ಸೋಮವಾರ, ಅಕ್ಟೋಬರ್ 14, 2019
22 °C

ಕಾಮಗಾರಿ ಚುರುಕು: ಖರ್ಗೆ ತಾಕೀತು

Published:
Updated:

ಗುಲ್ಬರ್ಗ: ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿಗೆ ಬಿಡುಗಡೆಯಾದ 167 ಕೋಟಿ ರೂಪಾಯಿ ಪೈಕಿ ಈವರೆಗೆ ಕೇವಲ 60 ಕೋಟಿ ವೆಚ್ಚವಾಗಿದ್ದು, ಕಾಮಗಾರಿಯನ್ನು ಇನ್ನಷ್ಟು ಚುರುಕಿನಿಂದ ನಡೆಸಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದರು.ಆಳಂದ ತಾಲ್ಲೂಕು ಕಡಗಂಚಿ ಬಳಿ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಅವರು ಪರಿಶೀಲನೆ ನಡೆಸಿದರು. ಒಂದು ಹಾಗೂ ಎರಡನೇ ಹಂತದಲ್ಲಿ ನಿರ್ಮಾಣ ಕಾಮಗಾರಿಗೆ ಯು.ಜಿ.ಸಿ. 286 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈ ಪೈಕಿ ಬಿಡುಗಡೆಯಾದ ಹಣದಲ್ಲಿ ಕೇವಲ ರೂ. 60 ಕೋಟಿ ವೆಚ್ಚ ಮಾಡಲಾಗಿದೆ. ಹೀಗಾದರೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.“ಕಳೆದ ವರ್ಷ ಭೂಸ್ವಾಧೀನ, ನೀರು, ಉಸುಕು ಇತ್ಯಾದಿ ತೊಂದರೆಯಿಂದಾಗಿ ಕಾಮಗಾರಿ ವಿಳಂಬವಾಯಿತು. ಆದರೆ ಈಗ ನೀರನ್ನು ಖರೀದಿಸಿ ತರಲಾಗುತ್ತಿದೆ. ಅಧಿಕಾರಿಗಳು ಇನ್ನಾದರೂ ಆಸಕ್ತಿ ವಹಿಸಿ ಕೆಲಸ ಮಾಡಬೇಕು” ಎಂದು ಅವರು ತಾಕೀತು ಮಾಡಿದರು.ಮುಂದಿನ ವರ್ಷದೊಳಗೆ ವಿವಿಗೆ ಮಂಜೂರು ಮಾಡಲಾದ ಎಲ್ಲ ಅನುದಾನವನ್ನೂ ಖರ್ಚು ಮಾಡಿದರೆ, 12ನೇ ಪಂಚವಾರ್ಷಿಕ ಯೋಜನೆಯಲ್ಲಿ 750 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರೀಯ ವೈದ್ಯಕೀಯ ಕಾಲೇಜನ್ನು ಗುಲ್ಬರ್ಗದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದೆ.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಆಸಕ್ತಿ ವಹಿಸಿ, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದರು.

ಇನ್ನು ಕೆಲವು ದಿನಗಳಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ಜವಳಿ ಪಾರ್ಕ್ ಗುಲ್ಬರ್ಗದಲ್ಲಿ ಆರಂಭವಾಗಲಿವೆ.ಎರಡು ಕಡೆ ನವೋದಯ ಶಾಲೆ ಹಾಗೂ ಒಂದು ಕಡೆ ಏಕಲವ್ಯ ಶಾಲೆ ಸ್ಥಾಪನೆಗೆ ಚಾಲನೆ ಸಿಕ್ಕಿದೆ. ಹೀಗೆ ಮುಂದಿನ ದಿನಗಳಲ್ಲಿ ಗುಲ್ಬರ್ಗ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಾಕ್ಷಿಯಾಗಲಿದೆ ಎಂದು ಖರ್ಗೆ ವಿವರಿಸಿದರು.ವಿವಿ ಆರಂಭ:“ ಕಳೆದ ಕೆಲವು ದಿನಗಳ ಹಿಂದೆ ಕೇಂದ್ರೀಯ ವಿವಿ ಕುಲಪತಿ ಪಠಾಣ್ ಹಾಗೂ ಸಮ ಕುಲಪತಿ ಚಂದ್ರಶೇಖರ ಅವರ ಜತೆ ಚರ್ಚೆ ನಡೆಸಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆಡಳಿತ ಶಾಖೆಗಳು ಹಾಗೂ ಇತರ ಕೆಲವು ವಿಭಾಗಗಳನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ಅವರು ನಿರ್ಧರಿಸಿದ್ದಾರೆ” ಎಂದು ಸಚಿವ ಖರ್ಗೆ ಹೇಳಿದರು.ನಂತರ ಸಚಿವ ಖರ್ಗೆ ಅವರು ವಿವಿ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಯನ್ನು ಸಹ ಪರಿಶೀಲಿಸಿದರು. ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ಬಿ.ಆರ್.ಪಾಟೀಲ, ಮಾರುತಿರಾವ ಮಾಲೆ, ಅಂಬಾರಾಯ ಅಷ್ಟಗಿ ಇತರರು ಇದ್ದರು.

Post Comments (+)