ಭಾನುವಾರ, ಏಪ್ರಿಲ್ 18, 2021
23 °C

ಕಾಯಂ ಜಿಲ್ಲಾಧಿಕಾರಿ ನೇಮಕಕ್ಕೆ ಒತ್ತಾಯಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |



ರಾಮನಗರ: ಜಿಲ್ಲೆಗೆ ಕಾಯಂ ಜಿಲ್ಲಾಧಿಕಾರಿ ನೇಮಿಸುವಂತೆ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಸಮತಾ ಸೈನಿಕ ದಳದ ಪದಾಧಿಕಾರಿಗಳು ಮತ್ತು ಸದಸ್ಯರು ಸೋಮವಾರ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಿದರು.



ರಾಮನಗರ ಜಿಲ್ಲೆಯಾಗಿ ಮೂರು ವರ್ಷ ಕಳೆದರೂ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವೂ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದೆ. ಅಷ್ಟೇ ಅಲ್ಲದೆ 45 ದಿನದಿಂದ ಕಾಯಂ ಜಿಲ್ಲಾಧಿಕಾರಿ ನೇಮಕ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಎಸ್‌ಎಸ್‌ಡಿ ಜಿಲ್ಲಾಧ್ಯಕ್ಷ ಜಿ.ಗೋವಿಂದಯ್ಯ ದೂರಿದರು.



ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಇದೀಗ ಅಧಿಕಾರಿಗಳನ್ನೂ ನೇಮಿಸಿದಿರುವುದರಿಂದ ಜಿಲ್ಲೆಯಲ್ಲಿ ದೈನಂದಿನ ಆಡಳಿತ ನಿರ್ವಹಣೆಯೂ ಸಮಸ್ಯೆಯಾಗಲಿದೆ. ಇದರಿಂದ ಜನ ಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತವೆ. ಜನರ ಸಮಸ್ಯೆಗಳನ್ನು ಆಲಿಸುವವರು ಇಲ್ಲದಿರುವಾಗ, ಸಮಸ್ಯೆ ನಿವಾರಣೆ ಹೇಗೆ ತಾನೆ ಸಾಧ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.



ದ್ವೇಷದ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮ ಕೈಗೊಂಡು, ಸೂಕ್ತರನ್ನು ಕಾಯಂ ಜಿಲ್ಲಾಧಿಕಾರಿಯನ್ನಾಗಿ ನೇಮಿಸುವಂತೆ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ಎಸ್.ಎಸ್.ಡಿ ಪದಾಧಿಕಾರಿಗಳಾದ ಕೊಟೆ ಕುಮಾರ್, ಶಿವರಾಜ್ ಮೊದಲಾದವರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.