ಕಾಮಗಾರಿ ಕಳಪೆ: ಕಠಿಣ ಕ್ರಮದ ಎಚ್ಚರಿಕೆ

7
ಹೊನ್ನಾಳಿ ಸಾಮರ್ಥ್ಯ ಸೌಧದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ

ಕಾಮಗಾರಿ ಕಳಪೆ: ಕಠಿಣ ಕ್ರಮದ ಎಚ್ಚರಿಕೆ

Published:
Updated:

ಹೊನ್ನಾಳಿ: ಕಾಮಗಾರಿ ಕಳಪೆ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಸಿದರು.ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಈಚೆಗೆ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಂಜಿನಿಯರ್ ಜಯಪ್ರಕಾಶ್ ಅವರು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ವೇಳೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಗಲಹಳ್ಳಿ ಕೆ.ಎಚ್.ಗುರುಮೂರ್ತಿ ಆರೋಪಿಸಿದ ಸಂದರ್ಭದಲ್ಲಿ ಅವರು ಈ ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಗಲಹಳ್ಳಿ ಕೆ.ಎಚ್.ಗುರುಮೂರ್ತಿ ಮಾತನಾಡಿ, ತಾಲ್ಲೂಕಿನ ತಿಮ್ಲೋಪುರ ಗ್ರಾಮದ ಸೇವಾಲಾಲ್ ನಗರಕ್ಕೆ ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಅವರನ್ನು ಒತ್ತಾಯಿಸಿದರು.ತಾಲ್ಲೂಕಿನ ಹನುಮನಹಳ್ಳಿ ಬಳಿಯ ರಾಮನಕೆರೆಯಿಂದ ತಿಮ್ಲೋಪುರ ಗ್ರಾಮದ ಸೇವಾಲಾಲ್ ತಾಂಡಾ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿರುವುದು ಸರಿಯಷ್ಟೇ. ಎನ್‌ಆರ್‌ಡಬ್ಯೂಎಸ್ ಯೋಜನೆಯಡಿ ರೂ 18 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿರುವ ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಅವರು ಆರೋಪಿಸಿದರು.ಈ ಸಂದರ್ಭದಲ್ಲಿ ಎಂಜಿನಿಯರ್ ಜಯಪ್ರಕಾಶ್ ಮಾತನಾಡಲು ಎದ್ದಾಗ ಗುರುಮೂರ್ತಿ ಮತ್ತು ಜಯಪ್ರಕಾಶ್ ಮಧ್ಯೆ ಮಾತಿನ ಚಕಮಕಿ ನಡೆಯಿತು.ಕೈ-ಕೈ ಮಿಲಾಯಿಸುವ ಹಂತ ತಲುಪುವ ಸುಳಿವು ಅರಿತ ಶಾಸಕ ಡಿ.ಜಿ.ಶಾಂತನಗೌಡ, ಕಾಮಗಾರಿಯನ್ನು ಶೀಘ್ರವೇ ಪರಿಶೀಲಿಸೋಣ. ಕಳಪೆ ಕಂಡುಬಂದಲ್ಲಿ,  ಸಂಬಂಧಪಟ್ಟ ಎಂಜಿನಿಯರ್‌ ಅವರನ್ನು ಅಮಾನತಿನಲ್ಲಿಡಲು  ತಾವು ಶಿಫಾರಸು ಮಾಡುವುದಾಗಿ ತಿಳಿಸುತ್ತಿದ್ದಂತೆ ಸಭೆ ಶಾಂತವಾಯಿತು.ತಾಲ್ಲೂಕಿನ ಚಿಕ್ಕಹಾಲಿವಾಣ ಗ್ರಾಮದಲ್ಲಿ ನಿರ್ಮಿಸಿರುವ ಓವರ್‌ಹೆಡ್‌ ಟ್ಯಾಂಕ್‌ ಕಳಪೆ ಕಾಮಗಾರಿಯಿಂದ ಕೂಡಿದ್ದು, ಟ್ಯಾಂಕನ್‌ ದುರಸ್ತಿ ಪಡಿಸುವ ಕೆಲಸವಾಗಬೇಕಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ದಾಕ್ಷಾಯಣಮ್ಮ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಶಿವರಾಮನಾಯ್ಕ, ಶೀಲಾ ಗದ್ದಿಗೇಶ್, ಲಕ್ಷ್ಮಿ ಎಚ್.ಬಿ.ಮಂಜಪ್ಪ. ಅಂಬಿಕಾ ರಾಜಪ್ಪ, ಉಷಾ ಅಶೋಕ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರೇಮಾಬಾಯಿ, ಸದಸ್ಯರಾದ ಸುರೇಶ್, ಬಿ.ಜಿ.ಕಾಂತರಾಜ್, ರುದ್ರೇಶ್, ಆನಂದಪ್ಪ, ಉಮೇಶ್, ರಮೇಶ್ ದಾಸರಹಳ್ಳಿ, ಟಿ.ಎಸ್.ಕೃಷ್ಣಪ್ಪ, ಚಂದ್ರಶೇಖರಪ್ಪ, ಭಾರತಿ ಚಂದ್ರಶೇಖರ್, ಮಲ್ಲಮ್ಮ, ಪ್ರೇಮಮ್ಮ, ಲಲಿತಮ್ಮ, ಯಶೋದಮ್ಮ, ಇಒ ಹುಲಿರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry