ಸೋಮವಾರ, ಜೂಲೈ 13, 2020
29 °C

ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ: 5 ಸಾವಿರಕ್ಕೂ ಹೆಚ್ಚು ದಾಖಲೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ಜಾಗೃತದಳದ ಅಧಿಕಾರಿಗಳು ಸುಮಾರು ಐದು ಸಾವಿರಕ್ಕೂ ಹೆಚ್ಚು ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ. 

ಗುತ್ತಿಗೆ, ಹಣ ಪಾವತಿ, ಸ್ವತಂತ್ರ ತನಿಖಾ ತಂಡದ ವರದಿ, ಸ್ಥಳೀಯ ನಿರ್ಮಾಣ ಸಂಸ್ಥೆಗಳ ಮಹತ್ವಪೂರ್ಣ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕ್ರೀಡಾಕೂಟ ಸಂಘಟನಾ ಸಮಿತಿಯ ಕಚೇರಿಯಿಂದ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅವನ್ನು ಜಾಗೃತದಳ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ಧರಿಸಿದೆ.

~ಕಾಮನ್‌ವೆಲ್ತ್  ಕ್ರೀಡಾಕೂಟ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು 30 ದೂರುಗಳು ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಜಾಗೃತದಳದ ಅಧಿಕಾರಿಗಳ ತಂಡ ಪ್ರತಿನಿತ್ಯ ಸಂಘಟನಾ ಸಮಿತಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ತಂಡ 5ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಸಂಗ್ರಹಿಸಿದೆ’ ಎಂದು ಜಾಗೃತದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಗರಣದ ತನಿಖೆ ನಡೆಸಲು ವಿ.ಕೆ. ಶುಂಗ್ಲು ಅವರ ನೇತೃತ್ವದಲ್ಲಿ ಸರ್ಕಾರ ಉನ್ನತಾಧಿಕಾರ ಸಮಿತಿಯನ್ನು ನೇಮಕ ಮಾಡಿದ್ದು, ತೆರಿಗೆ ಇಲಾಖೆ, ಸಿಬಿಐ ಕೂಡ ಹಗರಣದ ತನಿಖೆ ನಡೆಸುತ್ತಿವೆ.

 ಜಾಮೀನು ಅರ್ಜಿ: ಬುಧವಾರ ವಿಚಾರಣೆ

ನವದೆಹಲಿ, (ಪಿಟಿಐ): ಕ್ವೀನ್ಸ್ ಬ್ಯಾಟನ್ ರಿಲೇ ಹಗರಣಕ್ಕೆ ಸಂಬಂಧಪಟ್ಟಂತೆ ಕಾಮನ್‌ವೆಲ್ತ್ ಸಂಘಟನಾ ಸಮಿತಿಯ ಹಣಕಾಸು ವಿಭಾಗದ ಜಂಟಿ ನಿರ್ದೇಶಕ ಎಂ. ಜಯಚಂದ್ರನ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಸೋಮವಾರ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು. ನವೆಂಬರ್ 21ರಂದು ಜಯಚಂದ್ರನ್ ಅವರನ್ನು ಬಂಧಿಸಲಾಗಿತ್ತು.ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಮತ್ತೊಬ್ಬ ಅಧಿಕಾರಿ ಹಾಗೂ ಕಲ್ಮಾಡಿ ಅವರ ಆಪ್ತ ಟಿ.ಎಸ್. ದರ್ಬಾರಿ ಅವರಿಗೆ ಶುಕ್ರವಾರ ಜಾಮೀನು ನೀಡಿದೆ. ಬಂಧಿಸಿದ 60 ದಿನದೊಳಗೆ ದರ್ಬಾರಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ವಿಫಲವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.