ಕಾಮಗಾರಿ ಕಳಪೆ: ಪ್ರತಿಭಟನೆ

7

ಕಾಮಗಾರಿ ಕಳಪೆ: ಪ್ರತಿಭಟನೆ

Published:
Updated:

ಲಕ್ಷ್ಮೇಶ್ವರ: ಅಂದಾಜು 11 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ನಿರ್ಮಾಣ ಆಗುತ್ತಿರುವ ಗೋವನಾಳ-ಲಕ್ಷ್ಮೇಶ್ವರ-ಮಾಗಡಿ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಸಮೀಪದ ಗೋವನಾಳ ಗ್ರಾಮಸ್ಥರು ಬುಧವಾರ ಕೆಲಸ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯರಾದ ಭರಮಣ್ಣ ರೊಟ್ಟಿಗವಾಡ ಇದ್ದ ರಸ್ತೆ ಕಿತ್ತು ಹಾಕಿದ ಮೇಲೆ ಧೂಳು ಏಳದಂತೆ ಒಂದು ಹನಿ ನೀರು ಹೊಡೆದಿಲ್ಲ. ಹೀಗಾಗಿ ರಸ್ತೆಯಲ್ಲಿನ ದೂಳೆಲ್ಲ ಬೆಳೆ ಮೇಲೆ ಹಾರುತ್ತಿದೆ. ಇದರಿಂದಾಗಿ ಜೋಳದ ಫಸಲಿಗೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನಪ್ಪ ಜಗಲಿ ಲೋಕೋಪಯೋಗಿ ಇಲಾಖೆ ವತಿಯಿಂದ ತಾಲ್ಲೂಕಿನಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆಗಳ ಗುಣಮಟ್ಟ ಬಹಳ ಕಳಪೆ ಆಗಿದ್ದು ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ತಳವಾರ ರಸ್ತೆ ನಿರ್ಮಿಸುವಾಗ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಧಕ್ಕೆ ಆಗಿದ್ದು ಅದನ್ನು ಸರಿಪಡಿಸುವಂತೆ ತಿಳಿಸಿದರೂ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ದೊಡ್ಡಮನಿ ರಸ್ತೆ ನಿರ್ಮಾಣದ ಅಂದಾಜು ಪತ್ರಿಕೆ ಕೇಳಿದರೂ ಸಂಬಂಧಿಸಿದ ಎಂಜಿನಿಯರ್  ಅದನ್ನು ತೋರಿಸದೆ ತಮಗೆ ತಿಳಿದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ನಂತರ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಎಇಇ ಎಲ್.ವೈ. ಮಾಳೋದೆ ಪ್ರತಿಭಟನಾಕಾರನ್ನು ಸಮಾಧಾನಪಡಿಸಲು ಮುಂದಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗನಗೌಡ ಹೊಸಗೌಡ್ರ, ಶೇಖರಗೌಡ ಕೊರಡೂರ, ಶೇಖಪ್ಪ ಅಂಗಡಿ, ಫಕ್ಕೀರಗೌಡ ಮರಲಿಂಗನಗೌಡ್ರ, ಯಲ್ಲಪ್ಪ ಮರಲಿಂಗನಗೌಡ್ರ, ದೀನ್‌ಸಾಬ್ ಅಗಸರ, ಅಲ್ಲಿಸಾಬ್ ಅಗಸಿಮನಿ, ಹನಮಂತಗೌಡ ರಾಯನಗೌಡ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry