ಕಾಮನ್‌ವೆಲ್ತ್ ಪ್ರಸಾರ ಪಾವತಿ ಬಾಕಿ: ಬ್ರಿಟನ್ ಆಕ್ಷೇಪ

7

ಕಾಮನ್‌ವೆಲ್ತ್ ಪ್ರಸಾರ ಪಾವತಿ ಬಾಕಿ: ಬ್ರಿಟನ್ ಆಕ್ಷೇಪ

Published:
Updated:

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದ ನೇರಪ್ರಸಾರದ ಗುತ್ತಿಗೆ ಪಡೆದಿದ್ದ ಬ್ರಿಟಿಷ್ ಕಂಪೆನಿಗೆ ಬಾಕಿ 96 ಕೋಟಿ ರೂಪಾಯಿಗಳನ್ನು ವಾರ್ತಾ  ಮತ್ತು ಪ್ರಸಾರ ಇಲಾಖೆ ನೀಡಬಾರದೆಂದು ಎ.ಕೆ.ಶುಂಗ್ಲು ಸಮಿತಿ ಮಾಡಿರುವ ಶಿಫಾರಸು ಎರಡೂ ರಾಷ್ಟ್ರಗಳ ನಡುವೆ ವಿವಾದ ಹುಟ್ಟುಹಾಕಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಪ್ರಧಾನಿಯವರು ನೇಮಿಸಿದ್ದ ಎ.ಕೆ. ಶುಂಗ್ಲು ಸಮಿತಿ ವರದಿ ಪ್ರಕಾರ, ಬ್ರಿಟನ್ನಿನ ಎಸ್‌ಐಎಸ್ ಲೈವ್ ಫಾರ್ ಟೆಲಿಕಾಸ್ಟ್ ಎಂಬ ಕಂಪೆನಿಯೊಂದಿಗೆ ಪ್ರಸಾರ ಭಾರತಿ ಮಾಡಿಕೊಂಡಿದ್ದ 246 ಕೋಟಿ ರೂಪಾಯಿ ಗುತ್ತಿಗೆ ಒಪ್ಪಂದದಲ್ಲಿ ಮೇಲ್ನೋಟಕ್ಕೇ ಅಕ್ರಮ ಕಂಡುಬಂದಿದೆ. ಹೀಗಾಗಿ ಕಂಪೆನಿಗೆ ಬಾಕಿ ಕೊಡಬೇಕಿರುವ 96 ಕೋಟಿ ರೂಪಾಯಿಯನ್ನು ತಡೆಹಿಡಿಯಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಶಿಫಾರಸನ್ನು ಇದೀಗ ಪ್ರಸಾರ ಭಾರತಿಗೆ ರವಾನಿಸಲಾಗಿದೆ. ಪ್ರಸಾರ ಭಾರತಿ ಇದನ್ನು ಒಪ್ಪಿಕೊಳ್ಳುವ ಸೂಚನೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಭಾರತದಲ್ಲಿರುವ ಬ್ರಿಟನ್ ಹೈಕಮಿಷನರ್ ಸರ್ ರಿಚರ್ಡ್ ಸ್ಟಾಗ್ ಮಧ್ಯಪ್ರವೇಶಿಸಿ, ಕಂಪೆನಿಗೆ ಈ ರೀತಿ ದಂಡ ವಿಧಿಸುವುದು ಸೂಕ್ತವಲ್ಲ ಎಂದಿದ್ದಾರೆ. 70 ವರ್ಷಗಳಿಗೂ ಹೆಚ್ಚು ಅನುಭವವಿರುವ ಬ್ರಿಟನ್ನಿನ ಮುಂಚೂಣಿ ಪ್ರಸಾರ ಕಂಪೆನಿಯಾದ ಎಸ್‌ಐಎಸ್ ಲೈವ್ ಹಲವಾರು ಅಂತರರಾಷ್ಟ್ರೀಯ ಕ್ರೀಡಾಮೇಳಗಳನ್ನು ಯಶಸ್ವಿಯಾಗಿ ಪ್ರಸಾರ ಮಾಡಿದೆ.

ಅದೇ ರೀತಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಕಂಪೆನಿ ಅತ್ಯಂತ ಯಶಸ್ವಿಯಾಗಿ ಕ್ರೀಡಾಪ್ರೇಮಿಗಳು ಮೆಚ್ಚುವಂತೆ ಬಿತ್ತರಿಸಿದೆ. ಈ ಕಂಪೆನಿಗೆ ಬಾಕಿ ನೀಡಬೇಕಿರುವ ಹಣವನ್ನು ಅತ್ಯಂತ ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಂಶಯಾತೀತವಾದ ಎಲ್ಲಾ ಬಾಕಿಗಳನ್ನು ಕೂಡಲೇ ಪಾವತಿಸಲು ಹೊಸ ಕ್ರೀಡಾ ಸಚಿವ ಅಜಯ್ ಮಾಕನ್ ಗುರುವಾರ ಆದೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry