ಕಾಮಗಾರಿ ಆಮೆಗತಿ: ಜನರ ಪ್ರತಿಭಟನೆ ಎಚ್ಚರಿಕೆ

7

ಕಾಮಗಾರಿ ಆಮೆಗತಿ: ಜನರ ಪ್ರತಿಭಟನೆ ಎಚ್ಚರಿಕೆ

Published:
Updated:

ಪುತ್ತೂರು: ಮಾಣಿ -ಮೈಸೂರು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪುತ್ತೂರು ತಾಲ್ಲೂಕು ವ್ಯಾಪ್ತಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ  ಜನತೆಗೆ ತೊಂದರೆಯಾಗುತ್ತಿದೆ ಎಂಬ  ವ್ಯಾಪಕ ಆರೋಪ ವ್ಯಕ್ತವಾಗಿದೆ. ಕಾಮಗಾರಿ ವಿಳಂಬದ ಕುರಿತು ಜನತೆಯಿಂದ ಪ್ರತಿಭಟನೆಯ ಎಚ್ಚರಿಕೆಯೂ ಕೇಳಿ ಬರುತ್ತಿದೆ.ಪುತ್ತೂರು ತಾಲ್ಲೂಕು ವ್ಯಾಪ್ತಿಯ  ಸಂಪ್ಯ ಸಮೀಪದ ಕಲ್ಲರ್ಪೆಯಿಂದ  ಕುಂಬ್ರ ಸಮೀಪದ ಶೇಕಮಲೆ ತನಕ ಅಲ್ಲಲ್ಲಿ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾಮಗಾರಿ  ನಡೆದಿದ್ದರೂ ಎಲ್ಲೂ ಸಮರ್ಪಕವಾಗಿ ಕೆಲಸ ಪೂರ್ಣಗೊಂಡಿಲ್ಲ. ಕಾಮಗಾರಿ ಆರಂಭಗೊಂಡು ಎರಡು ತಿಂಗಳು ಕಳೆದರೂ ಕಾಮಗಾರಿಯಲ್ಲಿ  ನಿರೀಕ್ಷಿತ ಪ್ರಗತಿ ಕಂಡು ಬರುತ್ತಿಲ್ಲ ಎಂಬುದು ಸಾರ್ವತ್ರಿಕ ಆರೋಪವಾಗಿದೆ.ಕಲ್ಲರ್ಪೆಯಿಂದ ಶೇಕಮಲೆ ವರೆಗೆ ರಸ್ತೆಯನ್ನು ಅಗೆದು ಹಾಕಲಾಗಿದೆ. ರಸ್ತೆಯ ಒಂದು ಪಾರ್ಶ್ವವನ್ನು ಡಾಂಬರೀಕರಣಗೊಳಿಸುವ ಕೆಲಸಕ್ಕೆ ಚಾಲನೆ ದೊರಕಿದ್ದರೂ,  ಕಂಬ್ರ, ಪರ್ಪುಂಜ ವ್ಯಾಪ್ತಿ ಬಿಟ್ಟರೆ ಬೇರೆಲ್ಲೂ  ಈ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಎಲ್ಲಾ ಕಡೆ ಅಪೂರ್ಣ ಕೆಲಸವಾಗಿದೆ. ಮಳೆ ಆರಂಭಗೊಂಡಲ್ಲಿ ಸಂಚಾರಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆಯ ಒಂದು ಭಾಗವನ್ನು ಸಂಪೂರ್ಣ ಅಗೆದುಹಾಕಿದ ಪರಿಣಾಮ ರಸ್ತೆ ಬದಿಯ ಪರಿಸರ ದೂಳುಮಯವಾಗಿದೆ.  ಮುಖಕ್ಕೆ ಬಟ್ಟೆ ಸುತ್ತಿಕೊಂಡು ಈ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಗೆದು ಹಾಕಲಾದ ಕೆಲವು ಸ್ಥಳಗಳಲ್ಲಿ ಜಲ್ಲಿ ತುಂಬುವ ಕೆಲಸವಾಗಿದ್ದರೂ, ಬಹುತೇಕ ಕಡೆಗಳಲ್ಲಿ ಈ ಕೆಲಸ ನಡೆದಿಲ್ಲ. ಜಲ್ಲಿ ಕೊರತೆಯಿಂದಾಗಿಯೇ ಕಾಮಗಾರಿ  ವಿಳಂಬವಾಗುತ್ತಿದೆ ಎಂಬ ಮಾತು ಗುತ್ತಿಗೆದಾರರ ಕಡೆಯಿಂದ ಕೇಳಿ ಬರುತ್ತಿದೆ.ರಸ್ತೆ ಬದಿಯಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳಿದ್ದು, ಈ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಇದು ರಸ್ತೆ ವಿಸ್ತರಣೆಗೆ ತೊಡಕಾಗಿದೆ. ರಸ್ತೆ ಬದಿಗಳಲ್ಲಿರುವ ಮರಗಳ ತೆರವು ಕಾರ್ಯಾಚರಣೆಯೂ ನಡೆದಿಲ್ಲ ಎಂದು ಆರೋಪಿಸುತ್ತಿರುವ ಜನತೆ ಈ ಕುರಿತು ಸಂಬಂಧಪಟ್ಟ ಇಲಾಖೆಯವರು ತಕ್ಷಣ  ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.ರಸ್ತೆ ಅಗೆದು ಹಾಕಿ ಜಲ್ಲಿ ತುಂಬಲು ವಿಳಂಬಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿದೆ. ಧೂಳು ನಿವಾರಿಸಲು ಸಮರ್ಪಕವಾಗಿ ನೀರು ಸಿಂಪಡಿಸುವ ಕೆಲಸವೂ ನಡೆಯುತ್ತಿಲ್ಲ. ಕುಡಿಯುವ ನೀರಿನ ಪೈಪ್ ಲೈನ್‌ಗಳನ್ನು ಅಳವಡಿಸಿ ಗುಂಡಿಯನ್ನು ಸರಿಯಾಗಿ ಮುಚ್ಚುವ ಕೆಲಸವೂ ಆಗಿಲ್ಲ. ಹೆದ್ದಾರಿಯನ್ನು ಅಗೆದು ತಗ್ಗಿಸಿರುವುದರಿಂದ ಸಂಪರ್ಕ ರಸ್ತೆಗಳ ಸಂಪರ್ಕವೂ ಕೆಲವೆಡೆ ಕಡಿದು ಹೋಗಿದೆ. ಕಾಮಗಾರಿ ಅವ್ಯವಸ್ಥೆಗಳಿಂದಾಗಿ ಜನತೆಗೆ ಸಮಸ್ಯೆಗಳಾಗುತ್ತಿವೆ ಎಂದು ಒಳಮೊಗ್ರು ಗ್ರಾಮ ಪಂಚಾಯಿತಿ  ಅಧ್ಯಕ್ಷರು ಈಗಾಗಲೇ ಪುತ್ತೂರಿನ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಕಾಮಗಾರಿ ಆರಂಭದಲ್ಲಿ ರಸ್ತೆಯುದ್ದಕ್ಕೂ ಕಂಡು ಬರುತ್ತಿದ್ದ ಕಾಮಗಾರಿ ಯಂತ್ರಗಳು ಇತ್ತೀಚೆಗೆ ಮಾಯವಾಗುತ್ತಿದ್ದು,  ಇದರಿಂದಾಗಿ ಕಾಮಗಾರಿ ಸ್ಥಗಿತಗೊಳ್ಳುವ ಭೀತಿ ಜನತೆಯಲ್ಲಿ ಆವರಿಸಿದೆ.  ಈ  ಪ್ರಮುಖ  ರಸ್ತೆಯ ಕಾಮಗಾರಿಯಲ್ಲಿ ವಿಳಂಬ ಕಂಡು ಬರುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮೌನ ತಳೆದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ ಆರಂಭಗೊಂಡಲ್ಲಿ ಕಾಮಗಾರಿ ಸ್ಥಗಿತಗೊಳ್ಳುವುದು ನಿಚ್ಚಳವಾಗಿದೆ, ರಸ್ತೆ ಕಾಮಗಾರಿ ಆರಂಭಗೊಂಡಿರುವ ಏಳೆಂಟು ಕಿ.ಮೀ.ರಸ್ತೆಯಲ್ಲಿ  ವಾಹನಗಳು ಕಸರತ್ತು ನಡೆಸುತ್ತಾ ಸಂಚರಿಸಬೇಕಾಗಿದೆ. ಮಳೆ ಆರಂಭಗೊಂಡಲ್ಲಿ ಮುಂದೆ ಯಾವ ಸ್ಥಿತಿ ನಿರ್ಮಾಣವಾಗಬಹುದು  ಎಂದು ಹೇಳಲುಸಾಧ್ಯವಾಗಿದೆ.

 ಕುಂಟುತ್ತಾ ಸಾಗುತ್ತಿರುವ ಮಾಣಿ- ಮೈಸೂರು ಹೆದ್ದಾರಿ ಕಾಮಗಾರಿ  ಸಮಸ್ಯೆಗಳ ಕೂಪವಾಗಿ,  ಜನತೆಯ ಪಾಲಿಗೆ ಶಾಪವಾಗಿ ಕಾಡುತ್ತಿದೆ. ಕಾಮಗಾರಿಗೆ ಕ್ಷಿಪ್ರ ಚಾಲನೆ ನೀಡಿ ಮಳೆಗಾಲಕ್ಕೆ ಮುನ್ನ ಸಂಚಾರ ಯೋಗ್ಯವನ್ನಾಗಿಸಬೇಕೆಂಬ ಒಕ್ಕೊರಲ ಆಗ್ರಹ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

  ಶಶಿಧರ್ ರೈ ಕುತ್ಯಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry