ಕಾಮಗಾರಿ ಕಳಪೆ: ಲೋಕಾಯುಕ್ತರ ಪರಿಶೀಲನೆ

7

ಕಾಮಗಾರಿ ಕಳಪೆ: ಲೋಕಾಯುಕ್ತರ ಪರಿಶೀಲನೆ

Published:
Updated:

ಕುಶಾಲನಗರ: ಇಲ್ಲಿಗೆ ಸಮೀಪದ ಕೊಡಗರ ಹಳ್ಳಿ- ಕಂಬಿಬಾಣೆ- ಚಿಕ್ಲಿಹೊಳೆ ಸಂಪರ್ಕ ಕಲ್ಪಿಸುವ 10 ಕಿ.ಮೀ. ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಲೋಕಾಯುಕ್ತ ತನಿಖಾ ಅಧಿಕಾರಿ ಪ್ರಸನ್ನ ಕುಮಾರ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.ತಂಡವು ಈ 10 ಕಿ.ಮೀ. ದೂರವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವುದರ ಜೊತೆಗೆ ಪ್ರತೀ ಕಿ.ಮೀ. ಹಂತದಲ್ಲಿ ಮಣ್ಣಿನ ಮತ್ತು ಡಾಂಬರು ಹಾಕಿದ ಮಾದರಿಯನ್ನು ಸಂಗ್ರಹಿಸಿತು.ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್, ಈ ರಸ್ತೆಯ ಕಾಮಗಾರಿಯು ಕಳಪೆಯಾಗಿದೆ ಎಂದು ಬಿ. ಅನಿಲ್ ಕುಮಾರ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಮಣ್ಣು ಮತ್ತು ಡಾಂಬರು ಮಾದರಿಯನ್ನು ಸಂಗ್ರಹಿಸಲಾಗಿದ್ದು, ಗುಣಮಟ್ಟದ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ­ಕೊಡಲಾಗುವುದು ಎಂದರು.ಪ್ರಯೋಗಾಲಯದ ವರದಿಯನ್ನು ಆಧರಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಆಡಳಿತಾತ್ಮಕ ಮತ್ತು ರಸ್ತೆ ಗುಣಮಟ್ಟದ ಕಾಮಗಾರಿ ಅಂದಾಜು ವೆಚ್ಚ ಮತ್ತು ಒಟ್ಟು ವೆಚ್ಚದ ಮಾಹಿತಿಗಳನ್ನು ಕ್ರೋಡೀಕರಿಸಿ ವರದಿ ನೀಡಲಾಗುವುದು ಎಂದು ಹೇಳಿದರು.

ದೂರುದಾರ ಬಿ. ಅನಿಲ್ ಕುಮಾರ್ ಮಾತನಾಡಿ, ರಸ್ತೆ ಕಾಮಗಾರಿಯಲ್ಲಿ ಬಹಳಷ್ಟು ಭ್ರಷ್ಟಾಚಾರದ ವರದಿಗಳು ಕೇಳಿಬಂದಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಈ ರಸ್ತೆಯನ್ನು ಪ್ರಯೋಗಾತ್ಮಕವಾಗಿ ಕೈಗೆತ್ತಿಕೊಂಡಿದ್ದು, ಸೋಮವಾರಪೇಟೆ ತಾಲ್ಲೂಕಿನಲ್ಲಿ ಇನ್ನೂ 4 ರಸ್ತೆಗಳ ಕಾಮಗಾರಿಗಳ ಕುರಿತು ಮಾಹಿತಿ ಹಕ್ಕಿನಲ್ಲಿ ವಿವರ ಕೇಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸೋಮವಾರಪೇಟೆಯ ಗ್ರಾಹಕ ಮಾಹಿತಿ ಕೇಂದ್ರದ ಸುಬ್ರಹ್ಮಣ್ಯ ಅವರ ನೆರವು ಮತ್ತು ಮಾರ್ಗದರ್ಶನದ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ.ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುವವರೆಗೆ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಆಗಿನ ಶಾಸಕ ಮತ್ತು ಉಸ್ತುವರಿ ಸಚಿವರು ಆಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿಶೇಷ ಪ್ರಯತ್ನದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ರಸ್ತೆಯನ್ನು ದುರಸ್ತಿ ಮಾಡುವ ಪ್ರಯತ್ನ ಮಾಡಲಾಗಿತ್ತು.ಕಾಮಗಾರಿ ಮಾಡುವ ಸಂದರ್ಭದಲ್ಲೇ ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ಕಳಪೆ ಕಾಮಗಾರಿಯ ಕುರಿತು ಎಚ್ಚರಿಕೆ ನೀಡಲಾಗಿದ್ದರೂ ನಿರ್ಲಕ್ಷ  ಹಿನ್ನೆಲೆಯಲ್ಲಿ ಇದೀಗ ತೋರಿದ ಲೋಕಾಯುಕ್ತ ಮೊಕದ್ದಮೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಹಾರಂಗಿ ವ್ಯಾಪ್ತಿಯ ಕಾರ್ಯಪಾಲಕ ಎಂಜಿನಿಯರ್‌ ಸಿದ್ಧರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌  ಪಾಲನೇತ್ರಯ್ಯ, ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಡಿ. ಮನು ನಂಜಪ್ಪ, ಕಿಶೋರ್ ಮತ್ತು ಗ್ರಾಮಸ್ಥರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry