ಬುಧವಾರ, ಮಾರ್ಚ್ 3, 2021
25 °C
ಯಲ್ಲಾಪುರ ರಸ್ತೆ ಪಕ್ಕ ಮೀನು ಮಾರುಕಟ್ಟೆ ನಿರ್ಮಾಣ ವಿರೋಧಿಸಿ ಬೃಹತ್‌ ಪ್ರತಿಭಟನೆ

ಕಾಮಗಾರಿ ನಿಲ್ಲಿಸಿ; ಬೇರೆಡೆ ಸ್ಥಳಾಂತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮಗಾರಿ ನಿಲ್ಲಿಸಿ; ಬೇರೆಡೆ ಸ್ಥಳಾಂತರಿಸಿ

ಶಿರಸಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೆರವಿನಲ್ಲಿ ನಗರಸಭೆ ಇಲ್ಲಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲು ಹೊರಟಿರುವ ಮೀನು ಮಾರುಕಟ್ಟೆ ಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸುತ್ತಲಿನ ನಿವಾಸಿಗಳು, ವಿದ್ಯಾರ್ಥಿಗಳು ಸೋಮವಾರ ಇಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.ಕೆಂಡ ಮಹಾಸತಿ ದೇವಾಲಯದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಭಾಗವಹಿಸಿದ್ದರು. ನಗರದ ಪ್ರಮುಖದ ರಸ್ತೆಯ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಯೋಜಿತ ಮೀನು ಮಾರುಕಟ್ಟೆಯ ಸ್ಥಳ ನಿಗದಿಪಡಿಸಬೇಕಿತ್ತು.ಸಾರ್ವಜನಿಕರ ಅಭಿಪ್ರಾಯ ಕೇಳದೇ ನಗರಸಭೆ ಸರ್ವಾಧಿಕಾರಿ ಧೋರಣೆ ಅನುಸರಿಸಿ ಕಾಮಗಾರಿ ಪ್ರಾರಂಭಿಸಿರುವುದು ಸರಿಯಲ್ಲ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಪರ್ಯಾಯ ಸ್ಥಳದ ಬಗ್ಗೆ ನಗರಸಭೆ ಯೋಚಿಸಬೇಕು’ ಎಂದರು.ಈಗಾಗಲೇ ಇರುವ ಹಳೆ ಬಸ್‌ನಿಲ್ದಾಣದ ಹಿಂಭಾಗ, ನಿಲೇಕಣಿ ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲವಾಗಿದೆ. ವಸತಿ ಬಡಾವಣೆಯ ಸಮೀಪ ಹೊಸ ಮೀನು ಮಾರುಕಟ್ಟೆ ನಿರ್ಮಾಣ ಮಾಡುವುದರಿಂದ ಮಾರುಕಟ್ಟೆಯ ತ್ಯಾಜ್ಯ ನೀರು ಬಾವಿ ಸೇರಿ ನೀರು ಕಲುಷಿತಗೊಳ್ಳುತ್ತದೆ. ಪ್ರಸ್ತುತ ಇರುವ ಮೀನು ಮಾರುಕಟ್ಟೆ ಯನ್ನು ಮಾಲಿನ್ಯಮುಕ್ತಗೊಳಿಸಿ ನಗರಸಭೆ ಹೊಸ ಮೀನು ಮಾರು ಕಟ್ಟೆಯ ಬಗ್ಗೆ ಮಾತನಾಡಲಿ’ ಎಂದರು.ಪ್ರಕಾಶ ಸಾಲೇರ ಮಾತನಾಡಿ ‘ಮೀನು ಮಾರುಕಟ್ಟೆ ಬೇಕೆಂದು ಮೆರವಣಿಗೆ ಮಾಡಿದವರ ಎದುರು ನಮಗೆ ಆನೆ ಬಲ ಬಂದಿದೆ ಎಂದಿದ್ದ ನಗರಸಭೆ ಆಯುಕ್ತರು ಬೃಹತ್‌ ಸಂಖ್ಯೆಯಲ್ಲಿ ಪ್ರತಿಭಟಿಸಿದವರ ಬಲ ನೋಡಿ ಏನೆಂದು ಪ್ರತಿಕ್ರಿಯಿಸಲಿ’ ಎಂದರು. ‘ಕಾಲೇಜ್‌ ಹತ್ತಿರ ಮಾಡುವುದಾದರೆ ಗ್ರಂಥಾಲಯ ಮಾಡಲಿ, ಮೀನು ಮಾರುಕಟ್ಟೆ ನಿರ್ಮಾಣ ಬೇಡ’ ಎಂದು ವಿದ್ಯಾರ್ಥಿ ಪ್ರಮುಖ ಅಜಿತ್ ನಾಡಿಗ ಹೇಳಿದರು.ತಹಶೀಲ್ದಾರ್‌ ಬಸಪ್ಪ ಪೂಜಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ‘ಅರ್ಬನ್ ಬ್ಯಾಂಕ್‌ ಪಕ್ಕದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದೆ. ಈ ಸ್ಥಳದ ಸಮೀಪ ಇರುವ ಲಯನ್ಸ್‌ ನಗರ, ಯಲ್ಲಾಪುರ ರಸ್ತೆ, ಪ್ರಗತಿ ನಗರ, ಶಾಂತಿ ನಗರ, ಮರಾಠಿಕೊಪ್ಪ, ಅಮ್ಮಾ ಲೇಔಟ್ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ.ಯೋಜಿತ ಮೀನು ಮಾರುಕಟ್ಟೆಯಿಂದ ಹರಿಯುವ ನೀರಿನ ವಾಸನೆ ಜನಜೀವನಕ್ಕೆ ತೊಂದರೆಯಾಗುತ್ತದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಹೆದ್ದಾರಿ ಪಕ್ಕದ ಮೀನು ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿಸುತ್ತದೆ. ಇದೇ ಸ್ಥಳದ ಸಮೀಪ ದೇವಾಲಯ, ಪೂಜಾ ಸ್ಥಳಗಳು ಇವೆ.ಇವೆಲ್ಲ ಸಂಗತಿಗಳನ್ನು ಪರಿಗಣಿಸಿ ಮೀನು ಮಾರುಕಟ್ಟೆ ಸ್ಥಳಾಂತರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ನಗರಸಭೆ ಸದಸ್ಯ ಅರುಣ ಪ್ರಭು, ಪ್ರಮುಖರಾದ ಎಸ್‌.ಐ.ಭಟ್ಟ, ಎಂ.ಎಂ. ಭಟ್ಟ, ಕೆ.ವಿ.ಭಟ್ಟ, ಶ್ರೀನಿವಾಸ ಹೆಬ್ಬಾರ, ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಅಹಲ್ಯಾ ಹೆಗಡೆ, ಶಶಿಕಲಾ ಶೆಟ್ಟಿ ಇತರರು ಇದ್ದರು.***

ಪ್ರತಿಭಟನೆ ಮಾಡಿದವರಿಗೆ ನೋಟಿಸ್‌ ಕೊಡುವ ಮೂಲಕ ನಗರಸಭೆ ಪ್ರತಿಕಾರದ ಧೋರಣೆ ತೋರಿರುವ ಕ್ರಮ ಖಂಡನೀಯವಾಗಿದೆ.

-ವಿಶ್ವೇಶ್ವರ ಹೆಗಡೆ ಕಾಗೇರಿ,
ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.