ಶುಕ್ರವಾರ, ಏಪ್ರಿಲ್ 16, 2021
20 °C

ಕಾಮನ್‌ವೆಲ್ತ್ ಕ್ರೀಡಾಕೂಟ ಅವ್ಯವಹಾರ: ಸಿಬಿಐಗೆ ಸಿವಿಸಿ ತನಿಖಾ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಗೆ ನಡೆಸಿದ ವಿವಿಧ ವಸ್ತುಗಳ ಖರೀದಿಯಲ್ಲಿ ಕ್ರೀಡಾಕೂಟ ಸಂಘಟನಾ ಸಮಿತಿಯ ಅಧಿಕಾರಿಗಳು ಭಾರಿ ಪ್ರಮಾಣದ ಅವ್ಯವಹಾರ ನಡೆಸಿರುವುದನ್ನು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖೆ ದೃಢಪಡಿಸಿದೆ.



ಈ ಕುರಿತು ಸಿವಿಸಿಯು ಸಿಬಿಐಗೆ ವಿಸ್ತೃತ ವರದಿ ಸಲ್ಲಿಸಿದೆ. ಕ್ರೀಡಾಕೂಟಕ್ಕೆ ಅಗತ್ಯವಾದ ಹೊದಿಕೆ, ಹಲವು ಉಪಕರಣ ಹಾಗೂ ಸಾಧನಗಳನ್ನು ಬಾಡಿಗೆ ಪಡೆಯುವುದಕ್ಕಾಗಿ ಸಮಿತಿಯು 42.34 ಕೋಟಿ ರೂಪಾಯಿ ಸಂದಾಯ ಮಾಡಿದೆ.



ವಾಸ್ತವದಲ್ಲಿ ಇದು ಕೇವಲ 2.80 ಕೋಟಿ ರೂಪಾಯಿ ಮಾತ್ರವೇ ಆಗುತ್ತದೆ. ಅಂದರೆ ಸಮಿತಿಯು ಈ ಉಪಕರಣಗಳನ್ನು ಬಾಡಿಗೆ ಪಡೆಯುವಲ್ಲಿ ಪ್ರತಿಶತ 1,400 ರಷ್ಟು ಹೆಚ್ಚಿನ ಹಣವನ್ನು ನೀಡಿದಂತಾಗಿದೆ. ಹೀಗಾಗಿ ಈ ವ್ಯವಹಾರದಲ್ಲಿ ಹಲವು ಕಂಪೆನಿಗಳು ಅಕ್ರಮವಾಗಿ ಲಾಭ ಪಡೆದಿರುವುದು ವಿದಿತವಾಗಿದೆ ಎಂದು ವರದಿ ತಿಳಿಸಿದೆ.



ಇದಲ್ಲದೆ ಹರಾಜು ಪ್ರಕ್ರಿಯೆಗಳಲ್ಲಿ ಸಾಮಾನುಗಳನ್ನು ಬಾಡಿಗೆ ಪಡೆಯುವಲ್ಲಿಯೂ ದುಪ್ಪಟ್ಟು ಹಣ ಸಂದಾಯ ಮಾಡಲಾಗಿದೆ. ಕಳಪೆ ವಸ್ತುಗಳನ್ನು ಬಾಡಿಗೆ ಅಥವಾ ಖರೀದಿಗೆ ಪಡೆಯಲಾಗಿರುವುದು ಕಂಡು ಬಂದಿದೆ ಎಂದು ಭ್ರಷ್ಟಾಚಾರ ವಿರೋಧ ಕಾವಲು ಸಮಿತಿಯ ತನಿಖೆಯಲ್ಲಿ ದೃಢಪಟ್ಟಿದೆ.



ತಾತ್ಕಾಲಿಕ ಅಗತ್ಯಗಳೆನಿಸಿದ್ದ ಟೆಂಟ್‌ಗಳು, ವಿಡಿಯೊ ಬೋರ್ಡುಗಳು, ಪೀಠೋಪಕರಣಗಳು, ಜನರೇಟರ್‌ಗಳು ಸೇರಿದಂತೆ ಒಟ್ಟು 62 ನಮೂನೆಯ ವಸ್ತುಗಳನ್ನು ಖರೀದಿಸಲಾಗಿದೆ ಅಥವಾ ಬಾಡಿಗೆ ಪಡೆಯಲಾಗಿದೆ. ಇದಕ್ಕಾಗಿ ಹಲವು ಕಂಪೆನಿಗಳಿಗೆ 687.86 ಕೋಟಿ ರೂಪಾಯಿ ಸಂದಾಯ ಮಾಡಲಾಗಿದೆ. ಅವುಗಳಲ್ಲಿ, ದೆಹಲಿಯ ಪಿಕೊ ದೀಪಾಲಿ ಓವರ್‌ಲೇಸ್ ಕನ್ಸೋರ್ಟಿಯಮ್, ಸ್ವಿಟ್ಜಲೆಂಡ್‌ನ ನುಸ್ಲಿ ಲಿಮಿಟೆಡ್, ನವದೆಹಲಿಯ ಇಎಸ್‌ಎಜೆವಿ:ಡಿ:ಆರ್ಟ್ ಇಂಡೊ ಕನ್ಸೋರ್ಟಿಯಮ್ ಹಾಗೂ ಫ್ರಾನ್ಸ್‌ನ ಜಿಎಲ್-ಮೆರೊಫಾರ್ಮ್ ಪ್ರಮುಖವಾಗಿವೆ.



ಅಸಹಕಾರ: ಇದೇ ವೇಳೆ ಸಿವಿಸಿಯ ತನಿಖೆಗೆ ಸಂಘಟನಾ ಸಮಿತಿಯ ಅಧಿಕಾರಿಗಳು ಅಸಹಕಾರ ತೋರಿರುವುದು ಕೂಡಾ ಬೆಳಕಿಗೆ ಬಂದಿದೆ. ಸಮಿತಿಗೆ ದಾಖಲೆಗಳನ್ನು ಒದಗಿಸುವಲ್ಲಿ ಈ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸಹಕರಿಸಿಲ್ಲ ಎಂಬುದನ್ನು ಸಮಿತಿಯು ತನ್ನ ಆಂತರಿಕ ವರದಿಯಲ್ಲಿ ನಮೂದಿಸಿದೆ.



ಹೊದಿಕೆಗಳಿಗಾಗಿ ಖರೀದಿಸಲಾದ ಹಾಗೂ ಬಾಡಿಗೆ ಪಡೆಯಲಾದ ವಸ್ತುಗಳ ದಾಖಲೆ ಕುರಿತಂತೆ ಅಧಿಕಾರಿಗಳು ಸಮಿತಿಗೆ ಸರಿಯಾಗಿ ಉತ್ತರಿಸಿಲ್ಲ. ಒದಗಿಸಿದ ಬಹಳಷ್ಟು ದಾಖಲೆಗಳು ಯೋಗ್ಯವೇ ಆಗಿರಲಿಲ್ಲ. ಎಷ್ಟೊ ವಿಷಯಗಳ ವೆಬ್‌ಸೈಟುಗಳು ಕೂಡಾ ಖೋಟಾ ಇದ್ದವು. ಇವುಗಳ ತನಿಖೆಗಾಗಿ ಕೇಳಲಾದ ಯಾವುದೇ ಸಂಗತಿಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ವಿವರಿಸದೆ ನಿಜವನ್ನು ಮರೆಮಾಚಿದ್ದಾರೆ ಎಂದು ವರದಿ ವಿವರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.