ಕಾಮಗಾರಿ ಸ್ಥಗಿತಕ್ಕೆ ಎ.ಸಿ. ಸೂಚನೆ

7

ಕಾಮಗಾರಿ ಸ್ಥಗಿತಕ್ಕೆ ಎ.ಸಿ. ಸೂಚನೆ

Published:
Updated:

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕಲ್‌ನಲ್ಲಿ ನಿರ್ಮಾಣವಾಗಲಿರುವ ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಕಂಪೆನಿಯ ಜಲವಿದ್ಯುತ್ ಯೋಜನೆ ಯಿಂದ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳಲಿದ್ದು, ಮುಳುಗಡೆ ಪ್ರದೇಶಗಳ ಬಗ್ಗೆ ಸಮರ್ಪಕ ಸಮೀಕ್ಷೆ ನಡೆದಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಮತ್ತು ತಹಸೀಲ್ದಾರ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಹಾಯಕ ಕಮೀಷನರ್ ಸುಂದರ ಭಟ್ ಮತ್ತು ತಹಸೀಲ್ದಾರ್ ದಾಸೇಗೌಡ ಅವರು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳದಲ್ಲಿರುವ ಯಂತ್ರಗಳನ್ನು ಯಾವುದೇ ಕಾರಣಕ್ಕೂ ಚಾಲನೆ ಮಾಡದಂತೆ ಸೂಚನೆ ನೀಡಿದ ಅವರು ನಿಯಮ ಮೀರಿ ಕೆಲಸ ಆರಂಭಿಸಿದಲ್ಲಿ ವಾಹನ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಭೂಮಾಪನಾ ಅಧಿಕಾರಿಗಳನ್ನು ಕರೆಸಿ ನದಿ ಬದಿಯಿಂದ ಮತ್ತು ಸ್ಥಳೀಯವಾಗಿ ಇರುವ ರೈತರ ಭೂಮಿಯನ್ನು ಅಳತೆ ಮಾಡಲು ಸೂಚಿಸಿ ದರು. ಭೂಮಾಪನಾ ಅಧಿಕಾರಿಗಳು ಅಳತೆ ಕಾರ್ಯ ಆರಂಭಿಸಿದರು.

`ಏನೂ ಹೇಳುವುದಿಲ್ಲ~: ಯೋಜನೆಯ ಕಾಮಗಾರಿ ವೇಳೆ ನದಿ ಪರಂಬೋಕು ಮತ್ತು ರೈತರ ಭೂಮಿ ಅತಿಕ್ರಮಣ ಮಾಡಲಾಗಿದೆ. ಇದಕ್ಕೆ ಅನುಸರಿಸುವ ಕ್ರಮದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಹಾಯಕ ಕಮೀಷನರ್ `ನಾನೇನು ಹೇಳುವುದಿಲ್ಲ. ಏನಿದ್ದರೂ ತಹಶೀಲ್ದಾರ್ ಜೊತೆ ಮಾತನಾಡಿ~ ಎಂದು ಹೇಳುತ್ತಲೇ ಬಂದಿದ್ದ ವಾಹನ ಏರಿ ಹಿಂತಿರುಗಿಹೋದರು.`ನಿಯಮ ಮೀರಿದರೆ ಕ್ರಮ~: ಸ್ಥಳದಲ್ಲಿದ್ದ ಸುದ್ದಿಗಾರರ ಜತೆ ಮಾತನಾಡಿದ ತಹಶೀಲ್ದಾರ್ ದಾಸೇಗೌಡ `ಇಲ್ಲಿನ ಸಂತ್ರಸ್ತರ ಬೇಡಿಕೆಯಂತೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸಮಸ್ಯೆಗಳ ಬಗ್ಗೆ ಮನವರಿಕೆ ಆಗಿದೆ. ಎನ್‌ಐಟಿಕೆ ಮೂಲಕ ಸಮೀಕ್ಷೆ ನಡೆಸಿ ಬಳಿಕ ಕಾಮಗಾರಿ ಮುಂದುವರಿಸಿ. ಅಲ್ಲಿಯ ತನಕ ಕೆಲಸ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದೇವೆ. ರೈತರ ಜಮೀನಿಗೆ ಸೂಕ್ತ ಬೆಲೆ ನೀಡಬೇಕು.ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಲು ತಿಳಿಸಿದ್ದೇವೆ. ಕಂಪೆನಿ ಮತ್ತು ರೈತರ ಮಧ್ಯೆ ಅಧಿಕಾರಿಗಳು ಸೇತುಬಂಧುವಾಗಿ ಕೆಲಸ ಮಾಡಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳು ತ್ತೇನೆ~ಎಂದು ಭರವಸೆ ನೀಡಿದರು.ಸ್ಪಂದಿಸಲು ಸಿದ್ದ-ಹರೀಶ್ ಶೆಟ್ಟಿ: ಜಲವಿದ್ಯುತ್ ಯೋಜನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆಯ ಲಾಗಿದೆ. ಅದರಂತೆ ಕಾಮಗಾರಿ ಆರಂಭಿಸಿದ್ದೇವೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧರಿದ್ದೇವೆ. ರೈತರೂ ಸಹಕಾರ ನೀಡುತ್ತಿದ್ದಾರೆ. ಆದರೆ ಕೆಲವರ ಹಿತಾಸಕ್ತಿಯಿಂದಾಗಿ ಸಮಸ್ಯೆಯಾಗಿದೆ.

 

ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಕಂಪೆನಿಯ ಮ್ಯಾನೇಜರ್ ಹರೀಶ್ ಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಅಧಿಕಾರಿಗಳ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಂತ್ರಸ್ತರಾದ ಅಶೋಕ್ ಕುಮಾರ್ ರೈ, ಝಕಾರಿಯಾ, ರಜಾಕ್ ಮಾಸ್ಟರ್, ಜಗದೀಶ, ಧರ್ನಪ್ಪ, ಗಣೇಶ್ ನಾಯಕ್, ಕೃಷ್ಣಪ್ರಸಾದ್, ನಳಿನಿ, ಸುಂದರಿ, ರಾಜೀವಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry