು ಹರಸಾಹಸ ಪಡಬೇಕು. ಸಾರ್ವಜನಿಕರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ, ಅವರನ್ನು ಕೆಂಗಣ್ಣಿನಿಂದ ನೋಡಲಾಗುತ್ತದೆ. ಒಂದು ವೇಳೆ ಮಾಹಿತಿ ನೀಡಿದರೂ `ಇದರಿಂದ ಏನೂ ಪ್ರಯೋಜನವಿಲ್ಲ~ ಎಂದು ಸ್ವತಃ ನಗರಸಭೆ ಅಧಿಕಾರಿಗಳೇ ಹೇಳುತ್ತಾರೆ.`ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ, ನಗರಸಭೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಪೂರ್ಣಪ್ರಮಾಣದ ಮಾಹಿತಿ ನೀಡುವುದರ ಬದಲು ಕೆಲ ಅಂಶಗಳನ್ನು ಮರೆಮಾಚಿ ಅರ್ಥವಾಗದ ರೀತಿಯಲ್ಲಿ ಮಾಹಿತಿ ನೀಡಲಾಗುತ್ತದೆ. ನಗರಸಭೆಯು ನೀಡಿರುವ ಹಿಂಬರಹ ಪತ್ರದಲ್ಲಿ ರವಾನೆ ಸಂಖ್ಯೆ ಇರುವುದಿಲ್ಲ. ಮಾಹಿತಿ ಅರ್ಥವಾಗದಿರಲಿ ಎಂದು ತಾಂತ್ರಿಕ ಅಂಶಗಳನ್ನು ಒಳಗೊಂಡ ಮಾಹಿತಿ ನೀಡುತ್ತಾರೆ. ಎಂಜಿನಿಯರ್ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಮಾತ್ರ ಅರ್ಥವಾಗುವ ಮಾಹಿತಿಯನ್ನು ನಾವು ಹೇಗೆ ಗ್ರಹಿಸಲು ಸಾಧ್ಯ~ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.