ಕಾಮಗಾರಿ ಪೂರೈಸಲು ಆ 15ರ ಗಡುವು

ಶುಕ್ರವಾರ, ಜೂಲೈ 19, 2019
24 °C

ಕಾಮಗಾರಿ ಪೂರೈಸಲು ಆ 15ರ ಗಡುವು

Published:
Updated:

ಹುಬ್ಬಳ್ಳಿ: ರಾಜನಗರದಲ್ಲಿ ನಿರ್ಮಿಸಲಾಗಿರುವ ಕೇಂದ್ರೀಯ ವಿದ್ಯಾಲಯ ನಂ.1ರ ಕಟ್ಟಡದ ಬಾಕಿ ಉಳಿದಿರುವ ಎಲ್ಲ ಕಾಮಗಾರಿಯನ್ನು ಇದೇ ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಸಂಸದ ಪ್ರಹ್ಲಾದ ಜೋಶಿ ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ)ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಜನಗರದ ವಿದ್ಯಾಲಯದ ನೂತನ ಕಟ್ಟಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕಟ್ಟಡದ ಬಾಕಿ ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಕಪಿಲ್ ಸಿಬಲ್ ಜೂನ್ 30ಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನನಗೆ ಅಧಿಕೃತ ಮಾಹಿತಿ ನೀಡಿದ್ದರು. ಹೀಗಿದ್ದೂ ವಿಳಂಬವಾದದ್ದು ಏಕೆ ಎಂದು ಪ್ರಶ್ನಿಸಿದ ಅವರು ಸಚಿವರು ತಮಗೆ ಬರೆದ ಪತ್ರದ ಪ್ರತಿಯನ್ನೂ ಪ್ರದರ್ಶಿಸಿದರು.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆ.ವಿ. ನಂ. 1ರ ಮಕ್ಕಳು ಗದಗ ರಸ್ತೆಯ ಕೆ.ವಿ. ನಂ. 2ರ ಶಾಲೆಗೆ ಅನಿವಾರ್ಯವಾಗಿ ಎಡತಾಕು ವಂತಾಗಿದ್ದು, ಎರಡೂ ಶಾಲೆಗಳ ಮಕ್ಕಳು ಮತ್ತು ಪಾಲಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೆ ಧ್ವನಿಗೂಡಿದ ಜಿಲ್ಲಾಧಿಕಾರಿ ಹಾಗೂ ಕೇಂದ್ರೀಯ ವಿದ್ಯಾಲಯ ನಂ.1ರ ಆಡಳಿತ ಮಂಡಳಿ ಅಧ್ಯಕ್ಷ ದರ್ಪಣ್ ಜೈನ್, `ರಾಜನಗರದ ಹಳೆಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಈ ಶಾಲೆಯ ವಿದ್ಯಾರ್ಥಿಗಳನ್ನು ಗದಗ ರಸ್ತೆಯ ಕೇಂದ್ರೀಯ ಶಾಲೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಎರಡೂ ಶಾಲೆಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅವರ ಪೋಷಕರೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಆದಷ್ಟು ಶೀಘ್ರ ಇಲ್ಲಿನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿದೆ~ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಡಬ್ಲ್ಯುಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ಡಿ.ಡಬ್ಲ್ಯು. ವರ್ನೂಲಕರ್ ಮತ್ತು ಕೆ.ಎಸ್. ಹೇಮರಾಜ, ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡು ತಿಂಗಳ ಅವಕಾಶ ಕೋರಿದರು. ಕಡೆಗೆ ಆಗಸ್ಟ್ 15ಒಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಜೋಶಿ ಸೂಚಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಸುವಂತೆ ಶಾಲೆಯ ಪ್ರಾಚಾರ್ಯರಿಗೆ ತಿಳಿಸಿದರು.

ಪತ್ರಕರ್ತರೊಟ್ಟಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಒಟ್ಟು 15 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಆರು ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. 10.35 ಕೋಟಿ ರೂಪಾಯಿ ಇದಕ್ಕಾಗಿ ವ್ಯಯಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಈವರೆಗೆ 8.2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಉಳಿದ ಅನುದಾನವೂ ಶೀಘ್ರದಲ್ಲೇ ದೊರೆಯಲಿದೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ ಎಂದರು.

ಕಟ್ಟಡಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆಯಿಲ್ಲ. ಕಾಮಗಾರಿ ಅಂತ್ಯದ ವೇಳೆಗೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಅಳವಡಿಸಿಲು ಸೂಚಿಸಲಾಗಿದೆ. ಕಟ್ಟಡಕ್ಕೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲು ಐದು ಲಕ್ಷ ರೂಪಾಯಿ ಮೀಸಲಿಡಲಾಗಿದ್ದು, ಮುಂದಿನ ಹಂತದಲ್ಲಿ ಈ ಕುರಿತು ಗಮನ ಹರಿಸಲಾಗುವುದು ಎಂದರು.

ಕಟ್ಟಡಕ್ಕೆ ವಿದ್ಯುತ್ ಸಂಪರ್ಕದ ವ್ಯವಸ್ಥೆಗೆ ಕರೆಯಲಾಗಿದ್ದ ಟೆಂಡರ್‌ಅನ್ನು ನಾಳೆಯೇ ತೆರೆಯಲಾಗುತ್ತದೆ. ತುರ್ತು ಕಾಮಗಾರಿ ಅಡಿಯಲ್ಲಿ ಗುತ್ತಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ನಾಮ ನಿರ್ದೇಶಿತ ಅಧ್ಯಕ್ಷ ವಿನಯ್ ಜಾಂಬಳಿ, ಪ್ರಭಾರ ಪ್ರಾಚಾರ್ಯ ಜೈದೀಪ ಪರ್ಸಾಯ್, ಪಾಲಕರ ಸಂಘಟನೆ ಪದಾಧಿಕಾರಿಗಳಾದ ಎಂ.ಕೆ. ಪಾಟೀಲ, ಡಾ.ಬಿ.ಆರ್. ಪಾಟೀಲ, ಸುನಿಲ್ ಮಿರಜಕರ್, ದಿವಾಕರ ಹೆಗಡೆ, ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry