ಗುರುವಾರ , ಮೇ 6, 2021
21 °C

ಕಾಮಗಾರಿ ಪೂರ್ಣಗೊಳಿಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ಕಳೆದ 3 ವರ್ಷಗಳಿಂದ ಸ್ಥಗಿತಗೊಂಡಿರುವ ತೊಣ್ಣೂರು ಕೆರೆ ಎಡಮೇಲ್ದಂಡೆ ನಾಲಾ ಕಾಮಗಾರಿ ಪ್ರಾರಂಭಿಸಲು ಸರ್ಕಾರದ ವತಿಯಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಶ್ವಥ್‌ನಾರಾಯಣ ತಿಳಿಸಿದರು.ಬುಧವಾರ ಕಾಮಗಾರಿ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲುಗಳು ಹೆಚ್ಚಾಗಿರುವ ನಾಲೆಯ ಕಾಮಗಾರಿ ಪೂರೈಸಲು ಟೆಂಡರ್ ಹಣಕ್ಕಿಂತ ಹೆಚ್ಚಿನ ಹಣ ಬೇಕು. ಕಲ್ಲು ಸ್ಫೋಟ ಮಾಡಿದ ಸಂದರ್ಭದಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ನೀಡಿ 2009ರಿಂದ ನಾಲಾ ಕಾಮಗಾರಿಯನ್ನು ಗುತ್ತಿಗೆದಾರ ಸ್ಥಗಿತಗೊಳಿಸಿದ್ದಾನೆ ಎಂದು ಹೇಳಿದರು.ಹೆಚ್ಚಿನ ಪ್ರಮಾಣದ ಕಲ್ಲು ಬಂಡೆಗಳಿದ್ದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ಮುಂದುವರಿಸಬಹುದಾಗಿತ್ತು. ತೊಣ್ಣೂರು ಕೆರೆ ಎಡ ಮೇಲ್ದಂಡೆ ನಾಲಾ ನಿರ್ಮಾಣದಿಂದ 18 ಹಳ್ಳಿಗಳ 3,700 ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದಾಗಿ ಈ ಭಾಗದ ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ನುಡಿದರು.ರೈತರು ನೀಡಿದ ಮನವಿಯ ಮೇರೆಗೆ ಕಾಮಗಾರಿ ಪರಿಶೀಲಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಕೆರೆತೊಣ್ಣೂರಿನ ಎಡದಂಡೆ ನಾಲಾ ಕಾಮಗಾರಿಯನ್ನು ಆರಂಭಿಸಲು ಕ್ರಮ ಜರುಗಿಸಲಾಗುತ್ತದೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ವಿವರಣೆ ಕೇಳಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸೆಣಬದ ಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಶ್ವಥ್‌ನಾರಾಯಣ ಅವರಿಗೆ ಶಾಲೆಗೆ ಕಾಂಪೌಂಡ್ ನಿರ್ಮಾಣ, ರಸ್ತೆ ದುರಸ್ತಿ ಹಾಗೂ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡುವಂತೆ ಮನವಿ ನೀಡಿದರು.ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾ.ಪಂ. ಅಧ್ಯಕ್ಷ ಶ್ರೀಧರ್, ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ,  ಬಿಜೆಪಿ ಮುಖಂಡರಾದ ಮಂಜುನಾಥ್, ದೊರೆಸ್ವಾಮಿ ನಾಗಣ್ಣ, ಧನಂಜಯ, ಗ್ರಾ.ಪಂ. ಸದಸ್ಯ ಪಾರ್ಥ, ಸೀತಾರಾಮು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.